ಆ ತಿರುವಿನಲ್ಲಿ ಅವಳ ಹೊಚ್ಚ ಹೊಸ ಕೆಂಪು ಕಾರಿಗೆ ಫಕೀರ ತನ್ನ ಹಳೆಯ ಹರಕುಮುರುಕು ಬ್ಯಾಗಿನೊಂದಿಗೆ ಅಡ್ಡ ಬಂದ. ಆಕೆ ಪಕ್ಕನೆ ಬ್ರೇಕ್ ಒತ್ತಿ ಒಮ್ಮೆ ಸ್ಟೇರಿಂಗ್ ಮೇಲೆ ಮುಗ್ಗರಿಸಿದಳು. ಆತ ಸರಕ್ಕನೆ ಹಿಂದಕ್ಕೆ ಸರಿದು, ಕಲ್ಲೊಂದಕ್ಕೆ ಎಡವಿಕೊಂಡ. ಇಬ್ಬರೂ ಪರಸ್ಪರ ಪರಿಚಯವಿಲ್ಲದೆ ಶಪಿಸಿಕೊಂಡರು.

ಆಕೆ ಅಲ್ಲಿಂದ ಹತ್ತು ಮಾರು ಮುಂದೆ ಹೋಗಿ ಆ ಗಲ್ಲಿಯ ಮುಖ್ಯ ದ್ವಾರದ ಪಕ್ಕದಲ್ಲಿ ಕಾರು ನಿಲ್ಲಿಸಿ, ಅಲ್ಲೇ ಆಡುತ್ತಿದ್ದ ಸಣ್ಣ ಹುಡುಗನ ಕೈಗೆ ಹತ್ತರ ಹಳೆಯ ನೋಟು ತುರುಕಿ, ಒಂದು ವಾರದಿಂದ ಮನೆ ಕೆಲಸಕ್ಕೆ ಬಾರದ ಕೆಲಸದವಳ ವಿವರ ತಿಳಿದು ಬರಲು ಕಳುಹಿಸಿ ಕಾರಿನಲ್ಲೇ ಕುಳಿತಳು.

ಇವಳ ಕಾರಿನ ಪಕ್ಕದಲ್ಲೇ ತನ್ನ ಪಾಡಿಗೆ ತಾನು ಹಾದು ಹೋದ ಆತ ಅಲ್ಲೇ ರಸ್ತೆ ಪಕ್ಕದ ಮೋರಿ ಕಟ್ಟೆಯ ಮೇಲೆ ತನ್ನ ಹತಾರಗಳನ್ನೆಲ್ಲ ತೆರೆದು, ಕಾಲಿನ ಹೆಬ್ಬರಳಿಗೆ ದಪ್ಪ ಕಪ್ಪು ದಾರವನ್ನು ಸಿಕ್ಕಿಸಿ ಕೂತ. ಅವನು ಅಲ್ಲಿ ಹಾಗೆ ಕೂರುತ್ತಿದ್ದಂತೆಯೇ ಅವನಿಗಾಗಿಯೇ ಕಾಯುತ್ತಿದ್ದವೋ ಎಂಬಂತೆ ಸುತ್ತಮುತ್ತಲಿನ ಬೆಂಕಿ ಪೊಟ್ಟಣಗಳಂತಹ ಮನೆಗಳಿಂದ ಹರಕುಮುರುಕು ಚಪ್ಪಲಿಗಳು, ಶೂಗಳು ತಮ್ಮ ತಮ್ಮ ಯಜಮಾನರೊಡನೆ ಬಂದು ಇವನ ಮುಂದೆ ನಿಲ್ಲತೊಡಗಿದವು. ದೇವಸ್ಥಾನದ ಮುಂದೆ ಮೋಕ್ಷಕ್ಕಾಗಿ ನಿಂತ ಭಕ್ತರಂತೆ. ಅವನು ಪಾದರಕ್ಷೆಗಳನ್ನು ತಿರುಗಿಸಿ ಮುರುಗಿಸಿ ನೋಡಿ ಸರತಿಯಂತೆ ಒಂದೊಂದರ ಮೇಲೇ ತನ್ನ ಕರುಣೆಯ ದೃಷ್ಟಿ ಬೀರತೊಡಗಿದ. ಅವನ ಸ್ಪರ್ಶದಲ್ಲಿ ಸಜ್ಜುಗೊಂಡ ಅವು ಮತ್ತೆ ತಿರುಗಾಟಕ್ಕೆ ಹೊರಡುವ ಸಂಭ್ರಮದಲ್ಲಿ ಹೊರಬೀಳತೊಡಗಿದವು. ಇನ್ನೇನು ತನ್ನ ಬದುಕು ಮುಗಿಯಿತು ಎಂದುಕೊಂಡವು ಕೂಡ ಮತ್ತೆ ಒಂದಷ್ಟು ದಿನಕ್ಕಾಗುವಷ್ಟು ಉಸಿರು ತುಂಬಿಕೊಂಡು ಕುಪ್ಪಳಿಸಿದವು. ಹೀಗೆ ಅವನಿಂದ ಪ್ರಯೋಜನ ಪಡೆದುಕೊಂಡ ಮಂದಿ ಕೊನೆಯಲ್ಲಿ ಚೌಕಾಸಿಗೆ ಇಳಿದು, ಅವನು ಆರು ರೂಪಾಯಿ ಎಂದರೆ ಜಾಸ್ತಿಯಾಯಿತು ನಾಲ್ಕು ಮಾಡಿಕೋ ಎಂತಲೋ, ನಾಲ್ಕೆಂದರೆ ಯಾಕಣ್ಣಾ ಈ ಪಾಟಿ ರೇಟು ಎಷ್ಟೊಂದು ದಿನದಿಂದ ನಿನ್ ತಾವಾನೇ ಒಲ್ಸಿಲ್ವಾ, ಎಲ್ಡು ರೂಪಾಯಿ ತಕ್ಕೋ ಸಾಕು ಎನ್ನುತ್ತಲ್ಲೋ ಚಿಕ್ಕದೊಂದು ಯುದ್ಧ ಮಾಡಿ ಹಣ ಕೊಟ್ಟು ಹೋಗುತ್ತಿದ್ದರು. ಇವನೂ ಬಿಡದೇ ಅವರ ಸರಿಸಮನಾಗಿ ಕದನಕ್ಕಿಳಿದು ಕೊನೆಗೆ ಹೆಚ್ಚು ಕಡಿಮೆ ವಸೂಲಿ ಮಾಡಿ ತನ್ನ ಜೇಬಿಗಿಳಿಸಿ ಮುಂದಿನ ಕೆಲಸಕ್ಕೆ ಮುಂದಾಗುತ್ತಿದ್ದ.

ಅರ್ಧ ಗಂಟೆಯಿಂದ ಬೇರೇನೂ ಕೆಲಸವಿಲ್ಲದ ಅವಳು ಕಾರಿನಲ್ಲಿ ಕೂತೇ ಈ ವ್ಯವಹಾರವನ್ನೆಲ್ಲ ನೋಡುತ್ತಿದ್ದಳು. ಅವನ ಶ್ರಮಕ್ಕೆ ಬೆಲೆ ಕೊಡದೆ ಜಗಳವಾಡುವ ಅಲ್ಲಿನವರನ್ನು ಕಂಡು ಅವಳಿಗೆ ಮೈ ಉರಿಯಿತು. ಅವನ ಬಗ್ಗೆ ಒಂದು ರೀತಿಯ ಅನುಕಂಪ ಕೂಡ. ಹೊರಡುವ ಮೊದಲು ಅವನನ್ನೊಮ್ಮೆ ಮಾತನಾಡಿಸುವಷ್ಟು ಮಮಕಾರ ಉಕ್ಕಿ ಬಂತು. ಕೆಳಗಿಳಿದು ಅವನಿರುವ ತನಕ ನಡೆದು ಬಂದಳು. ಅಲ್ಲಿದ್ದವರು ಸರಿದು ಜಾಗ ಬಿಟ್ಟರು. ತನ್ನ ಮುಂದೆ ನಿಂತವಳ ಕಾಲುಗಳನ್ನು ಅವನು ತಲೆ ಎತ್ತದೇ ನೋಡಿದ. ಆಕೆ ಮುಜುಗರ ಪಟ್ಟುಕೊಂಡಳು. ಅಲ್ಲಿದ್ದ ಮಂದಿಯ ಬೆವರ ವಾಸನೆ ಅವಳು ಪೂಸಿಕೊಂಡಿದ್ದ ಸುಗಂಧದ ಸುವಾಸನೆಯನ್ನೂ ಮೀರಿಸುವಂತೆ ಗಾಳಿಯಲ್ಲಿ ಮೀಯುತ್ತಿತ್ತು. ಆಕೆಗೆ ನಿಲ್ಲಲು ಅಸಾಧ್ಯವೆನಿಸಿತು. ಅವಸರದ ಮೆಲು ದನಿಯಲ್ಲಿ `ಯಜಮಾನರೇ' ಎಂದಳು. ಹೊಲಿಗೆ ಹಾಕುತ್ತಲೇ ಆತ ತಲೆ ಎತ್ತಿದ. `ನೀವಿಲ್ಲಿ ಒಂದೊಂದು ರೂಪಾಯಿಗೂ ಇವರ ಜೊತೆ ಯಾಕೆ ಹೊಡೆದಾಡಬೇಕು, ನಮ್ಮಂತಹವರ ಮನೆಗಳ ಹತ್ತಿರ ಬಂದರೆ ನೀವು ಮಾಡುವ ಕೆಲಸಕ್ಕೆ ಕೇಳಿದಷ್ಟು ಹಣ ಕೊಡುತ್ತಾರೆ' ಎಂದು ಹೇಳಿ ಸುಮ್ಮನೆ ನಿಂತಳು. ಒಂದಿಷ್ಟು ಅಹಂನ ಗಾಳಿ ಅವಳನ್ನು ಸುಳಿದುಹೋಯಿತು. ಅಲ್ಲಿದ್ದ ಮಂದಿಯ ಮುಖದಲ್ಲಿ ಆಶ್ಚರ್ಯ ಇಣುಕಿತು.

ಎಪ್ಪತ್ತರ ಆ ಅಜ್ಜ ಇವಳನ್ನು ನೋಡಿ ಒಂದು ರೀತಿಯಾಗಿ ನಕ್ಕ. ನಡುಗುವ ಸ್ವರದಲ್ಲಿ `ಅಂಗೆಲ್ಲ ಆಗಲ್ಲ ಕಣವ್ವಾ. ಇಲ್ಲಿಗೆ ನಾನು ಸಣ್ಣೋನಿದ್ದಾಗಿಂದ ಬರ್ತಾ ಇವ್ನಿ, ಈಗ ಬರಲ್ಲ ಅಂದ್ರೆ ಚೆನ್ನಾಗಿರಕ್ಕಿಲ್ಲ. ಅಲ್ದೆ ಇಲ್ಲಿ ಮಕ್ಳು ನನ್ನ ವಾರ ವಾರ ಕಾಯ್ಕಂಡ್ ಕೂತಿರ್ತಾವೆ' ಎಂದ. `ಅಲ್ಲ ಯಜಮಾನರೇ ನೀವ್ ಮಾಡೋ ಕೆಲ್ಸಕ್ಕೆ ಇಲ್ಲಿನ ಜನ ಬೆಲೆನೇ ಕೊಡಲ್ವಲ್ಲ ಅದಕ್ಕೆ...' ಗತ್ತಿನಲ್ಲಿ ಹೇಳಿದಳು. ಆತ ಕೈಗೆ ಪುರುಸೊತ್ತೇ ಕೊಡದೆ `ಇಂತ ಕಡೇಲಿ ದುಡಿಮೆ ಮಾಡೇ ನಾನ್ ಸಂಸಾರ ಸಾಕಿವ್ನಿ ತಾಯಿ. ಈ ವಯಸ್ನಾಗೆ ಭಾರೀ ದುಡ್ ತಕಂಡು ಏನ್ಮಾಡ್ಲಿ ನಾನು. ಏನೋ ಮನೇಲಿ ಸುಮ್ನೆ ಕುಂತ್ಕಂಡು ಮಕ್ಳು ಮರೀಗೆ ತೊಂದ್ರೆ ಕೊಡಬಾರರ್ದು ಅಂತ ಬತ್ತೀನಿ ಅಟ್ಟೇಯಾ' ಎಂದು ಮಾತು ನಿಲ್ಲಿಸಿದ. ತತ್ಕ್ಷಣವೇ `ಇವ್ರಗಳು ಕಾಯ್ಕಂಡಿರ್ತಾರೆ' ಎನ್ನುತ್ತಾ ಅಲ್ಲಿದ್ದವರ ಮುಖ ನೋಡಿದ. ಅವರೆಲ್ಲರೂ ಅವನ ಮಾತನ್ನು ಸಮರ್ಥಿಸುವವರಂತೆ ತಲೆಯಾಡಿಸಿ ಅವನನ್ನು ತುಂಬು ಅಭಿಮಾನದಿಂದ ನೋಡಿದರು.

ಆಕೆ ಪೆಚ್ಚಾದಳು. ಆದರೂ ಪಟ್ಟು ಬಿಡುವ ಮನಸ್ಸಾಗಲಿಲ್ಲ. `ಆದರೂ...' ರಾಗ ಎಳೆದಳು. `ಅವ್ವಾ ನೀವಿನ್ನೂ ಸಣ್ಣೋರು ಗೊತ್ತಾಗಕ್ಕಿಲ್ಲ. ಅಲ್ಲಿ ಯಾರೂ ಚಪ್ಲಿ ಒಲ್ಸಿ ಆಕಳಕ್ಕಿಲ್ಲ ಕಣವ್ವಾ. ಅಲ್ ಬಂದ್ರೆ ಅತ್ಪೈಸಾನೂ ಉಟ್ಟಾಕಿಲ್ಲ' ಎಂದು ಮತ್ತೊಮ್ಮೆ ನಸು ನಕ್ಕ. ಈಕೆ ಮತ್ತೆ ಅಲ್ಲಿ ನಿಲ್ಲಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.