ಶನಿವಾರ, ಡಿಸೆಂಬರ್ 3, 2022
25 °C

ಮಹಿಳಾ ಮತ | ಬಾಲಕಿಯರ ಬಾಲ್ಯ ಕಸಿವ ಮೊಬೈಲ್‌ ಮಾಯಾಲೋಕ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

ಪ್ರಕರಣ–1

ಆಕೆ ಪ್ರೌಢಶಾಲೆಯ ಹುಡುಗಿ. ಇನ್‌ಸ್ಟಾಗ್ರಾಂ ಮೂಲಕ ಪುರುಷನೊಂದಿಗೆ ಪರಿಚಯ, ಸಂದೇಶ ವಿನಿಮಯ. ಮುಖಾಮುಖಿ ಭೇಟಿಯೂ ಆಯಿತು. ಆದರೆ, ಅಲ್ಲಿ ಹೋಗಿ ನೋಡಿದರೆ, ಆತನಿಗೆ ಮದುವೆ ಆಗಿದೆ. ಅಷ್ಟೇ ಅಲ್ಲ, ಈ ಹುಡುಗಿಯದ್ದೇ ವಯಸ್ಸಿನ ಒಬ್ಬ ಮಗಳೂ ಇದ್ದಾಳೆ.

ಪ್ರಕರಣ–2

ಈ ಹುಡುಗಿಯೂ ಅಷ್ಟೇ, ಪ್ರೌಢಶಾಲೆಯಲ್ಲಿಯೇ ಓದುತ್ತಿರುವವಳು. ಸಾಮಾಜಿಕ ಜಾಲತಾಣದ ಮೂಲಕ ಪುರುಷನೊಂದಿಗೆ ಪರಿಚಯ. ಪರಿಚಯ ಸಲಿಗೆಗೂ ತಿರುಗಿದೆ. ಇಬ್ಬರೂ ಸೇರಿ ನಡೆಸಿದ ಲೈಂಗಿಕ ಕ್ರಿಯೆಯನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಸ್ಪಲ್ಪ ದಿನಗಳ ನಂತರ ಇಬ್ಬರ ಮಧ್ಯೆ ಸಣ್ಣ ಬಿರುಕು ಮೂಡುತ್ತದೆ. ಇನ್ನೊಂದೆಡೆ, ತನ್ನ ಸ್ನೇಹಿತರೊಂದಿಗೆ ಜಂಬ ತೋರಿಸಲು ಆ ಪುರುಷ ಆ ವಿಡಿಯೊವನ್ನು ಶೇರ್‌ ಮಾಡಿಕೊಳ್ಳುತ್ತಾನೆ. ಇದು ನೂರಾರು ಶೇರ್‌ ಆಗುತ್ತದೆ. ಕೊನೆಗೆ ಒಂದು ದಿನ ಆ ಹುಡುಗಿಯ ತಂದೆ–ತಾಯಿಗೆ ಈ ವಿಡಿಯೊ ಸಿಗುತ್ತದೆ. ನಂತರ ಹುಡುಗಿಯ ತಾಯಿ ಆತ್ನಹತ್ಯೆಗೆ ಯತ್ನಿಸುತ್ತಾರೆ.

ಪ್ರಕರಣ–3

ಈಕೆ ಹದಿಹರೆಯದ ಹುಡುಗಿ. ಸಾಮಾಜಿಕ ಜಾಲತಾಣಗಳ ಮೂಲಕ ಬೇರೆ ರಾಜ್ಯದ ಹುಡುಗನ ಪರಿಚಯ. ಇಬ್ಬರಿಗೂ ಪರಸ್ಪರರ ಭಾಷೆ ಬರುವುದಿಲ್ಲ. ಇಂಗ್ಲಿಷ್‌ ಬಳಕೆಯೂ ಹೆಚ್ಚಿಗೆ ಬರುವುದಿಲ್ಲ. ಇಬ್ಬರೂ ಇಮೋಜಿಗಳ ಮೂಲಕ ಮಾತನಾಡಿಕೊಳ್ಳುತ್ತಾರೆ. ಲೈಂಗಿಕವಾಗಿ ‍ಪ್ರಚೋದನಕಾರಿ ವಿಡಿಯೊ ಮತ್ತು ಫೋಟೊಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ನಂತರ ಇಬ್ಬರೂ ಭೇಟಿ ಆಗಿ ಲೈಂಗಿಕ ಕ್ರಿಯೆ ನಡೆಸುತ್ತಾರೆ.


ಇಂತಹ ಹತ್ತಾರು ಪ್ರಕರಣಗಳು ರಾಜ್ಯದ ಎಲ್ಲ ಭಾಗಗಳಲ್ಲಿಯೂ ನಡೆದಿವೆ. ಕೆಲವು ವರದಿಯಾದರೆ, ಹೆಚ್ಚಿನವು ಬೆಳಕಿಗೇ ಬರುವುದಿಲ್ಲ. ಮೊಬೈಲ್‌, ಸಾಮಾಜಿಕ ಜಾಲತಾಣ ಬಳಕೆ ಹೆಚ್ಚಳದಿಂದಾದ ಈ ಹೊಸ ಪ್ರವೃತ್ತಿಯ ಕಾರಣ, ಪರಿಣಾಮ, ತಡೆಯುವ ವಿಧಾನಗಳು ಹೀಗಿವೆ:


ಎಂ.ವಿ. ಪ್ರತಿಭಾ

ಈ ಎಲ್ಲಾ ಪ್ರಕರಣಗಳಲ್ಲೂ ಹುಡುಗಿಯರ ವಯಸ್ಸು 14 ವರ್ಷದಿಂದ 17 ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಮಾಡಿಕೊಳ್ಳುವ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಆದರೆ, ಇಲ್ಲಿ ಎಲ್ಲೂ ಬಲವಂತವಿಲ್ಲ. ತಾವಾಗಿಯೇ, ಇಷ್ಟಪಟ್ಟು ಈ ರೀತಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಗಮನಾರ್ಹ ಅಂಶ ಎನ್ನುತ್ತಾರೆ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಶಿವಮೊಗ್ಗದ ಎಂ.ವಿ. ಪ್ರತಿಭಾ.

ಕೊರೊನಾ ತಂದ ಲಾಕ್‌ಡೌನ್‌ ಲಕ್ಷಾಂತರ ಜನರ ಬದುಕನ್ನು ಕಸಿದುಕೊಂಡಿತು. ಆದರೆ, ಇದು ಮಕ್ಕಳ ಮೇಲೆ ಬೀರಿದ ಪರಿಣಾಮ ಹೆಚ್ಚು ಭೀಕರವಾಗಿದೆ. ಲಾಕ್‌ಡೌನ್‌ ಆಗಿದ್ದರಿಂದ ತರಗತಿಗಳು ಆನ್‌ಲೈನ್‌ ಆದವು. ಇದಕ್ಕಾಗಿ ಎಲ್ಲಾ ಮಕ್ಕಳ ಕೈಗೆ ಮೊಬೈಲ್‌ ಸಿಕ್ಕಿತು. ಅಲ್ಲಿಯ ವರೆಗೆ ಅಪ್ಪ–ಅಮ್ಮನ ಮೊಬೈಲ್‌ ಬಳಸುತ್ತಿದ್ದ ಕೈಗಳಿಗೆ ತಮ್ಮದೇ ಆದ ಮೊಬೈಲ್‌ ಸಿಕ್ಕಿದಂತಾಯಿತು. ಇಡೀ ದಿನ ಅವರ ಕೈಯಲ್ಲೇ ಮೊಬೈಲ್‌ ಉಳಿಯುವಂತಾಯಿತು. ಇದು ಈ ಎಲ್ಲಾ ಅನಾಹುತಗಳಿಗೆ ಕಾರಣವಾಯಿತು ಎಂದು ಪ್ರತಿಭಾ ಅಭಿಪ್ರಾಯಪಡುತ್ತಾರೆ.

ಈ ರೀತಿಯ ಪ್ರವೃತ್ತಿ ಗಂಡುಮಕ್ಕಳಲ್ಲೂ ಇದೆ. ಸಾಮಾನ್ಯವಾಗಿ ಪ್ರೌಢಶಾಲೆ ಹಂತದಲ್ಲಿರುವ ಗಂಡುಮಕ್ಕಳಿಗೆ ಇಷ್ಟೆಲ್ಲ ಧೈರ್ಯವಾಗಲಿ, ಆರ್ಥಿಕ ಸಬಲತೆಯಾಗಲಿ ಇರುವುದಿಲ್ಲ. ಆದರೂ, ಕೆಲವರು ತಮ್ಮ ವಯಸ್ಸಿನ ಹೆಣ್ಣುಮಕ್ಕಳೊಂದಿಗೆ ಈ ರೀತಿಯ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಪ್ರೌಢಶಾಲಾ ಹಂತದಿಂದ ಸ್ಪಲ್ಪ ಮೇಲೆ ಬರುವ ಗಂಡುಮಕ್ಕಳಲ್ಲಿ ಗುಂಪು ವೀಕ್ಷಣೆ (ಅಶ್ಲೀಲ ವಿಡಿಯೊ) ಪ್ರವೃತ್ತಿ ಇರುತ್ತದೆ. ಜೊತೆಗೆ, ಗುಂಪಾಗಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳೂ ಇವೆ ಎನ್ನುತ್ತಾರೆ ಅವರು.

14ರಿಂದ 17 ವರ್ಷದ ಹುಡುಗಿಯರಿಗೆ ಪುರುಷರ ಬಗ್ಗೆಯೇ ಹೆಚ್ಚು ಆಕರ್ಷಣೆ ಇರುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಒಂದು, ಪುರುಷರ ಬಳಿ ಕಾರು ಅಥವಾ ಬೈಕು ಇರುತ್ತದೆ. ದುಡ್ಡೂ ಇರುತ್ತದೆ. ಆದ್ದರಿಂದ ಬೇಕಾದಲ್ಲಿಗೆ ಹೋಗಬಹುದು. ಜೊತೆಗೆ ಲಾಡ್ಜ್‌ಗಳಲ್ಲಿ ಕೊಠಡಿ ಮಾಡುವ ಆರ್ಥಿಕ ಶಕ್ತಿ ಇರುತ್ತದೆ ಇತ್ಯಾದಿ. ಆದ್ದರಿಂದಲೇ ಹೆಣ್ಣುಮಕ್ಕಳು ಪುರುಷರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎನ್ನುತ್ತಾರೆ.

ಯಾಕಾಗಿ ಮಕ್ಕಳಲ್ಲಿ ಈ ರೀತಿಯ ಪ್ರವೃತ್ತಿ ಹೆಚ್ಚಾಗಿದೆ?

l ಅಂತರ್ಜಾಲ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಕೂಡ. ಈಗಿನ ಮಕ್ಕಳು ಎಲ್ಲವನ್ನೂ ಇಲ್ಲಿ ನೋಡಿಯೇ ಕಲಿಯುತ್ತಿದ್ದಾರೆ. ಲೈಂಗಿಕತೆಯ ಬಗ್ಗೆ ಶಿಕ್ಷಣ ಕೊಡುವುದಕ್ಕಾಗಿ ಮಾಡಿರುವ ವಿಡಿಯೊಗಳನ್ನು ನೋಡಿಯೂ ಮಕ್ಕಳು ಕಲಿಯುತ್ತಾರೆ. ಅಷ್ಟೇ ಅಲ್ಲದೆ, ಲೈಂಗಿಕ ಕ್ರಿಯೆ ನಡೆಸುವಾಗಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗೆಗೂ ಇಲ್ಲಿಯೇ ಮಾಹಿತಿ ಪಡೆಯುತ್ತಾರೆ. 

l ಒಂದೇ ಮಗು ಸಾಕು ಎಂಬ ಪ್ರವೃತ್ತಿ ಈಗ ಇದೆ. ಇದರಿಂದಾಗಿ ಮನೆಯಲ್ಲಿ ಅವರಿಗೆ ಜೊತೆಗಾರರು ಇರುವುದಿಲ್ಲ. ಮನೆಯಲ್ಲಿ ಅವರಿಗೆ ಪ್ರತ್ಯೇಕ ಕೋಣೆ ಇರುತ್ತದೆ; ಕೈಯಲ್ಲಿ ಮೊಬೈಲ್‌ ಇದೆ. ಆಗಷ್ಟೇ ವಯಸ್ಸಿಗೆ ಬರುತ್ತಿರುವ ಮಕ್ಕಳ ಮೇಲೆ ಈ ಎಲ್ಲವೂ ಪರಿಣಾಮ ಬೀರುತ್ತಿದೆ. ಲೈಂಗಿಕತೆ, ಅಪರಾಧ ಕೃತ್ಯಗಳ ವಿಡಿಯೊಳಗನ್ನು ಸತತವಾಗಿ ನೋಡುವುದರಿಂದ ಮಕ್ಕಳ ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾಗುತ್ತದೆ.

l ಒಟಿಟಿ ವೇದಿಕೆಯಲ್ಲಿ ಸಿಗುವ ವಿದೇಶಿ ಸಿನಿಮಾಗಳು, ವೆಬ್‌ ಸರಣಿಗಳಲ್ಲಿನ ಲೈಂಗಿಕತೆ ಹೆಚ್ಚಿರುವ ಅಥವಾ ಲೈಂಗಿಕ ಪ್ರಚೋದನಕಾರಿ ದೃಶ್ಯಗಳು ಮಕ್ಕಳನ್ನು ಹೆಚ್ಚಿಗೆ ಆಕರ್ಷಿಸುತ್ತಿವೆ.

l ಈ ರೀತಿಯ ಸಿನಿಮಾ, ವೆಬ್‌ ಸರಣಿಗಳಲ್ಲಿನ ಪಾತ್ರಗಳನ್ನು ನಕಲು (ಇಮಿಟೇಟ್‌) ಮಾಡುವ ಪ್ರವೃತ್ತಿ ಮಕ್ಕಳಲ್ಲಿ ಹೆಚ್ಚುತ್ತಿದೆ. ಅವರು ತಿಂದಂತೆ ತಿನ್ನುವುದು, ಕುಡಿಯುವ ಚಟ ಬೆಳೆಸಿಕೊಳ್ಳುವುದು, ಅ ಪಾತ್ರ ತೊಟ್ಟಂತೆ ಬಟ್ಟೆ ತೊಡುವುದು, ಅವರ ಮಾತು, ಸಿನಿಮಾದಲ್ಲಿ ವಾಹನ ಚಲಾಯಿಸಿದಂತೆಯೇ ವಾಹನ ಚಲಾಯಿಸುವುದು ಮಾಡುತ್ತಾರೆ. ನಂತರ ಅದು ಲೈಂಗಿಕತೆ ವರೆಗೂ ಬಂದು ನಿಲ್ಲುತ್ತದೆ. ಅಪ್ಪನೋ ಅಮ್ಮನೋ ಅಥವಾ ಸುತ್ತಲಿನ ಯಾರೂ ಮಕ್ಕಳಿಗೆ ಆದರ್ಶವಾಗಿ ಕಾಣುತ್ತಿಲ್ಲ. ಬದಲಿಗೆ ಆ ಪಾತ್ರಗಳೇ ಅವರಿಗೆ ಮಾದರಿಯಾಗಿವೆ.

ಇದೇನು ತಪ್ಪಲ್ಲ: ಆಪ್ತಸಮಾಲೋಚನೆ ವೇಳೆ ಮಕ್ಕಳ ಹೇಳಿಕೆ

ಮಕ್ಕಳನ್ನು ರಕ್ಷಿಸಿ ಕರೆದುಕೊಂಡು ಬಂದ ಬಳಿಕ ಅವರಿಗೆ ಆಪ್ತಸಮಾಲೋಚನೆ ಮಾಡಲಾಗುತ್ತಿದೆ. ಈ ವೇಳೆ ಮಕ್ಕಳಿಗೆ ತಾವು ಮಾಡಿರುವುದು ತಪ್ಪು ಅಥವಾ ಈ ವಯಸ್ಸಿಗೆ ಇದನ್ನೆಲ್ಲಾ ಮಾಡಬಾರದಾಗಿತ್ತು ಎನ್ನುವ ಬಗ್ಗೆ ಪಶ್ಚಾತ್ತಾಪವಾಗಲಿ, ಭಯವಾಗಲಿ ಇರಲಿಲ್ಲ. ಇದು ಬಹಳ ಅಪಾಯಕಾರಿ ಬೆಳವಣಿಗೆ ಎನ್ನತ್ತಾರೆ ಪ್ರತಿಭಾ.

‘ಏನೋ ಒಂದು ಆಗಿಹೋಯಿತು. ಇದೆಲ್ಲ ತಪ್ಪಲ್ಲ. ನಾವು ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿದ್ದೆವು’ ಎನ್ನುತ್ತಾರೆ ಮಕ್ಕಳು ಎಂದು ಅವರು ಕಳವಳ ವ್ಯಕ್ತಪಡಿಸಿದರು. ತಪ್ಪು ನಡೆದು ಹೋಯಿತು ಎನ್ನುವುದಕ್ಕಿಂತ, ಇದೆಲ್ಲ ನಾಲ್ಕು ಜನರಿಗೆ ಗೊತ್ತಾಯಿತಲ್ಲ ಎಂದು ಕೆಲವು ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದರು.

‘ಐಟಿ ಕಾಯ್ದೆ ಪಾಠ ಮಾಡಿ’ 


ಡಾ. ಅನಂತ ಪ್ರಭು ಜಿ.

ಅಂತರ್ಜಾಲ, ಮೊಬೈಲ್‌ ಅಥವಾ ಸಾಮಾಜಿಕ ಜಾಲತಾಣಗಳ ಬಳಕೆಯು ಹೊಣೆಗಾರಿಕೆಯಿಂದ ಕೂಡಿರಬೇಕು.

ಒಂದು ಉದಾಹರಣೆಯ ಮೂಲಕ ಇಡೀ ವಿಷಯವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ವಾಹನ ಚಾಲನಾ ಪರವಾನಗಿ ಪಡೆಯಬೇಕು ಎಂದಾದರೆ, ಮೊದಲಿಗೆ ಸಂಚಾರ ನಿಯಮಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಅದೇ ರೀತಿ ಮೊಬೈಲ್‌ ಬಳಕೆ ಮಾಡುವುದಕ್ಕೂ ಮೊದಲು ಮಕ್ಕಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ತಿಳಿಸಿಕೊಡಬೇಕಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ ಸೈಬರ್‌ ಕಾನೂನು ಮತ್ತು ಸುರಕ್ಷಾ ತಜ್ಞ ಡಾ. ಅನಂತ ಪ್ರಭು ಜಿ.

ಈ ಕಾಯ್ದೆಯ ಪ್ರಕಾರ, ಒಬ್ಬರ ಖಾಸಗಿ ಚಿತ್ರವನ್ನು ಹಂಚಿಕೊಂಡರೆ, ಅವರಿಗೆ ಮೂರು ವರ್ಷ ಜೈಲು ಮತ್ತು ₹2 ಲಕ್ಷ ದಂಡ ವಿಧಿಸಬಹುದು. ಪಾಸ್‌ವರ್ಡ್‌ ಬಳಕೆ ಮಾಡಿದರೆ, ಮೂರು ವರ್ಷ ಜೈಲು, ₹1 ಲಕ್ಷ ದಂಡ ಹಾಕಬಹುದು. ಈ ಎಲ್ಲಾ ವಿಷಯಗಳು ಮಕ್ಕಳಿಗೆ ತಿಳಿದಿರಬೇಕು ಎನ್ನುವುದು ಅವರ ಅಭಿಮತ

ಸಿನಿಮಾಗಳಿಗೆ ಯು/ಎ, ಯು ಪ್ರಮಾಣಪತ್ರವಿದ್ದಂತೆ ಆ್ಯಪ್‌ಗಳಿಗೂ ರೇಟಿಂಗ್‌ ಇದೆ. ಎಂಟರ್‌ಟೇನ್‌ಮೆಂಟ್‌ ಸಾಫ್ಟ್‌ವೇರ್‌ ರೇಟಿಂಗ್‌ ಬೋರ್ಡ್‌ ಈ ರೇಟಿಂಗ್‌ ನೀಡುತ್ತದೆ. ಆ್ಯಪ್‌ಗಳಿಗೆ ಇ.ಸಿ ರೇಟಿಂಗ್‌ ಎಂದಿರುತ್ತದೆ. ಈ ರೇಟಿಂಗ್ ಇದ್ದ ಆ್ಯಪ್‌ಗಳನ್ನು ಮಕ್ಕಳು ಬಳಸಬಹುದು. ಕೆಲವು ಆ್ಯಪ್‌ಗಳಿಗೆ ಇ (ಎವ್ರಿವನ್‌) ಎಂದಿರುತ್ತದೆ. ಕೆಲವು ಆ್ಯಪ್‌ಗಳಿಗೆ 13+, 17+ ಮತ್ತು 18+ ಎಂದಿರುತ್ತವೆ. ಈ ಬಗ್ಗೆ ಪೋಷಕರು ಗಮನಹರಿಸಬೇಕು ಎಂದರು.

‘ಗೂಗಲ್‌ ಫ್ಯಾಮಿಲಿ ಲಿಂಕ್‌’ ಅಂತ ಒಂದು ಆ್ಯಪ್‌ ಇದೆ. ಇದರಲ್ಲಿ ಮಕ್ಕಳ ವಯಸ್ಸನ್ನು ನಮೂದಿಸಿದರೆ, ಆ ವಯಸ್ಸಿನ ಮಕ್ಕಳು ನೋಡುವ ಕಂಟೆಂಟ್‌ ಅನ್ನು ಮಾತ್ರ ತೋರಿಸುತ್ತದೆ. ಮಕ್ಕಳ ಕೈಗೆ ಮೊಬೈಲ್‌ ಕೊಡುವುದಕ್ಕೆ ಮೊದಲು ಇದನ್ನು ಅಳವಡಿಸಿಕೊಳ್ಳಬೇಕು. ನಾನು ಸಣ್ಣ ಸಮೀಕ್ಷೆ ನಡೆಸಿದ್ದೇನೆ. ಶಾಲೆಗಳಿಗೆ ಭೇಟಿ ನೀಡಿ, ಈ ರೀತಿಯ ಪೇರೆಂಟಲ್‌ ಕಂಟ್ರೋಲ್‌ ವ್ಯವಸ್ಥೆ ಇದೆಯೇ ಎಂದು ಗಮನಿಸಿದ್ದೇನೆ. ಆದರೆ, ಇಂಥ ಯಾವುದೇ ವ್ಯವಸ್ಥೆ ನನಗೆ ಕಾಣಲಿಲ್ಲ.

‘ಆಫ್‌ಟೈಮ್‌, ಆ್ಯಂಟಿ ಸೋಷಿಯಲ್‌ ಮತ್ತು ಆನ್‌ವರ್ಡ್‌ ಎನ್ನುವ ಆ್ಯಪ್‌ಗಳು ಮಕ್ಕಳ ಸ್ಕ್ರೀನ್‌ ಟೈಮ್‌ ಅನ್ನು ಕಡಿಮೆ ಮಾಡುವುದಕ್ಕೆ ಬಳಸಲಾಗುತ್ತದೆ. ಈ ಆ್ಯಪ್‌ಗಳಲ್ಲಿ ಸಮಯ ನಿಗದಿ ಮಾಡಬಹುದು. ಒಂದುವೇಳೆ ಒಂದು ತಾಸು ಎಂದು ಈ ಆ್ಯಪ್‌ಗಳಲ್ಲಿ ನಮೂದಿಸಿದರೆ, ಇದಕ್ಕೂ ಮೀರಿ ಮೊಬೈಲ್‌ ಬಳಸಿದರೆ, ಸ್ಕ್ರೀನ್‌ ಕಪ್ಪು, ಬಿಳಪು ಆಗುತ್ತದೆ. ಈ ಎಲ್ಲದರ ಕುರಿತು ಪೋಷಕರು ತಿಳಿದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಅಪಾಯ ತಪ್ಪಿದ್ದಲ್ಲ’ ಎನ್ನುತ್ತಾರೆ ಅನಂತ.

‘ಲೈಂಗಿಕ ಶಿಕ್ಷಣ ಅಗತ್ಯ’


ಮಂಜುಳಾ ಎಂ.ವೈ

ಮಕ್ಕಳಲ್ಲಿ ಲೈಂಗಿಕತೆಯ ಬಗ್ಗೆ ಆಸಕ್ತಿ ಮೂಡಲು ಮತ್ತು ಲೈಂಗಿಕ ವಿಚಾರಗಳಲ್ಲಿ ಇಷ್ಟೊಂದು ತೊಡಗಿಕೊಳ್ಳಲು ಲೈಂಗಿಕ ಶಿಕ್ಷಣ ಇಲ್ಲದಿರುವುದೇ ಮುಖ್ಯ ಕಾರಣ ಎಂದು ಕ್ರೈಸ್ಟ್‌ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಮಂಜುಳಾ ಎಂ.ವೈ ಅಭಿಪ್ರಾಯಪಡುತ್ತಾರೆ.

ಸಂಗಾತಿ ಬೇಕು ಅಥವಾ ನನ್ನ ಜೊತೆಗೆ ಯಾರಾದರು ಬೇಕು ಎಂದು ಮಕ್ಕಳಿಗೆ ಅನ್ನಿಸುವುದು ನೈಸರ್ಗಿಕವಾದುದ್ದು. ಇದು ತಪ್ಪಲ್ಲ. ಆದರೆ, ಇಂಥ ಆಲೋಚನೆ ಮತ್ತು ಭಾವನೆಗಳ ಮೇಲೆ ಯಾವ ರೀತಿ ಹಿಡಿತ ಸಾಧಿಸಬೇಕು ಎನ್ನುವುದನ್ನು ತಿಳಿಸಿ ಹೇಳಬೇಕು. ಇದನ್ನು ಲೈಂಗಿಕ ಶಿಕ್ಷಣ ಮಾಡುತ್ತದೆ. ಲೈಂಗಿಕ ಶಿಕ್ಷಣ ಎಂದರೆ ಲೈಂಗಿಕ ಕ್ರಿಯೆ ಬಗ್ಗೆ ಪಾಠ ಮಾಡುವುದಲ್ಲ. ಬದಲಿಗೆ ಲೈಂಗಿಕತೆಯ ಬಗ್ಗೆ ಅರಿವು ಮೂಡಿಸುವುದು ಎನ್ನುತ್ತಾರೆ ಅವರು.

ತಮಗೆ ಏನೋ ಒಂದು ಬೇಕು ಎಂದಾದರೆ, ಅದು ತಕ್ಷಣದಲ್ಲಿ ಆಗಬೇಕು ಮತ್ತು ಅದರಿಂದ ತೃಪ್ತಿ ಸಿಗಬೇಕು ಎನ್ನುವ ಸ್ವಭಾವ ಮಕ್ಕಳಲ್ಲಿ ಇರುತ್ತದೆ. ಉದಾಹರಣೆಗೆ, ಬೆತ್ತಲೆ ಚಿತ್ರಗಳನ್ನು ತೆಗೆದುಕೊಳ್ಳಬೇಕು ಎಂದು ಅನ್ನಿಸಿದರೆ, ಮುಂದಿನ ಪರಿಣಾಮದ ಬಗ್ಗೆ ಅರಿವೇ ಇಲ್ಲದೆ, ಮಕ್ಕಳು ತಕ್ಷಣವೇ ಚಿತ್ರ ತೆಗೆದುಕೊಳ್ಳಬಹುದು. ಆದ್ದರಿಂದ ತಮ್ಮಲ್ಲಿ ಮೂಡಿದ ಭಾವನೆಗಳನ್ನು ಹೇಗೆ ನಿಯಂತ್ರಿಸಿಕೊಳ್ಳಬೇಕು ಎಂದು ಅವರಿಗೆ ತಿಳಿಸಿ ಹೇಳಬೇಕು ಎನ್ನುತ್ತಾರೆ.

ಮಕ್ಕಳಲ್ಲಿ ಜಾಗೃತಿ ಮೂಡಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು. ತಮ್ಮ ಬಳಿ ಏನನ್ನಾದರೂ ಹೇಳಿಕೊಳ್ಳಬಹುದು ಎಂದು ಮಕ್ಕಳಿಗೆ ಅನ್ನಿಸುವಂಥ ವಾತಾವರಣವನ್ನು ಪೋಷಕರು ಸೃಷ್ಟಿ ಮಾಡಬೇಕು. ಆಗ ಮಾತ್ರ ಈ ಎಲ್ಲಾ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ. ಈ ಎಲ್ಲವನ್ನೂ ಮೀರಿ ಮಕ್ಕಳು ತಪ್ಪು ಮಾಡಿದಾಗ ಅವರನ್ನು ದೂಷಿಸದೆ, ಅವರಿಗೆ ನಿಧಾನವಾಗಿ ಬುದ್ಧಿವಾದ ಹೇಳಬೇಕು. ನಮ್ಮ ಕ್ರಿಯೆಗಳು ಹೇಗೆ ನಮ್ಮ ಭವಿಷ್ಯವನ್ನು ಹಾಳು ಮಾಡುತ್ತವೆ, ಅದರ ಪರಿಣಾಮ ಎಷ್ಟು ಅಸಹನೀಯವಾಗಿರುತ್ತದೆ ಎನ್ನುವುದನ್ನು ತಿಳಿಸಿ ಹೇಳಬೇಕು ಎಂದು ಪೋಷಕರಿಗೆ ಸಲಹೆ ನೀಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು