ಬೆಂಗಳೂರಿನ ಸಿಟಿ ಬಸ್ನಲ್ಲಿ ಮೊನ್ನೆ ಪ್ರಯಾಣಿಸುತ್ತಿದ್ದೆ. ರಷ್ ಇದ್ದುದರಿಂದ ನೇತಾಡುತ್ತ ನಿಂತಿದ್ದೆ. ಕಂಡಕ್ಟರ್ ‘ಟಿಕೆಟ್ ಟಿಕೆಟ್’ ಎಂದು ಕೂಗುತ್ತಿದ್ದರೂ ಕೇಳದಿರುವಷ್ಟು ಮೊಬೈಲಿನಲ್ಲಿ ಮುಳುಗಿಹೋಗಿರುವ ಕಾಲೇಜು ಯುವತಿಯರು, ಮಲ್ಲಿಗೆ ಹೂವು ಕಟ್ಟುತ್ತಲೋ, ಬಟಾಣಿ ಬಿಡಿಸುತ್ತಲೋ ಸಮಯದ ಸದುಪಯೋಗ ಮಾಡಿಕೊಳ್ಳುತ್ತಿರುವ ಮುಂದಿನ ಸೀಟಿನಲ್ಲಿ ಕೂತ ಹಿರಿಯ ಮಹಿಳೆಯರು, ಅಪರಿಚಿತರೊಂದಿಗೆ ಕಷ್ಟಸುಖ ಹೇಳಿಕೊಳ್ಳುತ್ತಿರುವವರು, ಅಡ್ಡಬಂದ ವಾಹನ ಮಾಲೀಕರಿಗೆ ದಬಾಯಿಸುತ್ತಿರುವ ಡ್ರೈವರ್... ಇಂಥ ಬಹುವಿನ್ಯಾಸದ ಫ್ರೇಮಿನೊಳಗಿನ ಚಿತ್ರಣದ ಪ್ರಯಾಣವನ್ನು ನಾನು ಯಾವಾಗಲೂ ಆನಂದಿಸುತ್ತೇನೆ.

ಅಂದೂ ಅದೇ ಗುಂಗಿನಲ್ಲಿದ್ದಾಗ ಇದ್ದಕ್ಕಿದ್ದಂತೆ ನನ್ನ ಹಿಂದಿನಿಂದ ‘ಏನೋ, ಏನೋ ಮಾಡ್ದೆ ನೀನು?’ ಎಂದು, ಮಹಿಳೆಯೊಬ್ಬರ ಗಟ್ಟಿ ಧ್ವನಿ ಕೇಳಿಬಂತು. ಜೊತೆಯಲ್ಲೇ ‘ನಾನೇನು ಮಾಡ್ದೆ?’ ಎಂಬ ಗಂಡಸಿನ ಧ್ವನಿ. ‘ಏನೂ ಮಾಡಲಿಲ್ವಾ ನೀನು? ನನ್ನ ತಂದೆಗಾದ ವಯಸ್ಸಾಗಿದೆ ನಿಂಗೆ, ಇನ್ನೂ ತೆವಲು ಬಿಟ್ಟಿಲ್ವಾ? ಮಾಡೋದೆಲ್ಲ ಮಾಡಿ ಏನೂ ಗೊತ್ತಿಲ್ಲದಂತೆ ನಾಟಕ ಆಡ್ತೀಯ?’ ಎನ್ನುತ್ತ ಆಕೆ ಕಪಾಳಕ್ಕೆ ಎರಡೇಟು ಬಿಟ್ಟಳು ನೋಡಿ, ಅಷ್ಟು ಹೊತ್ತು ಮುಗ್ಧನಂತೆ ವಾದಿಸುತ್ತಿದ್ದವನು, ಮಾನ ಹೋದಂತಾಗಿ ತಪ್ಪೊಪ್ಪಿದಂತೆ ತಲೆತಗ್ಗಿಸಿ ಸುಮ್ಮನಾಗಿಬಿಟ್ಟ. ಅದೇ ಕ್ಷಣ ಸ್ಟಾಪ್ ಬಂದದ್ದರಿಂದ ಬಸ್ ನಿಂತಾಗ ತರಾತುರಿಯಿಂದ ಇಳಿಯಲು ಹೊರಟವನನ್ನು ‘ನೀನು ಎಲ್ಲಿಗೆ ಟಿಕೆಟ್ ತಗೊಂಡಿದ್ದೀಯ ಅಂತ ನಂಗೆ ಗೊತ್ತು. ಡ್ರೈವರ್ರೇ ಯಾವ ಕಾರಣಕ್ಕೂ ಡೋರ್ ತೆಗಿಬೇಡಿ’ ಎಂದು ಖಡಕ್ಕಾಗಿ ಆದೇಶಿಸಿದಳು. ಕೆಲವು ಮಹಿಳೆಯರು ‘ಅಯ್ಯೋ ಇರ್ಲಿ ಬಿಡಮ್ಮ. ರಶ್ಶಲ್ಲಿ ಏನೋ ಗೊತ್ತಿಲ್ದೆ ಮಾಡಿರ್ತಾನೆ. ಯಾಕ್ ಅಷ್ಟು ಸೀನ್ ಕ್ರಿಯೇಟ್ ಮಾಡ್ತೀಯ?’ ಎಂದು ಅವಳಿಗೇ ಹಿತವಚನ ನೀಡುತ್ತಿದ್ದರು. ಕಂಡಕ್ಟರ್, ಡ್ರೈವರ್ ತಮಗೆ ಸಂಬಂಧಪಟ್ಟಿದ್ದೇ ಅಲ್ಲ ಎನ್ನುವಂತೆ ತಮ್ಮ ಕೆಲಸದಲ್ಲಿ ಮಗ್ನ ರಾಗಿದ್ದರು.

ನಂತರ ಆಕೆ ಬಸ್ನಲ್ಲಿದ್ದ ಕಾಲ್ಸೆಂಟರ್ ನಂಬರಿಗೆ ಫೋನ್ ಮಾಡಿ ‘ನಾನು ಇಂಥ ಜಾಗದಲ್ಲಿ ಇಳಿಯುತ್ತೇನೆ. ನನಗೆ ಹೀಗೆ ಅನ್ಯಾಯವಾಗಿದೆ, ಬಂದು ಸಹಾಯ ಮಾಡಿ’ ಎಂದಳು. ಆ ಜಾಗ ಬಂದಾಗ, ಅವನು ಎಲ್ಲೂ ಓಡಿಹೋಗದಂತೆ ಕೈರಟ್ಟೆ ಹಿಡಿದುಕೊಂಡೇ ಇಳಿಸಿದಳು. ಬಸ್ಸು ಮುಂದಕ್ಕೆ ಹೊರಟಿತು. ಮುಂದೇನಾಯಿತೋ ನನಗೆ ತಿಳಿಯಲಿಲ್ಲ. ಆದರೆ ಅಷ್ಟೆಲ್ಲ ಧೈರ್ಯ ಪ್ರದರ್ಶಿಸಿದ ಆಕೆಯ ಬಗ್ಗೆ ಮೆಚ್ಚುಗೆಯ ಭಾವ ಮೂಡಿತು.

ಈ ಪ್ರಕರಣ ಯಾಕೋ ನನ್ನ ಮದುವೆಗೆ ಮುಂಚಿನ ದಿನಗಳನ್ನು ನೆನಪಿಸಿಬಿಟ್ಟಿತು. ಊರ ಜಾತ್ರೆಗಳಲ್ಲಿ ಪುಂಡುಪೋಕರಿಗಳು ಬೇಕಂತಲೇ ದೇಹವನ್ನು ಅನುಚಿತವಾಗಿ ಸ್ಪರ್ಶಿಸಿದಾಗ, ಪ್ರತಿಭಟಿಸುವ ಧೈರ್ಯ ಮಾಡಿರಲಿಲ್ಲ ನಾನು. ಬದಲಿಗೆ, ಒಳಗೊಳಗೇ ಹೇವರಿಕೆ, ಮುಜುಗರದಿಂದ ಕುಗ್ಗಿಹೋಗುತ್ತಿದ್ದೆ. ಅಮ್ಮನಿಗೆ ಹೇಳಿದರೆ ಬೈಯುತ್ತಾಳೆಂದು ನನ್ನೊಳಗೇ ಇಟ್ಟುಕೊಂಡು ಒದ್ದಾಡುತ್ತಿದ್ದೆ. ಇಲ್ಲದಿದ್ದರೆ ಗೆಳತಿಯರು ತಮಗಾದ ಅಂತಹುದೇ ಅನುಭವ ಗಳನ್ನು ಹೇಳಿಕೊಂಡರೆ ‘ಇಂಥ ಮುಜುಗರ ನನಗೊಬ್ಬಳಿಗೇ ಅಲ್ಲ’ ಎಂದುಕೊಂಡು ಸಮಾಧಾನದ ಹೊದಿಕೆ ಹಾಕಿಕೊಳ್ಳುತ್ತಿದ್ದೆ. ಕೆಲವೊಮ್ಮೆ, ಈ ತರಲೆತಾಪತ್ರಯವೇ ಬೇಡವೆಂದು ಜಾತ್ರೆಗೆ ಹೋಗುವುದನ್ನೇ ತಪ್ಪಿಸಿಕೊಳ್ಳಲು ಕಾರಣ ಹುಡುಕುತ್ತಿದ್ದೆ.

ಆ ದಿನ ಮನೆಗೆ ಬಂದು ಹರೆಯದ ಮಗಳ ಬಳಿ ಆ ಮಹಿಳೆಯನ್ನು ಶ್ಲಾಘಿಸಿದೆನಾದರೂ, ಮರುಕ್ಷಣ, ಆ ಮಾದರಿ ಹೆಣ್ಣುಮಗಳ ಧೈರ್ಯ ಆಗಲೇ ನನಗಿದ್ದಿದ್ದರೆ... ಎಂದು ಅನ್ನಿಸದೇ ಇರಲಿಲ್ಲ. ಇಂಥ ಧೈರ್ಯ ಎಲ್ಲ ಮಹಿಳೆಯರಲ್ಲೂ ಮೂಡಿದರೆ, ಮೀಟೂ ರೀತಿಯ ಆಂದೋಲನಗಳ ಅಗತ್ಯವೇ ಇರುತ್ತಿರಲಿಲ್ಲ, ಅಲ್ಲವೇ? ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.