ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಸಮಯ ನನ್ನದು!: ತಮ್ಮ ಪ್ರತಿಭೆಗೆ ಮಹಿಳೆಯರೇ ನೀರೆರೆದು ಪೋಷಿಸಬೇಕು

Last Updated 24 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ತಮ್ಮ ಪ್ರತಿಭೆಗೆ ನೀರೆರೆದು ಪೋಷಿಸಿಕೊಳ್ಳುವ ಜವಾಬ್ದಾರಿಯನ್ನು ಮಹಿಳೆಯರೇ ತೆಗೆದುಕೊಳ್ಳಬೇಕು. ಸಮಯ ಹೊಂದಾಣಿಕೆ ಬಗ್ಗೆ ಗಟ್ಟಿಯಾಗಿ ಮಾತಾಡಬೇಕು. ಇದು ವ್ಯಕ್ತಿತ್ವ ಅರಳಿಸಿಕೊಳ್ಳಲು ನೆರವಾಗುತ್ತದೆ.

ಸುಜಾತಾ ಒಳ್ಳೆಯ ಹಾಡುಗಾರ್ತಿ. ಆದರೆ ಹಾಡುವ ಈ ಕಲೆಯನ್ನು ಹವ್ಯಾಸವನ್ನಾಗಿ ಪೋಷಿಸಿಕೊಳ್ಳುವುದು ಅವಳಿಗ್ಯಾಕೋ ಸಾಧ್ಯವಾಗಲಿಲ್ಲ. ಕಾರ್ಯಕ್ರಮದಲ್ಲಿ ಒಂದೆರಡು ಹಾಡುಗಳನ್ನು ಹಾಡುವಂತೆ ಕೋರಿ, ಮೊನ್ನೆ ಆಯೋಜಕರು ಅವಳಿಗೆ ಫೋನ್ ಮಾಡಿ ಮನವಿ ಮಾಡಿಕೊಂಡರು. ಅಪರೂಪಕ್ಕಾದರೂ ಹಾಡೋಣ ಎಂದು ಅವಳೂ ಹುಮ್ಮಸ್ಸಿನಿಂದ ಒಪ್ಪಿಗೆ ಸೂಚಿಸಿದಳು.

ಭಕ್ತಿಗೀತೆಗಳನ್ನೇ ಹಾಡಬೇಕು ಎಂದು ಆಯೋಜಕರು ಹೇಳಿದ್ದರಿಂದ ಸುಜಾತಾಳಿಗೆ ಸ್ವಲ್ಪವಾದರೂ ಅಭ್ಯಾಸದ ಅಗತ್ಯವಿತ್ತು. ಇಬ್ಬರು ಮಕ್ಕಳನ್ನು ಶಾಲೆಗೆ ಸಿದ್ಧಮಾಡಿ, ಮನೆಮಂದಿಯ ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಿದ ಬಳಿಕ ತನಗಾಗಿ ಒಂದಿಷ್ಟು ಸಮಯ ಹೊಂದಿಸಿಕೊಳ್ಳುವುದು ಸಾಧ್ಯವಾಗದೇ ಅವಳಿಗೆ ಉಸಿರು ಕಟ್ಟಿದಂತೆ ಆಗಿತ್ತು. ಪ್ರಶಾಂತವಾದ ವಾತಾವರಣದಲ್ಲಿ ಹಾಡನ್ನು ಅಭ್ಯಾಸ ಮಾಡಿಕೊಳ್ಳಲು ಮೂರು ದಿನಗಳಿಂದ ಹರಸಾಹಸಪಟ್ಟರೂ ಕೆಲಸಗಳೇ ಮುಗಿಯದಂತಾಗಿದ್ದವು. ಮಾವನಿಗೆ ಬೇಕಾದ ಅಡುಗೆಯೊಂದು ಕಡೆ, ಗಂಡ ಮಕ್ಕಳ ಬೇಕು ಬೇಡಗಳನ್ನು ನಿಭಾಯಿಸುವುದು ಮತ್ತೊಂದು ಕಡೆ...ಎಂದು ನಿರಂತರ ಒತ್ತಡದಲ್ಲಿದ್ದಳು.

‘ಹಾಡುವುದಕ್ಕೆ ಒಪ್ಪಿಕೊಂಡಿದ್ದರಿಂದಲೇ ನನಗೆ ಇಷ್ಟು ಟೆನ್ಶನ್‌ ಆಗುತ್ತಿದೆ. ಅದೊಂದು ಕೆಲಸ ಒಪ್ಪಿಕೊಳ್ಳದೇ ಇದ್ದಿದ್ದರೆ ಎಂದಿನಂತೆ ಕೆಲಸಗಳನ್ನು ಮಾಡುತ್ತಾ ಹೋಗಬಹುದಿತ್ತು. ಈ ಟೆನ್ಶನ್ನೇ ಇರುತ್ತಿರಲಿಲ್ಲ...’ ಎಂದು ಹತ್ತಾರು ಬಾರಿ ತನ್ನನ್ನೇ ತಾನು ಶಪಿಸಿಕೊಂಡಳು.

ಹೌದು. ಈ ತಪ್ಪಿತಸ್ಥ ಭಾವನೆಯನ್ನು ಕೇವಲ ಮಹಿಳೆಯರು ಮಾತ್ರ ಪದೇ ಪದೇ ತಮ್ಮ ಮನಸ್ಸಿಗೆ ತಂದುಕೊಳ್ಳುತ್ತಾರೆ ಅಥವಾ ಅವರು ಹಾಗೆ ಯೋಚನೆ ಮಾಡುವಂತೆ ಮನೆಯ ಸದಸ್ಯರು ವರ್ತಿಸುತ್ತಾರೆ ಎಂದರೂ ತಪ್ಪೇನೂ ಆಗದು. ‘ನೀನು ಹಾಡುವುದಕ್ಕೆ ಒಪ್ಪಿಕೊಂಡಿದ್ದೀಯಲ್ಲ..ಸ್ವಲ್ಪ ಅಭ್ಯಾಸ ಮಾಡಿಕೊ. ಇದಿಷ್ಟು ಕೆಲಸವನ್ನು ನಾನು ಮಾಡುತ್ತೇನೆ’ ಎಂದು ಮನೆಯ ಇತರ ಸದಸ್ಯರು ಯಾಕೆ ಕೈ ಜೋಡಿಸುವುದಿಲ್ಲ ಎಂದು ಅನೇಕ ಬಾರಿ ಅನಿಸುತ್ತದೆ. ಅಥವಾ ಅದು ಹೀಗಿರಬಹುದು: ತನ್ನ ಆಸಕ್ತಿ ಮತ್ತು ಪ್ರತಿಭೆಗೆ ಒಂದಿಷ್ಟು ಸ್ಪೇಸ್‌ ಬೇಕು ಎಂದು ಆಗ್ರಹಿಸುವ ಪ್ರವೃತ್ತಿಯನ್ನು ಮಹಿಳೆಯರು ಯಾಕೆ ರೂಢಿಸಿಕೊಳ್ಳುವುದಿಲ್ಲ? ತನಗೆ ಹಾಡುವುದಕ್ಕಿದೆ, ಚಿತ್ರಬಿಡಿಸುವುದಕ್ಕಿದೆ, ಯಾವುದೋ ಫೆಲೋಶಿಪ್‌ಗೆ ಅರ್ಜಿ ತುಂಬುವುದಕ್ಕಿದೆ. ಆದ್ದರಿಂದ ಇವತ್ತು ಮನೆಯ ಈ ಕೆಲಸವನ್ನು ನಾನು ನಿಭಾಯಿಸಲಾರೆ ಎಂದು ಹೇಳುವುದಕ್ಕೆ ಎಷ್ಟೋ ಮನೆಗಳಲ್ಲಿ ಮಹಿಳೆಯರು ಹಿಂದೇಟು ಹಾಕುತ್ತಾರೆ. ಯಾಕೆ ಹೀಗೆ ?

‘ನಿನಗೆ ಇಷ್ಟವಾದ ಯಾವುದೇ ಸಾಧನೆಯನ್ನು ಮಾಡುವುದಕ್ಕೆ ಬೆಂಬಲವಿದೆ’ ಎಂಬ ಮಾತುಗಳು ಅನೇಕರ ಮನೆಯಲ್ಲಿ ಕೇಳಿಬರುತ್ತವೆ. ಆದರೆ ನಿಜವಾಗಿಯೂ ಆಕೆ ಪೆನ್ನು ಪೇಪರು ಹಿಡಿದು ಕುಳಿತಾಗಲಷ್ಟೇ ಬೆಂಬಲದ ಪ್ರಮಾಣವು ಎಷ್ಟರಮಟ್ಟಿಗಿದೆ ಎನ್ನುವುದು ಅರ್ಥವಾಗುತ್ತದೆ. ಈ ವಿಚಾರದ ಇನ್ನೊಂದು ಆಯಾಮವನ್ನೂ ಮರೆಯುವಂತಿಲ್ಲ. ‘ನಿನಗಾಗಿ ಸಮಯವನ್ನು ನೀನೇ ಹೊಂದಿಸಿಕೊಳ್ಳಬೇಕು. ನಾವ್ಯಾರಾದ್ರೂ ಬಂದು ಪೆನ್ನು ಪೇಪರು ಹಿಡಿದು ಈ ಬರೆಯಮ್ಮಾ ಎಂದು ಮುದ್ದು ಮಾಡುವುದಕ್ಕಾಗುತ್ಯೇ...’ ಎಂಬ ಒರಟು ಮಾತುಗಳನ್ನು ಕೇಳಬೇಕಾದ ಪರಿಸ್ಥಿತಿಗಳೂ ಇವೆ.

ಒಟ್ಟಿನಲ್ಲಿ ತಮ್ಮ ಪ್ರತಿಭೆಗೆ ನೀರೆರೆದು ಪೋಷಿಸಿಕೊಳ್ಳುವ ಜವಾಬ್ದಾರಿಯನ್ನು ಮಹಿಳೆಯರೇ ವಹಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ತಮಗಾಗಿ ಸಮಯ ಹೊಂದಿಸಿಕೊಳ್ಳುವ ಮುನ್ನ, ಮನೆಯಲ್ಲಿ ಗಟ್ಟಿಯಾಗಿ ತಮ್ಮ ವಿಚಾರವನ್ನು ಮಂಡನೆ ಮಾಡಬೇಕಾಗುತ್ತದೆ. ನಾನು ಹಾಡಬೇಕಾಗಿದೆ. ಆದ್ದರಿಂದ ಮನೆಕೆಲಸಕ್ಕೆ ಸಹಾಯ ಬೇಕು. ಸಂಜೆಯ ಕೆಲಸಗಳನ್ನು ಮನೆಯವರೇ ನಿರ್ವಹಿಸಬೇಕು ಅಥವಾ ನಿರ್ವಹಣೆಗೆ ಸಹಾಯಕರನ್ನು ನೇಮಿಸಿಕೊಳ್ಳಬೇಕು ಎಂದು ಮುಕ್ತವಾಗಿ ಹೇಳುವಷ್ಟು ಗಟ್ಟಿಗಿತ್ತಿಯರಾಗಬೇಕಾಗುತ್ತದೆ.

ಸಾಮಾನ್ಯವಾಗಿ ಮನೆಯೊಂದರಲ್ಲಿರುವ ಕೆಲಸ ಕಾರ್ಯಗಳು, ಹಬ್ಬ ಹರಿದಿನ, ಬಂಧು–ಬಳಗದ ಜವಾಬ್ದಾರಿ ಎಲ್ಲವನ್ನೂ ಮಹಿಳೆಯರು ನೋಡಿಕೊಳ್ಳುವುದು ವಾಡಿಕೆ. ಹಾಗಾಗಿ ಪ್ರತೀ ದಿನವನ್ನೂ ಯೋಜಿಸಿ ಕೆಲಸಗಳನ್ನು ನಿರ್ವಹಿಸುವುದು ಕೂಡ ಆಕೆಯೇ ಆಗಿರುತ್ತಾಳೆ. ಅಪವಾದಗಳು ಇರಬಹುದೇನೋ. ಆದರೆ ಯೋಜನೆ ರೂಪಿಸುವ ಸೂತ್ರವು ತಮ್ಮ ಕೈಯ್ಯಲ್ಲಿದ್ದಾಗಲೂ ಮಹಿಳೆಯರೇಕೆ ತಮಗಾಗಿ ಒಂದಿಷ್ಟು ಸಮಯವನ್ನು ಮೀಸಲಿಟ್ಟುಕೊಳ್ಳುವುದಿಲ್ಲ ಎನ್ನುವುದೂ ಸೋಜಿಗ ಅನಿಸುತ್ತದೆ. ತನಗಾಗಿ ಸಮಯ ಹೊಂದಿಸಿಕೊಳ್ಳುವುದು ಅಪರಾಧ ಎಂಬ ಭಾವನೆಯು ಎಷ್ಟೋ ಮಂದಿ ಮಹಿಳೆಯರ ಮನದಲ್ಲಿ ಬೇರೂರಿದೆ. ಅದನ್ನು ಮೊದಲು ಕಿತ್ತೆಸೆದು, ತನ್ನ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವುದಕ್ಕೆ ಸಮಯ ಹೊಂದಿಸಿಕೊಳ್ಳುವುದು ತಪ್ಪಲ್ಲ ಎಂಬ ಭಾವನೆಯನ್ನು ಮೂಡಿಸಿಕೊಳ್ಳಬೇಕಾಗಿದೆ.

ಯೋಜನೆಗಳನ್ನು ರೂಪಿಸುವಾಗ, ಇಡೀ ವಾರದ ಆಹಾರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬಹುದು. ಆಗ ನಾಳೆ ‘ಬೆಳಿಗ್ಗೆಗೆ ಏನು ತಿಂಡಿ ಮಾಡಬೇಕು’ ಎಂದು ಯೋಚಿಸುತ್ತಾ ಸಮಯ ವ್ಯಯ ಮಾಡಬೇಕಾಗಿಲ್ಲ. ಹಾಗೆ ವಾರದ ಅಡುಗೆ ಪ್ಲಾನ್‌ ಸಿದ್ಧ ಮಾಡುವಾಗಲೇ, ಕೆಲವು ದಿನ ಹಗುರವಾದ ತಿಂಡಿಯನ್ನು, ಮತ್ತೆ ಕೆಲವು ದಿನ ಹಗುರವಾದ ಊಟದ ವ್ಯವಸ್ಥೆಯನ್ನು ಮಾಡಿಕೊಂಡು ತಮ್ಮ ಅಭ್ಯಾಸಗಳಿಗಾಗಿ, ಚಟುವಟಿಕೆಗಳಿಗಾಗಿ ಸಮಯವನ್ನು ತೆಗೆದಿಟ್ಟುಕೊಳ್ಳಬಹುದು. ಅಥವಾ ತಮ್ಮ ಪ್ರತಿಭೆಯನ್ನು ಪೋಷಿಸಿಕೊಳ್ಳಲು, ಕೆಲಸಗಳನ್ನು ನಿರ್ವಹಿಸಲು ಅಗತ್ಯವೆನಿಸಿದಾಗ ಸಹಾಯದ ಅಗತ್ಯವಿದೆ ಎನ್ನುವುದನ್ನು ಮನೆಮಂದಿಗೆ ಮನದಟ್ಟು ಮಾಡುವುದು ಮುಖ್ಯ.

ಮಕ್ಕಳ ಪ್ರತಿಭೆಗೆ ಹೇಗೆ ಪ್ರೋತ್ಸಾಹ ಕೊಡುವುದು ಮುಖ್ಯವೋ, ತನ್ನ ಪ್ರತಿಭೆಗೆ ಪ್ರೋತ್ಸಾಹ ಕೊಡುವುದೂ ಅಷ್ಟೇ ಮುಖ್ಯ ಎನ್ನುವುದನ್ನು ಮೊದಲು ಅಮ್ಮನೇ ಅರಿಯುವುದು ಅನಿವಾರ್ಯ. ‘ನೀನಿನ್ನು ಹಾಡಿ ಏನು ಸಾಧನೆ ಮಾಡಬೇಕಾಗಿದೆ ?’ ಎಂದು ಒರಟಾಗಿ ಎದುರಾಗುವ ಪ್ರಶ್ನೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿ, ‘ನಾನು ಹಾಡುವುದು ಸಾಧನೆಗಾಗಿ ಅಲ್ಲ, ಸಂತೋಷಕ್ಕಾಗಿ’ ಎಂಬುದನ್ನು ಸ್ಪಷ್ಟವಾಗಿ ಹೇಳುವುದಕ್ಕೆ ಮುಜುಗರವೇಕೆ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT