ವೈರಲ್ ವಿಡಿಯೊ: ತಮ್ಮನನ್ನು ಹುಡುಕಿ ಬಂದು ಮುದ್ದು ಮಾಡುವ ಅಕ್ಕ

7

ವೈರಲ್ ವಿಡಿಯೊ: ತಮ್ಮನನ್ನು ಹುಡುಕಿ ಬಂದು ಮುದ್ದು ಮಾಡುವ ಅಕ್ಕ

Published:
Updated:
Deccan Herald

ಬೆಂಗಳೂರು: ಒಡಹುಟ್ಟಿದವರ ಕೋಳಿ ಜಗಳ, ನವಿರು ಪ್ರೀತಿ, ಅದರ ನೆನಪು, ಇಬ್ಬರಲ್ಲೊಬ್ಬರು ದೂರದೂರಿಗೆ ಹೋದರೆ ಇನ್ನಷ್ಟು ಬೆಚ್ಚಗೆ ಉಳಿಯುವ ಭಾವ... ಯೌವ್ವನದಲ್ಲೋ, ನಡುವಯಸ್ಸಿನಲ್ಲೋ ಬಾಲ್ಯದ ನೆನಪು ಕೊಡುವ ಸುಖವಂತೂ ಅಗಣಿತ.

ಬೆಳಗಿನ ವೇಳೆ ಅಂತಹ ನೆನಪಿನ ಕಚಗುಳಿ ಅನುಭವಿಸುವ ಅವಕಾಶ ಸಿಕ್ಕಿದರೆ? ‍ಭಾವಪ್ರಪಂಚವನ್ನೇ ಬೆಳಗುವುದು ನಿಶ್ಚಿತ. ಹಾಗೆ, ಬಾಲ್ಯದ ನೆನಪಿನ ತುತ್ತು ಉಣಿಸಿದ ವಿಡಿಯೊವೊಂದನ್ನು ಮೊನ್ನೆ ನೋಡಿದೆ. ಪುಸಕ್ಕನೆ ನಕ್ಕಾಗ ಸುತ್ತಮುತ್ತಲಿನ ಮಂದಿಯ ಹುಬ್ಬು ಕಾಮನಬಿಲ್ಲಾಗಿತ್ತು! ಅದೇನೆಂದರೆ....

ಅಪ್ಪ, ಅಮ್ಮ, ಅಕ್ಕ ಮತ್ತು ತಮ್ಮನ ಪುಟಾಣಿ ಕುಟುಂಬವದು. ಅಮ್ಮ ಅಡುಗೆ ಮನೆಯಿಂದ, ಅಪ್ಪ ಮನೆಯೊಳಗೆ ಓಡಾಡಿದ ಎಲ್ಲೆಡೆಯಿಂದಲೂ ಆ ಹುಡುಗನಿಗೆ ಸೆಕೆಂಡು ಸೆಕೆಂಡಿಗೂ ಕೆಲಸ ಹೇಳುತ್ತಾರೆ. ಅಮ್ಮನ ಮಾತು ಮುಗಿಯುವ ಮೊದಲೇ ಅಪ್ಪನ ಫರ್ಮಾನು! ಇಬ್ಬರೂ ಜಿದ್ದಿಗೆ ಬಿದ್ದಂತೆ...

ನಮ್ಮ ಅಣ್ಣ ತಮ್ಮಂದಿರಂತೆ ಅವನಿಗೂ ರೋಸಿಹೋಗುತ್ತದೆ. ‘ಅಯ್ಯೋ ಎಲ್ಲದಕ್ಕೂ ನನ್ನನ್ನೇ ಯಾಕೆ ಕರೀತೀರಾ? ಅಕ್ಕನಿಗೂ ಸ್ವಲ್ಪ ಕೆಲಸ ಹೇಳಿ’ ಎಂದು ರೇಗುತ್ತಾನೆ. ‘ಸರಿ ಸರಿ. ಅವಳನ್ನು ಬೆಂಗಳೂರಿನಿಂದ ಕರೆಸಿಬಿಡೋಣ’ ಅಂತಾರೆ ಅಮ್ಮ. ಅದೇ ಹೊತ್ತಿಗೆ ಅಕ್ಕನ ಫೋಟೊ ಅಪ್ಪನ ಮೊಬೈಲ್‌ ಪರದೆಯಲ್ಲಿ ಮೂಡುತ್ತದೆ. ಮೂವರ ಮುಖದಲ್ಲೂ ಬೆಳದಿಂಗಳು. ಅಪ್ಪ, ಅಮ್ಮನೊಂದಿಗೆ ಮಾತನಾಡಿದ ಅಕ್ಕನಿಗೆ ತಮ್ಮನೂ ಅಲ್ಲಿ ಇರುವ ವಾಸನೆ ಬಡಿಯುತ್ತದೆ. ತಮ್ಮನ ಕೈಗೆ ಫೋನ್‌ ಬರುತ್ತದೆ...

‘ಏಯ್‌ ಕಳ್ಳ... ಹೇಗಿದೆ ನಿನ್ನ ‘ದಿಶಾಸ್‌ ವರ್ಲ್ಡ್‌? ಗೋವಾಕ್ಕೆ ಅವಳ ಜೊತೆಗೇ ಹೋಗಿದ್ದೆ ಅಲ್ವಾ? ನಿನ್ನ ಎಲ್ಲಾ ಗುಟ್ಟೂ ರಟ್ಟಾಯ್ತು...’ ಎಂದು ಅಕ್ಕ ಕಾಲೆಳೆಯುತ್ತಾಳೆ. ‘ಮಾಲು ಸಮೇತ ಸಿಕ್ಕಿಬಿದ್ದ ಕಳ್ಳ’ನ ಪರಿಸ್ಥಿತಿ ತಮ್ಮನದು! ಮಾತು–ಕತೆಯಲ್ಲಿ ಅಪ್ಪ–ಅಮ್ಮನ ಮದುವೆ ದಿನದ ಆಚರಣೆಯ ಬಗ್ಗೆ ಇಬ್ಬರೂ ಯೋಜನೆ ಹಾಕುತ್ತಾರೆ. 

‘ನೀನು ಬರದಿದ್ದರೆ ಬರೀ ಡಲ್ಲು’ ತಮ್ಮನ ಅಂತರಂಗದ ಮಾತು. ಅಕ್ಕನ ಕಣ್ಣಾಲಿಯ ಪಸೆ ಮೊಬೈಲ್‌ ಪರದೆಯ ಬೆಳಕಿನಲ್ಲಿ ಕೋಲ್ಮಿಂಚಿನಂತಾಗುತ್ತದೆ. ಅವಳ ಗೈರುಹಾಜರಿಯಲ್ಲೇ ಪಾರ್ಟಿ ಮುಗಿಯುತ್ತದೆ.

ಮಧ್ಯರಾತ್ರಿ, ಅಮ್ಮ ಮಿಕ್ಕ ಅಡುಗೆಯನ್ನು ಸ್ಟೌನಲ್ಲಿ ಬಿಸಿ ಮಾಡುತ್ತಾ, ‘ಪಾರ್ಟಿ ಸಖತ್ತಾಗಿತ್ತು ಋತ್ವಿಕ್‌. ಆದರೆ ಬರ್ಖಾ ಇರಬೇಕಿತ್ತು. ನೀನು ಮೊದಲೇ ಕೇಕುಬಾಕ. ನಿನಗೆ ಆ ಒಂದು ಸಣ್ಣ ತುಂಡು ಸಾಕಾಗಲ್ಲ ಅಂತಲೇ ಇದನ್ನು ಎತ್ತಿಟ್ಟಿದ್ದೆ ತಗೋ’ ಎಂದು ಫ್ರಿಡ್ಜ್‌ನಿಂದ ಇಡೀ ಕೇಕ್‌ ಕೈಗಿಡುತ್ತಾರೆ.

ಸ್ಟ್ರಾಬೆರಿ ಬಣ್ಣದ ಕ್ರೀಮ್‌ ಬಳಿದುಕೊಂಡ ಕೇಕ್‌ ನೋಡಿದಾಕ್ಷಣ ಹಿಂದಿನ ವರ್ಷದ ಅಂತಹುದೇ ಘಟನೆ ತಮ್ಮನಿಗೆ ನೆನಪಾಗುತ್ತದೆ. ಅಮ್ಮ ಹೀಗೇ ಎತ್ತಿಟ್ಟಿದ್ದ ಕೇಕನ್ನು ಮೆತ್ತಗೆ ಫ್ರಿಡ್ಜ್‌ನಿಂದ ರೂಮಿಗೆ ಎತ್ಕೊಂಡು ಹೋಗಿ ಅಕ್ಕ ಕದ್ದುಮುಚ್ಚಿ ತಿಂದಿದ್ದಳು. ಕೋಳಿ ಜಗಳವಾಡುತ್ತಾ ಮಿಕ್ಕಿದ್ದನ್ನು ತಿಂದಿದ್ದರು. ಸ್ಟ್ರಾಬೆರಿ ಬಣ್ಣದ ಕೇಕ್‌ ಫ್ರಿಡ್ಜ್‌ನಲ್ಲೇ ಇಟ್ಟ ಋತ್ವಿಕ್‌ ಮಂಕಾಗಿದ್ದ. ಅಕ್ಕನ ಫೋನ್‌. ರಕ್ಷಾಬಂಧನ ಮತ್ತು ಉಡುಗೊರೆಯ ಸಮಾಚಾರ ವಿನಿಮಯ. ಸಣ್ಣ ಜಗಳ.

ಮಕಾಡೆ ಮಲಗಿದ ಹುಡುಗನ ಕೈಯಿಂದ ದಿಂಬು ಕಿತ್ತುಕೊಂಡು ಆಕೆ ಕಚಗುಳಿ ಇಟ್ಟರು. ಅಮ್ಮ ದಿನಾ ಬೆಳಿಗ್ಗೆ ಎದ್ದೇಳಿಸುವುದು ಹಾಗೇ. ‘ಬಿಡಮ್ಮ ತೊಂದ್ರ ಕೊಡ್ಬೇಡ’. ಮತ್ತೆ ಕಚಗುಳಿ.

‘ದಿಶಾಸ್‌ ವರ್ಲ್ಡ್‌’ನ ಕನಸು ಕಾಣುತ್ತಿದ್ದೀಯಾ?’ 

ಅಯ್ಯಯ್ಯೋ ಅಮ್ಮನಿಗೆ ದಿಶಾ ಬಗ್ಗೆ ಹೇಳಿದ್ಯಾರು? ಧಿಗ್ಗನೆದ್ದು ಕೂತವನ ಮುಂದೆ ಅಕ್ಕ! ಅಳುವುದೊಂದೇ ಬಾಕಿ. ಅಲ್ಲಿಂದಾಚೆ ಅಕ್ಕ ಮತ್ತು ತಮ್ಮ ಎಷ್ಟೋ ವರ್ಷಗಳಿಂದ ‘ಧಿಮಾಕಿನಿಂದ’ ಬಚ್ಚಿಟ್ಟಿದ್ದ ಪ್ರೀತಿಯ ಬೆಟ್ಟ ಕರಗಿ ಮಾತು ಮಾತಾಗಿ ಹರಿದುಬರುತ್ತದೆ.

ವಿಡಿಯೊದ ಅಂತ್ಯವನ್ನೂ ಅಕ್ಷರರೂಪಕ್ಕಿಳಿಸಿದರೆ ಆ ಒಡಲಾಳದ ಭಾವಗಳ ತೂಕಕ್ಕೆ ಸರಿಗಟ್ಟಲಾರದು. ನಿಮ್ಮ ಒಡಹುಟ್ಟಿದವರೂ ನಿಮ್ಮೆಡೆಗಿನ ಪ್ರೀತಿಯನ್ನು ಧಿಮಾಕು ಮತ್ತು ಒಣಜಂಭದಿಂದ ಹಾಗೇ ಬಚ್ಚಿಟ್ಟಿರಬಹುದು. ನಮ್ಮೊಳಗನ್ನು ತೆರೆಸುವ ಆ ವಿಡಿಯೊ ಒಮ್ಮೆ ನೋಡಿ.

ವಿಡಿಯೊವನ್ನು 8 ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ. 6400 ಮಂದಿ ಶೇರ್ ಮಾಡಿದ್ದಾರೆ. 46 ಸಾವಿರ ಲೈಕ್ಸ್ ಸಿಕ್ಕಿದೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !