ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಅಮ್ಮ, ಹಪ್ಪಳ, ಬಜ್ಜಿ ಮತ್ತು ಮಳೆ

Last Updated 6 ಜುಲೈ 2018, 20:30 IST
ಅಕ್ಷರ ಗಾತ್ರ

ಆ ಸಂಜೆ ಹೊತ್ತು, ‘ಯಾಕೋ ಈ ಬಾರಿ ಮಳೆಯೇ ಕಮ್ಮಿ’ ಎಂದು ಜಗುಲಿಯಲ್ಲಿ ನಾನು, ಅಪ್ಪ, ಅಮ್ಮ ಮಾತಾಡಿಕೊಳ್ಳುತ್ತಾ ಕೂತಿದ್ದೆವು. ಆಕಾಶ ಆಲಿಸುತ್ತಿತ್ತು. ಹೀಗೆ ಮಾತನಾಡುತ್ತಾ ತಾಸು ಕಳೆದಿರಬಹುದು. ನಿಧಾನಕ್ಕೆ ಕತ್ತಲೆ ಆವರಿಸುತ್ತಿರುವ ಅನುಭವ. ನೋಡು ನೋಡುತ್ತಲೇ ಎಲ್ಲಿದ್ದವೋ ಕಪ್ಪುಮೋಡಗಳು, ನಮ್ಮ ಮನೆಗೆ ನುಗ್ಗಲು ಹೊಂಚು ಹಾಕಿದ್ದವು. ಗಾಳಿಯೂ ಅವಕ್ಕೆ ಸಾಥ್ ನೀಡಿತ್ತು.

ತಂತಿಯ ಮೇಲೆ ನೇತಾಡುತ್ತಿದ್ದ ಬಟ್ಟೆಗಳು ನಮ್ಮನ್ನು ಉಳಿಸುವಂತೆ ನಮ್ಮತ್ತ ತಿರುಗಿದ್ದವು. ನಾನು ಅವನ್ನು ಎದೆಗೆ ಅಪ್ಪಿಕೊಂಡು ಮನೆ ಒಳಗೆ ಓಡುವಷ್ಟರಲ್ಲಿ, ಹನಿಯೊಡೆದು ನನ್ನ ಬೆನ್ನು ಅರ್ಧ ಒದ್ದೆಯಾಗಿತ್ತು. ಬಟ್ಟೆಗಳು ಬಚಾವ್ ಆದವು.

ನನ್ನೊಡನೆ ಮಳೆಯೂ ಮನೆಯ ಒಳಗೆ ನುಗ್ಗಿತು. ಅಷ್ಟರಲ್ಲಿ ಅಪ್ಪ ಬಾಗಿಲು ಹಾಕಿದ್ದ, ನಾನು ಒಳಬಂದೆ. ಕಿಟಕಿಯನ್ನೂ ಬಿಡದೇ ಮುಚ್ಚಿದೆವು. ಮಳೆ ಬಾಗಿಲು ಬಡಿಯುತ್ತಲೇ ಇತ್ತು. ಮೈ ಒರೆಸಿಕೊಂಡು, ಮತ್ತೆ ಮೂರು ಜನ ಮಳೆಯ ಆರ್ಭಟ ಕೇಳಿಸಿಕೊಳ್ಳುತ್ತಾ ಕುಳಿತೆವು. ಸುಮ್ಮನೆ ಕೂರುವುದು ಹೇಗೆ. ಹಪ್ಪಳಕ್ಕೆ ಬೇಸರವಾಗುತ್ತದೆ ಅನ್ನಿಸಿತು. ನಾಗಂದಿಗೆ ಹತ್ತಿ ಹಪ್ಪಳದ ಚೀಲ ತೆಗೆದುಕೊಟ್ಟೆ. ನನಗೋ ಈರುಳ್ಳಿ ಬಜ್ಜಿ ಎಂದರೆ ಬಹಳ ಪ್ರೀತಿ. ಅಮ್ಮನ ದುಂಬಾಲು ಬಿದ್ದು, ಬಜ್ಜಿಯನ್ನೂ ಮಾಡಲು ಕೇಳಿದೆ.

ನಾನು, ಅಪ್ಪ ನಮ್ಮ ಮಾತು ಆಲಿಸಿದ ಆಕಾಶ ಹೀಗೆ ಮಾಡಿತಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರೆ, ಒಳಗೆ ಅಮ್ಮ ಹಪ್ಪಳ, ಬಜ್ಜಿ ಮಾಡುತ್ತಲೇ ನಮ್ಮ ಮಾತಿಗೆ ಮಾತು ಸೇರಿಸುತ್ತಿದ್ದಳು. ಹಿತ್ತಲಲ್ಲಿ ಏನೋ ಸದ್ದು. ನಾನು ಅಪ್ಪ ತಕ್ಷಣಕ್ಕೆ ಹೋಗಿ ಹಿತ್ತಲ ಬಾಗಿಲು ತೆರೆದೆವು. ಹೊರ ಹೋಗಿ ನೋಡಿದರೆ ಬಾಳೆ ಮರ ನೆಲ ಕಚ್ಚಿತ್ತು. ಅಷ್ಟರಲ್ಲಿ ಇಬ್ಬರ ಮೈಯೂ ಒದ್ದೆ ಆಗಿತ್ತು.

ಮತ್ತೆ ಮೈ ಒರೆಸಿಕೊಂಡು ಬಂದು ಕೂರುವಷ್ಟರಲ್ಲಿ ಹಪ್ಪಳ ನಮ್ಮನ್ನು ಕಾದಿತ್ತು. ಅದನ್ನು ತಿಂದು ಮುಗಿಸುವಷ್ಟರಲ್ಲಿ ನನ್ನ ಇಷ್ಟದ ಈರುಳ್ಳಿ ಬಜ್ಜಿಯೂ ಹೊಗೆ ಆಡಿಸಿಕೊಂಡು ನನ್ನ ಬಳಿ ಬಂದಿತು. ಅಮ್ಮ ಮಾಡಿ ಹಾಕುತ್ತಾ ಇದ್ದಳು ನಾನು ಸುಮಾರಷ್ಟು ತಿಂದೆ. ಅಪ್ಪ ನನಗೆ ಸಾಕು ಎಂದು ಕೈ ತೊಳೆದಿದ್ದರು. ನಾನು ಮಾತ್ರ ಮುಂದುವರೆಸಿದೆ. ಅಮ್ಮ ತಿಂದಳೋ ಇಲ್ಲವೋ ಗೊತ್ತಿಲ್ಲ. ನಾನು ಮಾತ್ರ ಮುಚ್ಚಿದ ಕಿಟಕಿಯಲ್ಲೇ ಮಳೆ ನೋಡುತ್ತಾ, ಬಜ್ಜಿ, ಹಪ್ಪಳ ಸವಿದಿದ್ದೆ.

ಅಮ್ಮನೇ ಹಾಗಲ್ಲವೇ? ಆಕೆ, ಮಳೆ ಆನಂದವನ್ನು ಸವಿಯಲಿಲ್ಲ, ಇತ್ತ ಬಜ್ಜಿ, ಹಪ್ಪಳವನ್ನೂ. ಇಷ್ಟಾಗುವ ಹೊತ್ತಿಗೆ ಮಳೆಯೂ ಕಮ್ಮಿ ಆಗಿತ್ತು. ಆದರೆ, ಅದು ಮಾಡಿದ ಅನಾಹುತ ಅಷ್ಟಿಷ್ಟಲ್ಲ. ಆದರೆ, ತೋಟದಲ್ಲಿ ಮರ-ಗಿಡಗಳ ಸಂಸತ ಹೇಳ ತೀರದು. ಎಲ್ಲವೂ ನಗೆ ಬೀರುತ್ತಿದ್ದವು.

ಹೀಗೆ, ಮಲೆನಾಡಿನ ಮಳೆ ಕಂಡ ನಾನು, ಬೆಂಗಳೂರಿಗೆ ಕೆಲಸಕ್ಕೆ ಬಂದೆ. ನನ್ನದೋ ಕಂಪ್ಯೂಟರ್ ನೋಡುವ ಕೆಲಸ. ಮತ್ತೆ ಮಳೆಗಾಲ. ಇನ್ನೆರಡು ದಿನ ಭರ್ಜರಿ ಮಳೆ ಎಂದು ಹವಾಮಾನ ಇಲಾಖೆ ಹೇಳಿತ್ತು. ನಾನು ಮಳೆಯ ನಿರೀಕ್ಷೆಯಲ್ಲಿ ಇದ್ದೆ ಕೂಡ. ಆದರೆ, ಆ ಎರಡು ದಿನ ಮಳೆ ಬರಲಿಲ್ಲ!

ಒಂದು ದಿನ ಹೀಗೆ, ಆಫೀಸಿನಲ್ಲಿ ಬಿಡುವಿತ್ತು. ಯೂಟ್ಯೂಬ್‍ನಲ್ಲಿ ಮಲೆನಾಡಿನ ಮಳೆ ಕುರಿತ ಇದ್ದ ಸಾಕ್ಷ್ಯಚಿತ್ರವನ್ನು ನೋಡುತ್ತಾ ಕುಳಿತಿದ್ದೆ. ನನ್ನ ಸಹೋದ್ಯೊಗಿ ಒಬ್ಬ ಹೊರಗಿಂದ ಆಫೀಸಿಗೆ ಬಂದ. ನೋಡಿದರೆ, ಮೈ ಒದ್ದೆ ಆಗಿತ್ತು. ‘ಏನಾಯಿತು’ ಎಂದು ವಿಚಾರಿಸಿದೆ. ‘ಅಯ್ಯೋ ಹೊರಗೆ ಸಿಕ್ಕಾಪಟ್ಟೆ ಮಳೆ’ ಎಂದ. ನಾನು ‘ಅಯ್ಯೋ ದೇವರೆ, ಮಳೆ ಬಂತೆ!’ ಗೊತ್ತೇ ಆಗಲಿಲ್ಲ ಎಂದು ಕಿಟಕಿ ನೋಡಿದರೆ, ಹೌದು ಜೋರು ಮಳೆ. ಇದೇನಪ್ಪ ಊರು, ಮಳೆ ಬಂದ್ದಿದೇ ಗೊತ್ತಾಗುವುದಿಲ್ಲ ಎಂದುಕೊಂಡೆ. ಆಫೀಸಿನಿಂದ ಹೊರಬಂದು ನೋಡಿದರೆ, ಎಲ್ಲೆಲ್ಲೂ ನೀರು. ರಸ್ತೆಯಲ್ಲಾ ಮುಳುಗಿದ್ದವು!

ನನಗೋ ಮಳೆಯಲ್ಲಿ ಕುರುಕಲು ತಿನ್ನುವ ಚಟ. ನಾನು ನನ್ನ ಇನ್ನೋರ್ವ ಸಹೋದ್ಯೋಗಿ, ಸಾಹಸ ಮನಃಸ್ಥಿತಿಯೊಂದಿಗೆ ಕಾಣದ ರಸ್ತೆಯಲ್ಲೇ ಪಾನಿಪುರಿ ತಿನ್ನಲು ಹೋದೆವು. ಪಾನಿಪುರಿ ತಟ್ಟೆ ಕೈಯಲ್ಲಿ, ಅಮ್ಮನ ಹಪ್ಪಳ ಬಜ್ಜಿ ನೆನಪಾಯಿತು. ಅದನ್ನೇ ನೆನೆದು ಪಾನಿಪುರಿ ತಿಂದು ದುಡ್ಡು ಕೊಟ್ಟು ಬಂದೆವು. ಅಮ್ಮ ನೆನಪಾದಳು. ಅದರ ಗುಂಗಿನಲ್ಲೇ ಆಫೀಸಿಗೆ ಬಂದೆ, ಅರ್ಧಕ್ಕೆ ನಿಂತಿದ್ದ ಸಾಕ್ಷ್ಯಚಿತ್ರವನ್ನು ಅಲ್ಲಿಗೆ ನಿಲ್ಲಿಸಿ ಮತ್ತೆ ಕೆಲಸ ಶುರು ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT