ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರದ ಮೇಲೆ ತಾಯಂದಿರು!

Last Updated 26 ಜುಲೈ 2019, 19:30 IST
ಅಕ್ಷರ ಗಾತ್ರ

ಹೆಣ್ಣು ಸದಾ ಚಲನಶೀಲೆ, ಕ್ರೀಯಾಶೀಲೆ. ತಾನು ಮಾಡುವ ಯಾವುದೇ ಕೆಲಸವನ್ನು ಮುತುವರ್ಜಿ ವಹಿಸಿ ಬಹಳ ಪ್ರೀತಿಯಿಂದ ಮಾಡುವಾಕೆ. ಕಡೆಗೆ, ನಿತ್ಯದ ಅಡುಗೆ ಆದರೂ ಸರಿಯೇ, ಸಣ್ಣ ಪುಟ್ಟ ರುಚಿ ಬದಲಾವಣೆ ಮಾಡಿ ಉಣಬಡಿಸುತ್ತಾಳೆ.

ಇಲ್ಲಿ ನಾಲ್ಕು ಮಂದಿ ತಾಯಂದಿರು ಸೇರಿ, ಚಲನಶೀಲ ಹಾಗೂ ಕ್ರೀಯಾಶೀಲ ಯೋಜನೆಯೊಂದನ್ನು ರೂಪಿಸಿಕೊಂಡು ಜಗತ್ತು ಸುತ್ತಿ ಬಂದಿದ್ದಾರೆ. ವಾಯುಪಡೆ ಶಾಲೆಯ ನಿವೃತ್ತ ಪ್ರಾಂಶುಪಾಲೆ ಪುಣೆಯವರಾದ ಮಾಧುರಿ ಸಹಸ್ರಬುದ್ಧೆ, ಶೀತಲ್ ದೇಶಪಾಂಡೆ, ಊರ್ಮಿಳಾ ಜೋಶಿ ಹಾಗೂ ಮಾಧವಿ ಸಿಂಗ್ ತೋಮರ್ ಅವರೇ ಈ ಸಾಧಕಿಯರು.

ಇವರ ಈ ಪ್ರಯಾಣದ ಮುಖ್ಯ ಉದ್ದೇಶ ಬೇರೆ ಬೇರೆ ದೇಶಗಳಲ್ಲಿ ಕುಟುಂಬ ರಚನೆಯಲ್ಲಿ ತಾಯಂದಿರ ಪಾತ್ರ ಅಧ್ಯಯನ ಮಾಡುವುದು ಮತ್ತು ತಾಯಂದಿರು ಅನುಭವಿಸುತ್ತಿರುವ ಕಷ್ಟ ಸುಖಗಳನ್ನು ಅರಿಯುವುದು.

ಕಳೆದ ವರ್ಷ 2018ರ ಸೆಪ್ಟೆಂಬರ್‌ನಲ್ಲಿ ‘ಮದರ್ಸ್ ಆನ್ ವೀಲ್ಸ್’ ಎನ್ನುವ ಹೆಸರನ್ನು ತಮ್ಮ ಪ್ರಯಾಣಕ್ಕೆ ಇಟ್ಟುಕೊಂಡ ಇವರು 22 ದೇಶಗಳ 47 ನಗರಗಳನ್ನು ಸುತ್ತಿ ಬಂದಿದ್ದಾರೆ. 60 ದಿನಗಳ ಅವರ ಪಯಣವನ್ನು ತಮ್ಮ ಸ್ವಂತ ಕಾರಿನಲ್ಲೇ, ಸ್ವತಃ ಡ್ರೈವ್ ಮಾಡಿಕೊಂಡು ಪೂರೈಸಿದ್ದಾರೆ.

‘ದೆಹಲಿಯಿಂದ ಲಂಡನ್‌ವರೆಗೆ’ ಎನ್ನುವ ಮ್ಯಾಪ್ ತಯಾರಿಸಿಕೊಂಡು ಚೀನಾ, ಕಜಕಿಸ್ತಾನ್, ಇರಾನ್, ಜಾರ್ಜಿಯಾ, ಟರ್ಕಿ, ಬಲ್ಗೇರಿಯಾ, ಸೆರ್ಬಿಯಾ, ಕ್ರೊಯೇಷಿಯಾ, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್.. ಈ ಎಲ್ಲಾ ದೇಶಗಳನ್ನು ಹಾದು ಲಂಡನ್ ತಲುಪಿದರು.

ಮಾಧುರಿ ಅವರ ಪ್ರಯಾಣದ ಹಿಂದಿನ ಉದ್ದೇಶವೂ ಕುತೂಹಲಕರ. ಭಾರತದ ಈಶಾನ್ಯ ಭಾಗದಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದ ಅವರು ಅಲ್ಲಿ ಶಾಲೆಯನ್ನೂ ನಡೆಸುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಬೆರೆಯುವಾಗ, ಅವರೊಂದಿಗೆ ಮಾತನಾಡುವಾಗ ತಮ್ಮ ತಾಯಿ ಹಾಗೂ ಅಜ್ಜಿ ಯಾವಾಗಲೂ ನೆನಪಿಗೆ ಬರುತ್ತಿದ್ದರಂತೆ.

‘ನನ್ನ ಮತ್ತು ನನ್ನ ತಾಯಿ, ನನ್ನ ಅಜ್ಜಿ ಮತ್ತು ನನ್ನ ತಾಯಿಯ ನಡುವೆ ಇದ್ದ ಸಂಬಂಧ ಇಂದಿನ ಮಕ್ಕಳು ಹಾಗೂ ಅವರ ತಾಯಿಯ ನಡುವೆ ಕಾಣಿಸಲಿಲ್ಲ. ಇದು ನನ್ನನ್ನು ಯಾವಾಗಲೂ ಕಾಡುತ್ತಿತ್ತು. ಈ ಯುಗವನ್ನು ನಾವು ಸಂವಹನ ಯುಗ ಅಂತಲೇ ಕರೆಯುತ್ತೇವೆ. ಆದರೆ, ತಾಯಿ ಮತ್ತು ಮಕ್ಕಳ ಮಧ್ಯೆ ಸರಿಯಾದ ಸಂವಹನ ನಡೆಯುತ್ತಿಲ್ಲ’ ಎನ್ನುವ ಮಾಧುರಿ, ‘ಎಲ್ಲೋ ಒಂದು ಕೊಂಡಿ ಕಳಚುತ್ತಿದೆ ಎನ್ನಿಸಿತು. ಆದ್ದರಿಂದಲೇ ಕುತೂಹಲ ಮೂಡಿ, ಈ ಕುರಿತು ಅಧ್ಯಯನ ಮಾಡಬೇಕು ಎಂದು ನಾವು ನಾಲ್ವರು ಹೊರಟೆವು’ ಎಂದು ವಿವರಿಸುತ್ತಾರೆ.

ಇಂದು ಸಮಾಜ ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಉಗ್ರವಾದ, ಮಕ್ಕಳಲ್ಲಿ ತಂದೆ– ತಾಯಿಯರ ಕುರಿತ ನಿರ್ಲಕ್ಷ್ಯ ಧೋರಣೆ, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ನಮ್ಮ ಮಕ್ಕಳು ಮರೆಯುತ್ತಿರುವುದು ಇವೇ ಮೊದಲಾದವುಗಳ ಬಗ್ಗೆ ಅವರಿಗೆ ಆತಂಕವಿತ್ತು. ಹಾಗಾದರೆ, ತಾಯಿ ಯಾಕೆ ತಮ್ಮ ಮಕ್ಕಳಿಗೆ ಬುದ್ಧಿ ಹೇಳುತ್ತಿಲ್ಲ ಅಥವಾ ಮಕ್ಕಳೇ ತಾಯಂದಿರ ಮಾತು ಕೇಳುತ್ತಿಲ್ಲವೇ.. ಹೀಗೆ ಹಲವಾರು ಪ್ರಶ್ನೆಗಳು ಅವರನ್ನು ಕಾಡಿತೊಡಗಿದವು.

‘ನನ್ನ ತಾಯಿ ಮತ್ತು ಅಜ್ಜಿ ಹೇಳಿಕೊಡುತ್ತಿದ್ದ ಜೀವನ ಮೌಲ್ಯಗಳು, ನೀತಿ ಕಥೆಗಳನ್ನು ಈಗ ಯಾಕೆ ಯಾವ ತಾಯಂದಿರೂ ತಮ್ಮ ಮಕ್ಕಳಿಗೆ ಹೇಳುತ್ತಿಲ್ಲ. ಯಾಕೆ ತಾಯಿ ಮತ್ತು ಮಕ್ಕಳ ಮಧ್ಯೆ ಸಂವಹನ ನಡೆಯುತ್ತಿಲ್ಲ’ ಎಂದು ತಮ್ಮನ್ನು ಕಾಡುತ್ತಿದ್ದ ಪ್ರಶ್ನೆಗಳನ್ನು ಅವರು ಬಿಚ್ಚಿಡುತ್ತಾರೆ.

ದಿನಕ್ಕೆ 700 ಕಿ.ಮೀ. ಪ್ರಯಾಣ

ದಿನಕ್ಕೆ ಸರಾಸರಿ 700 ಕಿ.ಮೀ ಪ್ರಯಾಣಿಸುತ್ತಿದ್ದ ಈ ಸಾಧಕಿಯರು, ತಾವು ನಿಲುಗಡೆ ಮಾಡುತ್ತಿದ್ದ ದೇಶಗಳ ಪ್ರತಿ ಪಟ್ಟಣದಲ್ಲೂ ಸಭೆ- ಸಮಾಲೋಚನೆಗಳನ್ನು ನಡೆಸಿದ್ದಾರೆ. ತಾಯಂದಿರ, ಮಕ್ಕಳ ಸ್ಥಿತಿಗಳನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ಅದು 80 ಮಂದಿ ಇರಲಿ ಅಥವಾ 10 ಮಂದಿ ಇರಲಿ, ಪ್ರತಿ ದೇಶದಲ್ಲೂ ಸಮಾಲೋಚನಾ ಸಭೆ ನಡೆಸಿದ್ದಾರೆ.

‘ತಾಯಿ ಮತ್ತು ಮಕ್ಕಳ ನಡುವಿನ ಸಂವಹನ ಬಗ್ಗೆ ಪ್ರಸ್ತಾಪ ಮಾಡಿದೆ. ನಾವು ಮಾಡಿದ ಎಲ್ಲಾ ಸಭೆಗಳಲ್ಲೂ ನಾವು ಗ್ರಹಿಸಿದ್ದು ಇಷ್ಟು, ತಾಯಿ ತುಂಬಾ ಒತ್ತಡದಲ್ಲಿದ್ದಾಳೆ. ಆಕೆ, ಅತ್ತ ತನ್ನ ವೃತ್ತಿಯನ್ನು ಹಾಗೂ ಇತ್ತ ಕುಟುಂಬವನ್ನು ಎರಡನ್ನೂ ಸಂಭಾಳಿಸಿಕೊಂಡು ಹೋಗಬೇಕು. ಈ ಒತ್ತಡದಲ್ಲಿ ಸಂವಹನ ಸರಿಯಾಗಿ ಆಗುತ್ತಿಲ್ಲ’ ಎನ್ನುವ ಅವರು, ‘ಇದೊಂದು ಕಡೆಯಾದರೆ, ಇನ್ನೊಂದು ಕಡೆ, ತಾಯಿಗೆ ನಾವು ಮಹತ್ವವನ್ನೇ ಕೊಡುತ್ತಿಲ್ಲ ಮತ್ತು ಕೊಟ್ಟಿಲ್ಲ ಎನಿಸುತ್ತದೆ. ಕುಟುಂಬ ವ್ಯವಸ್ಥೆಯಲ್ಲಿ ಆಕೆಯ ಪಾತ್ರ ಹಾಗೂ ಮಹತ್ವ ಎರಡನ್ನೂ ನಾವು ಮರೆತಿದ್ದೇವೆ. ಆಕೆಯನ್ನು ನಾಲ್ಕು ಗೋಡೆಗಳ ಮಧ್ಯೆ ಸೇರಿಸಿ, ಮಕ್ಕಳು ಆಕೆಯ ಕೈಗೆ ಸಿಗದಂತೆ ಮಾಡಿಬಿಟ್ಟಿದ್ದೇವೆ. ಹೀಗೆ ನಾನಾ ಕಾರಣಗಳಿಂದ ಸಂವಹನ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ.

ತೊಡಕಾಗದ ಭಾಷೆ

ಪ್ರಯಾಣದ ಸಂದರ್ಭದಲ್ಲಿ ಭಾಷೆ ತೊಡಕಾಗಲಿಲ್ಲವೇ ಎಂದು ಕೇಳಿದರೆ, ‘ಹೃದಯಕ್ಕೆ ಯಾವ ಭಾಷೆ. ನಮಗೆ ಭಾಷೆಯ ತೊಂದರೆ ಎಂದೇನೂ ಆಗಲಿಲ್ಲ. ಪ್ರಯಾಣದ ಪ್ರತಿ ಹೆಜ್ಜೆಯೂ ಕಲಿಕೆಯೇ. ನಮ್ಮ ಹಾವಭಾವ ಅವರಿಗೆ ಅರ್ಥವಾಗುತ್ತಿತ್ತು. ಅವರದ್ದು ನಮಗೆ ಅರ್ಥವಾಗುತ್ತಿತ್ತು. ನಾವು ಕಷ್ಟಕ್ಕೆ ಸಿಲುಕಿಕೊಂಡೆವು ಎನ್ನುವ ಸಂದರ್ಭ ಬಂದಾಗ ಯಾರೋ ಸಹಾಯಕ್ಕೆ ಬರುತ್ತಿದ್ದರು. ಎಷ್ಟೊ ಬಾರಿ ನಮ್ಮ ದೇಶದಲ್ಲಿ, ನಾವು ಕಂಡಂತೆ, ಯಾರಾದರೂ ಬಂದು ವಿಳಾಸ ಕೇಳಿದರೆ, ಅವರ ದಾರಿ ತಪ್ಪಿಸುವ ಸಣ್ಣ ಬುದ್ಧಿ ತೋರಿಸುತ್ತೇವೆ. ಆದರೆ, ನಾವು ಎಲ್ಲಿಲ್ಲಿ ಹೋದೆವೊ ಅಲ್ಲಿ ಯಾರೂ ನಮ್ಮ ದಾರಿ ತಪ್ಪಿಸುವ ಕೆಲಸ ಮಾಡಲಿಲ್ಲ. ನಮ್ಮ ಸನ್ನೆಗಳ ಮೂಲಕವೇ ಅರ್ಥ ಮಾಡಿಕೊಂಡು ದಾರಿ ತೋರಿಸಿದ್ದಾರೆ’ ಎಂದು ಅನುಭವ ಹಂಚಿಕೊಂಡರು.

ಅವರು ತಮ್ಮ ಈ ಎಲ್ಲಾ ಅನುಭವಗಳ ಒಟ್ಟು ರೂಪವಾಗಿ ಸಧ್ಯದಲ್ಲೇ ಪುಸ್ತಕ ಹೊರತರಲಿದ್ದಾರೆ. ಜೊತೆಗೆ, ತಾವು ಮಾಡಿದ ವಿಡಿಯೊ, ಫೋಟೊಗಳನ್ನು ಇಟ್ಟುಕೊಂಡು ಸಾಕ್ಷ್ಯಚಿತ್ರವನ್ನೂ ಮಾಡಲಿದ್ದಾರೆ. ಮಾಧುರಿ ಅವರ ಸಾಧನೆ ಗುರುತಿಸಿ ‘ಶೈಕ್ಷಣಿಕ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯ ಅಡಿಪಾಯ’ ಎಂಬ ಸಂಸ್ಥೆಯು ಅಧ್ಯಕ್ಷೆಯನ್ನಾಗಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT