ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಗಾರ ಸಿದ್ದರಾಮಯ್ಯ, ವಾಹನವೇ ಇಲ್ಲದ ದೇಶಪಾಂಡೆ!

ಶತಕೋಟಿ ದಾಟಿದ ಏಳು ಕುಬೇರರು ಕಣಕ್ಕೆ * ಎಚ್‌ಡಿಕೆಗಿಂತ ಅನಿತಾ ಶ್ರೀಮಂತೆ
Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ₹ 20.36 ಕೋಟಿ ಒಡೆಯರಾಗಿದ್ದರೂ ಎಸ್‌.ಎಂ.ಕೃಷ್ಣ ಅಳಿಯನ ಬಳಿ ಸಾಲಗಾರರು. ಜೆಡಿಎಸ್‌ ರಾಜ್ಯ ಘಟಕ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಗಿಂತ ಅವರ ಪತ್ನಿಯೇ ಹಣವಂತರು. ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ₹ 215 ಕೋಟಿ ಸಂಪತ್ತು ಹೊಂದಿದ್ದರೂ ಸ್ವಂತಕ್ಕೊಂದು ವಾಹನ ಇಲ್ಲ!

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ₹ 104.92 ಕೋಟಿ, ಕೆ.ಆರ್‌.ಪುರ  ಬಿಜೆಪಿ ಅಭ್ಯರ್ಥಿ ನಂದೀಶ್‌ ರೆಡ್ಡಿ ₹ 309 ಕೋಟಿ, ಬಸವನಗುಡಿ ಜೆಡಿಎಸ್‌ ಅಭ್ಯರ್ಥಿ ಕೆ.ಬಾಗೇಗೌಡ ₹ 318 ಕೋಟಿ,  ಮಹದೇವಪುರ ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ಶ್ರೀನಿವಾಸ್‌ ₹104 ಕೋಟಿ, ದಾವಣಗೆರೆ ದಕ್ಷಿಣದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ₹ 183 ಕೋಟಿ, ಅವರ ಪುತ್ರ ಎಸ್‌.ಎಸ್.ಮಲ್ಲಿಕಾರ್ಜುನ ₹113 ಕೋಟಿ ಆಸ್ತಿ ಹೊಂದಿದ್ದಾರೆ. ಈ ಕುಬೇರರೆಲ್ಲಾ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ಆದರೆ, ಮೈಸೂರಿನ ಕೃಷ್ಣರಾಜ ಕ್ಷೇತ್ರ ಜೆಡಿಎಸ್‌ ಅಭ್ಯರ್ಥಿ ಕೆ.ವಿ.ಮಲ್ಲೇಶ್‌ ಬಳಿ ಇರುವ ಸಂಪತ್ತು ಕೇವಲ ₹ 37, 956. ಇವರಿಗೆ ಆಸ್ತಿ, ವಾಹನ ಮತ್ತು ಸ್ವಂತ ಮನೆ ಇಲ್ಲ. ನಗದು ಮತ್ತು ಠೇವಣಿ ಮಾತ್ರ ಲೆಕ್ಕ ನೀಡಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣದ ಪತ್ರದ ಪ್ರಕಾರ, ರಾಜಕೀಯ ಪಕ್ಷವೊಂದರ ಅತ್ಯಂತ ಬಡ ಅಭ್ಯರ್ಥಿ ಇವರು.

ಮುಖ್ಯಮಂತ್ರಿ ಆಸ್ತಿ: ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಆಸ್ತಿಯಲ್ಲಿ ₹ 7 ಕೋಟಿ ಏರಿಕೆಯಾಗಿದೆ. ಒಟ್ಟು ₹ 20.36 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಕುಟುಂಬದ ಒಟ್ಟು ಸಾಲ ₹ 4.85 ಕೋಟಿ. ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ ಒಡೆತನದ ಕಾಫಿ ಡೇ ಗ್ಲೋಬಲ್ ಲಿಮಿಟೆಡ್‌ನಿಂದ ₹ 2.26 ಕೋಟಿ ಸಾಲ ಪಡೆದಿದ್ದಾರೆ. ಪುತ್ರ ಯತೀಂದ್ರಗೆ ₹ 78 ಲಕ್ಷ ಮತ್ತು ಪತ್ನಿ ಪಾರ್ವತಿಗೆ ₹ 2.26 ಕೋಟಿ ಸಾಲವನ್ನೂ ನೀಡಿದ್ದಾರೆ. ಕುಟುಂಬದ ಬಳಿ ₹ 15.65 ಕೋಟಿ ಸ್ಥಿರಾಸ್ತಿ  ಮತ್ತು ₹ 4.71 ಕೋಟಿ ಚರಾಸ್ತಿ ಇದೆ ಎಂದು ಘೋಷಿಸಿದ್ದಾರೆ. 2013ರ ಚುನಾವಣೆ
ಯಲ್ಲಿ ನಾಮಪತ್ರ ಸಲ್ಲಿಸುವಾಗ ಕುಟುಂಬದ ಆಸ್ತಿ ₹ 13.61 ಕೋಟಿ ಇದೆ ಎಂದು ಘೋಷಿಸಿದ್ದರು.

ಸಿದ್ದರಾಮಯ್ಯ ಬಳಿ ಟೊಯೊಟಾ ಇನೋವಾ ಕಾರು, 350 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ ಸಾಮಗ್ರಿ ಮತ್ತು ಪತ್ನಿಯ ಬಳಿ 540 ಗ್ರಾಂ ಚಿನ್ನ, 4.5 ಕೆ.ಜಿ. ಬೆಳ್ಳಿ ಸಾಮಗ್ರಿ ಇವೆ. ಅವಲಂಬಿತರ ಬಳಿ 650 ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ಸಾಮಗ್ರಿ ಇವೆ.

ಕುಮಾರಸ್ವಾಮಿ ಸಂಪತ್ತು: ಎಚ್‌.ಡಿ.ಕುಮಾರಸ್ವಾಮಿ ₹167 ಕೋಟಿ ಸಂಪತ್ತು ಹೊಂದಿದ್ದಾರೆ. 2013ರಲ್ಲಿ  ₹ 137 ಕೋಟಿ ಆಸ್ತಿ ಹೊಂದಿದ್ದರು.  ಐದು ವರ್ಷಗಳಲ್ಲಿ ₹ 30 ಕೋಟಿಯಷ್ಟು ಸಂಪತ್ತು ವೃದ್ಧಿಯಾಗಿದೆ. ಕುಮಾರಸ್ವಾಮಿ ವೈಯಕ್ತಿಕವಾಗಿ ₹42.91 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ಪತ್ನಿ ಅನಿತಾ  ₹124.32 ಕೋಟಿ ಆಸ್ತಿ ಹೊಂದಿದ್ದಾರೆ.

ಕುಮಾರಸ್ವಾಮಿ ಬಳಿ ₹ 12 ಲಕ್ಷ ನಗದು ಇದ್ದು, ವಿವಿಧ ಬ್ಯಾಂಕುಗಳಲ್ಲಿ ₹2 2.25 ಲಕ್ಷ ಮೊತ್ತದ ಠೇವಣಿ ಇರಿಸಿದ್ದಾರೆ. ಪತ್ನಿ ಅನಿತಾಗೆ ₹6.51 ಕೋಟಿ ಸೇರಿದಂತೆ ಒಟ್ಟು ₹6.97 ಕೋಟಿ ಸಾಲ ಕೊಟ್ಟಿದ್ದಾರೆ. ₹ 2.94 ಕೋಟಿ ಸಾಲ ಮಾಡಿದ್ದಾರೆ. 750 ಗ್ರಾಂ ಚಿನ್ನಾಭರಣ, 12.5 ಕೆ.ಜಿ. ಬೆಳ್ಳಿ ಹಾಗೂ 4 ಕ್ಯಾರೆಟ್‌ನಷ್ಟು ವಜ್ರ ಸೇರಿದಂತೆ ₹ 24.52 ಲಕ್ಷ ಮೌಲ್ಯದ ಆಭರಣ ಇವರ ಬಳಿ ಇದೆ. ಓಡಾಟಕ್ಕೆ ಸ್ವಂತ ವಾಹನ ಇಲ್ಲ. ಅನಿತಾ ₹42 ಲಕ್ಷ ನಗದು ಹೊಂದಿದ್ದು, ₹1.90 ಕೋಟಿ ಠೇವಣಿ ಇರಿಸಿದ್ದಾರೆ. ವಿವಿಧ ಹಣಕಾಸು ಸಂಸ್ಥೆಗಳಿಂದ ₹8.14 ಕೋಟಿ ಸಾಲ ಪಡೆದಿದ್ದಾರೆ. 2,660 ಗ್ರಾಂನಷ್ಟು ಚಿನ್ನ, 17 ಕೆ.ಜಿ. ಬೆಳ್ಳಿ ಹಾಗೂ 40 ಕ್ಯಾರೆಟ್‌ನಷ್ಟು ವಜ್ರ ಸೇರಿದಂತೆ ₹93,33 ಲಕ್ಷ ಮೌಲ್ಯದ ಆಭರಣ ಹೊಂದಿದ್ದಾರೆ. ಕಸ್ತೂರಿ ಮೀಡಿಯಾ ಕಂಪನಿಯಲ್ಲಿ ₹68.72 ಕೋಟಿ ಹೂಡಿಕೆ ಮಾಡಿರುವ ಇವರು ಅದರ ನಿರ್ದೇಶಕಿಯಾಗಿ ವಾರ್ಷಿಕ ₹1.02 ಕೋಟಿ ಗೌರವ ಸಂಭಾವನೆ ಪಡೆಯುತ್ತಿದ್ದಾರೆ.

ದೇಶಪಾಂಡೆ ಪತ್ನಿಯೇ ಹಣವಂತೆ: ದೇಶಪಾಂಡೆ ಅವರಿಗಿಂತ ಅವರ ಪತ್ನಿ ರಾಧಾ ದೇಶಪಾಂಡೆ ಶ್ರೀಮಂತರು. ಬಂಡವಾಳ ಹೂಡಿಕೆದಾರರಾಗಿರುವ ರಾಧಾ ಹೆಸರಿನಲ್ಲಿ ₹ 112.26 ಕೋಟಿ, ದೇಶಪಾಂಡೆ ಹೆಸರಿನಲ್ಲಿ ₹ 22.69 ಕೋಟಿ ಹಾಗೂ ಇವರಿಬ್ಬರ ಜಂಟಿ ಹೆಸರಿನಲ್ಲಿ ₹ 50.03 ಕೋಟಿ ಮೌಲ್ಯದ ಚರಾಸ್ತಿ ಇದೆ. ರಾಧಾ ಹೆಸರಿನಲ್ಲಿ ₹ 21.74 ಕೋಟಿ, ದೇಶಪಾಂಡೆ ಹೆಸರಿನಲ್ಲಿ ₹ 8.40 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ರಾಧಾ ಬಳಿ ₹ 2.90 ಕೋಟಿ ಹಾಗೂ ದೇಶಪಾಂಡೆ ಹೆಸರಿನಲ್ಲಿ ₹ 26.99 ಲಕ್ಷ ಮೌಲ್ಯದ ಆಭರಣಗಳಿವೆ. ಇವರಿಬ್ಬರ ಹೆಸರಿನಲ್ಲಿ ಯಾವುದೇ ವಾಹನಗಳಿಲ್ಲ.

₹ 104 ಕೋಟಿ ಒಡೆಯ: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಬಿ.ಪಾಟೀಲ ಕುಟುಂಬದ ಒಟ್ಟು ಆಸ್ತಿ ₹ 104.92 ಕೋಟಿ. ಇದೆ ಎಂದು ಶುಕ್ರವಾರ ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿಕೊಂಡಿದ್ದಾರೆ. ಸಾಲ ₹ 45.77 ಕೋಟಿ ಇದೆ ಎಂದು
ಹೇಳಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಂಪತ್ತು
* ₹ 20.36 ಕೋಟಿ
* 5 ವರ್ಷದಲ್ಲಿ  ₹ 7 ಕೋಟಿ ಏರಿಕೆ
* ಸಾಲ ₹4.85 ಕೋಟಿ
* ಸ್ಥಿರಾಸ್ತಿ ₹ 15.65 ಕೋಟಿ
* ಚರಾಸ್ತಿ ₹ 4.71 ಕೋಟಿ
* ಚಿನ್ನ 350 ಗ್ರಾಂ
* ಬೆಳ್ಳಿ 2 ಕೆ.ಜಿ

ಬಸವನಗುಡಿ ಕುಬೇರ ಬಾಗೇಗೌಡ: ಬಸವನಗುಡಿಯಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಾಗೇಗೌಡ ಒಟ್ಟು ಆಸ್ತಿ ₹ 318 ಕೋಟಿ. ಕೈಯಲ್ಲಿರುವ ನಗದು ₹ 10.50 ಲಕ್ಷ, 4 ಎಸ್‌ಯುವಿ ವಾಹನ ಹೊಂದಿದ್ದಾರೆ. ಚರಾಸ್ತಿ ₹ 86.34 ಕೋಟಿ, ಪತ್ನಿ ಹೆಸರಲ್ಲಿ ₹ 4.37 ಕೋಟಿ, ಸ್ಥಿರಾಸ್ತಿ ₹ 212.83 ಕೋಟಿ, ಪತ್ನಿ ಹೆಸರಲ್ಲಿ ₹ 16.45 ಕೋಟಿ. ವಿದ್ಯಾರ್ಹತೆ: ಎಸ್ಎಸ್‌ಎಲ್‌ಸಿ

ಹೆಬ್ಬಾಳಕರ ಬಳಿ ವಾಹನವಿಲ್ಲ
₹ 26.42 ಕೋಟಿ ಆಸ್ತಿ, ಸಕ್ಕರೆ ಕಾರ್ಖಾನೆ ಹೊಂದಿರುವ  ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಬಳಿ ವಾಹನವಿಲ್ಲ. ತಮ್ಮ ಬಳಿ ಇರುವುದು ₹ 5884 ಮೌಲ್ಯದ ಚಿನ್ನಾಭರಣ ಮಾತ್ರ ಎಂದು ತಿಳಿಸಿದ್ದಾರೆ.

ಶಾಮನೂರಿಗೆ ಮನೆ– ಕಾರು ಇಲ್ಲ
ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ಸ್ವಂತ ಮನೆ, ವಾಹನವೂ ಇಲ್ಲ! ಆದರೆ ಚರಾಸ್ತಿ, ಸ್ಥಿರಾಸ್ತಿ ಒಟ್ಟು ಸೇರಿ ₹ 183 ಕೋಟಿ 22 ಲಕ್ಷ ಇದೆ. ₹ 1.57 ಕೋಟಿ ಮೌಲ್ಯದ ಚಿನ್ನಾಭರಣಗಳಿವೆ. ‌‌₹ 63 ಕೋಟಿ 47 ಲಕ್ಷ ಸಾಲ ಇದೆ.

ಕೆಪಿಜೆಪಿಯ ಕುಬೇರ ಶಂಕರ್
ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಆರ್‌.ಶಂಕರ್‌ ಕಣಕ್ಕೆ ಇಳಿದಿದ್ದು, ಇವರ ಆಸ್ತಿ ₹ 260 ಕೋಟಿ. ಬಿಬಿಎಂಪಿ ಮಾಜಿ ಉಪಮೇಯರ್‌ ಆಗಿದ್ದರು.

ನಂದೀಶ್‌ ರೆಡ್ಡಿ: ಕೆ.ಆರ್‌.ಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ನಂದೀಶ್‌ ರೆಡ್ಡಿ ₹ 309 ಕೋಟಿ ಆಸ್ತಿ ಹೊಂದಿದ್ದು, ₹ 35 ಕೋಟಿ ಸಾಲ ಮಾಡಿದ್ದಾರೆ. ಕೋಟಿಗಟ್ಟಲೆ ಬೆಲೆ ಬಾಳುವ 9 ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT