ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಚೇರಿ ಮುಂದೆ ಮೋದಿ ಪಕೋಡ ಸ್ಟಾಲ್!

Last Updated 8 ಫೆಬ್ರುವರಿ 2018, 8:56 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ಶನಿವಾರ ‘ನರೇಂದ್ರ ಮೋದಿ ಪಕೋಡ ಸ್ಟಾಲ್’ ತೆರೆದಿತ್ತು!

ಕಚೇರಿ ಎದುರಿನ ಮರದ ಕೆಳಗೆ ಸ್ಟೌ ಹಚ್ಚಿ ಪಕೋಡ ತಯಾರಿಸುತ್ತಿದ್ದ ನಿರುದ್ಯೋಗಿಗಳು ‘ಬಿಸಿ ಬಿಸಿ ಪಕೋಡ, ಎಂಜಿನಿಯರಿಂಗ್‌ ಪಕೋಡ, ಬಿಬಿಎಂ ಪಕೋಡ, ₹ 10ಕ್ಕೆ ಒಂದು ಪ್ಲೇಟ್’ ಎಂದು ಕೂಗಿ ಗ್ರಾಹಕರನ್ನು ಕರೆಯುತ್ತಿದ್ದರು. ವಿಚಿತ್ರ ಹೆಸರು ಕೇಳಿದ ಜನ ಪಕೋಡ ತಿನ್ನಲು ಮುಗಿಬಿದ್ದರು.

‘ಪಕೋಡ ಮಾರುವುದೂ ಉದ್ಯೋಗವೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಖಂಡಿಸಿ ‘ಉದ್ಯೋಗಕ್ಕಾಗಿ ಯುವ ಜನರ ಆಂದೋಲನ’ದ ಕಾರ್ಯಕರ್ತರು ಈ ವಿನೂತನ ಪ್ರತಿಭಟನೆ ನಡೆಸಿದರು.

‘ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಭರವಸೆ ನೀಡಿದ್ದ ಪ್ರಧಾನಿ ಪಕೋಡ ಮಾರುವಂತೆ ಹೇಳಿದ್ದಾರೆ. ಹೀಗಾಗಿ ಪಕೋಡ ತಯಾರಿಸಿ ಮಾರುತ್ತಿದ್ದೇವೆ’ ಎಂದು ಅವರು ಹೇಳಿದರು.

ಜೋರಾಗಿ ನಡೆಯುತ್ತಿದ್ದ ವ್ಯಾಪಾರ ತೆರವುಗೊಳಿಸಲು ಮುಂದಾದ ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದ ಪ್ರತಿಭಟನಾಕಾರರು, ಬಿಜೆಪಿ ಮುಖಂಡರೊಂದಿಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕಾಡುಮಲ್ಲೇಶ್ವರ ವಾರ್ಡ್‌ನ ಪಾಲಿಕೆ ಸದಸ್ಯ ಮಂಜುನಾಥರಾಜು ಪ್ರತಿಭಟನಾಕಾರರನ್ನು ಬಿಜೆಪಿ ಕಚೇರಿಗೆ ಕರೆದೊಯ್ದು ಚರ್ಚಿಸಿದರು. ‘ನಿಮ್ಮ ಮನವಿ
ಯನ್ನು ಪ್ರಧಾನಿ ನರೇಂದ್ರ ಮೋದಿಗೆ ತಲುಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಫೆ.4ರಂದು ಬೆಂಗಳೂರಿಗೆ ಬರುವ ಪ್ರಧಾನಿ ಜೊತೆ ಚರ್ಚಿಸಲು ಅವಕಾಶ ಕಲ್ಪಿಸಿಕೊಡಿ. ಅವಕಾಶ ಕಲ್ಪಿಸದಿದ್ದರೆ ಮತ್ತೆ ಹೋರಾಟ ನಡೆಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT