ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್‌ ಪ್ರಿಯರ ಆಕ್ಸಿಡೈಸ್ಡ್‌ ಆಭರಣ ಮೋಹ

Last Updated 12 ಜುಲೈ 2020, 10:32 IST
ಅಕ್ಷರ ಗಾತ್ರ

2018ರಲ್ಲಿ ನಡೆದ ಐಐಎಫ್‌ಎ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಶಾನ್ವಿ ಶ್ರೀವಾಸ್ತವ ಧರಿಸಿದ್ದ ಆಕ್ಸಿಡೈಸ್ಡ್‌ ಗುಟ್ಟುಪುಸುಲು ನೆಕ್ಲೇಸ್‌ ಎಲ್ಲರ ಕಣ್ಣು ಕುಕ್ಕಿತ್ತು. ಕೊರಳಿನಲ್ಲಿ ಮುತ್ತು ಕಟ್ಟಿದ ಕಪ್ಪು ಬಣ್ಣದ ಬೆಳ್ಳಿ ಆಕ್ಸಿಡೈಸ್ಡ್‌ ನೆಕ್ಲೇಸ್‌,ನವಿಲು ಬಣ್ಣದ ಸೀರೆಯಲ್ಲಿ ಅವರು ಸರಳ ಸುಂದರಿಯಾಗಿ ಕಾಣಿಸಿಕೊಂಡಿದ್ದರು.

ಬೆಳ್ಳಿ ಹಾಗೂ ಚಿನ್ನದ ಆಭರಣಗಳಲ್ಲಿ ಕಪ್ಪು ಬಣ್ಣದ ಛಾಯೆ ಇರುವ ಆಭರಣಗಳನ್ನು ಆಕ್ಸಿಡೈಸ್ಡ್‌ ಆಭರಣ ಎಂದು ಕರೆಯುತ್ತಾರೆ. ಜ್ಯುವೆಲರಿ ಉದ್ಯಮದಲ್ಲಿ ಲೋಹಗಳನ್ನು ಕಪ್ಪು ಮಾಡಲು ಸಲ್ಫರ್‌ ಉಪಯೋಗಿಸುತ್ತಾರೆ. ಬೆಳ್ಳಿ ಜೊತೆಗೆ ಸಲ್ಫರ್‌ ಆಕ್ಸೈಡ್‌ಬಳಸಿ, ಆ ಲೋಹಕ್ಕೆ ಕಪ್ಪು ಅಥವಾ ಬೂದಿ ಬಣ್ಣದ ಶೇಡ್‌ ನೀಡಲಾಗುತ್ತದೆ. ಆ್ಯಂಟಿಕ್‌ ಆಭರಣಗಳಂತೆ ಕಾಣುವ ಇವುಗಳ ಕಪ್ಪು ಛಾಯೆಯೇ ಮಹಿಳೆಯರ ಮನಸ್ಸು ಕದ್ದಿದೆ.

ಆಕ್ಸಿಡೈಸ್ಡ್‌ ಆಭರಣಗಳು ತಮ್ಮ ಕಪ್ಪು ಬಣ್ಣದ ಛಾಯೆಯಿಂದ ಎಲ್ಲಾ ಬಗೆಯ ಉಡುಪುಗಳ ಜೊತೆ ಆರಾಮವಾಗಿ ಹೊಂದಿಕೊಳ್ಳುತ್ತವೆ. ಮೊದಲೆಲ್ಲಾ ಹೆಣ್ಣುಮಕ್ಕಳು ಮದುವೆ, ಇತರ ಕಾರ್ಯಕ್ರಮಕ್ಕೆ ಹೊರಟೆಂದರೆ‌ಒಂದೆಳೆ ಚಿನ್ನದ ಸರ, ಕಿವಿಯೋಲೆ ಹಾಕಿಕೊಂಡರೆ ಅಲ್ಲಿಗೆ ಒಡವೆ ಗೋಜು ಇರಲಿಲ್ಲ. ಆದರೆ ಈಗ, ದಿನಕ್ಕೊಂದು ಫ್ಯಾಷನ್‌ ಬಯಸುವವರಿಗೆ ಚಿನ್ನದ ಆಭರಣಗಳ ಕ್ರೇಜ್‌ ಕಡಿಮೆಯಾಗಿದೆ. ಅಂತಹವರಿಗೆ ಆಕ್ಸಿಡೈಸ್ಡ್‌ ಆಭರಣ ಸೂಕ್ತ ಆಯ್ಕೆ ಎಂದು ಹೇಳುತ್ತಾರೆ ಶಾನ್ವಿ ವಸ್ತ್ರಾಭರಣ ವಿನ್ಯಾಸಕಿ ನಿಶಾರಾ ಕಿರಣ್‌.

ಈಗ ಶರ್ಟ್‌, ವೆಸ್ಟರ್ನ್‌ ಔಟ್‌ಫಿಟ್‌ ಜೊತೆಗೂ ಆಕ್ಸಿಡೈಸ್ಡ್‌ ಆಭರಣ ತೊಡುವುದು ಟ್ರೆಂಡ್‌ ಆಗಿದೆ. ಈ ಆಭರಣಗಳು ಗಾಢ ಮತ್ತು ತಿಳಿ ಎಲ್ಲಾ ಬಣ್ಣದ ಬಟ್ಟೆಗಳಿಗೂ ಹೊಂದಿಕೊಳ್ಳುತ್ತವೆ. ಹಬ್ಬದ ಸಂದರ್ಭದಲ್ಲಿ ಬೆಳ್ಳಿ ಜರಿಯ ಸೀರೆ ಜೊತೆಗೆ ಈ ಆಭರಣಗಳು ಭಿನ್ನ ಲುಕ್‌ ನೀಡುವುದರಲ್ಲಿ ಸಂದೇಹವೇ ಇಲ್ಲ. ಹಾಗೆಯೇ ಇಕ್ಕತ್‌ ಸೀರೆ, ಕುರ್ತಾ ಜೊತೆಗೂ ಆಕ್ಸಿಡೈಸ್ಡ್‌ ಹಾರ, ನೆಕ್ಲೇಸ್‌, ಕಿವಿಯೋಲೆ ಮ್ಯಾಚ್‌‌ ಆಗುತ್ತದೆ.

ಈ ಆಭರಣಗಳೂ ಚಿನ್ನ ಹಾಗೂ ಬೆಳ್ಳಿ ಎರಡು ರೂಪದಲ್ಲಿ ಸಿಗುತ್ತವೆ. ಆದರೆ, ಕಡಿಮೆ ಬೆಲೆ ಕಾರಣಕ್ಕೆ ಬೆಳ್ಳಿಯ ಆಕ್ಸಿಡೈಸ್ಡ್‌ ಆಭರಣಗಳಿಗೆ ಹೆಚ್ಚು ಬೇಡಿಕೆ. ನೆಕ್ಲೇಸ್‌, ಹಾರ, ಕಿವಿಯೋಲೆ, ಪೆಂಡೆಂಟ್‌, ಬಳೆ ಮುಂತಾದವು ಆ್ಯಂಟಿಕ್‌ ಲುಕ್ ಜೊತೆಗೆ ಬಗೆ ಬಗೆ ವಿನ್ಯಾಸಗಳಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT