ಗುರುವಾರ , ನವೆಂಬರ್ 26, 2020
22 °C

ವರವಾಯಿತು ಆನ್‌ಲೈನ್: ಮಹಿಳಾ ಮಾರುಕಟ್ಟೆ, ಹೆಣ್ಣೈಕ್ಳು ಸಂತೆಯ ಯಶಸ್ವಿ ಕಥನ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‌ 19ನಂತಹ ದುರಿತ ಕಾಲದಲ್ಲಿ ವ್ಯಾಪಾರ ವಹಿವಾಟುಗಳು ಚೇತರಿಕೆಯ ಹಾದಿಯಲ್ಲಿವೆ. ಈ ಆರೇಳು ತಿಂಗಳ ಅವಧಿಯಲ್ಲಿ, ಲಾಕ್‌ಡೌನ್‌ ಸಮಯದಲ್ಲಿ ಅನಿವಾರ್ಯವೇ ಅನ್ವೇಷಣೆಯ ಮಹಾಮಾರ್ಗ ಎಂಬಂತೆ ಕೆಲವು ಪರ್ಯಾಯ ಮಾರ್ಗಗಳೂ ತೆರೆದುಕೊಂಡವು.

ಮೊದಲ ಲಾಕ್‌ಡೌನ್‌ ಅವಧಿಯನ್ನು ಎಲ್ಲರೂ ಕುಟುಂಬ ಸಮಯವೆಂಬಂತೆ ಸಂಭ್ರಮಿಸಿದರು. ಹೊಸಹೊಸ ಊಟ ತಿಂಡಿಗಳನ್ನು ತಯಾರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಾಕಿ ಆನಂದಿಸಿದರು. ಒಂದೆಡೆ ಬದುಕು ಹೀಗೆ ಸಾಗುತ್ತಿರಬೇಕಾದರೆ, ಇನ್ನೊಂದೆಡೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು ಕೈಗೆ ಕೆಲಸವಿಲ್ಲದೆ ಪರದಾಡುತ್ತಿದ್ದರು. ಸಣ್ಣಪುಟ್ಟ ದುಡಿಮೆಯಲ್ಲಿ ತೊಡಗಿದವರಿಗೆ ಕೈ ಖಾಲಿಯಾಗಿತ್ತು.

ಇದನ್ನೂ ಓದಿ: Pv Web Exclusive| ಗೃಹೋದ್ದಿಮೆಗೆ ಮನವೊಲಿಸಿದ ಕೋವಿಡ್‌

ಹದಿನೈದು ದಿನ, ಒಂದು ತಿಂಗಳಲ್ಲಿ ಮುಗಿಯಬೇಕಾಗಿದ್ದ ಲಾಕ್‌ಡೌನ್‌ ವಿಸ್ತರಿಸುತ್ತಲೇ ಹೋಯಿತು. ಆಗ ಖಾಲಿ ಕೂರುವ ಬದಲು ಏನಾದರೂ ಮಾಡಿದರಾಯಿತು ಅಂದುಕೊಂಡವರು ತಮ್ಮತಮ್ಮಲ್ಲೇ ಗುಂಪುಗಳನ್ನು ಕಟ್ಟಿಕೊಂಡರು. ಅಪರ್ಣಾ ರಾವ್‌ ಮುಂಬೈನಲ್ಲಿದ್ದುಕೊಂಡು ಮಹಿಳಾ ಮಾರುಕಟ್ಟೆ ಎಂಬ ಫೇಸ್‌ಬುಕ್‌ ಪುಟ ನಿರ್ವಹಿಸಲು ಆರಂಭಿಸಿದರು. ಕೊರಿಯರ್‌ ಸರ್ವಿಸ್‌ಗಳು ಆರಂಭವಾಗಿದ್ದೇ ತಡ, ಇವರ ಕನಸುಗಳಿಗೆ ರೆಕ್ಕೆ ಬಂದವು. ಜೊತೆಗೆ ‘ಹೆಣ್ಣೈಕ್ಳು ಸಂತೆ’ ಆರಂಭವಾಯಿತು.

ಮಹಿಳೆಯರು ತಮ್ಮ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆಯನ್ನು ಕಂಡುಕೊಳ್ಳುವ ಯತ್ನ ಆರಂಭಿಸಿದರು. ಕೆಲವು ಕರಾರುವಾಕ್‌ ಆದ ನಿಯಮಗಳನ್ನು ಹಾಕಲಾಯಿತು. ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಗಳನ್ನು ಮಾರಾಟ ಮಾಡುವುದಾದರೆ ಗುಣಮಟ್ಟದ ಕಡೆಗೆ ಗಮನ ಕೊಡ ಬೇಕು. ಪ್ಯಾಕೇಜು ಸಮರ್ಪಕವಾಗಿರ
ಬೇಕು. ಗ್ರಾಹಕರ ಹಣಕ್ಕೆ ನ್ಯಾಯ ಸಲ್ಲಿಸುವಂತಿರಬೇಕು. ಒಂದೆರಡು ದೂರು ಗಳಿದ್ದರೂ.. ಅವುಗಳಲ್ಲಿ ತಥ್ಯವಿದ್ದರೆ ಅಂಥವರಿಗೆ ಮರು ಅವಕಾಶ ಕೊಡುವ ಮುನ್ನ ಯೋಚಿಸಲಾಗುವುದು.. ಹೀಗೆಲ್ಲ ನಿಯಮಗಳನ್ನೂ ರೂಪಿಸಲಾಯಿತು. ಈ ಗುಂಪಿನ ನಿಯಮಗಳಿಗೆ ಒಳಪಟ್ಟವರು, ಮಾರಾಟದ ವೇದಿಕೆಯನ್ನು ಸಮರ್ಥ ವಾಗಿ ಬಳಸಿಕೊಳ್ಳಲಾರಂಭಿಸಿದರು.

ಮಹಿಳಾ ಮಾರುಕಟ್ಟೆ, ‘ಹೆಣ್ಣೈಕ್ಳು ಸಂತೆ’ ಮುಂತಾದ ಫೇಸ್‌ಬುಕ್ ಪುಟಗಳು ಸಾಂಬರ್ ಮಸಾಲೆಯಿಂದ ಆರಂಭಿಸಿ, ಬೆಲೆಬಾಳುವ ಸೀರೆಗಳ ವರೆಗೂ, ಮನೆಯ ಆಲಂಕಾರಿಕ ವಸ್ತುಗಳಿಂದಾರಂಭಿಸಿ, ಬುತ್ತಿಯೂಟದವರೆಗೂ ಎಲ್ಲಕ್ಕೂ ಪರಸ್ಪರ ಸಹಕಾರ ತತ್ವದಡಿಯಲ್ಲಿ ಕೆಲಸ ಆರಂಭಿಸಿದರು. ಗಡಿ, ಎಲ್ಲೆಗಳನ್ನು ಮೀರಿ, ಕೆಲವರು ಈಗ ತಮ್ಮದೇ ಆದ ಬ್ರ್ಯಾಂಡ್ ಕೂಡ ಹೊಂದಿದ್ದಾರೆ. ಕೊಡಗಿನ ಗೋಡಂಬಿ ಮಸಾಲಾದಿಂದ, ವಿಜಯಪುರದ ಮಸಾಲಿಖಾರದವರೆಗೂ, ಇಳಕಲ್‌ನ ಕೈಮಗ್ಗದ ಸೀರೆಗಳಿಂದ ಆರಂಭಿಸಿ, ಪಶ್ಚಿಮ ಬಂಗಾ ಳದ ಜಾಮದಾನಿವರೆಗೂ ಇವರ ಮಾರುಕಟ್ಟೆಯ ಹರವು ವಿಸ್ತಾರವಾಗಿದೆ.

ಸ್ವಾವಲಂಬಿಯಾಗಲು, ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯಲು ಪ್ರಯತ್ನಿಸಿರುವ ಮಹಿಳೆಯರ ಈ ಪರ್ಯಾಯ ಮಾರುಕಟ್ಟೆಯ ಹಿಂದಿನ ಕೈಗಳು ಹಲವು. ಆದರೆ ಯಶಸ್ಸಿನ ಯಾವ ಮಾರ್ಗಗಳೂ ಹೂಮೇಲಿನ ನಡಿಗೆಯಾಗಿರುವುದಿಲ್ಲ. ಅವರ ಆಲೋಚನೆ ಹೇಗೆ ಕೆಲಸ ಮಾಡಿತು? ಯಾರು ಏನು ಮಾರಾಟ ಮಾಡುತ್ತಿದ್ದಾರೆ? ಅವರ ಮುಂದಿರುವ ಸವಾಲುಗಳೇನು? ಇವುಗಳನ್ನೆಲ್ಲ ‘ಪ್ರಜಾವಾಣಿ’ ಮಾಹಿತಿ ಒಟ್ಟುಗೂಡಿತು. ಇವರ ಯಶಸ್ವಿಕಥನ
ಇನ್ನುಳಿದವರಿಗೂ ಪ್ರೇರಣೆಯಾಗಲಿ ಎಂಬ ಸದುದ್ದೇಶದಿಂದ.

ಇಲ್ಲಿದೆ 'ಮಹಿಳಾ ಮಾರುಕಟ್ಟೆ'

‘ಲಾಕ್‌ಡೌನ್ ಅವಧಿಯಲ್ಲಿ ಮಹಿಳಾ ವ್ಯಾಪಾರಿಗಳನ್ನು ಒಂದೆಡೆ ತರುವ ಉದ್ದೇಶಕ್ಕಾಗಿ ರೂಪಿಸಿದ್ದೇ ಫೇಸ್‌ಬುಕ್‌ನ ‘ಮಹಿಳಾ ಮಾರುಕಟ್ಟೆ’. ಪ್ರಾದೇಶಿಕವಾರು ಮಹಿಳೆಯರು ಮನೆಯಲ್ಲೇ ತಯಾರಿಸುವ ವಿವಿಧ ಉತ್ಪನ್ನಗಳಿಗೆ ಇಲ್ಲಿ ಆದ್ಯತೆ. ಆರಂಭಿಸಿದ ಹೊಸತರಲ್ಲಿ ಆನ್‌ಲೈನ್‌ನಲ್ಲಿ ಇಷ್ಟು ದೊಡ್ಡದಾಗಿ ಬೆಳೆಯುವ ನಿರೀಕ್ಷೆ ಇರಲಿಲ್ಲ. ಆದರೆ, ಇಂದು ನಮ್ಮ ಪುಟದಲ್ಲಿ 600 ಮಹಿಳಾ ವ್ಯಾಪಾರಿಗಳಿದ್ದಾರೆ’ ಎನ್ನುತ್ತಾರೆ ಮಹಿಳಾ ಮಾರುಕಟ್ಟೆ ಗ್ರೂಪ್‌ ಅಡ್ಮಿನ್ ಅಪರ್ಣಾ ರಾವ್.

‘ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಇಲ್ಲಿ ನೇರ ವ್ಯಾಪಾರ ನಡೆಯುತ್ತಿದೆ. ಗ್ರಾಹಕರು ಆನ್‌ಲೈನ್‌ನಲ್ಲೇ ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಳ್ಳುತ್ತಾರೆ. ಅನೇಕ ಮಹಿಳೆಯರು ‘ಮಹಿಳಾ ಮಾರುಕಟ್ಟೆ’ ಮೂಲಕ ‘ಆರ್ಥಿಕ ಆತ್ಮವಿಶ್ವಾಸ’ ಪಡೆದಿದ್ದಾರೆ. ಕುಟುಂಬದ ಸ್ಥಿತಿ ಹೇಗೇ ಇರಲಿ ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿರುವುದು ಒಳ್ಳೆಯದು. ಅದಕ್ಕೆ ‘ಮಹಿಳಾ ಮಾರುಕಟ್ಟೆ’ ವೇದಿಕೆಯಾಗಿದೆ’ ಎಂದು ಅಭಿಪ್ರಾಯ ಪಡುತ್ತಾರೆ ಅವರು.

ಇದು ‘ಹೆಣ್ಣೈಕ್ಳು ಸಂತೆ’ 

‘ಲಾಕ್‌ಡೌನ್‌ನಲ್ಲಿ ಬೆಂಗಳೂರಿನಲ್ಲಿ ಫ್ಲೀ ಮಾರ್ಕೆಟ್ ನಡೆಸುತ್ತಿದ್ದ ಸುಮಾರು 500 ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೀಡಾದರು. ಆಗ ನಮ್ಮ ನೆರವಿಗೆ ಬಂದದ್ದು ಫೇಸ್‌ಬುಕ್. ‘ಹೆಣ್ಣೈಕ್ಳು ಸಂತೆ’ ಪುಟವನ್ನು ಫೇಸ್‌ಬುಕ್‌ನಲ್ಲಿ ಆರಂಭಿಸಿ, ಗೊತ್ತಿರುವ ಸಣ್ಣಪುಟ್ಟ ವ್ಯಾಪಾರಿಗಳನ್ನು ಸಂಪರ್ಕಿಸಿ ಈ ಪುಟಕ್ಕೆ ಸೇರಿಸಿದೆವು. ಅನೇಕ ಖಾಸಗಿ ಶಾಲಾ ಶಿಕ್ಷಕಿಯರು, ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಮಾಡುವವರಿಗೂ ಈ ಪುಟ ನೆರವಾಯಿತು. ಸರ್ಕಾರಿ ಉದ್ಯೋಗಿಗಳು ಈ ಪುಟದಲ್ಲಿ ಬಾರದಂತೆ ಎಚ್ಚರ ವಹಿಸಿದೆವು. ಏಕೆಂದರೆ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಹೆಣ್ಣುಮಕ್ಕಳನ್ನು ಸಬಲರನ್ನಾಗಿಸುವುದು ನಮ್ಮ ಗುಂಪಿನ ಉದ್ದೇಶ’ ಎನ್ನುತ್ತಾರೆ ‘ಹೆಣ್ಣೈಕ್ಳು ಸಂತೆ’ ಗ್ರೂಪ್ ಅಡ್ಮಿನ್ ಸುರಭಿ ರೇಣುಕಾಂಬೆ.

‘ಸಾಮಾಜಿಕ ಜಾಲತಾಣದ ಮೂಲಕ ಹೆಣ್ಣುಮಕ್ಕಳು ಪರ್ಯಾಯ ಮಾರುಕಟ್ಟೆ ಕಂಡುಕೊಳ್ಳಬಹುದು ಎನ್ನುವುದಕ್ಕೆ ಈ ಪುಟವೇ ಉದಾಹರಣೆ’ ಎನ್ನುತ್ತಾರೆ ಅವರು.

***

ಪಸರಿಸಿದ ಬಿರಿಯಾನಿ ಪರಿಮಳ!

ನಾನು ಬಿರಿಯಾನಿ ಮಾಡಲು ಮನೆಯಲ್ಲೇ ಪುಡಿ ತಯಾರಿಸಿಕೊಳ್ಳುತ್ತಿದ್ದೆ. ಇದರ ಜೊತೆಗೆ ಚಿಕನ್ ಮಸಾಲ, ಮಟನ್ ಮಸಾಲ, ಸಾಂಬಾರ್ ಪುಡಿಯನ್ನು ಆನ್‌ಲೈನ್‌ನಲ್ಲಿ ಪರಿಚಯಿಸಿದರೆ ಹೇಗೆ ಅನಿಸಿತು. ‘ಹೆಣ್ಣೈಕ್ಳು ಸಂತೆ’ ಎಫ್‌ಬಿ ಪುಟದಲ್ಲಿ ಹಾಕಿದ್ದೇ ತಡ ಏಳೆಂಟು ಜನ ಆರ್ಡರ್ ಮಾಡಿದರು. ಖರೀದಿಸಿದವರು ಒಳ್ಳೆಯ ಪ್ರತಿಕ್ರಿಯೆಯನ್ನೂ ಕೊಟ್ಟರು. ನಾಲ್ಕು ಪುಡಿಯಿಂದ ಶುರುವಾದ ಈ ಕಾಯಕ ಇಂದು 13 ಪುಡಿಗಳನ್ನು ಮಾಡುವ ತನಕ ಬಂದಿದೆ. 

ಲಾಕ್‌ಡೌನ್‌ನಿಂದ ಮನಸು ಮುದುಡಿಹೋಗಿತ್ತು. ಆದರೆ ಈಗ ನನ್ನೊಂದಿಗೆ ಮಗ ಮತ್ತು ಸೊಸೆಯೂ ಕೈಜೋಡಿಸಿದ್ದು, ಎಲ್ಲರೂ ಈ ಕೆಲಸವನ್ನು ಖುಷಿಯಿಂದ ಮಾಡುತ್ತಿದ್ದೇವೆ.

-ಬಿ.ಟಿ. ಜಾಹ್ನವಿ, ದಾವಣಗೆರೆ

***

ಆತ್ಮವಿಶ್ವಾಸ ನೀಡಿದ ವ್ಯಾಪಾರ

‘ಲಾಕ್‌ಡೌನ್‌ನಲ್ಲಿ ನಾನಿದ್ದ ಖಾಸಗಿ ಶಾಲೆ ಮುಚ್ಚಿಹೋಯಿತು. ಆಗ ಬಾಳೆಕಾಯಿ ಚಿಪ್ಸ್ ಮಾಡಿ ಮಾರಾಟ ಆರಂಭಿಸಿದೆ. ನೆರವಿಗೆ ಬಂದದ್ದು ಆನ್‌ಲೈನ್ ಮಾರಾಟ. ಚಿಪ್ಸ್ ಮಾರುವುದಕ್ಕಾಗಿಯೇ ಎಫ್‌ಬಿಯಲ್ಲಿ ಖಾತೆ ತೆರೆದೆ. ಅಲ್ಲಿ ‘ಮಹಿಳಾ ಮಾರುಕಟ್ಟೆ’ ಮೂಲಕ ಆನ್‌ಲೈನ್ ಮಾರಾಟ ಶುರು ಮಾಡಿದೆ. ಈಗ ದಿನವೊಂದಕ್ಕೆ ಕನಿಷ್ಠ 4–5 ಕೆ.ಜಿ.ಯಷ್ಟು ಚಿಪ್ಸ್ ಮಾರಾಟವಾಗುತ್ತಿದೆ.  

-ಸಂಧ್ಯಾ ಹೆಗಡೆ, ಶಿರಸಿ (ಉತ್ತರ ಕನ್ನಡ)

***

ಮತ್ತೆ ಬೆಸೆಯಿತು ತವರಿನ ನಂಟು

ಅನೇಕ ವರ್ಷಗಳ ಕಾಲ ಹೊರರಾಜ್ಯದಲ್ಲಿದ್ದ ನನಗೆ ಲಾಕ್‌ಡೌನ್ ಅವಧಿಯಲ್ಲಿ ಫೇಸ್‌ಬುಕ್‌ನ ‘ಹೆಣ್ಣೈಕ್ಕಳ ಸಂತೆ’ ಬಟ್ಟೆ ವ್ಯಾಪಾರಕ್ಕೆ ನೆರವಾಗಿದೆ. ಒಂದೂವರೆ ವರ್ಷದ ಹಿಂದಷ್ಟೇ ಮೈಸೂರಿಗೆ ಬಂದೆ. ‘ಹೆಣ್ಣೈಕ್ಕಳ ಸಂತೆ’ ಗ್ರಾಹಕರಷ್ಟೇ ಅಲ್ಲ,
ಸ್ನೇಹಿತರನ್ನೂ ಕೊಟ್ಟಿದೆ. ಕಡಿದುಹೋಗಿದ್ದ ತವರು ರಾಜ್ಯದ ನಂಟು ಈ ಎಫ್‌ಬಿ ಪುಟದ ಮೂಲಕವೇ ಬೆಸೆದಿದೆ ಎನ್ನಲು
ಸಂತೋಷವಿದೆ.

-ಮಮತಾ ಪಾಟೀಲ್, ಮೈಸೂರು

***

ಆನ್‌ಲೈನ್‌ನಲ್ಲೇ ಇಳಕಲ್ ಸೀರೆ!

‘ನಾನು ಸ್ವಂತ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೇನೆ. ಲಾಕ್‌ಡೌನ್‌ನಲ್ಲಿ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದೆ. ಈ ಮಕ್ಕಳ ಪೋಷಕರು ನೇಕಾರರು. ಲಾಕ್‌ಡೌನ್‌ ನಲ್ಲಿ ಇವರಿಗೆ ಆದಾಯವಿರಲಿಲ್ಲ. ಆಗ ಫೇಸ್‌ಬುಕ್‌ನ ಮಹಿಳಾ ಮಾರುಕಟ್ಟೆ ಪುಟದಲ್ಲಿ ಇಳಕಲ್ ಸೀರೆಗಳನ್ನು ಮಾರಾಟ ಆರಂಭಿಸಿದೆ. ಇದುವರೆಗೆ 300ಕ್ಕೂ ಹೆಚ್ಚು ಇಳಕಲ್ ಸೀರೆಗಳನ್ನು ಮಾರಿದ್ದೇನೆ’ ಎನ್ನುತ್ತಾರೆ ಬಾಗಲಕೋಟೆ ಜಿಲ್ಲೆಯ

-ಶರಣ್ಯ ಅಂಗಡಿ, ಇಳಕಲ್‌

***

ಪರ್ಯಾಯ ಮಾರುಕಟ್ಟೆ ಸವಾಲು

ಮನೆಯಿಂದ ಮಾರುಕಟ್ಟೆಗೆ ಕಾಲಿಟ್ಟಾಗಲೇ ಇಲ್ಲಿಯ ಸಮಸ್ಯೆಗಳು ಅರ್ಥವಾಗುತ್ತಿದ್ದವು. ಪ್ರತಿ ಆದೇಶಕ್ಕೂ ಒಂದೊಂದು ಪಾಠ ಕಲಿತವರಿದ್ದಾರೆ. ಪ್ರಯೋಗದಿಂದಲೇ ಪಾಠ ಕಲಿಯುತ್ತ ಅನುಭವಿಗಳಾಗಿದ್ದಾರೆ. ಬೆಲೆ ನಿರ್ಧಾರದ ಬಗೆಗೆ ಮೊದಲ ಗೊಂದಲ ಇದ್ದಿದ್ದು. ನಂತರದ್ದು ಪ್ಯಾಕಿಂಗು. ಉಪ್ಪಿನಕಾಯಿಯಂಥ ಉತ್ಪನ್ನಗಳನ್ನು ಗಾಜಿನ ಬಾಟಲಿಯಲ್ಲಿ ಪ್ಯಾಕ್‌ ಮಾಡುವುದು ಆಗಲಿಲ್ಲ. ಮಾಡಿದರೂ ಸುರಕ್ಷಿತವಾಗಿ ತಲುಪುವ ಬಗ್ಗೆ ಖಾತ್ರಿ ಇರಲಿಲ್ಲ. ಒಡೆಯದಂತೆ ಪ್ಯಾಕಿಂಗ್‌ ಮಾಡಬೇಕೆಂದರೆ ಮೂಗಿಗಿಂತ ಮೂಗುತಿ ಭಾರ ಎಂಬಂತೆ ಉತ್ಪನ್ನಕ್ಕಿಂತಲೂ ಪ್ಯಾಕಿಂಗ್‌ ದರ ಹೆಚ್ಚಾಗತೊಡಗಿತ್ತು. 

ಗೂಗಲ್‌ಪೇ ಹಾಗೂ ಫೋನ್‌ಪೇಯಂಥ ಆ್ಯಪ್‌ಗಳು ಹಣಕಾಸಿನ ವ್ಯವಹಾರವನ್ನು ಸರಳಗೊಳಿಸಿದವು. ಆದರೆ, ಕೆಲವರು ಆರ್ಡರ್‌ ಪೂರೈಸಿದ ನಂತರವೂ ಹಣ ಕಳುಹಿಸದ ಉದಾಹರಣೆಗಳಿವೆ. ನಂತರ ಹಣ ಕಳುಹಿಸಿದ ರಸೀದಿ ಶೇರ್‌ ಮಾಡಿದಾಗ, ಆದೇಶಗಳನ್ನು ನೀಡುವ ಉಪಾಯ ಕಂಡುಕೊಂಡರು. 

ಸ್ವಾವಲಂಬಿಯಾಗುವ ದಾರಿಯಲ್ಲಿನ ಹಲವು ಸವಾಲುಗಳನ್ನು ಈ ನವೋದ್ಯಮಿಗಳು ಹಂಚಿಕೊಂಡಿದ್ದಾರೆ ಇಲ್ಲಿ. 

***

‘ಗ್ರಾಹಕರ ನಿರೀಕ್ಷೆ ತಲುಪುವುದು ಸವಾಲು’

ಗ್ರಾಹಕರ ನಿರೀಕ್ಷೆಯನ್ನು ತಲುಪು ವುದು ದೊಡ್ಡ ಸವಾಲೇ ಸರಿ. ನಾನು ವಿವಿಧ ಬಗೆಯ ಎಣ್ಣೆ, ಹಪ್ಪಳ, ಉಪ್ಪಿನಕಾಯಿಯನ್ನು ಮಾರಾಟ ಮಾಡುತ್ತೇನೆ. ಎಣ್ಣೆ ಬಾಟಲಿಗಳು ಒಡೆಯದಂತೆ ವಿಶೇಷ ಮುತುವರ್ಜಿ ವಹಿಸಿ ಪ್ಯಾಕಿಂಗ್‌ ಮಾಡಬೇಕಾಗುತ್ತದೆ. ಭಾರ ಹೆಚ್ಚಾದರೆ ಶಿಪ್ಪಿಂಗ್ ಚಾರ್ಜ್‌ ಹೆಚ್ಚುತ್ತದೆ. ಭಾರ ಹೆಚ್ಚಾಗದಂತೆಯೂ ಗಮನವಹಿಸಬೇಕು. 

-ಕುಶಲ ಸ್ವಾಮಿ ಜಿ.ಎಸ್‌, ಬೆಂಗಳೂರು

***

ಪ್ರೋತ್ಸಾಹಿಸಲು ಖರೀದಿ

ಮಹಿಳೆಯರಿಗೆ ಪ್ರೋತ್ಸಾಹಿಸಲು ಆನ್‌ಲೈನ್‌ ಖರೀದಿಗೆ ತೊಡಗುತ್ತೇನೆ. ಹೆಣ್ಣುಮಕ್ಕಳು ವ್ಯವಹಾರದಲ್ಲಿ ಮೋಸ ಮಾಡುವುದಿಲ್ಲ ಎಂಬ ನಂಬಿಕೆ ನನ್ನದು. ನಾನು ಮನೆಯಿಂದಲೇ ತಯಾರಿಸುವ ಉತ್ಪನ್ನಗಳನ್ನು ಖರೀದಿಸಿದ್ದೆ. ಆ ಉತ್ಪನ್ನಗಳ ಗುಣಮಟ್ಟ, ಪ್ಯಾಕಿಂಗ್‌ ಎಲ್ಲವೂ ಚೆನ್ನಾಗಿತ್ತು. ತಿಳಿಸಿದ ಸಮಯಕ್ಕೆ ಸರಿಯಾಗಿ ಮನೆ ಬಾಗಿಲಿಗೆ ಬರುತ್ತದೆ. 

-ನವ್ಯಾ ಅಯ್ಯನಕಟ್ಟೆ, ನಿರೂಪಕಿ ಬೆಂಗಳೂರು

***

ಗ್ರಾಹಕರಿಗೂ, ಮಾರಾಟಗಾರರಿಗೂ ಬೆಸ್ಟ್‌

ನಾನು ಆನ್‌ಲೈನ್ ಮಾರುಕಟ್ಟೆಯಲ್ಲಿ ಖರೀದಿ ಮಾಡುವುದು ಹಾಗೂ ಮಾರಾಟ ಮಾಡುವುದು ಮಾಡುತ್ತೇನೆ. ಇಲ್ಲಿ ಕೊಳ್ಳುವ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿರುತ್ತದೆ. ಜೊತೆಗೆ ನನ್ನಂತೆ ಎಷ್ಟೋ ಹೆಣ್ಣುಮಕ್ಕಳಿಗೆ ಸ್ವಾವಲಂಬಿಯಾಗಲು ಈ ವೇದಿಕೆಗಳು ದಾರಿ ತೋರಿವೆ. ಇಲ್ಲಿ ಖರೀದಿಸಿದ ವಸ್ತುಗಳ ಪ್ಯಾಕಿಂಗ್‌, ದರ, ಉತ್ಪನ್ನ ಎಲ್ಲವೂ ಖುಷಿಯಾಗುವಂತಿದೆ. ಸುಸ್ಥಿರ ವ್ಯವಹಾರ ನಡೆಸಲು ಇದೊಂದು ಉತ್ತಮ ವೇದಿಕೆ. 

-ಹಿರಣ್ಮಯಿ ಆರ್. ಕೃಷ್ಣನ್‌, ಗೃಹಿಣಿ ಮೈಸೂರು

***

‘ನಂಬಿಕೆಯೇ ಮುಖ್ಯ’

ಸಾಂಬರು ಪುಡಿ, ಸ್ವೀಟ್‌, ಚಕ್ಕುಲಿ ಸೇರಿದಂತೆ ವಿವಿಧ ಬಗೆಯ ಕುರಕಲು ತಿನಿಸುಗಳನ್ನು ಮಾರುತ್ತೇನೆ. ಕಂಟೇನರ್‌ ಮತ್ತು ಬಬಲ್‌ ಕವರ್‌ಗಳನ್ನು ಬಳಸಿ ಪ್ಯಾಕ್‌ ಮಾಡುತ್ತೇನೆ. ಮೋಸ ಮಾಡುವ ಗ್ರಾಹಕರೂ ಇರುತ್ತಾರೆ. ಇತ್ತೀಚೆಗೆ ಒಬ್ಬರಿಗೆ ಹೋಳಿಗೆ ಕಳುಹಿಸಿದ್ದೆ. ಒಂದೂವರೆ ತಿಂಗಳಾದರೂ, ದುಡ್ಡು ಹಾಕಿಲ್ಲ. ಇವೆಲ್ಲ ಪಾಠಗಳು ಅಷ್ಟೆ.

-ಶೃತಿ ಪಾಟೀಲ ಉಪಾಧ್ಯಾಯ, ವಿಜಯಪುರ

***

‘ಮನವೊಲಿಕೆಗೆ ಪ್ರಯತ್ನಿಸುವೆ’

ಗೋಡಂಬಿ ಮತ್ತು ತೆಂಗಿನಕಾಯಿ ತುರಿ, ಬಟ್ಟೆಯನ್ನು ಮಾರಾಟ ಮಾಡುತ್ತೇನೆ. ಒಂದೆರಡು ಸಲ ಗೋಡಂಬಿ ಒಡೆದು ಹೋದ ಬಗ್ಗೆ ದೂರುಗಳು ಬಂದಿತ್ತು. ಸ್ಪಾಂಜ್‌ ಬಳಸಿ ಪ್ಯಾಕ್‌ ಮಾಡಲು ಶುರು ಮಾಡಿದೆ. ಬಟ್ಟೆ ಬಣ್ಣ ಫೋಟೊದಲ್ಲಿ ನೋಡಿದ ಹಾಗಿಲ್ಲ ಅಂತೆಲ್ಲ ದೂರುಗಳು ಬರುತ್ತವೆ. ಕೆಲವೊಮ್ಮೆ ಮನವೊಲಿಸುತ್ತೇನೆ. ಗ್ರಾಹಕರು ಒಪ್ಪದಿದ್ದಾಗ ದುಡ್ಡು ವಾಪಸ್‌ ಕೊಡುತ್ತೇನೆ. 

-ಸೀತಾ ಉಮಾಕಾಂತ್‌, ಶಿರಸಿ

***

‘ಜವಾಬ್ದಾರಿ ತೆಗೆದುಕೊಳ್ಳುವೆವು’

ಆಂಥೋರಿಯಂ, ಆರ್ಕಿಡ್‌ ಗಿಡಗಳನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸುತ್ತೇನೆ. ಬಾಳೆ ಎಲೆ, ಸಾಗುವಾನಿ ಸೊಪ್ಪುಗಳಿಂದ ಗಿಡಗಳನ್ನು ಸುತ್ತುತ್ತೇನೆ. ಉತ್ಪನ್ನ ತಲುಪಿದ ತಕ್ಷಣ ಕೆಲವರು ದುಡ್ಡು ಹಾಕಿಬಿಡುತ್ತಾರೆ. ಆದರೆ, ಇನ್ನು ಕೆಲವರು ಐದಾರು ದಿನ ಆದರೂ, ಹಾಕುವುದೇ ಇಲ್ಲ. ಕೆಲವು ಕೊರಿಯರ್‌ ಸೇವೆಯೂ ಸಮರ್ಪಕವಾಗಿಲ್ಲ.

-ರಮಿತಾ ಜಯರಾಂ, ಸುಳ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.