ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ಗರ್ಭ ತೊಡಕುಗಳೇನು?

Last Updated 10 ಜುಲೈ 2020, 19:30 IST
ಅಕ್ಷರ ಗಾತ್ರ

ಸವಿತಾಳಿಗೆ 8 ವರ್ಷದ ಮಗನಿದ್ದು, ಇನ್ನೊಂದು ಮಗುವಾಗಲಿ ಎಂದು ಪ್ರಯತ್ನಿಸಿ ಗರ್ಭ ನಿಂತಾಗ ವೈದ್ಯರು ಹೇಳಿದ್ದು ಅವಳಿ ಗರ್ಭ ಬೆಳೆಯುತ್ತಿದೆ ಎಂದು. ಖುಷಿ ಎನಿಸಿದರೂ ಇಬ್ಬರು ಮಕ್ಕಳನ್ನು ಹೇಗೆ ಸಂಭಾಳಿಸಬೇಕಪ್ಪ ಎನ್ನುವ ಆತಂಕ.

ಮಾನವನ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಉಂಟಾಗುವ ಸ್ವಾರಸ್ಯಕರ, ಕುತೂಹಲ ಮೂಡಿಸುವ ಜೈವಿಕ ಘಟನೆ ಎಂದರೆ ಅವಳಿ ಅಥವಾ ಬಹುಮಕ್ಕಳ ಜನನ. ಒಂದೇ ಪ್ರಸವದಲ್ಲಿ ಕೇವಲ ಅವಳಿಗಳು ಮಾತ್ರವಲ್ಲ ತ್ರಿವಳಿ, ನಾಲ್ಕು ಮಕ್ಕಳು, 5 ಮಕ್ಕಳು ಹಾಗೂ ಕೆಲವೊಮ್ಮೆ 8 ಮಕ್ಕಳಿಗೆ ಜನ್ಮ ನೀಡಿದ ಉದಾಹರಣೆಗಳು ಆಗಾಗ ಸಿಗುತ್ತವೆ.

ಅವಳಿ ಮಕ್ಕಳಲ್ಲಿ ಎರಡು ವಿಧ - ತದ್ರೂಪಿ ಅವಳಿಗಳು (ಯೂನಿಓವ್ಯೂಲರ್) ಮತ್ತು ಭ್ರಾತೃ ಅವಳಿಗಳು (ಬೈನ್ನೋವ್ಯೂಲರ್). ತದ್ರೂಪಿ ಅವಳಿಯಲ್ಲಿ ಒಂದೇ ಅಂಡಾಣು ಹಾಗೂ ವೀರ್ಯಾಣು ಫಲಿತವಾಗಿ ಭ್ರೂಣ ಕೆಲವು ಸಲ ವಿಭಜನೆಯಾಗಿ ಅವಳಿ ಅಥವಾ ಹೆಚ್ಚು ಗರ್ಭಧಾರಣೆಯಾಗುವುದು. ಇವು ಒಂದೇ ತರಹ ಲಿಂಗ, ರಕ್ತದಗುಂಪು, ಗುಣವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಭ್ರಾತೃ ಅವಳಿಗಳಲ್ಲಿ ಎರಡು ಪ್ರತ್ಯೇಕ ಅಂಡಾಣುಗಳು ಪ್ರತ್ಯೇಕ ವೀರ್ಯಾಣುಗಳೊಡನೆ ಫಲಿತವಾಗಿ ಆಗುವುದು. ಮಕ್ಕಳು ಒಂದೇ ಲಿಂಗ ಅಥವಾ ಬೇರೆ ಲಿಂಗದವರು, ಬೇರೆಬೇರೆ ರಕ್ತಗುಂಪು, ಸ್ವಭಾವ, ಅಭಿರುಚಿ, ಮಾಸು(ಪ್ಲಾಸೆಂಟಾ) ಕೂಡ ಬೇರೆ ಇರಬಹುದು.

ಬಹು ಸಂಖ್ಯೆಯ ಗರ್ಭಧಾರಣೆಗೆ ಕಾರಣಗಳೇನು?
ಇದು ಆಫ್ರಿಕಾ ಜನಾಂಗದವರಲ್ಲಿ (ನೈಜೀರಿಯಾ) ಹೆಚ್ಚು. ಅನುವಂಶೀಯತೆಯೂ ಕೂಡ ಬಹುಮಕ್ಕಳಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮಹಿಳೆಯ ತಾಯಿಯ ಕುಟುಂಬದಲ್ಲಿ ಬಹುಸಂಖ್ಯೆಯ ಗರ್ಭಧಾರಣೆ ಈ ಮೊದಲಾಗಿದ್ದರೆ ಅಂತಹವರಲ್ಲಿ ಈ ಸಾಧ್ಯತೆ ಹೆಚ್ಚು. 35 ವರ್ಷದ ನಂತರ ಗರ್ಭಧಾರಣೆಯಾದಾಗ, 4ಕ್ಕಿಂತ ಹೆಚ್ಚು ಮಕ್ಕಳಾದವರಲ್ಲಿ ಇವು ಹೆಚ್ಚು.

ಇತ್ತೀಚೆಗೆ ಈ ಅವಳಿ/ ಬಹುಸಂಖ್ಯೆಯ ಗರ್ಭಧಾರಣೆ ಹೆಚ್ಚುತ್ತಿದೆ. ಆಧುನಿಕ ಜೀವನದ ಶೈಲಿಯ ಕೊಡುಗೆಯಾಗಿ ಹೆಚ್ಚುತ್ತಿರುವ ಪಿ.ಸಿ.ಒ.ಡಿ (ಪಾಲಿಸಿಸ್ಟಿಕ್ ಒವೆರಿಯನ್ ಡಿಸೀಸ್) ಅಂತಹ ಸಮಸ್ಯೆಗಳಿಂದ ಬಂಜೆತನ ಹೆಚ್ಚುತ್ತಿದೆ. ಇದರ ಚಿಕಿತ್ಸೆಗಾಗಿ ಬಳಸುವ ಔಷಧಿಗಳಿಂದ ಒಂದಕ್ಕಿಂತ ಹೆಚ್ಚು ಅಂಡಾಣುಗಳು ಒಂದೇ ಋತುಚಕ್ರದಲ್ಲಿ ಉತ್ಪತ್ತಿಯಾಗಿ ಅವು ಗರ್ಭಧಾರಣೆಯಾಗಿ ಬಹುಸಂಖ್ಯಾ ಗರ್ಭಧಾರಣೆ ಹೆಚ್ಚುತ್ತಿವೆ. ಐ.ವಿ.ಎಫ್ ತಂತ್ರಜ್ಞಾನ (ಪ್ರನಾಳಶಿಶು)ದಂತಹ ಹೊಸ ವಿಧಾನಗಳಲ್ಲಿ ಒಂದಕ್ಕಿಂತ ಹೆಚ್ಚು ಸಂಖ್ಯೆಯ ಅಂಡಾಣುಗಳ ಉತ್ಪಾದನೆ ಮಾಡುವ ಔಷಧಿಗಳನ್ನು ಕೊಟ್ಟು ಅವುಗಳಲ್ಲಿ ಕೆಲವನ್ನು ಗರ್ಭಕಟ್ಟಿಸಿ ಗರ್ಭಾಶಯದಲ್ಲಿ ನೆಲೆಗೊಳಿಸುತ್ತಾರೆ. ಇದರಿಂದಲೂ ಬಹುಸಂಖ್ಯೆಯ ಗರ್ಭಧಾರಣೆಯಾಗುತ್ತದೆ (ಶೇ 8ರಷ್ಟು). ಸಂತಾನ ನಿರೋಧಕ ಮಾತ್ರೆ ಸೇವಿಸಿ ನಿಲ್ಲಿಸಿದ ಋತುಚಕ್ರದಲ್ಲಿಯೇ ಗರ್ಭ ಧರಿಸಿದಾಗಲೂ ಬಹುಸಂಖ್ಯೆಯ ಗರ್ಭಧಾರಣೆ ಹೆಚ್ಚು.

ಇಂತಹ ಗರ್ಭದಿಂದ ತೊಡಕುಗಳಾಗುತ್ತವೆಯೇ?

ಪ್ರಸವಕ್ಕೂ ಮುಂಚಿನ ತೊಂದರೆಗಳು:
ಹೆಚ್ಚಿನವರಿಗೆ ಮಾಮೂಲಿ ಗರ್ಭಧಾರಣೆಗಿಂತ ವಾಕರಿಕೆ, ವಾಂತಿ ಹೆಚ್ಚಿರುತ್ತದೆ. ದೇಹತೂಕವೂ ಹೆಚ್ಚುತ್ತದೆ ಮತ್ತು ಗರ್ಭಾಶಯವು ದೊಡ್ಡದಾಗಿ ಬೆಳೆಯುವುದರಿಂದ ಹೊಟ್ಟೆಯ ಅಳತೆ ಹೆಚ್ಚುತ್ತದೆ. ಬಳಲಿಕೆ, ಆಲಸ್ಯಗಳು ಮತ್ತು ಹಸಿವು ಕೂಡ ಮೊದಲ ಮೂರು ತಿಂಗಳು ಹೆಚ್ಚಾಗಬಹುದು. ಉಬ್ಬುವ ಹೊಟ್ಟೆಯಿಂದ ಉಸಿರಾಡಲು ಕಷ್ಟವಾಗಬಹುದು, ಪಚನ ಕ್ರಿಯೆಯಲ್ಲಿ ಏರುಪೇರು, ಎದೆಉರಿ, ಹೆಚ್ಚು ಕಾಲು ಊತ, ಕಾಲುಗಳಲ್ಲಿ ಉಬ್ಬಿದ ಮಲಿನ ರಕ್ತನಾಳಗಳ (ವ್ಯಾರಿಕೋಸಿಟಿ) ಸೆಳೆತ ಹೆಚ್ಚಾಗುವುದು. ಮೂಲವ್ಯಾಧಿ ಸಮಸ್ಯೆಗಳು ಹೆಚ್ಚಬಹುದು. ರಕ್ತಹೀನತೆಯೂ ಹೆಚ್ಚಾಗುತ್ತದೆ.

ಅವಧಿಪೂರ್ವ ಅಥವಾ ಅಕಾಲಿಕ ಪ್ರಸವ: ಅರ್ಧಕ್ಕಿಂತ ಹೆಚ್ಚು ಅವಳಿ ಅಥವಾ ಬಹುಸಂಖ್ಯೆಯ ಗರ್ಭಗಳು ಅವಧಿಗೆ ಮುನ್ನವೇ ಜನಿಸಿ ತೀವ್ರನಿಗಾ ಘಟಕದ ಅಗತ್ಯ ಉಂಟಾಗಬಹುದು. ಗರ್ಭಜಲದ ಪ್ರಮಾಣವು ಗರ್ಭವಿಷಬಾಧೆಯ ಸಂಭವ, ಗರ್ಭಧಾರಣೆಯ ಮಧುಮೇಹದ ಸಂಭವ ಹಾಗೂ ಗರ್ಭಜಲದ (ಹೈಡ್ರಾಮ್ನಿಯೋಸ್) ಪ್ರಮಾಣ ಹೆಚ್ಚಾಗುವಿಕೆ, ಕಸ ಕೆಳಗಿರುವಿಕೆ, ಹೆರಿಗೆಗೂ ಮುನ್ನ ಕಸಬಿಟ್ಟುಕೊಳ್ಳುವ ಸಂಭವ ಹೆಚ್ಚಿರುತ್ತದೆ.

ಪ್ರಸವದಲ್ಲಾಗುವ ತೊಂದರೆಗಳು: ದೀರ್ಘಾವಧಿ ಹೆರಿಗೆ ನೋವು, ಮಕ್ಕಳು ಬೇರೆಬೇರೆ ಅಸಹಜ ಭಂಗಿಗಳಲ್ಲಿ ಇರುವುದರಿಂದ ಹೆಚ್ಚಾಗುವ ಸಿಝೇರಿಯನ್ ಹೆರಿಗೆ ಮತ್ತು ಪ್ರಸವದ ನಂತರ ರಕ್ತಸ್ರಾವ ಹೆಚ್ಚಾಗುತ್ತದೆ.

ಪ್ರಸವಾನಂತರದ ತೊಂದರೆಗಳು: ಎರಡು ಮಕ್ಕಳಿಗೆ ಸ್ತನ್ಯಪಾನ ಮಾಡಿಸಿ ಸಂಭಾಳಿಸಬೇಕಾದ ಮಾನಸಿಕ ಒತ್ತಡ, ಎದೆಹಾಲು ಸಾಕಾಗುವುದಿಲ್ಲವೆಂಬ ಆತಂಕ, ಖಿನ್ನತೆ, ನಿದ್ರಾಹೀನತೆ. ನವಜಾತ ಶಿಶುಗಳಲ್ಲಿ: ಅಕಾಲಿಕ ಜನನದಿಂದಾಗುವ ತೊಂದರೆಗಳು, ಹೆಚ್ಚು ಸೋಂಕಿಗೊಳಗಾಗುವ ಸಂಭವ ಮತ್ತು ಜನ್ಮಜಾಥ ವೈಕಲ್ಯಗಳು ಹೆಚ್ಚಿರುವ ಸಂಭವ ಎಲ್ಲವೂ ಕಂಡುಬಂದು ಮಕ್ಕಳ ಬೆಳವಣಿಗೆಯೂ ಕುಂಠಿತವಾಗಬಹುದು. ಒಂದನೇ ಮಗು ಹೊರಬಂದು, ಎರಡನೇ ಮಗುವಿಗೆ ಉಸಿರುಕಟ್ಟುವ ಸಂಭವವೂ ಉಂಟಾಗಬಹುದು.

ಮುಂಜಾಗ್ರತೆಗಳೇನು?
ಸಾಮಾನ್ಯವಾಗಿ ಉಂಟಾಗಬಹುದಾದ ರಕ್ತಹೀನತೆಯನ್ನು ಗಂಭೀರವಾಗಿಯೇ ಪರಿಗಣಿಸಿ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕ ಹಾಗೂ ಗುಣಮಟ್ಟದ (ನಾರಿನಾಂಶವುಳ್ಳ) ಆಹಾರಗಳನ್ನು ಸೇವಿಸಲು ತಿಳಿಸಬೇಕು ಮತ್ತು ಕಬ್ಬಿಣಾಂಶ, ಕ್ಯಾಲ್ಸಿಯಂ ಮಾತ್ರೆ, ಫೋಲಿಕ್ ಆಸಿಡ್ ಮಾತ್ರೆಗಳನ್ನು ನಿಯಮಿತವಾಗಿ ಕೊಡಬೇಕು.

ಅಕಾಲಿಕ ಹೆರಿಗೆ ತಪ್ಪಿಸಲು ಜಾಗರೂಕರಾಗಿದ್ದು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಅನವಶ್ಯಕ ಪ್ರಯಾಣ ಮಾಡಬಾರದು. ವೈದ್ಯರ ಸಲಹೆಯ ಮೇರೆಗೆ ಆಗಾಗ ಸ್ಕ್ಯಾನಿಂಗ್ ಮಾಡಿಸಿ.

(ಲೇಖಕಿ: ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ, ಭದ್ರಾವತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT