ತನ್ನ ಸಂಗಾತಿಯ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮಹಿಳೆ, ಬಹುತೇಕ ಬಾರಿ ನೇಪಥ್ಯದಲ್ಲಿ ಉಳಿದುಬಿಡುವುದೇ ಹೆಚ್ಚು. ಅಂತಹ ಜೀವನ ಸಂಗಾತಿಗೊಂದು ಪುರುಷಾಭಿವಂದನೆ ಸಲ್ಲಬೇಕಲ್ಲವೇ? ಅಂತರಂಗ ಅರಿತು, ಆಕೆಗೊಂದು ‘ಹೃದಯ ಪ್ರಶಸ್ತಿ’ ನೀಡುವ ಕೆಲಸ ಆಗದಿದ್ದರೆ ಹೇಗೆ?

ಹೀಗೊಂದು ದಿನ ಚಿಕ್ಕಮಗಳೂರಿನ ರಸ್ತೆಯಲ್ಲಿ, ನನ್ನ ಸ್ನಾತಕ ಪದವಿಯ ಕನ್ನಡ ಗುರುಗಳಾಗಿದ್ದ ವಚನ ಸಾಹಿತಿ, ದಿವಂಗತ ಪ್ರೊ. ಚಂದ್ರಯ್ಯ ನಾಯ್ಡು ಅವರ ಪತ್ನಿ ವಾಣಿ ಮೇಡಂ ಕಾಣಸಿಕ್ಕರು. ಅವರ ಆತ್ಮೀಯವಾದ ಮಾತಿಗೆ ನನ್ನ ಮನಸ್ಸು ತುಂಬಿ ಬಂತು. ನಾಯ್ಡು ಸರ್ ತಮ್ಮ ಒಲವಿನ ಮಡದಿಯ ಬಗ್ಗೆ ಸಂದರ್ಭಾನುಸಾರವಾಗಿ ಹೇಳುತ್ತಿದ್ದ ಮಾತುಗಳು ನೆನಪಿಗೆ ಬಂದವು.

‘ನನಗೆ ಈ ಚಳಿಗಾಲದಲ್ಲಿ ಕಫಗಿಫ ಕಟ್ಟಿಕೊಳ್ಳದಿರಲಿ ಅಂತ ನನ್ನ ವಾಣಿ ನನಗೆ ಒಣಮೀನಿನ ಬಡ್ಡಗಾರ ಚಟ್ನಿ ಮಾಡಿಕೊಡ್ತಾಳೆ. ಅದ್ನ ಅಕ್ಕಿರೊಟ್ಟಿ ಅಥವಾ ಚಪಾತಿ ಜೊತೆ ತಿನ್ಕೊಂಡು ಬರ್ತೀನಿ ಕಣ್ರೊ. ಅದಕ್ಕೇ ನನ್ನ ಧ್ವನಿ ಬೇರೆಲ್ಲಾ ಮೇಷ್ಟ್ರುಗಳಿಗಿಂತ ಸುಸ್ಪಷ್ಟ. ನಾವು ಡಾ. ರಾಜ್ಕುಮಾರ್ ಅವರನ್ನ ಸರಿಯಾದ ಕನ್ನಡ ಉಚ್ಚಾರಣೆಗಾಗಿ ಗುಣಗಾನ ಮಾಡ್ತೀವಿ. ಅಲ್ಲಿ ಅವರ ಯೋಗಕ್ಷೇಮ ನೋಡಿಕೊಂಡ ಪಾರ್ವತಮ್ಮನವರನ್ನು ಸೌಜನ್ಯಕ್ಕೂ ನೆನೆಯದೇ ಹೋದರೆ ತಪ್ಪಾಗುತ್ತೆ ಅಲ್ವೇನ್ರೊ? ಹಾಗೇ ಕುವೆಂಪು ಸತತ ಒಂಬತ್ತು ವರ್ಷ ‘ಶ್ರೀರಾಮಾಯಣ ದರ್ಶನಂ’ ಅನ್ನು ಎಡೆಬಿಡದೆ ಬರೆದರು ಅಂತ ಪ್ರಶಂಸೆ ಮಾಡ್ತೀವಿ. ಕುವೆಂಪು ಸಾಹಿತ್ಯ ನಿರ್ಮಿತಿಗೆ ಸಹಕರಿಸಿದ ಅವರ ಆತ್ಮೀಯ ಹೆಂಡತಿ
ಹೇಮಾವತಿ ಅವರನ್ನು ನೆನೆಯದೇ ಹೋದರೆ ಹೇಗೆ?’ ಎನ್ನುತ್ತಿದ್ದುದು ಈಗಷ್ಟೇ ಹೇಳಿದಂತಿದೆ. ಜೊತೆಗೆ ಅವರು ಮಾರಯ್ಯಪ್ರಿಯ ಅಂಕಿತದ ಆಯ್ದಕ್ಕಿ ಲಕ್ಕಮ್ಮ
ಅವರ ವಚನವೊಂದನ್ನು ಶರಣಸತಿ, ಲಿಂಗಪತಿಯ ಭಾವದಿ ಇನ್ನೊಂದು ಆಯಾಮದಲ್ಲಿ ವಿವರಿಸುತ್ತಿದ್ದುದು ನೆನಪಾದರೆ ಹೃದಯ ತಂಪಾಗುತ್ತದೆ.

ಪೂರ್ಣಚಂದ್ರ ತೇಜಸ್ವಿ ಎಂದಕೂಡಲೇ ನನಗೆ ಹೊಳೆಯುವುದು ಅವರನ್ನು ‘ನನ್ನ ತೇಜಸ್ವಿ’ ಎಂದು ತಮ್ಮ ಆತ್ಮಕಥನದ ಶೀರ್ಷಿಕೆಯಾಗಿಸಿಕೊಂಡ ರಾಜೇಶ್ವರಿ ತೇಜಸ್ವಿಯವರು. ಮೂಡಿಗೆರೆಯಲ್ಲಿ ತೇಜಸ್ವಿಯವರು ಖಾಲಿ ಜಾಗ ಕೊಂಡು ಕಾಫಿತೋಟ ಮಾಡಿ, ಅದನ್ನು ಇತರ ಬೆಳೆಗಾರರಂತೆ ವಾಣಿಜ್ಯ ದೃಷ್ಟಿಕೋನದಿಂದಷ್ಟೇ ನೋಡದೆ, ಹವ್ಯಾಸಿ ಸಹಜ ಕೃಷಿಕನಂತೆ ಖುಷಿಯಿಂದ ತೊಡಗಿಸಿಕೊಂಡಿದ್ದರು. ಇದರೊಟ್ಟಿಗೆ ಕಾಡುಮೇಡು ಅಲೆಯುತ್ತ, ಹಳ್ಳಕೊಳ್ಳ ದಾಟಾಡಿಕೊಂಡು ಹಾಗೇ ದಾರಿಗುಂಟ ಸ್ಕೂಟರ್ ಏರಿ ಮನೆಗೆ ಬಂದಾಗ, ಅವರಿಷ್ಟದ ಅಡುಗೆ ಮಾಡಿ ಬಡಿಸಿ, ಮತ್ತವರು ಧ್ಯಾನಸ್ಥ ಸಂತರಂತೆ ಬರೆಯಲು ಕುಳಿತಾಗ ಮನೆ ಮತ್ತು ಸುತ್ತಮುತ್ತಲಿನ ವಾತಾವರಣವನ್ನು ಆರಂಭದಿಂದಲೂ ಅಚ್ಚುಕಟ್ಟಾಗಿ ಇರಿಸಿಕೊಂಡಿದ್ದವರು ಇದೇ ರಾಜೇಶ್ವರಿ ಅವರು. ಅಂದಹಾಗೆ ತೇಜಸ್ವಿಯವರಿಗೆ ಯಾರಾದರೂ ಫೋನ್ ಮಾಡಿದಾಗ, ‘ಅವರು ಬರೆಯುತ್ತ ಕುಳಿತಿದ್ದಾರೆ, ಆಮೇಲೆ ಫ್ರೀ ಇದ್ದಾಗ ಇಂಪಾರ್ಟೆಂಟ್ ಅಂತ ಅನಿಸಿದರೆ ಅವರೇ ಮಾತಾಡ್ತಾರೆ’ ಎಂದು ಹೇಳಿ, ಆ ವಿವರವನ್ನು ತೇಜಸ್ವಿಯವರಿಗೆ ತಲುಪಿಸುತ್ತಿದ್ದ ರಾಜೇಶ್ವರಿಯವರಿಗೂ ತೇಜಸ್ವಿ ಓದುಗ ವಲಯದ ‘ಹೃದಯ ಪ್ರಶಸ್ತಿ’ಯೊಂದು ಸಂದಾಯ
ಆಗಲೇಬೇಕು ಎಂಬುದು ನನ್ನ ಬಲವಾದ ಅಭಿಮತ.

ಕನ್ನಡದ ಕೆಲವು ಕವಿಗಳು ತಮ್ಮ ಆತ್ಮಸಂಗಾತಿಯನ್ನು ಮನದಲ್ಲಿ ಇರಿಸಿಕೊಂಡು ಪ್ರೇಮ– ವಿರಹ ನಿವೇದನೆಯನ್ನು ಸ್ಫುರಿಸುವ ಸಾಹಿತ್ಯವನ್ನು ಸರಿಸಮಾನವಾಗಿ ಸೃಜಿಸಿರುವುದು ನೇರವಾಗಿ ಕಂಡುಬರುತ್ತದೆ. ‘ಸಖೀಗೀತ’ ಖ್ಯಾತಿಯ ನಮ್ಮ ಬೇಂದ್ರೆಯಜ್ಜ ‘ನೀ ಹೀಂಗ ನೋಡಬ್ಯಾಡ ನನ್ನ, ನೀ ಹೀಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ’ ಎಂಬ ಮನನೀಯ ಸಾಲುಗಳನ್ನು ಅಭಿ
ವ್ಯಕ್ತಿಸುವ ಮೂಲಕ, ಪುತ್ರಶೋಕದಲ್ಲಿದ್ದ ತನ್ನ ಸಖಿಗೆ ಸಾಂತ್ವನ ಹೇಳಿ ತಾವೂ ಸಮಾಧಾನಪಟ್ಟುಕೊಳ್ಳುವ ಭಾವತೀವ್ರತೆಯ ವೈಶಿಷ್ಟ ಅನನ್ಯವೇ ಆಗಿದೆ.

‘ಪ್ರೇಮಕವಿ’ ವಿಶೇಷಣದ ಕೆ.ಎಸ್.ನರಸಿಂಹಸ್ವಾಮಿ ಅವರಂತೂ ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ, ನಿನ್ನೊಳಿದೆ ನನ್ನ ಮನಸು!’ ಎಂದು ಹಲುಬಲು ಕಾರಣಳಾದ ಆ ಹುಡುಗಿಯಾದರೂ ಯಾರಿರಬಹುದು? ಆ ಪ್ರೀತಿಯ ವ್ಯಕ್ತಿತ್ವವನ್ನು ಹುಡುಕಿ ಸಮ್ಮಾನಿಸುವ ಬಯಕೆ ಯಾರಿಗೂ ಬರಲೇ ಇಲ್ಲವೇಕೆ? ಆದರೆ ಸ್ವತಃ ಕವಿಯಿಂದಲೇ ಅಂಥದ್ದೊಂದು ಸನ್ಮಾನಕ್ಕೆ ಆಕೆ ಪಾತ್ರರಾಗಿರಬಹುದು ಎಂಬ ಸಂದೇಹ, ಕವಿಯ ಕೆಲವು ಕವನದ ಸಾಲುಗಳನ್ನು ಓದಿದ ಸೂಕ್ಷ್ಮಗ್ರಾಹಿ ಗಳಿಗೆ ಬಾರದೇ ಇರದು. ‘ಮದುವೆಯಾಗಿ ತಿಂಗಳಿಲ್ಲ, ನೋಡಿರಣ್ಣ ಹೇಗಿದೆ! ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ!’ ಎಂದು, ತಮ್ಮ ಮನೆಗೆ ಭೇಟಿ ಕೊಟ್ಟ ಸಂದರ್ಶಿತರಿಗೆ ಒಂದಷ್ಟು ಹೆಚ್ಚುಗಾರಿಕೆಯಿಂದಲೇ ಕವಿ ತಮ್ಮ ಪ್ರೀತಿಯ ಸಿರಿಮತಿಯನ್ನು ಸಹೃದಯದಿಂದ ಪರಿಚಯಿಸುತ್ತಾರೆ. ಈ ಸಾಲುಗಳಲ್ಲಿ ಉಕ್ಕುವ ಕವಿಯ ಜೀವನಪ್ರೀತಿಯನ್ನು ಗ್ರಹಿಸಿದರೆ ವ್ಹಾವ್ ಅನ್ನಿಸದೇ ಇರದು.

ಕನ್ನಡ ಸಾಹಿತ್ಯಲೋಕವನ್ನು ವಿಶೇಷವಾಗಿ ಗಮನಿಸಿದರೆ, ದಾಂಪತ್ಯದ ಪ್ರೀತಿಯ ಬೆಸುಗೆಯೊಂದಿಗೇ ಸಾಹಿತ್ಯಯಾನದಲ್ಲಿ ಪಯಣಿಸಿದ ಅನೇಕರು ಕಾಣಸಿಗುತ್ತಾರೆ. ಅಂತಹ ಜೋಡಿಗಳಲ್ಲಿ ದೇವನೂರ ಮಹಾದೇವ– ಸುಮಿತ್ರಾಬಾಯಿ, ದೊಡ್ಡರಂಗೇಗೌಡ– ರಾಜೇಶ್ವರಿ, ಕಮಲಾ– ಹಂಪನಾ, ಸವಿತಾ– ನಾಗಭೂಷಣ... ಹೀಗೆ ಇವರ ಲವಲವಿಕೆಯ ಕಥೆಗಳನ್ನು ಕೇಳಿದರೆ ಸೂಪರ್ ಟೆಲಿಚಿತ್ರವನ್ನು ನೋಡಿದಂತೆ ಭಾಸವಾಗಿ, ಮನಸ್ಸಿಗೆ ವಿಶೇಷ ಅನುಭೂತಿ ದೊರಕುವುದರಲ್ಲಿ ಅನುಮಾನವೇ ಇಲ್ಲವೇನೊ. ಇಂತಹ ಕೆಲವು ಸಂಗಾತಿಗಳು ಪರಸ್ಪರ ಜಾತಿ ಬೇರೆಯಾದರೂ, ಅಂತಸ್ತು, ವಯಸ್ಸಿನಲ್ಲಿ ಅಂತರ ಇದ್ದರೂ ಭೇದವೆಣಿಸದೆ ಹೃದಯ ಸಂವಾದದಿಂದ ಮುನ್ನಡೆದಿರುವುದು ಉಲ್ಲೇಖಾರ್ಹ. ಬಹುತೇಕ ಖ್ಯಾತನಾಮ ಪುರುಷೋತ್ತಮರ ಹಿಂದೆ ಅವರ ಶ್ರೀಮತಿಯರ ಹೃದಯಂಗಮದ ಗಟ್ಟಿ ನಿಲುವು ಪ್ರಮಖ ಪಾತ್ರ ವಹಿಸಿದೆ ಎನ್ನಲಡ್ಡಿಯಿಲ್ಲ. ಇಂಥ ನಿಷ್ಕಲ್ಮಶ ಸ್ತ್ರೀ ಅಂತಃಕರಣಕ್ಕೊಂದು ಪುರುಷಾಭಿವಂದನೆ ಸಲ್ಲಲೇಬೇಕಾಗುತ್ತದೆ.

ದಾಂಪತ್ಯವು ಸಂಶಯ, ಅಪನಂಬಿಕೆಯ ಜೊತೆಗೆ ನಡೆದರೆ ಬದುಕು ತಳವೊಡೆದ ದೋಣಿಯಂತೆ. ಪ್ರೀತಿಸುವ ಹೃದಯದಲ್ಲಿ ಸಂಗಾತಿಯ ದೌರ್ಬಲ್ಯಕ್ಕಿಂತ ಉತ್ತಮವಾದ ಗುಣಗಳಿಗೇ ಮನ್ನಣೆ. ಆಗ ಪರಸ್ಪರ ಹೊಂದಾಣಿಕೆ ಸಹಜವಾಗಿಯೇ ಬೆಸೆದುಕೊಳ್ಳುತ್ತದೆ. ಹೀಗೆ ನಮ್ಮ ಪ್ರೀತಿಪಾತ್ರರನ್ನು ಅವರಿಗಿಂತ ಒಂದು ಪಟ್ಟು ಹೆಚ್ಚೇ ನಾವು ಪ್ರೀತಿಸಿ ಕಾಪಾಡಿಕೊಳ್ಳಬೇಕು. ಭಾವಶುದ್ಧ ಪ್ರೀತಿಗೆ ಪ್ರೀತಿಯೇ ಪ್ರತಿಸ್ಪರ್ಧಿಯಾಗಿರಬೇಕು. ಅಂತಹ ಹೃದಯ ಪ್ರೇಮಿಗಳು ಮಾತ್ರ ತಮ್ಮ ಬದುಕಿಗೆ ಮಾತ್ರವಲ್ಲ ಸಮಾಜಕ್ಕೂ ಆದರ್ಶಪ್ರಾಯರಾಗಿಯೇ ಬದುಕಿರುತ್ತಾರೆ.

ನಮ್ಮೆಲ್ಲ ಪುರುಷರ ಆಗುಹೋಗುಗಳಲ್ಲಿ ಸಮನ್ವಯ ಭಾವದಿ ಕೈಹಿಡಿದು ಸಾಗುತ್ತಿರುವ ಅವಳ ಹೃದಯದ ಮಿಡಿತ ಪ್ರತಿ ಸಂಗಾತಿಗೂ ಕೇಳಿಸಬೇಕು. ಅದೇ ತಾನೇ ಸಂಗಾತಿಯೊಬ್ಬ ಅವಳಿಗೆ ನೀಡಬಹುದಾದ ನಿಜವಾದ ‘ಹೃದಯ ಪ್ರಶಸ್ತಿ’; ಅದುವೇ ತಾನೆ ನಿಜವಾದ ಪ್ರೀತಿಯ ಘನತೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.