ಶನಿವಾರ, ಜೂಲೈ 4, 2020
23 °C

ಶಾಶ್ವತ ಸಂಬಂಧದ ಹುಡುಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಪ್ರೀತಿ, ಪ್ರೇಮ, ಪ್ರಣಯ ಎಂದು ಆನ್‌ಲೈನ್‌ ಆ್ಯಪ್‌ಗಳಲ್ಲಿ ಸಮಯ ಕಳೆಯುತ್ತಿದ್ದ ಯುವಜನರ ಮನಸ್ಥಿತಿಯನ್ನು ಬದಲಾಯಿಸಿದೆ ಲಾಕ್‌ಡೌನ್. ಪಾರ್ಕು, ಸಿನಿಮಾ ಎಂದು ಸುತ್ತಾಡುವುದಕ್ಕೂ ಬ್ರೇಕ್ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಮದುವೆಯಂತಹ ಶಾಶ್ವತ ಸಂಬಂಧದತ್ತ ಯುವಜನರು ಒಲವು ತೋರುತ್ತಿರುವುದು ಇತ್ತೀಚಿನ ಟ್ರೆಂಡ್‌.

ಒಮ್ಮೆ ಈ ಕೋವಿಡ್‌ ಭಯ ದೂರವಾದರೆ ಸಾಕು. ಒಬ್ಬ ಒಳ್ಳೆಯ ಹುಡುಗನನ್ನು ಮದುವೆಯಾಗಿ ಸೆಟಲ್‌ ಆಗಿಬಿಡ್ತೀನಿ. ಕಷ್ಟವೋ– ಸುಖವೋ ಹಂಚಿಕೊಂಡು ಬದುಕಲು ಒಬ್ಬ ಶಾಶ್ವತ ಸಂಗಾತಿ ಇರಬೇಕಪ್ಪ..’ ಎನ್ನುವ ಬೆಂಗಳೂರಿನ ಖಾಸಗಿ ಕಂಪನಿಯ ಬ್ರ್ಯಾಂಡ್‌ ಕನ್ಸಲ್ಟೆಂಟ್‌ ಸ್ಮಿತಾ ಬೆನಕಪ್ಪ, ‘ಕಷ್ಟ ಬಂದರೆ ತಲೆಯಿಟ್ಟು ಅಳಲಾದರೂ ಒಂದು ಶಾಶ್ವತ ಹೆಗಲು ಬೇಕಲ್ಲ. ಈ ಬಾಯ್‌ಫ್ರೆಂಡ್‌ ಏನಿದ್ದರೂ ಸುಖ ಬಂದಾಗ ಹತ್ತಿರವಾಗಿ, ಕಷ್ಟ ಎದುರಾದಾಗ ದೂರವಾಗುವವರು’ ಎಂದು ವೇದಾಂತ ಮಾತನಾಡುವಾಗ ಅಚ್ಚರಿಯಾಗುತ್ತದೆ.

ಇದೇ ಸ್ಮಿತಾ ಡೇಟಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ವಾರಾಂತ್ಯ ಬಂದರೆ ಸಾಕು, ಹೊಸ ಸ್ನೇಹಿತನ ಜೊತೆ ಪಿಕ್ನಿಕ್‌, ಪಾರ್ಟಿ ಎಂದು ಸುತ್ತಾಡುತ್ತಿದ್ದಾಗ, ಇದೆಲ್ಲ ಮಿಲೆನಿಯಲ್‌ ಯುವತಿಯರ ಟ್ರೆಂಡ್‌ ಎಂದು ತಲೆಕೆಡಿಸಿಕೊಳ್ಳದ ಹಿರಿಯ ಸಹೋದ್ಯೋಗಿಗಳು ಆಕೆಯ ಈ ಹೊಸ ಅವತಾರ, ವೇದಾಂತದ ಮಾತುಗಳನ್ನು ಕೇಳಿ ಅಚ್ಚರಿಪಡುತ್ತಿದ್ದಾರಂತೆ. ಆದರೆ ಸ್ಮಿತಾ ಮಾತ್ರ ಡೇಟಿಂಗ್‌ ಆ್ಯಪ್‌ಗಳನ್ನೆಲ್ಲ ಡಿಲೀಟ್‌ ಮಾಡಿ, ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ತನ್ನ ಪ್ರೊಫೈಲ್‌ ಅಪ್‌ಡೇಟ್‌ ಮಾಡುವಲ್ಲಿ ಮಗ್ನಳಾಗಿದ್ದಾಳೆ. ಮದುವೆಯ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಗೊಂದಲದ ಉತ್ತರ ನೀಡುತ್ತಿದ್ದವಳು ಈಗ ಹುಡುಗನನ್ನು ನೋಡುವಂತೆ ಪೋಷಕರ ಜೊತೆ ಮಾತನಾಡಿರುವುದು ಲಾಕ್‌ಡೌನ್‌ ತಂದ ಇನ್ನೊಂದು ಹೊಸ ಬದಲಾವಣೆ.

ಲಾಕ್‌ಡೌನ್‌ ತಂದ ತಿರುವು

ಇದು ಕೇವಲ ಒಬ್ಬಳು ಸ್ಮಿತಾ ಕತೆಯಲ್ಲ. ಡೇಟಿಂಗ್, ಚ್ಯಾಟಿಂಗ್, ಮೀಟಿಂಗ್ ಎಂದು ಸಮಯ ಹಾಳು ಮಾಡುತ್ತಿದ್ದವರು, ಶಾಶ್ವತ ಸಂಬಂಧ ಹಾಗೂ ಮದುವೆಯ ಬಗ್ಗೆ ನಂಬಿಕೆ ಇಲ್ಲದೇ ಕೇವಲವಾಗಿ ಮಾತನಾಡುತ್ತಿದ್ದವರು, ಲಾಕ್‌ಡೌನ್ ಆರಂಭವಾದಾಗಲೂ ಸಮಯ ಕೊಲ್ಲಲು ಡೇಟಿಂಗ್‌ ಆ್ಯಪ್‌ ಡೌನ್‌ಲೋಡ್ ಮಾಡುವಲ್ಲಿ ಪೈಪೋಟಿಗೆ ಇಳಿದವರು ಲಾಕ್‌ಡೌನ್‌ ಲಾಂಗ್‌ ಆಗುತ್ತಿದ್ದಂತೆ ಶಾಶ್ವತ ಸಂಗಾತಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಬರೋಬ್ಬರಿ ಎರಡೂವರೆ ತಿಂಗಳಿನ ಗೃಹ ದಿಗ್ಬಂಧನದ ಒಂಟಿತನ ಎಂಬುದು ಯುವಕ/ ಯುವತಿಯರ ಮನಸ್ಸು ಮದುವೆಯತ್ತ ವಾಲುವಂತೆ ಮಾಡಿದೆ. ವರ್ಚುವಲ್‌ ಸಂಬಂಧಗಳು ಇಂತಹ ಸಂದರ್ಭದಲ್ಲಿ ಒಂಟಿತನ ಮರೆಯಲು ನೆರವಾಗುವುದಿಲ್ಲ ಎಂಬ ಅರಿವನ್ನೂ ಮೂಡಿಸಿದೆ ಈ ಲಾಕ್‌ಡೌನ್‌. ಮಾನಸಿಕ ಹಾಗೂ ದೈಹಿಕ ಬಾಂಧವ್ಯ ವೃದ್ಧಿಗೆ ಮದುವೆಯಂತಹ ಶಾಶ್ವತ ಸಂಬಂಧಗಳೇ ಮುಖ್ಯ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರಾ ಯುವಜನರು?

ವರದಿಯೊಂದರ ಪ್ರಕಾರ ಲಾಕ್‌ಡೌನ್‌ ಆರಂಭವಾದಾಗಿನಿಂದ ಶೇ 70 ರಷ್ಟು ಅವಿವಾಹಿತರು ಶಾಶ್ವತ ಸಂಬಂಧಗಳ ಮೇಲೆ ಒಲವು ತೋರಿಸುತ್ತಿದ್ದಾರಂತೆ. ಅಲ್ಲದೇ ಡೇಟಿಂಗ್ ಆ್ಯಪ್‌ಗಳಲ್ಲೂ ಶಾಶ್ವತ ಸಂಗಾತಿಗಳನ್ನೇ ಬಯಸುತ್ತಿದ್ದಾರಂತೆ. ಲಾಕ್‌ಡೌನ್‌ ಅವಧಿ ಒಂಟಿತನದ ಬೇಸರವನ್ನು ಹುಟ್ಟು ಹಾಕಿದೆಯಲ್ಲದೇ ದೀರ್ಘಕಾಲದ ಸಾಂಸಾರಿಕ ಬಂಧನದ ಮೇಲೆ ನಂಬಿಕೆ ಹುಟ್ಟುವಂತೆ ಮಾಡಿದೆ.

ಡೇಟಿಂಗ್ ಆ್ಯಪ್‌ನಲ್ಲೂ ದೀರ್ಘಾವಧಿ ಸಂಬಂಧಕ್ಕೆ ಒಲವು

ಲಾಕ್‌ಡೌನ್‌ ಅವಧಿಯಲ್ಲಿ ಡೇಟಿಂಗ್ ಆ್ಯಪ್‌ ಬಳಕೆಯೂ ಹೆಚ್ಚಿದೆಯಂತೆ. ಟಿಂಡರ್‌, ಬಂಬಲ್ ಹಾಗೂ ಹಿಂಗೆ ಈ ಮೂರು ಡೇಟಿಂಗ್ ಆ್ಯಪ್‌ ಸಮೀಕ್ಷೆಯ ಪ್ರಕಾರ ವಾರದಲ್ಲಿ ಕನಿಷ್ಠ 7 ಗಂಟೆಗಳ ಕಾಲ ಜನರು ಡೇಟಿಂಗ್ ಆ್ಯಪ್‌ ಬಳಕೆಯಲ್ಲಿ ಸಮಯ ಕಳೆದಿದ್ದಾರಂತೆ. ಆದರೆ  ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಬದುಕಿನ ಅವಿಭಾಜ್ಯ ಅಂಗವಾಗಿರುವಾಗ ಸಂಗಾತಿಯನ್ನು ಭೇಟಿ ಮಾಡುವ, ಜೊತೆಯಲ್ಲಿ ಸುತ್ತಾಡುವ ಯೋಚನೆ ಮಾಡಲೂ ಹಲವರು ಭಯಪಡುತ್ತಿದ್ದಾರೆ. ಅದರಲ್ಲೂ ಗುರುತುಪರಿಚಯವಿಲ್ಲದ, ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಅಪರಿಚಿತರನ್ನು ಭೇಟಿ ಮಾಡುವುದಂತೂ ಅಸಾಧ್ಯವೆ. ಹೀಗಾಗಿ ಅನೇಕರು ತಮ್ಮ ದೀರ್ಘಾವಧಿ ಸಂಬಂಧಕ್ಕೆ ಡೇಟಿಂಗ್‌ ಆ್ಯಪ್‌ಗಳಲ್ಲೇ ಸಂಗಾತಿಯನ್ನು ಹುಡುಕುತ್ತಿದ್ದಾರಂತೆ. ಒಟ್ಟಾರೆ ಡೇಟಿಂಗ್ ಆ್ಯಪ್‌ ಬಳಕೆಯಲ್ಲೂ ಮದುವೆಯ ಬಗ್ಗೆ ಯುವಜನರು ಚಿಂತಿಸುವಂತೆ ಮಾಡಿರುವುದು ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರವೆಂಬ ಬದಲಾವಣೆಗಳು. ಇಂದಿನ ಯುವಜನರ ಸಂಬಂಧಗಳಲ್ಲಿ ಬದ್ಧತೆ ಇರುವುದಿಲ್ಲ ಎಂದು ದೂರುತ್ತಿದ್ದ ಹಲವು ಹಿರಿಯರಲ್ಲಿ ಮಕ್ಕಳಿಗೆ ಸಂಬಂಧ ನೋಡಿ ಮದುವೆ ಮಾಡುವ ಗಡಿಬಿಡಿ ಎದ್ದಿದೆ. 

ಅರ್ಥಪೂರ್ಣ ಬಾಂಧವ್ಯ

ನೇಹಾಗೆ ಮೊದಲಿನಿಂದಲೂ ಸಾಮಾಜಿಕ ಜಾಲತಾಣಗಳ ಮೇಲೆ ಒಲವು ಜಾಸ್ತಿ. ನಿತ್ಯ ಕೆಲವು ಗಂಟೆಗಳ ಕಾಲ ಆನ್‌ಲೈನ್‌ನಲ್ಲೇ ಇರುತ್ತಿದ್ದ ಆಕೆಯ ಒಲವು ಡೇಟಿಂಗ್ ಆ್ಯಪ್‌ಗಳತ್ತ ಹರಿದಿತ್ತು. ಆದರೆ ಇತ್ತೀಚೆಗೆ ತನ್ನ ವ್ಯಕ್ತಿತ್ವದಲ್ಲಿ ಆದ ಬದಲಾವಣೆಗಳನ್ನು ತಾನೇ ಗುರುತಿಸಿದ್ದಳು. ಡೇಟಿಂಗ್‌ ಆ್ಯಪ್‌ನಲ್ಲಿ ಯಾರಾದರೂ ಹುಡುಗ ಅವಳೊಂದಿಗೆ ಹಾಸ್ಯಮಯವಾಗಿ ಮಾತನಾಡಲು ಆರಂಭಿಸಿದರೆ ಇವಳು ಕೋಪಗೊಳ್ಳುತ್ತಿದ್ದಳು. ಅರ್ಥವಿಲ್ಲದೇ ಆಡುವ ಸಣ್ಣ ಪುಟ್ಟ ಮಾತುಗಳು ಇವಳಲ್ಲಿ ಕೋಪ ತರಿಸುತ್ತಿತ್ತು. ಅಲ್ಲದೇ ಅಪರಿಚಿತರೊಂದಿಗೆ ಚ್ಯಾಟ್ ಮಾಡಲು ಹಿಂಜರಿಯುತ್ತಿದ್ದಾಳೆ. ಇದನ್ನೆಲ್ಲಾ ಚಿಂತಿಸಿದ ನೇಹಾ, ತನ್ನ ಮನಸ್ಸು ಒಂದು ಅರ್ಥಪೂರ್ಣ, ಶಾಶ್ವತ ಸಂಬಂಧವನ್ನು ಬಯಸುತ್ತಿದೆ ಎಂಬುದನ್ನು ಕಂಡುಕೊಂಡಿದ್ದಾಳೆ.

ಲಾಕ್‌ಡೌನ್ ತಂದ ಒತ್ತಡ, ಅನಿಶ್ಚಿತ ಪರಿಸ್ಥಿತಿ ಕೂಡ ಜನರಲ್ಲಿ ಅರ್ಥಪೂರ್ಣ ಸಂಬಂಧದತ್ತ ಮನಸ್ಸು ಹರಿಯುವಂತೆ ಮಾಡಿದೆ.

ಶಾಶ್ವತ ಸಂಬಂಧಗಳತ್ತ ಚಿತ್ತ

ಲಾಕ್‌ಡೌನ್ ಅವಧಿಯಲ್ಲಿನ ಬಿಡುವಿನ ಸಮಯವು ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಅನೇಕರಿಗೆ ತಾವು ಒಬ್ಬ ವ್ಯಕ್ತಿಯೊಂದಿಗೆ ದೃಢ ಹಾಗೂ ಶಾಶ್ವತ ಸಂಬಂಧ ಇರಿಸಿಕೊಳ್ಳಬೇಕು ಎಂಬ ಭಾವನೆ ಮೂಡಿದೆ. ಅಲ್ಲದೇ ಆನ್‌ಲೈನ್ ವೇದಿಕೆಗಳಲ್ಲಿನ ಸಂಬಂಧ ಶಾಶ್ವತವಲ್ಲ. ಕೆಲವು ದಿನಗಳ ಒಂಟಿತನ ಹೋಗಲಾಡಿಸಲಷ್ಟೇ ಆ ಸಂಬಂಧಗಳಿಂದ ಸಾಧ್ಯ ಎಂಬುದನ್ನು ಇದರಿಂದ ಅರಿಯುವಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು