ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಕಣ ತಾಳಿಗೆ ಫ್ಯಾಷನ್‌ ಸ್ಪರ್ಶ

Last Updated 1 ಜುಲೈ 2022, 19:30 IST
ಅಕ್ಷರ ಗಾತ್ರ

ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿ ಕೈಗೊಂದು ಹೊಸ ರೀತಿಯ ಬ್ರೇಸ್ಲೆಟ್‌ ಹಾಕಿಕೊಂಡಿದ್ದ ಫೋಟೊಗಳು ವೈರಲ್ ಆಗಿದ್ದವು. ಆ ಫೋಟೊಗಳು ವೈರಲ್ ಆಗುತ್ತಿದ್ದಂತೆ ಫ್ಯಾಷನ್ ಜಗತ್ತಿನಲ್ಲಿ ಕೈಗೆ ತೊಟ್ಟುಕೊಳ್ಳುವ ‘ಕಂಕಣ ತಾಳಿ’ಯ ಟ್ರೆಂಡ್ ಸೃಷ್ಟಿಯಾಯಿತು.

ಫ್ಯಾಷನ್‌ ಸೆನ್ಸ್‌ನಿಂದಲೇ ಖ್ಯಾತಿಗಳಿಸಿರುವ ಮತ್ತೋರ್ವ ಬಾಲಿವುಡ್‌ ನಟಿ ಸೋನಂ ಕಪೂರ್ ಕೂಡ ಬ್ರೇಸ್ಲೆಟ್‌ ಮಾಂಗಲ್ಯಸೂತ್ರದಲ್ಲಿ ಪತಿಯ ಜನ್ಮ ರಾಶಿ‌, ಚಿಹ್ನೆಗಳನ್ನು ಧರಿಸಿ ಮಿಂಚಿದ್ದರು. ಈ ಟ್ರೆಂಡ್‌ಗಳು ಆಧುನಿಕ ಮಹಿಳೆಯರನ್ನು ಅಪಾರವಾಗಿ ಸೆಳೆಯಿತು.

ಇತ್ತೀಚೆಗೆ ಸಾಂಪ್ರದಾಯಿಕ ಆಭರಣಗಳು ನಾವೀನ್ಯದ ಸ್ಪರ್ಶ ಪಡೆದು ಫ್ಯಾಷನ್ ಲೋಕವನ್ನು ಪ್ರವೇಶಿಸುತ್ತಿವೆ. ಅದಕ್ಕೆ ಪ್ರಮುಖ ಉದಾಹರಣೆ ಶಿಲ್ಪಾಶೆಟ್ಟಿ ಧರಿಸಿದ ‘ಕಂಕಣ ತಾಳಿ ಅಥವಾ ಬ್ರೇಸ್ಲೆಟ್‌ ಮಂಗಳಸೂತ್ರ’. ಇದು ಸದ್ಯ ಎಲ್ಲ ವಯೋಮಾನದ ಹೆಂಗಳೆಯರ ಮನಗೆದ್ದಿರುವ ಟ್ರೆಂಡಿ ಆಭರಣವಾಗಿದೆ.

ಬಳೆಯಂತೆ ಕೈಯಲ್ಲಿ ಧರಿಸುವ, ಎಲ್ಲಾ ವಿಧದ ವಸ್ತ್ರಗಳಿಗೆ ಹೊಂದಬಲ್ಲ, ಮಾಡರ್ನ್‌ ಲುಕ್ ನೀಡುವ ಕಂಕಣ ತಾಳಿಯ ಹಲವಾರು ಶೈಲಿಗಳು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ‌. ಈ ಮುಂಚೆ ಕೊರಳಿನಲ್ಲಿ ಮಾತ್ರ ಸ್ಥಾನ ಪಡೆದಿದ್ದ ಕರಿಮಣಿ ಈಗ ಕಂಕಣ ಮಂಗಳಸೂತ್ರದ ಮೂಲಕ ಕೈಗೂ ಮೆರಗು ನೀಡುತ್ತಿದೆ.

ಜೀನ್ಸ್‌ಗೂ ಸೈ, ಸೀರೆಗೂ ಸೈ

ಕೆಲ ಉದ್ಯೋಗಸ್ಥ ಅಥವಾ ವೃತ್ತಿಪರ ಮಹಿಳೆಯರಿಗೆ ಕೆಲಸ ಹಾಗೂ ಇನ್ನಿತರ ಸ್ಥಳಗಳಿಗೆ ತೆರಳಿದ್ದಾಗ ಕೊರಳಲ್ಲಿ ಮಂಗಳಸೂತ್ರ ಧರಿಸುವುದು ತುಸು ಇರಿಸುಮುರಿಸು ಎನ್ನಿಸುತ್ತಿರುತ್ತದೆ. ಇನ್ನೂ ಕೆಲವರಿಗೆ, ತಮ್ಮ ದಿರಿಸಿಗೆ ಮಂಗಳಸೂತ್ರದ ವಿನ್ಯಾಸ ಮ್ಯಾಚ್ ಆಗುತ್ತಿಲ್ಲ ಎಂಬ ಬೇಸರವೂ ಇರುತ್ತದೆ. ಇಂಥವರು ಮಣಿಕಟ್ಟಿನ ಮೇಲೆ ಬಳೆಯಂತೆ ಕಂಕಣ ತಾಳಿ ಧರಿಸಬಹುದು. ಇದರಿಂದ ಒಂದು ಕಡೆ ಸಂಪ್ರದಾಯವನ್ನೂ ಪಾಲಿಸಿದಂತಾ ಗುತ್ತದೆ,‌ಇನ್ನೊಂದು ಕಡೆ ಟ್ರೆಂಡಿ ಆಗಿಯೂ ಕಾಣುತ್ತದೆ. ಈ ಬ್ರೇಸ್ಲೆಟ್‌ ಅನ್ನು ಸೀರೆ ಉಟ್ಟಾಗಲೂ ಧರಿಸಬಹುದು. ಜೀನ್ಸ್‌ ತೊಟ್ಟಾಗಲೂ ಹಾಕಿಕೊಳ್ಳಬಹುದು.

ವಜ್ರ/ ಹರಳಿನ ಬ್ರೇಸ್ಲೆಟ್‌

ಫ್ಯಾಷನ್ ಇಷ್ಟಪಡುವ ಮಹಿಳೆಯರು ವಜ್ರಖಚಿತ ಅಥವಾ ವಜ್ರದ ಹರಳುಗಳಂತೆ ಕಾಣುವ ಬ್ರೇಸ್ಲೆಟ್‌ ಧರಿಸುತ್ತಾರೆ. ಮಧ್ಯದಲ್ಲಿ ಮೂರು ವೃತ್ತಾಕಾರದ ಮಣಿಗಳಿಗೆ ಸುತ್ತ ಬಿಗಿಯಲಾದ ಕರಿಮಣಿ ಈ ಕಂಕಣಕ್ಕೆ ರಿಚ್ ಲುಕ್ ನೀಡುತ್ತದೆ. ಬಿಸಿಲು ಬಿದ್ದಾಗ ಫಳ ಫಳ ಹೊಳೆಯುವ ಹರಳುಗಳು ದಿರಿಸಿಗೊಂದು ಹೊಸ ರೂಪ ನೀಡುತ್ತವೆ.

ನಕ್ಷತ್ರ ಕಂಕಣ ತಾಳಿ

ಜೋತಿಷ್ಯದಲ್ಲಿ ನಂಬಿಕೆ ಇರುವವರು ಪತಿಯ ರಾಶಿ, ನಕ್ಷತ್ರಗಳ ಚಿಹ್ನೆ ಅಥವಾ ಅದೃಷ್ಟ ಸಂಖ್ಯೆಯ ಪೆಂಡೆಂಟ್ ಇರುವ ವಿನ್ಯಾಸದ ಕಂಕಣ ತಾಳಿ ಧರಿಸಬಹುದು. ಮಾರುಕಟ್ಟೆಯಲ್ಲಿ ಎಲ್ಲಾ ಚಿಹ್ನೆ ಅಥವಾ ಸಂಖ್ಯೆಗಳ ತಾಳಿಗಳೂ ಲಭ್ಯ ಇವೆ. ಇದರಿಂದ ಶಾಸ್ತ್ರವನ್ನೂ ಪಾಲಿಸಿದಂತಾಯಿತು, ದಿರಿಸಿನ ಅಂದವೂ ಹೆಚ್ಚಿಸಿದಂತಾಯಿತು.

ತಾಳಿಯೊಳಗೆ ಹೂವು!

ಕಂಕಣ ತಾಳಿಯಲ್ಲಿ ಹೆಚ್ಚು ಸಾಂಪ್ರದಾಯಿಕತೆ ಬಯಸುವವರಿಗೆ ಪ್ರಾಚೀನ ಮಾದರಿಯ ಹೂವಿನ ಕೆತ್ತನೆಗಳಿರುವ ಮಂಗಳಸೂತ್ರ ಇಷ್ಟವಾಗಬಹುದು. ‌ಸೂಕ್ಷ್ಮ ಕೆತ್ತನೆ ಬಯಸುವವರಿಗೂ ಇಲ್ಲಿ ಆಯ್ಕೆಗಳುಂಟು. ಬ್ರೇಸ್ಲೆಟ್‌ನಲ್ಲಿ ಬಾಳ ಸಂಗಾತಿ ಹೆಸರಿನ ಪೆಂಡೆಂಟ್ ಸಹ ಬಳಸಬಹುದು. ತೂಗುವ ಪೆಂಡೆಂಟ್‌ಗಳನ್ನು ಧರಿಸುವುದು ಡಿಫರೆಂಟ್ ಲುಕ್ ನೀಡುತ್ತದೆ‌.

ಉಂಗುರ ತಾಳಿ

ಕಂಕಣ ಮಾಂಗಲ್ಯ ಒಂದೆಡೆ ಟ್ರೆಂಟ್‌ ಆದರೆ, ಇತ್ತೀಚೆಗೆ ಮಂಗಳಸೂತ್ರದ ರಿಂಗ್‌ಗಳು ಫ್ಯಾಷನ್‌ ಲೋಕದಲ್ಲಿ ಅಷ್ಟೇ ಸದ್ದು ಮಾಡುತ್ತಿವೆ. ಬೆರಳಿಗೆ ಉಂಗುರ ಧರಿಸುವಂತೆಯೇ ಅಲ್ಲಲ್ಲಿ ಕರಿಮಣಿ ಇರುವ ತಾಳಿಯನ್ನು ಉಂಗುರ ಬೆರಳಿನಲ್ಲಿ ಧರಿಸುವ ಟ್ರೆಂಡ್ ಬೆಳೆದಿದೆ.

ಕಾಸ್ಟಿಂಗ್ ದಿ ಇವಿಲ್ ಐ

ಈ ಮಾದರಿಯ ಕಂಕಣ ಸೂತ್ರಗಳ ನಡು ಭಾಗದಲ್ಲಿ ‘ಕಣ್ಣಿನ’ ರಚನೆಯಿರುತ್ತದೆ‌. ಈ ‘ಇವಿಲ್ ಐ’ ಶೈಲಿಯ ತಾಳಿಗಳು ದಂಪತಿಯನ್ನು ಕಂಟಕಗಳಿಂದ ರಕ್ಷಿಸುತ್ತವೆ ಮತ್ತು ಅದೃಷ್ಟ. ಆರೋಗ್ಯವನ್ನು ತರುತ್ತದೆ ಎಂಬ ನಂಬಿಕೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT