ಅತಿಯಾದ ದಣಿವು ಯಾವಾಗಲೂ ಬಹಿರಂಗವಾಗಿಯೇ ಕಾಣಿಸಿಕೊಳ್ಳಬೇಕೆಂದಿಲ್ಲ. ದಿನವಿಡೀ ನಗುನಗುತ್ತಿರುವ, ಕುಟುಂಬದ ಸದಸ್ಯರ ಉಪಚಾರದಲ್ಲಿ ತೊಡಗಿರುವ, ಎಲ್ಲರಿಗೂ ಬೇಕಾದುದನ್ನು ಮಾಡುತ್ತಲೇ ವಿವರಿಸಲಾಗದ ನೋವನ್ನು ಅನುಭವಿಸುವ ಮಹಿಳೆಯರಲ್ಲಿ ಈ ದಣಿವು ಅದೃಶ್ಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಮೇಲ್ನೋಟಕ್ಕೆ ಸಮರ್ಥರಂತೆ ಕಾಣುವ ಮತ್ತು ಸಂಯಮದಿಂದ ಇರುವಂತೆ ತೋರುವ ಅನೇಕ ಮಹಿಳೆಯರನ್ನು ನಾನು ನೋಡಿದ್ದೇನೆ. ಆದರೆ, ಅವರೊಡನೆ ಮಾತನಾಡುತ್ತಾ ಹೋದಂತೆಲ್ಲ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಅವರು ತೀವ್ರವಾಗಿ ದಣಿದಿರುವುದು ತಿಳಿದುಬರುತ್ತದೆ. ಅದನ್ನು ಅವರು ಸಹ ಒಪ್ಪಿಕೊಳ್ಳುತ್ತಾರೆ. ದೂರದಿಂದ ನೋಡುವವರಿಗೆ ಅವರದು ಯಶಸ್ವಿ ಜೀವನ ಎಂಬಂತೆ ಕಂಡರೂ ಅವರು ಒಳಗೊಳಗೇ ಕೊರಗುತ್ತಿರುತ್ತಾರೆ. ಇದೊಂದು ಅಪರೂಪದ ಸಮಸ್ಯೆಯೇನೂ ಅಲ್ಲ. ಮಹಿಳೆಯರು ಎರಡು ಪೂರ್ಣಾವಧಿ ಪಾತ್ರಗಳನ್ನು ನಿರ್ವಹಿಸಬೇಕೆಂದು ನಿರೀಕ್ಷಿಸುವ ಮತ್ತು ಆ ಕಾರ್ಯಬಾಹುಳ್ಯದ ಭಾರಕ್ಕೆ ಕುಸಿಯದಂತೆ ನೋಡಿಕೊಳ್ಳುವ ಸಲುವಾಗಿ ಆಕೆಯನ್ನು ಹೊಗಳುವ ನಮ್ಮ ಸುತ್ತಮುತ್ತಲಿನ ಪ್ರಪಂಚದ ಸಹಜವಾದ ನಡವಳಿಕೆ ಇದಾಗಿದೆ.

ಆಧುನಿಕ ಮಹಿಳೆಯರು ವೃತ್ತಿಪರವಾಗಿ ಶ್ರೇಷ್ಠತೆಯನ್ನು ತೋರಿಸಬೇಕು, ಕೌಟುಂಬಿಕ ಬದುಕಿನಲ್ಲೂ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಬರಬೇಕು, ಮಹತ್ವಾಕಾಂಕ್ಷಿಗಳಾಗಿರಬೇಕು, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಇರಬೇಕು, ಮನೆಯವರಿಗೆ ಬೇಕೆಂದಾಗ ಮನೆಯಲ್ಲಿ ಲಭ್ಯವಿರಬೇಕು, ಮನೆಯ ಎಲ್ಲರನ್ನೂ ಅವರು ಪೋಷಿಸಬೇಕು ಮತ್ತು ಕೊನೆಮೊದಲಿಲ್ಲದೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರಬೇಕು ಎಂದೆಲ್ಲ ಅಪೇಕ್ಷೆ ಪಡಲಾಗುತ್ತದೆ. ಆದರೆ, ಅದಕ್ಕಾಗಿ ಮಹಿಳೆ ಎದುರಿಸುವ ಮಾನಸಿಕ ಹಾಗೂ ಭಾವನಾತ್ಮಕ ಒತ್ತಡದ ಬಗ್ಗೆ ನಾವು ಹೆಚ್ಚು ಚಿಂತಿಸದೆ ಜಾಣ ಕುರುಡುತನ ಪ್ರದರ್ಶಿಸುತ್ತೇವೆ.

ಸಮಾಜಶಾಸ್ತ್ರಜ್ಞರು ಹೇಳುವಂತೆ, ಉದ್ಯೋಗನಿರತ ಮಹಿಳೆಯರು ಪೂರ್ಣಾವಧಿ ಉದ್ಯೋಗದ ಜೊತೆಗೆ ಸಮಾನವಾದ ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ, ಸಂಬಳವಿಲ್ಲದ ಗೃಹಕೃತ್ಯಗಳನ್ನೂ ನಿಭಾಯಿಸುವ ‘ಡಬಲ್ ಡ್ಯೂಟಿ’ಯನ್ನು ಮಾಡುತ್ತಿರುತ್ತಾರೆ. ತಮ್ಮನ್ನು ಪ್ರಗತಿಪರರೆಂದು ಭಾವಿಸುವವರ ಮನೆಗಳಲ್ಲಿಯೂ ಈ ವಿಷಯದಲ್ಲಿ ಬದಲಾವಣೆಯೇನೂ ಇರುವುದಿಲ್ಲ.

ಇಂತಹ ಪರಿಶ್ರಮವು ಅಡುಗೆ ಸಿದ್ಧಪಡಿಸುವುದು ಮತ್ತು ಮನೆಯನ್ನು ಶುಚಿಗೊಳಿಸುವುದಕ್ಕಷ್ಟೇ ಸೀಮಿತವಾಗಿ ಇರುವುದಿಲ್ಲ. ಇದು ಕುಟುಂಬದ ಸದಸ್ಯರ ಹುಟ್ಟುಹಬ್ಬಗಳನ್ನು ನೆನಪಿಸಿಕೊಳ್ಳುವುದು, ಹಬ್ಬಗಳನ್ನು ಯೋಜಿಸುವುದು, ದಿನಸಿ ಸಾಮಾನು ಖಾಲಿಯಾಗುವ ಮೊದಲೇ ಭರ್ತಿ ಮಾಡುವುದು, ಮಕ್ಕಳ ಶಾಲಾ ಚಟುವಟಿಕೆಗಳಲ್ಲಿ ಸಮನ್ವಯ ಸಾಧಿಸುವುದು ಹಾಗೂ ವೇಳಾಪಟ್ಟಿಗಳ ಮೇಲೆ ನಿಗಾ ಇರಿಸುವುದು, ಲೋಪ ಇಲ್ಲದಂತೆ ಕೌಟುಂಬಿಕ ಸಂಬಂಧಗಳನ್ನು ನಿರ್ವಹಿಸುವುದು, ವೈದ್ಯರ ಭೇಟಿ ನಿಗದಿಪಡಿಸುವುದು, ಮನೆಯಲ್ಲಿ ಯಾರಾದರೂ ಅಸಮಾಧಾನಗೊಂಡಿದ್ದರೆ ಅವರತ್ತ ಗಮನಹರಿಸುವುದು, ಹಿರಿಯರು ಅವಗಣನೆಗೆ ಒಳಗಾಗದಂತೆ ನೋಡಿಕೊಳ್ಳುವುದು, ಎಲ್ಲರ ರುಚಿಗೆ ತಕ್ಕಂತೆ ಊಟದ ವ್ಯವಸ್ಥೆ ಮಾಡುವುದು ಮತ್ತು ಸಂಘರ್ಷ ತಪ್ಪಿಸಿ ಮನೆಯಲ್ಲಿನ ವಾತಾವರಣವು ಶಾಂತಿಯುತವಾಗಿ ಇರುವಂತೆ ಎಚ್ಚರ ವಹಿಸುವುದು ಎಲ್ಲವನ್ನೂ ಒಳಗೊಂಡಿರುತ್ತದೆ. ಮನೆಯ ಸದಸ್ಯರನ್ನೆಲ್ಲ ಒಟ್ಟಿಗೇ ಹಿಡಿದಿಟ್ಟುಕೊಳ್ಳುವ ಗುರುತರ ಜವಾಬ್ದಾರಿ ಇದಾಗಿದ್ದು, ನಿರಂತರವಾಗಿ ನಡೆಯುತ್ತಲೇ ಇರಬೇಕಾದ ಕಾರ್ಯವಾಗಿರುತ್ತದೆ.

ಮಾನ್ಯತೆಯಾಗಲೀ ಅಗತ್ಯ ಬೆಂಬಲವಾಗಲೀ ದೊರಕದ ಇಂತಹ ಕೆಲಸಗಳ ಭಾರದಿಂದ ನಲುಗುವ ಮಹಿಳೆಯನ್ನು ಆಕೆ ಅತಿಯಾಗಿ ಪ್ರತಿಕ್ರಿಯಿಸುತ್ತಿದ್ದಾಳೆ ಅಥವಾ ತನ್ನ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂದೆಲ್ಲ ದೂರಲಾಗುತ್ತದೆ.
ನ್ಯಾಯೋಚಿತವಲ್ಲದ ವ್ಯವಸ್ಥೆಯಿಂದಾಗಿ ಇಂತಹ ಸಮಸ್ಯೆಗಳು ಉದ್ಭವಿಸಿವೆ ಎನ್ನುವ ಬದಲು ಅವಳ ಮೇಲೇ ತಪ್ಪು ಹೊರಿಸಲಾಗುತ್ತದೆ.

ಅನೇಕ ಹೆಣ್ಣುಮಕ್ಕಳಿಗೆ ತಮ್ಮ ಸಂಕಟವನ್ನು ಅದುಮಿಟ್ಟುಕೊಳ್ಳಲು ಕಲಿಸಲಾಗಿರುತ್ತದೆ. ವಿಭಿನ್ನ ತಲೆಮಾರಿನವರು ಒಂದೇ ಮನೆಯಲ್ಲಿ ವಾಸಿಸುವ ಕುಟುಂಬಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ನಿರೀಕ್ಷೆಗಳು ಇರುತ್ತವೆ. ಆಗ, ತಾವು ಬೇಡಿಕೆ ಇಡುವವರು, ಸ್ವಾರ್ಥಿಗಳು ಅಥವಾ ಅಸಮರ್ಪಕರು ಎಂದು ಗುರುತಿಸಿಕೊಂಡುಬಿಡಬಹುದು ಎನ್ನುವ ಭಯದಿಂದ ಮಹಿಳೆಯರು ಎಲ್ಲವನ್ನೂ ಸಹಿಸಿಕೊಂಡೇ ಮುಂದುವರಿಯುತ್ತಾರೆ. ಅತಿಯಾದ ದಣಿವನ್ನೇ ಸಹಜವೆಂದು ಸ್ವೀಕರಿಸುವುದನ್ನು ಕಲಿಯುತ್ತಾರೆ.

ಆದರೆ ಕಾಲ ಗತಿಸಿದಂತೆ ಆಕೆಯ ಮೇಲಿನ ಇಂತಹ ನಿರಂತರ ಒತ್ತಡವು ಆತಂಕ, ಕಿರಿಕಿರಿ, ನಿದ್ರಾಹೀನತೆ, ನಿಯಮಿತವಾಗಿ ಬರುವ ತಲೆನೋವು, ಜೀರ್ಣಕ್ರಿಯೆಯ ಸಮಸ್ಯೆಗಳು, ಭಾವನಾತ್ಮಕ ಶೂನ್ಯತೆ, ಅಸಮರ್ಥ ಭಾವನೆ ಮೂಡಿಸಿ ಖಿನ್ನತೆ ಆವರಿಸುತ್ತದೆ. ಕೆಲ ಮಹಿಳೆಯರು ದಕ್ಷತೆಯಿಂದ ಕಾರ್ಯನಿರ್ವಹಿಸಿದರೂ, ಆನಂದ ಭಾವದಿಂದ ವಂಚಿತರಾಗಿ ಜೀವನದಿಂದ ವಿಮುಖರಾಗಲು ಆರಂಭಿಸುತ್ತಾರೆ. ಇನ್ನು ಕೆಲವರು ವಿಶ್ರಾಂತಿ ಬಯಸುವುದೇ ತಪ್ಪು ಎಂಬ ಭಾವನೆ ಹೊಂದುತ್ತಾರೆ. ಅನೇಕ ಸಂದರ್ಭಗಳಲ್ಲಿ, ತಮ್ಮ ದೇಹ–ಮನಸ್ಸು ಕುಸಿದುಹೋಗುವವರೆಗೂ ಅವರು ಸಹಾಯವನ್ನು ಬಯಸುವುದಿಲ್ಲ.

‘ಸೂಪರ್ ವುಮನ್’ ಪರಿಕಲ್ಪನೆಯನ್ನು ಅತಿರೇಕವಾಗಿ ಪಾಲಿಸುವ ಸಂಸ್ಕೃತಿಯಲ್ಲಿ ನಾವು ಬದುಕುತ್ತಿದ್ದೇವೆ. ಮಹಿಳೆಯರ ಮೇಲಿನ ಅತಿಯಾದ ನಿರೀಕ್ಷೆಗಳು ಅವರ ಸಬಲೀಕರಣವಲ್ಲ. ಇದು ಹೊಗಳಿಕೆಯ ಮಾರುವೇಷದಲ್ಲಿರುವ ಮೌನ ದಮನವೇ ಆಗಿದೆ ಮತ್ತು ಅವರ ವಿರುದ್ಧ ಹೆಣೆದಿರುವ ಬಲೆಯಾಗಿರುತ್ತದೆ. ಮಹಿಳೆಯರು ಅಂತಹ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದಾಗ, ಅಸಾಧ್ಯವಾದುದನ್ನು ತಮ್ಮಿಂದ ನಿರೀಕ್ಷಿಸುವ ವ್ಯವಸ್ಥೆಯನ್ನು ಪ್ರಶ್ನಿಸುವ ಬದಲು, ತಮ್ಮ ಮೇಲೇ ತಪ್ಪನ್ನು ಹಾಕಿಕೊಳ್ಳುತ್ತಾರೆ.

ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿ, ಹೆಚ್ಚು ಸಹನಶೀಲರಾಗಿ ಇರಿ ಅಥವಾ ಸ್ವಯಂ ಆರೈಕೆಗೆ ಗಮನಕೊಡಿ ಎಂದು ಹೇಳುವುದು ಇದಕ್ಕೆ ನೀಡುವ ಸಮರ್ಥವಾದ ಉತ್ತರ ಅಲ್ಲ. ಧ್ಯಾನವೂ ಪರಿಹಾರ ಆಗುವುದಿಲ್ಲ. ಕುಟುಂಬಗಳು, ಕೆಲಸದ ಸ್ಥಳಗಳು ಮತ್ತು ಸಮಾಜ— ಈ ಎಲ್ಲವುಗಳ ಒಟ್ಟುಗೂಡಿದ ಪ್ರಯತ್ನದಿಂದಲೇ ನಿಜವಾದ ಬದಲಾವಣೆ ಬರಬೇಕು.

ಮನೆಯಲ್ಲಿ ಸಂಗಾತಿಗಳು ಕೇವಲ ‘ಸಹಾಯ’ ಮಾಡುವುದಷ್ಟೇ ಅಲ್ಲ, ಗೃಹಕೃತ್ಯ ಹಾಗೂ ಭಾವನಾತ್ಮಕ ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಇದರರ್ಥ ಕೆಲಸಗಳನ್ನು ಮಾಡುವುದಷ್ಟೇ ಅಲ್ಲ, ಯಾವ ಕೆಲಸ ಮಾಡಬೇಕಿದೆ ಎಂಬುದನ್ನು ಗಮನಿಸಿ, ಮಾನಸಿಕ ಹೊರೆ ಹೊತ್ತುಕೊಳ್ಳಬೇಕು. ಕುಟುಂಬಗಳು ಮಹಿಳೆಯರು ಪಡೆಯುವ ವಿಶ್ರಾಂತಿಯನ್ನು ಐಚ್ಛಿಕ ಎಂದು ಭಾವಿಸುವುದು ಮತ್ತು ಅವರು ಎಲ್ಲರ ಬಗೆಗೆ ಕಾಳಜಿ ಮಾಡಬೇಕಾಗಿರುವುದು ಸಹಜ ಎಂಬಂತೆ ಕಾಣುವುದನ್ನು ನಿಲ್ಲಿಸಬೇಕು. ಕೃತಜ್ಞತೆ ವ್ಯಕ್ತಪಡಿಸುವುದು, ಹೊಗಳುವುದು ನ್ಯಾಯೋಚಿತವಾದ ವರ್ತನೆಗೆ ಪರ್ಯಾಯವಾದವುಗಳಲ್ಲ.

ಕೆಲಸದ ಸ್ಥಳದಲ್ಲಿ ಮಾನಸಿಕ ಸುರಕ್ಷತೆ ಮತ್ತು ಅನುಕೂಲಗಳನ್ನು ಒದಗಿಸುವುದು ಸೌಲಭ್ಯಗಳಲ್ಲ, ಅವು ಮಾನಸಿಕ ಆರೋಗ್ಯ ಕಾಪಾಡುವ ಅಗತ್ಯ ಸಂಗತಿಗಳು ಎಂಬುದನ್ನು ಸಂಸ್ಥೆಗಳು ಗುರುತಿಸಬೇಕು. ಕೆಲಸದ ಸ್ಥಳಗಳು ದಣಿವನ್ನು ನಿರ್ಲಕ್ಷಿಸಿದಾಗ, ಸಮಾಜವು ಅಂತಹವರನ್ನು ಗುರುತಿಸಿ ಗೌರವಿಸಬೇಕು. ಅನ್ಯರ ಮನಸ್ಸಿಗೆ ಗಾಸಿ ಮಾಡುವ ಗುಣಕ್ಕೆ ಎಲ್ಲರೂ ಕಡಿವಾಣ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಇಂತಹ ನಡೆಗಳು ಈಗಾಗಲೇ ಮನೆಯಲ್ಲಿ ‘ಎರಡನೇ ಶಿಫ್ಟ್’ ಹೊತ್ತುಕೊಂಡಿರುವ ಮಹಿಳೆಯರಿಗೆ ಅತಿಯಾದ ಹಾನಿಯನ್ನು ಉಂಟುಮಾಡುತ್ತವೆ.

ಕೊನೆಗೆ, ಸಮಾಜವಾಗಿ ನಾವು ಮಹಿಳೆಯರಿಂದ ಕೊನೆಮೊದಲು ಇಲ್ಲದ ಸಹನಶೀಲತೆಯನ್ನು ನಿರೀಕ್ಷಿಸುವುದನ್ನು ಮತ್ತು ಅದನ್ನೇ ಮಹಿಳಾ ಶಕ್ತಿ ಎಂದು ಕರೆಯುವುದನ್ನು ನಿಲ್ಲಿಸಬೇಕು. ಮಹಿಳೆಯಾಗಿ ಹುಟ್ಟಿದ ಮಾತ್ರಕ್ಕೆ ಅವರು ಸಹನಶೀಲತೆ ಎನ್ನುವ ಬೆಲೆ ತೆರುವಂತೆ ಆಗಬಾರದು. ತಪ್ಪಿತಸ್ಥ ಭಾವನೆ ಇಲ್ಲದೆ ವಿಶ್ರಾಂತಿ ಪಡೆಯಲು ಹಾಗೂ ಷರತ್ತುಗಳಿಲ್ಲದ ಗೌರವ ಪಡೆಯಲು ಮಹಿಳೆ ಅರ್ಹಳು. ಆರೋಗ್ಯಕರ ಕುಟುಂಬಗಳು ಮತ್ತು ಬಲಿಷ್ಠ ಸಮುದಾಯಗಳನ್ನು ನಾವು ಬಯಸುತ್ತಿದ್ದರೆ, ಎಲ್ಲರ ಬಗ್ಗೆಯೂ ಕಾಳಜಿ ವಹಿಸುವ ಮಹಿಳೆಯರ ಆರೈಕೆಯಿಂದಲೇ ಆ ಕಾರ್ಯವನ್ನು ಆರಂಭಿಸಬೇಕು.

ಲೇಖಕಿ: ಸಹ ಸಂಸ್ಥಾಪಕಿ, ಎಂ.ಡಿ, ಪೀಪಲ್ ಟ್ರೀ ಹಾಸ್ಪಿಟಲ್ಸ್
ಸಿಇಒ, ಮಾರ್ಗ ಮೈಂಡ್ ಕೇರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.