ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಂತರವೂ ಮಕ್ಕಳಾಗುವುದೇ?

Last Updated 25 ಮಾರ್ಚ್ 2022, 19:30 IST
ಅಕ್ಷರ ಗಾತ್ರ

1. ನನಗೆ 30 ವರ್ಷ. 8 ವರ್ಷದ ಮಗಳಿದ್ದಾಳೆ. ಮತ್ತೆ ಮಕ್ಕಳು ಬೇಡವೆಂದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದೆ. ಈಗ ಮಗು ಬೇಕು ಅನ್ನಿಸುತ್ತಿದೆ. ಈಗ ಏನು ಮಾಡಬಹುದು?

ಹೆಸರು, ಊರು ಬೇಡ

ನೀವು ಯಾವ ವಿಧಾನದಿಂದ ಶಾಶ್ವತ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೀರಿ ಎಂಬುದನ್ನು ಇಲ್ಲಿ ತಿಳಿಸಿಲ್ಲ. ನೀವೇನಾದರೂ ಲ್ಯಾ‍‍‍ಪ್ರೋಸ್ಕೋಪಿಕ್ ವಿಧಾನದಿಂದ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರೆ, ಗರ್ಭನಾಳಕ್ಕೆ ಬ್ಯಾಂಡ್ ಹಾಕಿದ್ದಾಗ ಅಥವಾ ತೆರೆದ ಶಸ್ತ್ರಚಿಕಿತ್ಸೆಯಿಂದ ಗರ್ಭನಾಳವನ್ನು ಚಿಕ್ಕದಾಗಿ ಕತ್ತರಿಸಿದ್ದರೆ (ಮಿನಿಲ್ಯಾಪ್) ಅಂತಹ ಸಂದರ್ಭದಲ್ಲೂ ಸೂಕ್ಷ್ಮ ಶಸ್ತ್ರಚಿಕಿತ್ಸೆಯೊಂದಿಗೆಗರ್ಭನಾಳಗಳ ಮರುಜೋಡಣೆ (ರೀಕ್ಯಾನಲೈಸೇಷನ್) ಮಾಡಬಹುದು. ಹೀಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಕೆಲವರಲ್ಲಿ ಮತ್ತೆ ಮಗುವನ್ನು ಪಡೆಯಲು ಸಾಧ್ಯವಾಗಿದೆ. ಆದರೆ ಶೇಕಡ ನೂರಕ್ಕೆ ನೂರರಷ್ಟು ಮಗು ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಶೇ 30 ರಿಂದ 50 ರಷ್ಟು ಜನರಲ್ಲಿ ಮತ್ತೆ ಮಕ್ಕಳಾಗುವ ಸಾಧ್ಯತೆ ಇದೆ. ಯಶಸ್ಸಿನ ಪ್ರಮಾಣ ಬೇರೆ ಬೇರೆ ಅಂಶಗಳನ್ನು ಅವಲಂಬಿಸಿರುತ್ತದೆ. ನೀವು ತಜ್ಞರನ್ನು ಭೇಟಿ ಮಾಡಿ ಈ ಬಗ್ಗೆ ತಿಳಿದುಕೊಳ್ಳಿ. ನೀವು ಐವಿಎಫ್‌(ಪ್ರನಾಳ ಶಿಶು) ಮೊರೆಹೋಗಬಹುದು. ಪ್ರಯತ್ನಿಸಿ.

2. ನನಗೆ 28 ವರ್ಷ. ಹಿಂದೊಮ್ಮೆ 3 ತಿಂಗಳ ಗರ್ಭಿಣಿಯಾಗಿದ್ದಾಗ ಫಸ್‌ ಇನ್‌ಫೆಕ್ಷನ್ (ಕೀವು ಸೋಂಕು) ಆಗಿ ಮಗು ತೆಗೆಸಿದ್ದೆ. ಪುನಃ ಗರ್ಭಿಣಿಯಾದೆ. ಆಗಲೂ ಐದು ತಿಂಗಳಾಗಿದ್ದಾಗ ಮತ್ತೆ ಫಸ್ ಆಗಿ ಮಗು ತೆಗೆಸಬೇಕಾಯಿತು. ಆಗ ಡಾಕ್ಟರ್ ‘ಇದು ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ಡೆಲಿವರಿ ನಂತರ ಗ್ಲಾಂಡ್ ರಿಮೂವ್ (ಗ್ರಂಥಿಯನ್ನು ತೆಗೆಯುವುದು) ಮಾಡಬೇಕು. ಹೀಗೆ ಮಾಡುವುದರಿಂದ ಇದು ಮತ್ತೆ ಬರುವುದಿಲ್ಲ’ ಎಂದು ಹೇಳಿದ್ದರು. ಈಗ ನಾನು 5 ತಿಂಗಳು ಗರ್ಭಿಣಿಯಾಗಿದ್ದೇನೆ. ಮತ್ತೆ ಪಸ್ ಇನ್‌ಫೆಕ್ಷನ್ ಬಂದಿದೆ. ದಯವಿಟ್ಟು ಇದಕ್ಕೆ ಸರಿಯಾದ ಸಲಹೆ ಕೊಡಿ. ಡೆಲಿವರಿ ನಂತರವೂ ಇದು ಇರುತ್ತದೆಯೇ? ಇದರಿಂದ ಮಗುವಿಗೆ ಯಾವುದೇ ರೀತಿಯ ತೊಂದರೆ ಅಲ್ಲವೇ? ಪಸ್ ಇನ್‌ಫೆಕ್ಷನ್ ತಡೆಯುವುದು ಹೇಗೆ ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ನಿಮಗಾಗಿರುವುದು ಬಾರ್ಥೋಲಿನ್ ಗ್ರಂಥಿಯ ಸೋಂಕಷ್ಟೇ. ಬಾರ್ಥೋಲಿನ್ ಗ್ರಂಥಿ ಎಲ್ಲಾ ಮಹಿಳೆಯರಲ್ಲೂ ಯೋನಿ ದ್ವಾರದ ಎರಡೂ ಕಡೆಗೂ ಇರುತ್ತದೆ. ಯೋನಿಯ ಒಳದುಟಿ ಹಾಗೂ ಯೋನಿಪಟಲ ಸಂಧಿಸುವ ಜಾಗದಲ್ಲಿ ಸಣ್ಣ ನಳಿಕೆಯ ಮುಖಾಂತರ ಅವುಗಳ ಗ್ರಂಥಿ ರಸವು ಸ್ರವಿಸಲ್ಪಟ್ಟು ಯೋನಿ ಮಾರ್ಗವನ್ನು ತೇವವಾಗಿಡಲು ಸಹಾಯ ಮಾಡುತ್ತದೆ. ಈ ಗ್ರಂಥಿಯು ಇಕೊಲೈ ಅಥವಾ ಕ್ಲೆಮೀಡಿಯಾ, ಗೊನೋರಿಯಾ ನಂತಹ ಕ್ರಿಮಿಗಳ ಸೋಂಕಿನಿಂದ ಬರುತ್ತದೆ. ನಿಮಗೂ ಹೀಗೆ ಆಗಿರುವ ಸಾಧ್ಯತೆ ಇದೆ. ನೀವು ಗರ್ಭಿಣಿಯಾಗಿರುವುದರಿಂದ ವೈದ್ಯರ ಸಲಹೆ ಮೇರೆಗೆ ನಿಮಗೆ ಸುರಕ್ಷಿತವೆನಿಸುವ ಆ್ಯಂಟಿಬಯಾಟಿಕ್ ಮಾತ್ರೆಗಳನ್ನು ಸೇವಿಸಿ. ದಿನಕ್ಕೆ ಎರಡು ಮೂರು ಬಾರಿ ಸಿಟ್ಸ್‌ಬಾತ್‌ ತೆಗೆದುಕೊಳ್ಳಿ. (ಬೆಚ್ಚಗಿನ ನೀರು ತುಂಬಿದ ಟಬ್‌ನಲ್ಲಿ 10 ರಿಂದ 15 ನಿಮಿಷ ಕುಳಿತುಕೊಳ್ಳುವುದು. ನೀರಿಗೆ ಸ್ವಲ್ಪ ಉಪ್ಪು ಅಥವಾ ಆ್ಯಂಟಿಬಯಾಟಿಕ್ ದ್ರಾವಣಗಳನ್ನು ಹಾಕಬಹುದು) ಹಲವು ಬಾರಿ ಇದನ್ನು ಮಾಡಿದರೆ ನಿಮ್ಮ ಸಮಸ್ಯೆ ಕಡಿಮೆಯಾಗುತ್ತದೆ. ಕೀವು ಹೊರಹೋದರೆ ಅಥವಾ ಕೀವನ್ನು ತೆಗೆದರೆ ಬೇಗನೆ ಸಮಸ್ಯೆ ಕಡಿಮೆಯಾಗುತ್ತದೆ. ಅದು ಬರೀ ಗುಳ್ಳೆಯ ತರಹ ಆಗಿದ್ದರೆ ಅದನ್ನು ಹೆರಿಗೆ ನಂತರ ಮಾರ್‌ಸುಪಲೈಸೇಷನ್ ಎನ್ನುವ ಚಿಕ್ಕ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ಅಪರೂಪಕ್ಕೆ ಈ ಚಿಕಿತ್ಸೆ ಸರಿ ಹೋಗದಿದ್ದಾಗ ಆ ಗ್ರಂಥಿಯನ್ನೇ ತೆಗೆದು ಹಾಕಬೇಕಾಗುತ್ತದೆ. ನೀವು ಈಗ ಗರ್ಭಿಣಿ ಆದ್ದರಿಂದ ಈ ಬಗ್ಗೆ ತುಂಬಾ ಯೋಚಿಸದೇ ಸಾಕಷ್ಟು ಕಾಳಜಿಯಿಂದಿದ್ದು ಮಗು ಪಡೆದ ಮೇಲೆ ಚಿಕಿತ್ಸೆ ಪಡೆದುಕೊಳ್ಳಿ. ಇದರಿಂದ ಮಗುವಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಚಿಂತಿಸಬೇಡಿ.

3. ನನಗೆ 23 ವರ್ಷ, ಇನ್ನೂ ಮದುವೆ ಆಗಿಲ್ಲ. ಕಳೆದ 4 ತಿಂಗಳಿನಿಂದ ಪೀರಿಯಡ್ ಆದಾಗ ಒಂದು ದಿನ ಮಾತ್ರ ರಕ್ತಸ್ರಾವವಾಗುತ್ತದೆ. ಇದರಿಂದ ಮುಂದೆ ಏನಾದರೂ ತೊಂದರೆ ಇದೆಯೇ? ಹೀಗೆ ರಕ್ತಸ್ರಾವವಾಗದಿರಲು ಕಾರಣಗಳೇನು? ಎಂಬುದನ್ನು ಮತ್ತು ಪರಿಹಾರ ತಿಳಿಸಿ.

ಹೆಸರು, ಊರು ಬೇಡ

ನಿಮಗೇನಾದರೂ ಥೈರಾಯಿಡ್ ಗ್ರಂಥಿಯ ಸ್ರಾವದಲ್ಲಿ ಏರುಪೇರಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ನಿಮ್ಮ ತೂಕವೆಷ್ಟು ಎಂದು ತಿಳಿಸಿಲ್ಲ. ಕೆಲವೊಮ್ಮೆ ತುಂಬಾ ದಪ್ಪವಿದ್ದರೂ ಪಿಸಿಓಡಿ ಸಮಸ್ಯೆ ಇದ್ದಾಗಲೂ ಕಡಿಮೆ ಮುಟ್ಟಾಗಬಹುದು. ಕೆಲವೊಮ್ಮೆ ಅತಿಯಾಗಿ ವ್ಯಾಯಾಮ ಮಾಡಿ ದೇಹದಲ್ಲಿ ಅತಿ ಕಡಿಮೆ ಕೊಬ್ಬಿರುವವರಲ್ಲೂ ಕಡಿಮೆ ಸ್ರಾವವಾಗಬಹುದು. ಇದು ಯಾವುದೂ ಇಲ್ಲದಿದ್ದಲ್ಲಿ ಕೆಲವೊಮ್ಮೆ ಆನುವಂಶೀಯವಾಗಿಯೂ ಕೆಲವು ಮಹಿಳೆಯರಲ್ಲಿ ಕಡಿಮೆ ಮುಟ್ಟಾಗುತ್ತದೆ. ನೀವು ಯಾವುದಕ್ಕೂ ತಜ್ಞ ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಿರಿ.

4. ನನಗೆ 2 ತಿಂಗಳಲ್ಲಿ ಮದುವೆ ಇದೆ. ಅದಕ್ಕೆ ಗಂಡ–ಹೆಂಡತಿ ಸೇರುವುದಕ್ಕೆ ಸರಿಯಾದ ಸಮಯ ಯಾವುದು ಎಂದು ಯಾರೂ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಮಕ್ಕಳಾಗುವುದಕ್ಕೆ ಸರಿಯಾದ ಸಮಯ ಯಾವುದು ಮತ್ತು ಋತುಚಕ್ರದ ಯಾವ ಸಂದರ್ಭದಲ್ಲಿ ಲೈಂಗಿಕ ಸಂಪರ್ಕವಾದರೆ ಮಕ್ಕಳಾಗುತ್ತದೆ ಹೇಳಿ.

ಪ್ರಶಾಂತ್, ಕೊಡಗು

ಈ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿಸಿದ್ದೇನೆ. ನೀವು ಸತಿ-ಪತಿಯರಿಬ್ಬರೂ ನಿಮ್ಮ ಪತ್ನಿಗೆ ತಿಂಗಳಿಗೊಮ್ಮೆ ಸರಿಯಾಗಿ ಮುಟ್ಟಾಗುತ್ತಿದ್ದರೆ ಮುಟ್ಟಾದ ಎಂಟನೇ ದಿನದಿಂದ ಹದಿನೆಂಟನೇ ದಿನದವರೆಗೆ ನಿತ್ಯ ಅಥವಾ ದಿನ ಬಿಟ್ಟು ದಿನ ಲೈಂಗಿಕ ಸಂಪರ್ಕ ಮಾಡಿದಾಗ (ಋತುಫಲಪ್ರದ ದಿನಗಳು) ಬೇಗನೇ ಗರ್ಭಧಾರಣೆಯಾಗುವ ಸಂಭವ ಹೆಚ್ಚು. ಹೀಗೆ ಮಾಡಿ ಒಂದೂವರೆ ವರ್ಷವಾದರೂ ನಂತರ ತಜ್ಞ ವೈದ್ಯರ ಸಂಪರ್ಕವನ್ನು ಮಾಡಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT