ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಆರ್‌ಎಸ್‌ ನಿರ್ಜಲೀಕರಣಕ್ಕೆ ತುರ್ತು ಪರಿಹಾರ

Last Updated 27 ಜುಲೈ 2019, 9:09 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ವಾಂತಿ– ಭೇದಿಯಿಂದಾಗುವ ಮಕ್ಕಳ ಸಾವು– ನೋವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲು ಹತ್ತು ಹಲವು ಕಾರಣಗಳಿದ್ದರೂ ಓಆರ್‌ಎಸ್ (ಓರಲ್‌ ರಿಹೈಡ್ರೇಷನ್‌ ಸಾಲ್ಟ್‌) ಜಾದೂವಿನಂತೆ ವರ್ತಿಸಿರುವುದಂತೂ ನಿಜ.

ಸಾಮಾನ್ಯವಾಗಿ ಮಕ್ಕಳಿಗೆ ಭೇದಿಯಾದಾಗ ಶರೀರದಿಂದ ಸಾಕಷ್ಟು ಪ್ರಮಾಣದ ನೀರು ಮತ್ತು ಸೋಡಿಯಂ, ಪೊಟ್ಯಾಸಿಯಂ ಮುಂತಾದ ಲವಣಾಂಶಗಳು ನಷ್ಟವಾಗುತ್ತವೆ. ಇದರಿಂದ ನಿರ್ಜಲೀಕರಣ ಮತ್ತು ರಕ್ತದಲ್ಲಿ ಲವಣಾಂಶಗಳ ಪ್ರಮಾಣದ ಏರುಪೇರಿನಿಂದ‌ ಫಿಟ್ಸ್, ಸ್ನಾಯು ದೌರ್ಬಲ್ಯ, ಉಸಿರಾಟದಲ್ಲಿ ಏರುಪೇರು, ಕರುಳಿನ ನಿಶ್ಚಲತೆ, ರಕ್ತದೊತ್ತಡದಲ್ಲಿ ಗಣನೀಯ ಇಳಿಕೆ, ಮೂತ್ರಪಿಂಡ ವೈಫಲ್ಯ ಮುಂತಾದ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳುಂಟಾಗಿ ಸಾವೂ ಸಹ ಸಂಭವಿಸಬಹುದು. ನಷ್ಟವಾದ ಈ ಎಲ್ಲಾ ಅಂಶಗಳನ್ನು ಮರುಪೂರೈಕೆ ಮಾಡುವುದೇ ಓಆರ್‌ಎಸ್ ಬಳಕೆಯ ಹಿಂದಿರುವ ವೈಜ್ಞಾನಿಕ ತತ್ವ.

ಓಆರ್‌ಎಸ್‌ನಲ್ಲಿ ಎಷ್ಟು ಬಗೆಗಳಿವೆ?

ಬಹಳ ಹಿಂದಿನಿಂದಲೂ ಬಳಕೆಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನ ಓಆರ್‌ಎಸ್, ಅಮೈನೋ ಆಮ್ಲ ಆಧಾರಿತ, ಸಿಟ್ರೇಟ್ ಆಧಾರಿತ, ಮೊದಲೇ ಬೇಯಿಸಿದ ಅಕ್ಕಿ ಆಧಾರಿತ ಓಆರ್‌ಎಸ್ ಎಂದು ಹಲವು ಬಗೆಯ ಓಆರ್‌ಎಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದವು. ಆದರೆ ಇತ್ತೀಚೆಗೆ ಬಳಕೆಯಲ್ಲಿರುವ ಕಡಿಮೆ ಸಾಂದ್ರತೆಯ ಓಆರ್‌ಎಸ್ ಹೆಚ್ಚು ಜನಪ್ರಿಯವಾಗಿದೆ.

ಬಹಳ ಹಿಂದಿನಿಂದಲೂ ಬಳಕೆಯಲ್ಲಿದ್ದ ವಿಶ್ವ ಆರೋಗ್ಯ ಸಂಸ್ಥೆ ಓಆರ್‌ಎಸ್‌ನಲ್ಲಿ ಗ್ಲುಕೋಸ್ ಮತ್ತು ಸೋಡಿಯಂ ಪ್ರಮಾಣ ಅಧಿಕವಾಗಿದ್ದು, ಮಗುವಿನ ನಾಲಿಗೆಗೆ ರುಚಿ ನೀಡುತ್ತಿರಲಿಲ್ಲ. ಹಾಗೆಯೇ ಭೇದಿಯೂ ಸಹ ಶೀಘ್ರವಾಗಿ ತಹಬದಿಗೆ ಬರುತ್ತಿರಲಿಲ್ಲ ಮತ್ತು ಒಮ್ಮೆ ತಯಾರಿಸಿದ ನಂತರ ಬಹಳ ಸಮಯದವರೆಗೆ ಶೇಖರಿಸಿಡಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು, ಈಗ ವ್ಯಾಪಕವಾಗಿ ಬಳಸಲಾಗುತ್ತಿರುವ ಕಡಿಮೆ ಸಾಂದ್ರತೆಯ ಓಆರ್‌ಎಸ್‌ನಲ್ಲಿ ಕೆಲವು ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿದೆ.

ಓಆರ್‌ಎಸ್ ನೀಡುವಾಗ ಮಕ್ಕಳು ಸಾಮಾನ್ಯವಾಗಿ ವಾಂತಿ ಮಾಡಿಕೊಳ್ಳುತ್ತವೆ. ಲೋಟ ಮತ್ತು ಚಮಚೆಯನ್ನು ಬಳಸಿ, ಮಗು ಗುಟುಕರಿಸುವಂತೆ ಸ್ವಲ್ಪ ಸ್ವಲ್ಪವೇ ಕುಡಿಸುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು. ಹಾಗೊಂದು ವೇಳೆ ವಾಂತಿ ಮಾಡಿಕೊಂಡರೆ, ಸುಮಾರು ಹತ್ತು ನಿಮಿಷಗಳ ಕಾಲ ತಡೆಹಿಡಿದು ಮತ್ತೆ ಕುಡಿಸಲು ಪ್ರಾರಂಭಿಸಬೇಕು. ಕೆಲವು ತಾಯಂದಿರು ‘ಬಾಯಿಯಿಂದ ಕುಡಿಸಿದ ಓಆರ್‌ಎಸ್ ತಕ್ಷಣವೇ ಭೇದಿಯ ರೂಪದಲ್ಲಿ ಹೊರಹೋಗುತ್ತದೆ’ ಎಂದು ಹೇಳುತ್ತಾರೆ. ಅದರ ಪಾಡಿಗೆ ಅದು ಭೇದಿಯಾಗುತ್ತಿರುತ್ತದೆ. ಎಷ್ಟು ನೀರು ಹೊರಹೋಗುತ್ತದೋ ಅಷ್ಟು ನೀರನ್ನು ಕುಡಿಸಬೇಕು.

ಸರ್ಕಾರಿ ಸ್ವಾಮ್ಯದ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಓಆರ್‌ಎಸ್ ಪೊಟ್ಟಣಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಖಾಸಗಿ ಕಂಪೆನಿಗಳ ಓಆರ್‌ಎಸ್ ಪೊಟ್ಟಣಗಳು ಔಷಧ ಅಂಗಡಿಗಳಲ್ಲಿ ಸಿಗುತ್ತವೆ.

ಓಆರ್‌ಎಸ್‌ಗೆ ನಿರ್ಬಂಧಗಳಿವೆಯೇ?

ತೀವ್ರ ಸ್ವರೂಪದ ನಿರ್ಜಲೀಕರಣ– ಮಗು ತೀರಾ ಮಂಕಾಗುವುದು, ವಿರಳ ಮೂತ್ರ ವಿಸರ್ಜನೆ, ಬಾಯಿಯ ಲೋಳೆಪೊರೆ ಒಣಗುವುದು... ಇವು ಕೆಲವು ಲಕ್ಷಣಗಳು ಇದ್ದಾಗ ಓಆರ್‌ಎಸ್ ಬದಲಿಗೆ ಐವಿ ದ್ರಾವಣ ಕೊಡಲೇಬೇಕಾಗುತ್ತದೆ. ಹಾಗೆಯೇ ಅನಿಯಂತ್ರಿತ ವಾಂತಿ ಇದ್ದಾಗ ಮತ್ತು ರಕ್ತದ ನಂಜು ಮುಂತಾದ ಇತರೆ ತೀವ್ರತರದ ಕಾಯಿಲೆಗಳಿದ್ದಾಗಲೂ ಸಹ ಐವಿ ಅಗತ್ಯವಿರುತ್ತದೆ. ಆದರೆ ಮಗು ಬಾಯಿಯ ಮೂಲಕ ತೆಗೆದುಕೊಳ್ಳುವಷ್ಟು ಚೇತರಿಸಿಕೊಂಡ ತಕ್ಷಣ ಸ್ವಲ್ಪ ಸ್ವಲ್ಪವೇ ಓಆರ್‌ಎಸ್ ಕೊಡಲು ಪ್ರಾರಂಭಿಸಬೇಕು.

ಮಕ್ಕಳ ಭೇದಿ ಸಾಮಾನ್ಯವಾಗಿ ಒಂದೆರಡು ದಿನಗಳಲ್ಲಿ ಸ್ವಯಂನಿಯಂತ್ರಣಕ್ಕೆ ಬರುವಂತಹುದಾದ್ದರಿಂದ ಔಷಧಗಳ ಪಾತ್ರ ನಗಣ್ಯವಾಗಿರುತ್ತದೆ ಮತ್ತು ಕೆಲವು ಔಷಧಗಳು ಅಪಾಯಕಾರಿಯಾಗಿಯೂ ಆಗಿ ಪರಿಣಮಿಸಬಲ್ಲವು. ಅದರಲ್ಲೂ ಭೇದಿಯನ್ನು ನಿಲ್ಲಿಸುವಂಥ ಔಷಧಗಳಿಂದ, ಜೀರ್ಣವಾಗದ ಆಹಾರ ಪದಾರ್ಥಗಳು ಮತ್ತು ರೋಗಾಣುಗಳಿಂದ ಕಲುಷಿತಗೊಂಡ ನೀರು ಕರುಳಿನಲ್ಲಿಯೇ ಸಂಗ್ರಹವಾಗಿ, ರೋಗಾಣುಗಳ ವಂಶಾಭಿವೃದ್ಧಿ ಹೊಂದಲು ಸೂಕ್ತ ತಾಣವಾಗಿ ಮಾರ್ಪಡುತ್ತದೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

ರಕ್ತಭೇದಿ, ಭೇದಿಯ ಜೊತೆಗೂಡಿರುವ ರಕ್ತದ ನಂಜು, ಮೂತ್ರದ ಸೋಂಕಿದ್ದಾಗ ಮಾತ್ರ ಆ್ಯಂಟಿಬಯೋಟಿಕ್‌ ಅವಶ್ಯಕತೆ ಇರುತ್ತದೆ.

‘ಭೇದಿ ಜೋಡಿ’

ಭೇದಿಯಾದಾಗ 'ಸತು' ಎಂಬ ಸೂಕ್ಷ್ಮ ಪೌಷ್ಟಿಕಾಂಶ ಅಲ್ಪ ಪ್ರಮಾಣದಲ್ಲಿ ನಷ್ಟವಾಗುವುದರಿಂದ, ಕರುಳಿನ ಜೀವಕೋಶಗಳ ಹಾನಿ ಮತ್ತಷ್ಟು ಹೆಚ್ಚಾಗಿ ಪರಿಸ್ಥಿತಿ ಉಲ್ಬಣಿಸುತ್ತದೆ. ಸತುವಿನ ಅಂಶದ ಮರುಪೂರೈಕೆಯಿಂದ ಹಾನಿಗೊಳಗಾದ ಜೀವಕೋಶಗಳು ಶೀಘ್ರವೇ ಪುನಶ್ಚೇತನಗೊಂಡು, ಭೇದಿ ಬಹು ಬೇಗ ನಿಯಂತ್ರಣಕ್ಕೆ ಬರುತ್ತದೆ. ಹಾಗಾಗಿ ಓಆರ್‌ಎಸ್ ಮತ್ತು ಸತುವಿನ ಈ ಮಾಯಾಜೋಡಿಯನ್ನು ‘ಭೇದಿ ಜೋಡಿ’ ಎಂದು ಕರೆಯಲಾಗುತ್ತದೆ. ವೈದ್ಯರ ಶಿಫಾರಸ್ಸಿನ ಅನ್ವಯ ಭೇದಿಯಾದ ಮಗುವಿಗೆ ಓಆರ್‌ಎಸ್ ಜೊತೆಯಲ್ಲಿ ಕೃತಕ ಸತುವನ್ನು ನೀಡಬೇಕಾಗುತ್ತದೆ.

ಆಹಾರ ಪದಾರ್ಥಗಳ ಆಯ್ಕೆ ಹೇಗೆ?

ಮಗುವಿಗೆ ಭೇದಿಯಾದಾಗ ಎದೆಹಾಲು ಕುಡಿಸುವುದನ್ನು ಯಾವ ಕಾರಣಕ್ಜೂ ನಿಲ್ಲಿಸಬಾರದು. ಇದು ಅಗತ್ಯ ಪೌಷ್ಟಿಕಾಂಶಗಳನ್ನು ನೀಡುವುದರ ಜೊತೆಗೆ ತನ್ನ ರೋಗನಿರೋಧಕ ಗುಣಗಳಿಂದ ಭೇದಿಯನ್ನು ಶೀಘ್ರವೇ ನಿಯಂತ್ರಿಸುತ್ತದೆ. ಅನಿವಾರ್ಯ ಕಾರಣಗಳಿಂದ ಕೃತಕ ಹಾಲನ್ನು ನೀಡುತ್ತಿದ್ದರೆ, ಬಾಟಲಿ ಮತ್ತು ನಿಪ್ಪಲ್‌ ಬಳಸಬಾರದು. ಹಾಗೆಯೇ ಈಗಾಗಲೇ ಪೂರಕ ಆಹಾರವನ್ನು ಪ್ರಾರಂಭಿಸಿದ್ದರೆ, ಸುಲಭವಾಗಿ ಜೀರ್ಣವಾಗುವಂಥ ಮೆದು ಆಹಾರಗಳನ್ನು ನೀಡಬೇಕು. ಅಕ್ಕಿಯಿಂದ ತಯಾರಿಸಲಾದ ಗಂಜಿ, ಮೆದು ಅನ್ನ, ಇಡ್ಲಿ ಮುಂತಾದವು ಮಲ‌ವನ್ನು ಗಟ್ಟಿಯಾಗಿಸಲು ಸಹಕಾರಿಯಾಗಿರುತ್ತವೆ. ಯಾವುದೇ ಕಾರಣಕ್ಕೂ ಹೆಚ್ಚು ನಾರುಯುಕ್ತ ಸೊಪ್ಪು- ತರಕಾರಿ, ಹಣ್ಣು ಹಂಪಲುಗಳನ್ನು ನೀಡಬಾರದು.

ಬಾಕ್ಸ್

ಬಳಸುವ ಬಗೆ ಹೇಗೆ?

ಒಂದು ಲೀಟರ್ ಮತ್ತು ಇನ್ನೂರು ಮಿ. ಲೀ ನಲ್ಲಿ ಮಿಶ್ರ ಮಾಡಬಹುದಾದ ಎರಡು ಬಗೆಯ ಪೊಟ್ಟಣಗಳಲ್ಲಿ ಓಆರ್‌ಎಸ್ ಅನ್ನು ಸರಬರಾಜು ಮಾಡಲಾಗುತ್ತದೆ. ಪೊಟ್ಟಣದ ಮೇಲಿರುವ ಸಲಹೆ ಸೂಚನೆಗಳನ್ನು ಅನುಸರಿಸಿ ಇಲ್ಲವೆ ಆರೋಗ್ಯ ಕಾರ್ಯಕರ್ತರ ಸಲಹೆ ಪಡೆದು, ಪರಿಶುದ್ಧ ನೀರಿನಲ್ಲಿ ಮಿಶ್ರ ಮಾಡಬೇಕು. ಪ್ರತಿ ಭೇದಿಗೆ ಸುಮಾರು 50– 100 ಮಿ. ಲೀ. ನಷ್ಟು ನೀರಿನ ನಷ್ಟವಾಗುವುದರಿಂದ ಅಷ್ಟು ಪ್ರಮಾಣದ ಓಆರ್‌ಎಸ್ ಅನ್ನು ಮರುಪೂರಣ ಮಾಡಬೇಕು.

ಈಗ ಲಭ್ಯವಿರುವ ನವೀನ ಮಾದರಿಯ ಓಆರ್‌ಎಸ್ ಅನ್ನು ಒಮ್ಮೆ ತಯಾರಿಸಿದ ನಂತರ ಸುಮಾರು 24 ಗಂಟೆಗಳ ಕಾಲ ಶೇಖರಿಸಿಡಬಹುದು.

ಓಆರ್‌ಎಸ್ ಪೊಟ್ಟಣಗಳ ಲಭ್ಯತೆ ಇರದಿದ್ದರೆ ಭೇದಿ ಪ್ರಾರಂಭವಾದ ಕೂಡಲೇ ಮನೆಯಲ್ಲೇ ತಯಾರಿಸಿದ ಸಕ್ಕರೆ- ಲವಣ ಮಿಶ್ರಿತ ದ್ರಾವಣ, ಮಜ್ಜಿಗೆ, ಎಳನೀರು, ಬೇಳೆಕಟ್ಟು, ಸೂಪ್, ಕೊಂಚ ಉಪ್ಪು ಬೆರೆಸಿದ ಹಣ್ಞಿನ ರಸ ಮುಂತಾದ ಯಾವುದೇ ದ್ರವ ಪದಾರ್ಥಗಳನ್ನು ನೀಡಬಹುದು. ಪ್ರಯಾಣದ ಸಂದರ್ಭಗಳಲ್ಲಿ ಲಭ್ಯವಿರುವ ಯಾವುದೇ ಪರಿಶುದ್ಧ ಸಾದಾ ನೀರನ್ನು ಕುಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT