ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಕ್ಕೆ ಮಹಿಳೆಯ ಮಹತ್ವದ ಅರಿವಾಗಿದೆ: ರೈತ ಮಹಿಳೆ ಜಯಮ್ಮ ಚನ್ನಗೌಡರ ಮಾತು

Last Updated 6 ಮಾರ್ಚ್ 2021, 19:31 IST
ಅಕ್ಷರ ಗಾತ್ರ

‘ಆಕಿಗೇನು ಗೊತ್ತಿದೆ?’ ಎಂದು ಮೂದಲಿಕೆಯೋ ಕೀಳಾಗಿಯೋ ಮಹಿಳೆಯನ್ನು ಕಾಣುತ್ತಿದ್ದ ಗ್ರಾಮೀಣ ಸಮುದಾಯ, ಈಗ ಆಕೆಯ ಸಾಧನೆಯನ್ನು ಅಚ್ಚರಿಯಿಂದ ಗಮನಿಸುತ್ತಿದೆ. ಹತ್ತು ಹಲವು ವಲಯಗಳಲ್ಲಿ ಮಹಿಳೆಯು ತನ್ನ ಛಾಪು ಬೀರುತ್ತಿರುವುದನ್ನು ಕಂಡು ನನಗೂ ಖುಷಿ ಅನಿಸುತ್ತಿದೆ. ಖುಷಿ ಯಾಕೆಂದರೆ, ಪುರುಷ ಪ್ರಾಬಲ್ಯದ ಆಧುನಿಕ ಕೃಷಿ ಪದ್ಧತಿಯಲ್ಲಿ ಮಹಿಳೆಯರು ಈಗ ಸಾಧನೆಯ ಹಾದಿಯಲ್ಲಿದ್ದು ಆ ಪಟ್ಟಿಯಲ್ಲಿ ನನ್ನ ಹೆಸರು ಕೂಡ ಆಗಾಗ್ಗೆ ಕಾಣಿಸುತ್ತಿರುತ್ತದೆ.

ವ್ಯವಸಾಯ ಕ್ಷೇತ್ರದಲ್ಲಿ ಮಹಿಳೆಯ ಪಾತ್ರ ಹೆಚ್ಚು. ಬಿತ್ತನೆ, ಬೀಜ ಸಂರಕ್ಷಣೆಯಿಂದ ಹಿಡಿದು ಇಡೀ ವ್ಯವಸಾಯದ ಕೆಲಸಗಳಲ್ಲಿ ಆಕೆಯದು ‘ಕಾಣಿಸದ’ ಕೊಡುಗೆ. ಆದರೆ ಹಸಿರುಕ್ರಾಂತಿಯ ಭರಾಟೆಯಲ್ಲಿ ಏಕಬೆಳೆ ಕಾಲಿಟ್ಟ ಕೂಡಲೇ ಮಹಿಳೆಯ ಪಾತ್ರ ನಗಣ್ಯವಾಯಿತು. ಹಣಕಾಸು, ಕೃಷಿ ನಿರ್ಧಾರಗಳಿಂದ ಆಕೆ ದೂರ ಉಳಿದಳು.

ಆದರೀಗ ಕಾಲಚಕ್ರ ಮತ್ತೊಂದು ಸುತ್ತು ತಿರುಗಿದೆ. ಕೊರೊನಾದಿಂದಾಗಿಯೋ ಹತ್ತು ಹಲವು ಕಾಯಿಲೆಗಳಿಂದಾಗಿಯೋ ಆರೋಗ್ಯದತ್ತ ಜನರ ಗಮನ ಹರಿದಿದೆ. ಆರೋಗ್ಯ ಅಂದರೆ ಶುದ್ಧ ಆಹಾರ ಸೇವನೆ ತಾನೇ?

ವಿಶೇಷ ಇರುವುದೇ ಇಲ್ಲಿ! ಹಳ್ಳಿ ಭಾಗದ ಹಾಳುಬಿದ್ದ ಜಮೀನುಗಳಲ್ಲಿ ಮತ್ತೆ ಚಟುವಟಿಕೆ ಕಾಣಿಸುತ್ತಿದೆ. ಓದಿ, ಪಟ್ಟಣದಲ್ಲಿ ಕೆಲಸಕ್ಕಿದ್ದವರು ಉದ್ಯೋಗ ಕಳೆದುಕೊಂಡು ಹಳ್ಳಿಗೆ ಮರಳಿದ್ದಾರೆ. ವ್ಯವಸಾಯದ ಕೆಲಸಗಳು ಶುರುವಾಗಿವೆ. ಯಾವಾವುದೋ ಕಾರಣದಿಂದಾಗಿ ನಿಸ್ತೇಜವಾಗಿದ್ದ ಮಹಿಳಾ ಸ್ವಸಹಾಯ ಸಂಘಗಳಲ್ಲೀಗ ಚುರುಕುತನ. ಗ್ರಾಮೀಣ ಪ್ರದೇಶದಲ್ಲಿ ಒಂದು ಕಾಲದಲ್ಲಿ ತಮ್ಮ ಆರ್ಥಿಕ ನಿರ್ವಹಣೆಯಿಂದ ಗಮನ ಸೆಳೆದಿದ್ದ ಸ್ವಸಹಾಯ ಸಂಘಗಳು ಮತ್ತೆ ಹಳಿಗೆ ಮರಳಿವೆ.

ಆರೋಗ್ಯ ದೃಷ್ಟಿಯಿಂದ ಈಗ ಕೃಷಿಯತ್ತ ಹೊರಳುವವರ ಸಂಖ್ಯೆ ಸಾಕಷ್ಟಿದೆ. ಅಕ್ಕಡಿ ಕಾಳು ಅಂಗಡಿಯಲ್ಲಿ ಸಿಗುತ್ತಿಲ್ಲ. ಬೇಳೆ ಕಾಳು, ಸಿರಿಧಾನ್ಯ, ತರಕಾರಿ, ಸೊಪ್ಪುಗಳಿಗೆ ಬೆಲೆ ಬಂದಿದೆ. ಅದಕ್ಕಾಗಿಯೋ ಏನೋ, ಏಕಬೆಳೆಯ ಬದಲಾಗಿ ಮಿಶ್ರ ಬೆಳೆ ವಿಧಾನ ಚಾಲ್ತಿಗೆ ಬಂದಿದೆ. ಇಲ್ಲೆಲ್ಲ ಮಹಿಳೆಯರದೇ ಕೌಶಲ ಹೆಚ್ಚು. ಈವರೆಗೆ ತೆರೆಮರೆಗೆ ಸರಿದಿದ್ದ ಮಹಿಳೆಯ ಸ್ಥಾನಮಾನ ಮತ್ತೆ ಪ್ರಾಮುಖ್ಯ ಸಿಗುತ್ತಿದೆ.

ಪದವಿ ಪಡೆದವರು, ದೊಡ್ಡ ಉದ್ಯೋಗ ಬಿಟ್ಟು ಬಂದವರು ನೆಲಮೂಲಕ್ಕೆ ಮರಳುತ್ತಿದ್ದಾರೆ. ಮಹಿಳೆಯರ ಸಬಲೀಕರಣ, ಆರ್ಥಿಕ ಚಟುವಟಿಕೆಗೆ ಉತ್ತೇಜನದಂಥ ಕ್ರಮಗಳಿಂದಾಗಿ ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆ ಮುಖ್ಯ ಪಾತ್ರ ವಹಿಸುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತವೆ.

ನಿರೂಪಣೆ: ಆನಂದತೀರ್ಥ ಪ್ಯಾಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT