ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನ ಪ್ರೀತಿ, ಕಾಳಜಿಯಿಲ್ಲದೆ ಕಂಗಾಲಾಗಿದ್ದೇನೆ...

ಏನಾದ್ರೂ ಕೇಳ್ಬೋದು
Last Updated 27 ಫೆಬ್ರುವರಿ 2020, 5:44 IST
ಅಕ್ಷರ ಗಾತ್ರ

* ನನಗೆ ಸಮೀಪ ದೃಷ್ಟಿದೋಷ ಇದೆ. ದೂರದ ವಸ್ತುಗಳು ಮಂದವಾಗಿ ಗೋಚರಿಸುತ್ತವೆ. ಕನ್ನಡಕ ಬಳಸುತ್ತೇನೆ. ಹೀಗಾಗಿ ಇತರರಂತೆ ನನಗೆ ಮುಕ್ತವಾಗಿ ಜೀವನೋತ್ಸಾಹದಿಂದ ಬದುಕಲು ಆಗುತ್ತಿಲ್ಲ. ಮುಂಜಾನೆ ಕಣ್ಣು ತೆರೆದ ತಕ್ಷಣ ಸಮಸ್ಯೆ ಆರಂಭ. ಜೀವನ ಬೇಸರವಾಗಿದೆ. ಇನ್ನು ಮದುವೆ ಆಗಬೇಕಿದೆ. ಸಂಗಾತಿಗೆ ನನ್ನ ಸಮಸ್ಯೆ ಬೇಸರ ತರಬಹುದು. ಏನು ಮಾಡಲಿ?
–ಹೆಸರು, ಊರು ಇಲ್ಲ

ಉತ್ತರ:ನಿಮ್ಮ ಇಡೀ ವ್ಯಕ್ತಿತ್ವ ಕೇವಲ ದೃಷ್ಟಿದೋಷದಲ್ಲಿಯೇ ಇದೆ ಎಂದು ತಿಳಿದುಕೊಂಡಿದ್ದೀರಲ್ಲವೇ? ದೃಷ್ಟಿದೋಷದ ಹೊರತಾಗಿ ನಿಮಗೇ ಮೆಚ್ಚುಗೆಯಾಗುವ ಅಂಶಗಳು ನಿಮ್ಮಲ್ಲಿ ಏನೇನಿರಬಹುದು ಎಂದು ಪಟ್ಟಿಯನ್ನು ತಯಾರಿಸಿಕೊಳ್ಳಿ. ಅಂತಹ ಅಂಶಗಳನ್ನು ನಾನು ಉಳಿಸಿಕೊಳ್ಳುವುದು ಮತ್ತು ಬೆಳೆಸಿಕೊಳ್ಳುವುದು ಹೇಗೆ ಎಂದು ಯೋಚಿಸಿ. ನಿಮ್ಮ ದೃಷ್ಟಿದೋಷದಿಂದಾಗಿ ಯಾರೂ ನಿಮ್ಮನ್ನು ಕಡೆಗಣಿಸುತ್ತಿಲ್ಲ. ಆದರೆ ಅದಕ್ಕಾಗಿ ಕೊರಗುತ್ತಾ ನೀವೇ ಎಲ್ಲರಿಂದ ದೂರಹೋಗುತ್ತಿದ್ದೀರಿ.

ದೈಹಿಕವಾದ ದೃಷ್ಟಿದೋಷ ನಿಮ್ಮ ಮಿತಿಯಾಗಿರಬಹುದು. ಆದರೆ ಇದರಿಂದಾಗಿ ನಿಮ್ಮ ಬುದ್ಧಿ, ಮನಸ್ಸುಗಳಿಗೆ ಅಂಧಕಾರ ಕವಿಯಲು ಅವಕಾಶ ಮಾಡಿಕೊಟ್ಟಿದ್ದೀರಲ್ಲವೇ? ಇಂತಹ ಕತ್ತಲಿನಿಂದ ಹೊರಬರುವ ದಾರಿಗಳನ್ನು ಹುಡುಕಿ. ಸಮಸ್ಯೆ, ಬೇಸರಗಳು ತಾವಾಗಿಯೇ ಮಾಯವಾಗುತ್ತವೆ.

**
ವಯಸ್ಸು 28, ಉದ್ಯೋಗಿ. 6 ವರ್ಷಗಳಿಂದ ಹುಡುಗನೊಬ್ಬನ ಜೊತೆಗೆ ಪ್ರೀತಿಯಿತ್ತು. ಆದರೆ ಕಳೆದ ವರ್ಷದಿಂದ ಅವನು, ‘ಮನೆಯಲ್ಲಿ ಅಂತರ್ಜಾತೀಯ ವಿವಾಹಕ್ಕೆ ಒಪ್ಪಿಗೆಯಿಲ್ಲ, ನೀನು ಮನೆಯವರು ನೋಡಿದ ಹುಡುಗನನ್ನು ಮದುವೆಯಾಗು’ ಎಂದು ಹೇಳಿ ದೂರವಾಗಿದ್ದಾನೆ. ಅವನ ಪ್ರೀತಿ, ಕಾಳಜಿಯಿಲ್ಲದೆ ಕಂಗಾಲಾಗಿದ್ದೇನೆ. ಸಲಹೆ ನೀಡಿ.
–ಹೆಸರು, ಊರು ಇಲ್ಲ

ಉತ್ತರ: 6 ವರ್ಷಗಳ ಪ್ರೀತಿಯನ್ನು ಕಳೆದುಕೊಂಡು ತಿರಸ್ಕೃತ ಭಾವವನ್ನು ಅನುಭವಿಸುತ್ತಿದ್ದೀರಿ. ಜಾತಿಯ ವಿಷಯ ಗೊತ್ತಿದ್ದೂ ಪ್ರೀತಿಸಿದ ಹುಡುಗನಿಂದ ಮೋಸಹೋಗಿರುವ ಅನುಭವ ಆಳವಾದ ನೋವನ್ನು ನೀಡುವುದು ಸಹಜ. ಇಂಥವನಿಗಾಗಿ ನನ್ನ ಭಾವನೆಗಳನ್ನು, ಅಮೂಲ್ಯವಾದ ಸಮಯವನ್ನು ಕಳೆದುಕೊಂಡೆ ಎನ್ನುವ ನೋವು ಮನಸ್ಸನ್ನು ಮತ್ತೆಮತ್ತೆ ಅವನ ಕಡೆ ಸೆಳೆಯುತ್ತದೆ.

ಜಾತಿಗಾಗಿ ದೂರ ಹೋಗುವವನ ಪ್ರೀತಿ ಕೇವಲ ಪ್ರಾಮಾಣಿಕವಾಗಿರಲು ಸಾಧ್ಯವೇ? ನಿಮ್ಮ ಬದುಕಿನಲ್ಲಿ ಹೆಚ್ಚಿನ ಹಾನಿ ಮಾಡುವ ಮೊದಲೇ ಅವನು ದೂರ ಹೋಗಿದ್ದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದೇ ಅಲ್ಲವೇ? ಅವನ ಪ್ರೀತಿಗಾಗಿ ಹಂಬಲಿಸುತ್ತಾ ನೋವನ್ನು ಹೆಚ್ಚು ಮಾಡಿಕೊಳ್ಳುವ ಬದಲು ನಿಮ್ಮ ಗುರಿ, ಸಂತೋಷ, ಆಸಕ್ತಿಗಳತ್ತ ಗಮನಹರಿಸಿ. ನಿಮ್ಮನ್ನು ಹೃದಯಪೂರ್ವಕವಾಗಿ ಒಪ್ಪುವವರು ಮುಂದೆ ನಿಮಗಾಗಿ ಕಾದಿರುತ್ತಾರೆ.

**
ಸರ್ಕಾರಿ ನೌಕರ. ಹುಡುಗಿಯೊಬ್ಬಳನ್ನು 2 ವರ್ಷದಿಂದ ಪ್ರೀತಿಸುತ್ತಿದ್ದೇನೆ. ನಮ್ಮಿಬ್ಬರದೂ ಜಾತಿ ಬೇರೆ. ಮನೆಯಲ್ಲಿ ವಿಷಯ ಗೊತ್ತಾಗಿದೆ. ಮುಂದೆ ಹೇಗೆ ಎಂಬ ಯೋಚನೆ ಕಾಡುತ್ತಿದೆ. ಏನು ಮಾಡಬೇಕು?
–ಹೆಸರು, ಊರು ಇಲ್ಲ

ಉತ್ತರ:ನಿಮ್ಮ ಪ್ರೀತಿಯನ್ನು ಮನೆಯವರೆದುರು ಒಪ್ಪಿಕೊಂಡು ಹುಡುಗಿಯನ್ನು ವರಿಸಲು ಹಿಂಜರಿಯುತ್ತಿದ್ದೀರಲ್ಲವೇ? ಹಿಂಜರಿಕೆ ನಿಮ್ಮ ಬಗ್ಗೆ ಏನು ಹೇಳುತ್ತಿದೆ? ಮನೆಯವರಿಂದ ದೂರಾಗಿ ನೀನು ಸುಖವಾಗಿರಲಾರೆ, ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ, ಅವರ ಹೊರತಾಗಿ ನಿನ್ನ ಅಸ್ತಿತ್ವಕ್ಕೆ ಅರ್ಥವಿಲ್ಲ, ಅವರಿಂದ ದೂರಾಗಿ ಸಾಮಾಜಿಕ ಮನ್ನಣೆ ಕಳೆದುಕೊಳ್ಳುತ್ತೀಯಾ- ಹೀಗೆ ಎಲ್ಲವನ್ನೂ ಪಟ್ಟಿ ಮಾಡಿಕೊಳ್ಳಿ. ಒಂದೊಂದೇ ವಿಷಯದ ಸತ್ಯಾಸತ್ಯತೆಯನ್ನು ಸಮಾಧಾನದಲ್ಲಿ ಯೋಚಿಸಿ ನೋಡಿ. ಕೊನೆಗೆ ನಿಮಗೆ ಹೊಳೆಯುವುದೇನು ಗೊತ್ತೇ? ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬದುಕುವುದು ಎಂದರೆ ಎಲ್ಲರಿಂದಲೂ ದೂರವಾಗುವುದು ಎಂದು ತಪ್ಪು ತಿಳಿದುಕೊಂಡಿದ್ದೀರಿ. ಮೊದಲು ನಿಮ್ಮ ಆಯ್ಕೆಗಳನ್ನು ಮಾಡಿಕೊಳ್ಳಿ. ಜೊತೆಜೊತೆಗೆ ಮನೆಯವರೊಡನೆ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಪ್ರಾಮಾಣಿಕತೆ, ಒಳ್ಳೆಯತನ ನಿಧಾನವಾಗಿ ಸಂಬಂಧಗಳಿಗೆ ಹೊಸಜೀವ ಕೊಡುತ್ತದೆ.

**
ಎಂ.ಕಾಂ. ಪದವೀಧರನಾಗಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅಕ್ಕನ ಮಗ ತನಗಿಂತ 8 ವರ್ಷ ದೊಡ್ಡವಳನ್ನು ಮದುವೆಯಾಗುವುದಾಗಿ ಹೇಳುತ್ತಿದ್ದಾನೆ. 3 ವರ್ಷದಿಂದ ಪ್ರೀತಿಸುತ್ತಿದ್ದಾನಂತೆ. ಮನೆಯವರೆಲ್ಲರೂ ಪರಿಪರಿಯಾಗಿ ಹೇಳಿದರೂ ಕೇಳುತ್ತಿಲ್ಲ. ಎಲ್ಲರಿಗೂ ಆತಂಕವಾಗಿದೆ. ಈ ಸಮಸ್ಯೆಗೆ ಪರಿಹಾರ ಹೇಗೆ?
–ಹೆಸರು, ಊರು ಇಲ್ಲ

ಉತ್ತರ:ವಿವಾಹವಾಗುವ ಗಂಡಿನ ವಯಸ್ಸು ಹೆಣ್ಣಿನ ವಯಸ್ಸಿಗಿಂತ ಹೆಚ್ಚಿರಬೇಕು ಎನ್ನುವುದು ಸಾಮಾಜಿಕ, ಧಾರ್ಮಿಕ ನಂಬಿಕೆಗಳಿಂದ ಬಂದಿರುವುದು. ಪ್ರಾಣಿಗಳಲ್ಲಿ ಇಂತಹ ನಿಯಮವೇನಿಲ್ಲ. ಇದರ ಅರ್ಥ ಈ ನಂಬಿಕೆಗೆ ವೈಜ್ಞಾನಿಕ ತಳಹದಿಯಿಲ್ಲ. ಇಂತಹ ಸಾಂಸ್ಕೃತಿಕ ನಂಬಿಕೆಗಳನ್ನು ಮೀರುವುದು ನಿಮಗೆ ಆತಂಕವನ್ನು ಹುಟ್ಟಿಸುತ್ತಿದೆ. ಅಣ್ಣನ ಮಗ ಪ್ರೀತಿಸಿದವಳನ್ನು ಮದುವೆಯಾಗದಿದ್ದರೆ ನಿಮ್ಮೆಲ್ಲರ ಆತಂಕ ದೂರವಾಗುತ್ತದೆ. ಇದು ಹೇಗೆ ಸಾಧ್ಯ? ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಪ್ರೌಢನಾಗಿದ್ದು ಆರ್ಥಿಕವಾಗಿ ಸ್ವತಂತ್ರನಾಗಿರುವ ಹುಡುಗನನ್ನು ಮನೆಯವರು ಗೌರವಿಸಬೇಕಲ್ಲವೇ? ನಿರ್ಧಾರವನ್ನು ಬದಲಾಯಿಸುವಂತೆ ಒತ್ತಡವನ್ನು ಹೇರಿದರೆ ಅವನ ಸ್ವಾತಂತ್ರ್ಯವನ್ನು ಅವಮಾನಿಸಿದಂತಲ್ಲವೇ? ಇದರಿಂದ ನಿಮ್ಮೆಲ್ಲರ ಸಂಬಂಧ ಹದಗೆಡಬಹುದಲ್ಲವೇ? ಇದಕ್ಕೆ ಬದಲಾಗಿ ನಿಮ್ಮ ಆತಂಕಗಳನ್ನು ಅವನೆದುರು ಹೇಳಿಕೊಂಡು, ಪೂರ್ಣ ಮನಸ್ಸಿನಿಂದ ನಿರ್ಧಾರದ ಸ್ವಾತಂತ್ರ್ಯವನ್ನು ಅವನಿಗೆ ಕೊಟ್ಟು, ಸಂಬಂಧದ ಆತ್ಮೀಯತೆಯನ್ನು ಉಳಿಸಿಕೊಂಡರೆ ಹೇಗಿರುತ್ತದೆ?

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT