ನೋಯಿಸುವಿರೇಕೆ?

7

ನೋಯಿಸುವಿರೇಕೆ?

Published:
Updated:

ಗೋಧೂಳಿಯ ಸಮಯವಿರಬಹುದು. ನಾನು ಇನ್ನೂ ಬ್ಯಾಂಕಿನಲ್ಲೇ ಇದ್ದೆ. ನನ್ನ ಫೋನು ಮೆಲುದನಿಯಲ್ಲಿ ಒಂದೇ ಸಮನೆ ಹಾಡತೊಡಗಿತು. ಕೈತುಂಬ ಕೆಲಸ. ಎದುರಿನಲ್ಲಿ ಕುಳಿತಿದ್ದ ಗ್ರಾಹಕರು ‘ಅರ್ಜೆಂಟ್ ಕೆಲ್ಸ ಇದೆ’ ಎಂದು ಮುಕ್ಕಾಲು ಮುಚ್ಚಿದ್ದ ಬ್ಯಾಂಕಿನ ಬಾಗಿಲನ್ನು ತೆಗೆಸಿ ಬಂದು ನನ್ನ ಮುಂದೆ ಕೂತಿದ್ದರು. ಕರೆ ಸ್ವೀಕರಿಸಬೇಕೋ ಬೇಡವೋ ಎಂಬ ಜಿಜ್ಞಾಸೆ. ಅದು ಅಪರಿಚಿತ ಕರೆ. ಎರಡು, ಮೂರು ಬಾರಿ ಕರೆ ಬಂದಮೇಲೆ ತೆಗೆದುಕೊಂಡೆ. ಆ ಕಡೆಯಿಂದ ನನ್ನ ಗೆಳತಿಯ ಗಂಡ ‘ನಿಮ್ ಸ್ನೇಹಿತೆ ರೂಮಿನ ಬಾಗಿಲು ಹಾಕಿಕೊಂಡುಬಿಟ್ಟಿದ್ದಾರೆ. ಎಷ್ಟು ಬಡಿದರೂ ತೆಗೆಯುತ್ತಿಲ್ಲ. ಪ್ಲೀಸ್ ನಿಮ್ಗೆ ಗೊತ್ತಿರೋ ಪೊಲೀಸ್‌ಗೆ ಹೇಳಿ. ನಂಗ್ಯಾಕೋ ಭಯ ಆಗ್ತಿದೆ’ ಎಂದು ಗಾಬರಿಯ ದನಿಯಲ್ಲಿ ಹೇಳಿದರು. ಆಗಲೇ ನನಗೆ ಸಂದರ್ಭದ ಗಾಂಭಿರ್ಯತೆ ಗೊತ್ತಾದದ್ದು. ಬಹುಶಃ ನನ್ನ ಗೆಳತಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂಬ ಸುಳಿವು ಅವರ ಧ್ವನಿಯಲ್ಲಿ ತೋರುತ್ತಿತ್ತು. ಹಲವು ವರ್ಷಗಳಿಂದ ಗಂಡನ ಕಿರುಕುಳ ತಾಳಲಾರದೆ ಎಷ್ಟೋ ಬಾರಿ ವಿಚ್ಛೇದನ ಪಡೆಯಬೇಕೆಂದುಕೊಂಡರು, ಮಹಿಳಾ ಸಹಾಯವಾಣಿಗೆ ದೂರು ಕೊಡೋಣವೆಂದುಕೊಂಡರೂ ‘ಮಕ್ಕಳ ಭವಿಷ್ಯ’ ಎಂದು ಹೊಡೆತ, ಒದೆತ, ಬೈಗುಳಗಳನ್ನು ತಡೆದುಕೊಂಡಿದ್ದಳು.

ಅವಳಿಗೆ ಆಗಾಗ ಸಮಾಧಾನ, ಸಾಂತ್ವನ, ಧೈರ್ಯ ತುಂಬುವ – ಕೌನ್ಸಿಲಿಂಗ್‌ನ ಕೆಲಸ ನನ್ನದಾಗಿತ್ತು.
ಮೊನ್ನೆಯಷ್ಟೆ ರಾತ್ರಿ ಆಕೆ ಫೋನ್‌ ಮಾಡಿ ‘ಮೇಡಂ, ಅವ್ನು ಮೇರೆ ಮೀರಿದ್ದಾನೆ. ನಂಗಿನ್ನು ತಡ್ಕೊಳ್ಳೋಕೆ ಆಗಲ್ಲ; ಇಷ್ಟು ದಿನ ನನ್ನ ಮೂಳೆ ಮುರಿಯುವ ಹಾಗೆ ಹೊಡೆಯುತ್ತಿದ್ದ; ವರ್ಷಗಟ್ಟಲೇ ಕುಂಟುತ್ತ ನಡೆದಿದ್ದೇನೆ ನೋವಿಗೆ, ಆದರೂ ಸಹಿಸಿಕೊಂಡೆ. ಹೆತ್ತ ಅಪ್ಪ–ಅಮ್ಮನ ಮನೆಗೆ ಹತ್ತು ವರ್ಷಗಳಿಂದ ಕಳ್ಸಿಲ್ಲ; ಅದನ್ನೂ ತಡೆದುಕೊಂಡೆ. ನಿನ್ನೆ ನನ್ನ ಶೀಲದ ಬಗ್ಗೆ ಮಾತನಾಡಿದ. ಅವನಿಗೂ ಗೊತ್ತು ನನ್ನ ಬಗ್ಗೆ; ಆದರೂ, ಆ ರೀತಿ ಮಾತಾಡಿದರೆ ನಂಗೆ ನೋವಾಗುತ್ತೆ ಅಂತ ಬೇಕೂಂತಲೇ ಏನೇನೋ ಹೇಳಿದ್ದ. ಹೇಗೆ ತಡ್ಕೊಳ್ಲಿ ಮೇಡಂ. ನಿಮಗೆ ಗೊತ್ತಿರೋ ಪೊಲೀಸ್‌ನವರನ್ನು ಮನೆಗೆ ಕಳಿಸಿ. ಕಂಪ್ಲೇಂಟ್ ಬೇಡ, ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗುತ್ತೆ. ಸ್ವಲ್ಪನಾದ್ರೂ ಭಯ ಬರ್ಲಿ. ಪ್ಲೀಸ್ ಪೊಲೀಸಿನವರ ನಂಬರ್ ಕಳ್ಸಿ.’ ಇದೇ ಕೊನೆಯ ಮಾತು ನನ್ನೊಂದಿಗೆ ಆಕೆಯದು.

‘ಹೆಣ್ಣಿನ ಸಾವು’ ‘ನವವಿವಾಹಿತೆಯ ಆತ್ಮಹತ್ಯೆ-ಕೊಲೆ ಶಂಕೆ’ ‘ಗೃಹಿಣಿಯ ನಿಗೂಢ ಸಾವು’ ‘ಅಪ್ರಾಪ್ತೆಯ ಮೇಲೆ ಅತ್ಯಾಚಾರ’ ಎಂಬೆಲ್ಲ ತಲೆಬರಹಗಳನ್ನು ನೋಡಿದಾಗ ಅದೇಕೋ ಮನ ತೊಯ್ದ ಹಕ್ಕಿಯಂತೆ ಮುದುರಿ ಮೌನವಾಗುತ್ತದೆ. ಕಣ್ಣು ಉಪ್ಪಿನ ಕಡಲಾಗುತ್ತದೆ.

ಹೆಣ್ಣು ಅತೀವವಾಗಿ ಕುಗ್ಗುವುದು ದೈಹಿಕ ಹಿಂಸೆಗೋ ಮಾನಸಿಕ ಹಿಂಸೆಗೋ ಎಂಬ ಜಿಜ್ಞಾಸೆ ನನ್ನನ್ನು ಯಾವಾಗಲೂ ಕಾಡುತ್ತದೆ.

ದೈಹಿಕವಾಗಿ ಗಂಡಿಗಿಂತ ಹೆಣ್ಣು ಅಬಲೆ ಎನ್ನುವುದನ್ನು ಒಪ್ಪಬೇಕಾದದ್ದೇ. ಆದರೆ ಆಕೆಯ ಮನಃಸ್ಥೈರ್ಯ ಗಂಡಿಗೂ ಅಚ್ಚರಿ ಮೂಡಿಸುವಂಥದ್ದು. ಗಂಡನಿಲ್ಲದಿದ್ದರೂ ಹೆಂಡತಿ ಇಡೀ ಮನೆ ಹಾಗೂ ಕುಟುಂಬವನ್ನು ನಿಭಾಯಿಸುತ್ತಾಳೆ, ನಿರ್ವಹಿಸುತ್ತಾಳೆ. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಅನೇಕ ಹೆಣ್ಣುಮಕ್ಕಳು ತಮ್ಮ ಮಕ್ಕಳನ್ನು ಓದಿಸಿ, ಸಂಸ್ಕಾರ ಕೊಟ್ಟು ನೆಲೆಯೂರಿಸಿದ್ದಾರೆ. ಅದೇ ಚಿಕ್ಕವಯಸ್ಸಿನ ಗಂಡು, ಪತ್ನಿ ಸತ್ತ ಒಂದು ವರ್ಷಕ್ಕೆಲ್ಲ ಮನೆ, ಮಕ್ಕಳ ಜವಾಬ್ದಾರಿ ನಿರ್ವಹಿಸಲಾರದೆ ಮತ್ತೊಂದು ಮದುವೆ ಮಾಡಿಕೊಳ್ಳುತ್ತಾನೆ. ಅಲ್ಲಿಯ ತನಕ ಅವನ ತಾಯಿಯೋ ತಂಗಿಯೋ ಮನೆಯ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಮಧ್ಯವಯಸ್ಕ ಅಥವಾ ವಯಸ್ಸಾದ ಗಂಡಸಾದರೆ, ಸತಿ ಸತ್ತ ತಿಂಗಳೊಳಗೆ ಮಕ್ಕಳ ಮನೆ ಸೇರಿಕೊಳ್ಳುತ್ತಾನೆ. ಇದಕ್ಕೆ ಕಾರಣ ಹೆಣ್ಣಿನ ಸಹನೆ, ತಾಳ್ಮೆ, ಧೈರ್ಯ ಮತ್ತು ಆತ್ಮವಿಶ್ವಾಸ.

ಹೊಸಮದುಮಗಳ ತಂದೆ-ತಾಯಿಯರನ್ನು ತಮಗಿಂತ ಬಡವರೆಂದು ಸೊಸೆಯ ಮುಂದೆಯೇ ಹೀಯಾಳಿಸುವುದು, ವರದಕ್ಷಿಣೆ ತರುವಂತೆ ಪೀಡಿಸುವುದು, ತಮಗಿಂತ ಅಂತಸ್ತು, ಅಧಿಕಾರದಲ್ಲಿ ಕಡಿಮೆಯೆಂದು ಹಂಗಿಸುವುದು, ‘ನಿನಗೇನು ಗೊತ್ತು ಇವೆಲ್ಲ? ನಿಮ್ಮಪ್ಪಮ್ಮ ಕಲಿಸಿದ್ದರೆ ತಾನೇ? ನಿಮ್ಮ ತವರು ಮನೆಯ ಜೀನ್ಸ್‌ ತಾನೇ ನಿಂಗೂ ಅದಕ್ಕೇ ಹೀಗಾಡೋದು’ ಎನ್ನುವ ಅವಮಾನದ ಮಾತುಗಳು ಒಂದು ಹಂತಕ್ಕೆ ಮನವನ್ನು ನೋಯಿಸಿ ತೃಪ್ತಿಪಡುವ ಜನರು. ಆಗೆಲ್ಲ ಕುಟುಂಬದ ಒಬ್ಬರಾದರೂ ಸಹಾನುಭೂತಿ ತೋರಿದರೆ ಯುದ್ಧವನ್ನು ಅರ್ಧ ಗೆದ್ದಂತೆ. ಪತಿಯೇನಾದರೂ ಬೆನ್ನಿಗೆ ನಿಂತರೆ ಬೇರೆಲ್ಲವನ್ನೂ ಗೆಲ್ಲಬಹುದು. ಆದರೆ ಇದು ಬಹುಪಾಲು ನಿರೀಕ್ಷೆ ಮಾತ್ರ. ‘ನನಗಿಂತ ನೀನು ಕಪ್ಪು, ಕುಳ್ಳು, ಓದಿನಲ್ಲಿ ಕಡಿಮೆ, ಸಂಬಳ ಕಡಿಮೆ’ ಎಂದು ಪತ್ನಿಯನ್ನು ಪತಿಯೇ ಚುಚ್ಚುತ್ತಾನೆ. ಹೆಂಡತಿ ಮಾಡಿದ್ದೆಲ್ಲವೂ ತಪ್ಪು, ನನ್ನ ಮಾತೇ ನಡೆಯಬೇಕು; ನಾನೇ ಸರಿ, ಆಕೆ ಕೂತದ್ದೂ ತಪ್ಪು; ನಿಂತದ್ದೂ ತಪ್ಪು ಎನ್ನುವ ಪುರುಷಶ್ರೇಷ್ಠತೆಯ ಮನೋಭಾವವುಳ್ಳ ಗಂಡ ಸಿಕ್ಕರೆ ನರಕವನ್ನು ಮನೆಯಲ್ಲೇ ನೋಡಬಹುದು.

ಹೆಚ್ಚು ನೋವಿನ ಸಂಗತಿ ಯಾವುದು ಗೊತ್ತೆ? ಹೆಣ್ಣುಮಕ್ಕಳ ಆತ್ಮಸ್ಥೈರ್ಯವನ್ನು ಉಡುಗಿಸಿಬಿಡುವ ಒಂದೇ ಕ್ರಮ ಎಂದರೆ ಅವಳ ಶೀಲಶಂಕಿಸುವುದು. ಭಾರತದ ಸಂಸ್ಕೃತಿಯಲ್ಲಿ ಹೆಣ್ಣಿನ ಶೀಲಕ್ಕೆ ಬಹಳ ಪಾವಿತ್ರ್ಯದ ಸ್ಥಾನವಿದೆ. ಅಕ್ರಮಸಂಬಂಧವನ್ನು ಧರ್ಮ ಎಂದಿಗೂ ಒಪ್ಪುವುದಿಲ್ಲ. ಅಂತಹವರನ್ನು ಸಾಮಾಜಿಕವಾಗಿ ಬಹಿಷ್ಕರಿಸುವ ಮನಃಸ್ಥಿತಿಯ ದೇಶವಿದು. ಹಾಗಾಗಿ ಅನುಮಾನದಂತಹ ಅವಮಾನ ಹೆಣ್ಣಿಗೆ ಮತ್ತೂಂದಿಲ್ಲ. ಅದನ್ನೇ ಅಸ್ತ್ರವಾಗಿಸಿಕೊಂಡು ನೋಯಿಸಿ ಸಂತೋಷಪಡುವ ಮನೋವಿಕಾರಿಗಳು ಅನೇಕರು.

ಕಾರ್ಯಬಾಹುಳ್ಯದ ಒತ್ತಡದಿಂದ ಮನೆಗಳಲ್ಲಿ ಒರಟುಮಾತುಗಳು ರಾರಾಜಿಸುವುದು ಸಾಮಾನ್ಯ. ಅವೆಲ್ಲ ಉದ್ದೇಶಪೂರ್ವಕವಲ್ಲ. ಸಂದರ್ಭಾನುಸಾರವಾದ ಅವುಗಳ ಆಯುಷ್ಯ ಕಡಿಮೆ. ಕೆಲವರು ಉದ್ದೇಶಪೂರ್ವಕವಾಗಿ ನೋಯಿಸಿದರೆ, ಕೆಲವರು ಆಕಸ್ಮಿಕವಾಗಿ ನೋಯಿಸುತ್ತಾರೆ. ಆದರೆ ಯಾವುದು ಉದ್ದೇಶಪೂರ್ವಕ, ಯಾವುದು ಆಕಸ್ಮಿಕ ಎಂದು ಗುರುತಿಸುವ ಶಕ್ತಿಯನ್ನು ಯಾರೂ ಕಳೆದುಕೊಳ್ಳಬಾರದು. ಆಕಸ್ಮಿಕವಾದುದ್ದಕ್ಕೆ ಕ್ಷಮೆಯಿದ್ದೇ ಇದೆ. ಹೆಣ್ಣನ್ನು ನೋಯಿಸುವುದು ಗಂಡು ಮಾತ್ರವೆಂದರೆ ತಪ್ಪಾಗುತ್ತದೆ; ಹೆಣ್ಣುಗಳೂ ಹೆಣ್ಣುಗಳನ್ನು ನೋಯಿಸುವುದು, ಹಿಂಸಿಸುವುದು, ಸಾಯಿಸುವುದು ಇದೆ; ತಾನೂ ಹೆಣ್ಣೆಂಬುದನ್ನೇ ಮರೆತು.

ನನ್ನ ಪರಿಚಯಸ್ಥರೊಬ್ಬರು ಹೇಳುತ್ತಿದ್ದರು: ‘ಸಾಕಪ್ಪಾ ಒಳಗಿನ, ಹೊರಗಿನ ದುಡಿಮೆ. ಆಫೀಸಿನ ಒತ್ತಡ ತಡಿಲಾರದೇ ಬ್ಲಡ್ ‍‍‍ಪ್ರೆಷರ್‌ ಜಾಸ್ತಿಯಾಗಿ ಕುಸಿದುಬಿಡುತ್ತೇನೋ ಅಂತ ಭಯ ಆಗುತ್ತೆ. ರಾಜೀನಾಮೆ ಕೊಟ್ಟು ಮನೆಗೆ ಬಂದುಬಿಡಬೇಕೆನಿಸುತ್ತದೆ. ಇನ್ನೂ ಜವಾಬ್ದಾರಿ ಮುಗಿದಿಲ್ಲ. ನಾಲ್ಕೈದು ವರ್ಷಗಳಾಗಲಿ. ನೋಡೋಣ. ಈಗೇನೋ ಮನೆಯಲ್ಲಿ ಇರುವ ಸಮಯದಲ್ಲಿ ಅಡುಗೆ ಮತ್ತು ಸುತ್ತು ಕೆಲಸದಲ್ಲಿ ಬ್ಯುಸಿಯಾಗಿರುತ್ತೇನೆ. ‘ಅವರು’ ಏನಾದರೂ ಅಂದರೆ ಕೆಲಸದ ಧಾವಂತದಲ್ಲಿ ಕೆಲವು ಸಲ ಕಿವಿಗೇ ಹಾಕಿಕೊಳ್ಳುವುದಿಲ್ಲ, ಇನ್ನು ಕೆಲವು ಸಲ ಆಫೀಸಿನಿಂದ ವಾಪಸ್ ಬರುವ ಹೊತ್ತಿಗೆ ಕೆಲಸದ ಭರಾಟೆಯಲ್ಲಿ ‘ಇವರು’ ಅಂದ ಮಾತೇ ಮರೆತುಹೋಗಿರುತ್ತೆ. ಹಾಗಾಗಿ ಹೆಚ್ಚಿನ ಜಗಳ–ಕದನಕ್ಕೆ ಆಸ್ಪದವೇ ಇಲ್ಲ. ಆದರೆ ಪೂರ್ಣಾವಧಿಗೆ ಮನೆಗೆ ಬಂದಮೇಲೆ ನಿವೃತ್ತಿ ತೆಗೆದುಕೊಂಡು ಮನೆಯಲ್ಲಿರುವ ‘ಅವರ’ ಒಂದೊಂದು ಕುಟುಕು ಮಾತೂ ನನ್ನೊಳಗೆ ಸದಾ ಗುಟುಕು ಗುಟುಕಾಗಿ ಎದೆಯ ಕುಟುಕುತ್ತಿದ್ದರೆ ಬದುಕು ದುರ್ಭರವಾಗುತ್ತೇನೋ? ಕೊನೆ ಪಕ್ಷ ಹೊರಗೆ ದುಡಿದು ಹೈರಾಣಾಗಿರುತ್ತೇನೆ ಎಂದೋ ಏನೋ ಬಹಳ ಸಾರಿ ಸಂಜೆ ತಲೆ ಸವರಿ ಉತ್ಸಾಹ ತುಂಬುವ ಇವರು ನಾ ಮನೆಯಲ್ಲೇ ಇರುವೆನೆಂದಾದರೆ ಹೇಗೆ ಬದಲಾಗುತ್ತಾರೋ ಎಂಭ ಭಯ. ಮನೆಯಲ್ಲಿ ಮನಃಶಾಂತಿ ಕಳೆದುಕೊಂಡು ಹುಚ್ಚಿಯಾಗುವುದಕ್ಕಿಂತ, ಆಫೀಸಿನ ದುಡಿತದಲ್ಲಿ ಕುಸಿಯುವುದೇ ವಾಸಿಯೇನೋ’... ಹತ್ತಿರವಿದ್ದಷ್ಟೂ ಸರಸವೂ ಹೆಚ್ಚು, ವಿರಸವೂ ಹೆಚ್ಚು.‌

ಇಂತಹ ಇಬ್ಬದಿಯ ಬದುಕು ಹಲವು ಹೆಣ್ಣುಮಕ್ಕಳದ್ದು. ಕೆಲಸದ ತಾವಿನಲ್ಲಿ ನೋವಾದರೆ ಮನೆ ಅದಕ್ಕೆ ಮುಲಾಮಾಗಬೇಕು, ಮನೆಯಲ್ಲಿ ನೋವುಂಟಾದರೆ ಕೆಲಸದ ಸ್ಥಳದಲ್ಲಿ ನೋವು ಮರೆಸುವ ಸ್ನೇಹದ ಮಾತ್ರೆ ದೊರೆಯಬೇಕು. ಎರಡೂ ಕಡೆಗಳಲ್ಲಿ ನೋವೇ ಊಟವಾದರೆ ಜೀರ್ಣವಾಗುವ ಬಗೆ ಹೇಗೆ?

ನೋಯಿಸುವ ತಂತ್ರಗಾರಿಕೆಯಿಂದ ತಮ್ಮ ಅಹಮಿಕೆಯನ್ನು ಸಂತೃಪ್ತಿಪಡಿಸಿಕೊಳ್ಳುವ ಜನರನ್ನು ನೋಡಿ, ಅನುಭವಿಸಿ, ಕಪ್ಪೆಚಿಪ್ಪಿನ ಗೂಡಿನೊಳಗೆ ಅವಿತು, ಈ ಪ್ರಪಂಚದ ಗೊಡವೆಯೇ ಬೇಡ ಎಂದುಕೊಳ್ಳುವ ಹೆಣ್ಣುಮಕ್ಕಳೇ ಮತ್ತೆ ಚಿಪ್ಪಿನಿಂದ ಆಗಾಗ ಹೊರ ಇಣುಕಿ ಸುತ್ತಲಿನ ಸೌಂದರ್ಯವನ್ನು ಸವಿದು, ಅದೇಕೆ ಇಷ್ಟು ದಿನ ಚಿಪ್ಪಿನೊಳಗೆ ಅವಿತಿದ್ದೆ ಎಂದೂ ಅಚ್ಚರಿಗೊಂಡು ಕಡಲಿನ ನೀಲಿಯಲ್ಲಿ ಒಂದಾಗಿ ಈಜುತ್ತ ಮತ್ತೆ ಇತರ ಜಲಚರಗಳು ಮುಳ್ಳುಗಳಿಂದ ಚುಚ್ಚಿದಾಗ ನೋವು ತಾಳಲಾರದೆ ಮತ್ತೆ ಚಿಪ್ಪಿನೊಳಗೆ ಅಡಗುತ್ತಾರೆ.

*

–ಶುಭಶ್ರೀ ಪ್ರಸಾದ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !