ಬೆಳ್ಳಿ ಆಭರಣಗಳ ಲೋಕದಲಿ

7

ಬೆಳ್ಳಿ ಆಭರಣಗಳ ಲೋಕದಲಿ

Published:
Updated:

ನವೆಂಬರ್‌ 20ರಂದು ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್‌ ಸಿಂಗ್‌  ಇಟಲಿಯಲ್ಲಿ ಹಸೆಮಣೆ ಏರಲಿದ್ದಾರೆ. ವಿವಾಹಕ್ಕೆ ಇನ್ನು ಹೆಚ್ಚು ಸಮಯ ಇಲ್ಲವಾದ್ದರಿಂದ ಎರಡೂ ಕುಟುಂಬಗಳು ಶಾಪಿಂಗ್‌ನಲ್ಲಿ ಮುಳುಗಿವೆ. ಇನ್ನೊಂದು 
ಅಚ್ಚರಿ ವಿಷಯವೆಂದರೆ ಈ ಮದುವೆಯಲ್ಲಿ ಚಿನ್ನ ಅಥವಾ ಪ್ಲಾಟಿನಂ ಒಡವೆಗಳಲ್ಲಿ ದೀಪಿಕಾ ಮಿಂಚಲಿದ್ದಾರೆ ಎಂದು ಭಾವಿಸಿದರೆ ತಪ್ಪು. ಮದುವೆದಿನ ಅವರು ಬೆಳ್ಳಿ ಆಭರಣಗಳಲ್ಲಿ ಕಂಗೊಳಿಸಲಿದ್ದಾರೆ. ಈಗಾಗಲೇ ಅವರ ಕುಟುಂಬ ಬೆಳ್ಳಿ ಆಭರಣಗಳ ಶಾಪಿಂಗ್‌ನಲ್ಲಿ ತೊಡಗಿದೆ ಎಂದು ಸುದ್ದಿ ಹರಿದಾಡುತ್ತಿವೆ. 

ಕಳೆದ ವರ್ಷ ‘ಪದ್ಮಾವತ್‌’ ಚಿತ್ರ ಬಿಡುಗಡೆಯಾದಾಗ ರಾಣಿ ಪದ್ಮಿನಿಯಾಗಿ ದೀಪಿಕಾ ಧರಿಸಿದ್ದ ರಜಪೂತ ಶೈಲಿಯ ಒಡವೆಗಳು ಹಾಗೂ ಉಡುಗೆಗಳು ಫ್ಯಾಷನ್‌ ಜಗತ್ತಿನಲ್ಲಿ ಟ್ರೆಂಡ್‌ ಸೃಷ್ಟಿಸಿತ್ತು. ಅವರ ವಿವಾಹ ಸುದ್ದಿಯಾದಾಗ ‘ಪದ್ಮಾವತ್‌’ ರೂಪದಲ್ಲೇ ಮದುಮಗಳಾಗಿ ಕಾಣಿಸಿಕೊಳ್ಳಬಹುದು ಎಂದು ಅಂದುಕೊಂಡಿದ್ದರು. ಆ ಪಾತ್ರ ಅಷ್ಟೊಂದು ಜನಪ್ರಿಯತೆ ಗಳಿಸಿತ್ತು. ಹಾಗೇ ಅವರು ಸಿನಿಮಾದಲ್ಲಿ ತೊಟ್ಟಿದ್ದ ಆಭರಣಗಳು, ಲೆಹೆಂಗಾ, ಘಾಗ್ರಾಗಳು ಕಣ್ಮನ ಸೆಳೆದಿದ್ದವು. ಈಗ ಮದುವೆಯಲ್ಲಿ ಅವರು ಬೆಳ್ಳಿ ಆಭರಣಗಳು ಧರಿಸಲಿದ್ದಾರೆ ಎಂದು ಸುದ್ದಿಯಾದಾಗ ಅವರು ಯಾವ ರೀತಿ ಮದುವೆಯಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಮೂಡಿಸಿದೆ. 

ಬೆಳ್ಳಿ ಆಭರಣಗಳ ವಿಚಾರಕ್ಕೆ ಬಂದರೆ ಇದು ಹೊಸ ಟ್ರೆಂಡ್‌ ಏನಲ್ಲ. 10–15 ವರ್ಷಗಳ ಹಿಂದೆ ಬೆಳ್ಳಿ ಆಭರಣಗಳು ಎಂದರೆ ಮೂಗು ಮುರಿಯುತ್ತಿದ್ದವರೇ ಜಾಸ್ತಿ. ಬಡವರ ಒಡವೆ ಎಂದು ಗುರುತಿಸುತ್ತಿದ್ದರು. ಆದರೆ ಫ್ಯಾಷನ್‌ ಲೋಕದಲ್ಲಿ ದಿನಕ್ಕೊಂದು ಟ್ರೆಂಡ್‌ ಬಂದಂತೆ ಈ ಆಭರಣಗಳೂ ಪ್ರಾಮುಖ್ಯತೆ ಪಡೆದುಕೊಂಡವು. ಬಗೆ ಬಗೆ ಕುಸುರಿ ಕೆಲಸ ಇರುವ ಈ ಕಲಾತ್ಮಕ ಆಭರಣಗಳು ಕಣ್ಮನ ಸೆಳೆದವು. ಫ್ಯಾಷನ್‌ಪ್ರಿಯರೂ ಈ ಆಭರಣಗಳನ್ನು ಇಷ್ಟಪಟ್ಟು ಕೊಂಡುಕೊಳ್ಳಲು ಆರಂಭಿಸಿದರು.

ಈಗ ದೀಪಿಕಾ ಪಡುಕೋಣೆ ಬೆಳ್ಳಿ ಆಭರಣಗಳನ್ನೇ ತಮ್ಮ ಮದುವೆ ದಿನಕ್ಕೆ ಆರಿಸಿಕೊಂಡಿದ್ದಾರೆ ಎಂಬ ಸುದ್ದಿ ಮತ್ತಷ್ಟು ಮಹತ್ವ ತಂದುಕೊಟ್ಟಿವೆ. ಈಗಾಗಲೇ ಕೆಲ ಕಾರ್ಯಕ್ರಮಗಳಲ್ಲಿ ಸಿನಿಮಾ ನಟಿಯರೂ ಈ ಉಡವೆಗಳನ್ನೇ ಧರಿಸಿ ಮಿಂಚಿದ್ದಾರೆ. ಇದನ್ನು ಕಾಲೇಜು ಯುವತಿಯರು, ಉದ್ಯೋಗಸ್ಥ ಮಹಿಳೆಯರೂ ಅನುಕರಣೆ ಮಾಡುತ್ತಿದ್ದಾರೆ. ಬರೀ ಯುವತಿಯರಷ್ಟೇ ಅಲ್ಲ, ಹುಡುಗರೂ ಈಗ ಬೆಳ್ಳಿ ಕಡಗ, ಚೈನ್‌ ಹಾಗೂ ಉಂಗುರಗಳನ್ನು ಧರಿಸುತ್ತಿದ್ದಾರೆ. 

ಚಿನ್ನ, ಪ್ಲಾಟಿನಂ, ವಜ್ರದ ಆಭರಣಗಳಿಗೆ ಹೋಲಿಸಿದರೆ ಈ ಆಭರಣಗಳು ಕಡಿಮೆ ಬೆಲೆಗೆ ದೊರಕುತ್ತವೆ. ಸರ, ಕೈಬಳೆ, ಕಡಗ, ಕಿವಿಯೋಲೆ... ಹೀಗೆ ನಾನಾ ವಿಧದಲ್ಲಿ ಫ್ಯಾಷನೆಬಲ್‌ ಎನಿಸುವಂತಹ ಉಡವೆಗಳು ದೊರಕುವುದರಿಂದ ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿದೆ. ಈ ಆಭರಣಗಳು ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಮಿಶ್ರಣ. ಸಾಂಪ್ರದಾಯಿಕ ಉಡುಪುಗಳಿಗಂತೂ ಹೇಳಿ ಮಾಡಿಸಿದಂತಿವೆ. 

ಈ ಆಭರಣಗಳಲ್ಲಿ ನೆಕ್ಲೇಸ್‌ ಹಾಗೂ ಜುಮುಕಿಯನ್ನು ಯುವತಿಯರು ಹೆಚ್ಚು ತೊಡುತ್ತಾರೆ. ಸರಳ, ಅದ್ದೂರಿ ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೂ ಇದು ಒಪ್ಪುತ್ತದೆ. ಕಾಟನ್‌ ಸೀರೆ ಉಟ್ಟಾಗ ಬೆಳ್ಳಿ ನೆಕ್ಲೇಸ್ ಹಾಗೂ ಜುಮುಕಿಗಳನ್ನು ತೊಟ್ಟರೆ ಅಂದ ಇಮ್ಮಡಿಯಾಗುವುದಲ್ಲದೇ, ಇತರರಿಂದ ನಮ್ಮನ್ನು ವಿಭಿನ್ನವಾಗಿ ಕಾಣಿಸುವಂತೆ ಮಾಡುತ್ತದೆ. ಇವು ಮುತ್ತು,  ಹವಳಗಳಲ್ಲಿ ಲಭ್ಯವಿವೆ. ಇವುಗಳನ್ನು ಮದುವೆಯಂತಹ ಅದ್ದೂರಿ ಸಮಾರಂಭಕ್ಕೂ ತೊಟ್ಟುಕೊಳ್ಳಬಹುದು.
**
ಬೆಳ್ಳಿ ಆಭರಣಗಳ ಕಾಳಜಿ

* ಚಿನ್ನ ಅಥವಾ ಇತರ ಆಭರಣಗಳನ್ನು ಇಟ್ಟಿರುವ ಬಾಕ್ಸ್‌ನಲ್ಲಿ ಬೆಳ್ಳಿ ಆಭರಣಗಳನ್ನು ಜೊತೆಗಿಡಬೇಡಿ. ತೆರೆದ, ಗಾಳಿಯಾಡುವ ಸ್ಥಳದಲ್ಲಿಯೂ ಇಡಬಾರದು

* ಈ ಆಭರಣಗಳನ್ನು ಧರಿಸಿದ ನಂತರ ಸುಗಂಧದ್ರವ್ಯ ಸಿಂಪಡಿಸಿಕೊಳ್ಳಬೇಡಿ. ಹಾಗೇ ಬಾಡಿಲೋಶನ್‌ ಕೂಡ ಅದರ ಮೇಲೆ ಹಚ್ಚಬೇಡಿ. 

* ಸ್ನಾನ ಅಥವಾ ಈಜುವಾಗ ಈ ಆಭರಣಗಳನ್ನು ತೆಗೆಯಬೇಕೆಂದಿಲ್ಲ. ಆದರೆ ಅದರಲ್ಲಿ ಸೋಪಿನ ನೀರು ಇದ್ದರೆ ಬಳಿಕ ನೀರಿನಿಂದ ಸ್ವಚ್ಛಗೊಳಿಸಿ. 

* ಸ್ವಲ್ಪ ಉಗುರುಬೆಚ್ಚಗಿನ ನೀರಿಗೆ ಅಮೋನಿಯಾ ಹುಡಿಯನ್ನು ಹಾಕಿ. ಬೆಳ್ಳಿ ಆಭರಣಗಳನ್ನು ಈ ಮಿಶ್ರಣದಲ್ಲಿ ಹಾಕಿ ಎರಡು ನಿಮಿಷ ಬಿಟ್ಟು ತೆಗೆಯಿರಿ. ಬಳಿಕ ಸ್ವಚ್ಛ ನೀರಿನಿಂದ ಆಭರಣಗಳನ್ನು ತೊಳೆಯಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !