ಸಹಜವಾಗಿಯೇ ನನ್ನ ಕಣ್ಣಲ್ಲಿ ಅವಳ ಬರುವಿಕೆಯ ನಿರೀಕ್ಷೆ ಇತ್ತು. ಅವಳದ್ದಷ್ಟೇ ಅಲ್ಲ, ಅವಳ ತರಹದ ಹತ್ತಾರು ಜನರು ನಿರೀಕ್ಷೆಯ ಪಟ್ಟಿಯಲ್ಲಿ ಇದ್ದರಾದರೂ ಅವಳೆಂದರೆ ನನಗೆ ವಿಶೇಷ ಅಕ್ಕರೆ. ಕಾರಣ ಆಕೆ ನನ್ನ ಊರಿನವಳು. ಅಲ್ಲದೆ ನಾವಿಬ್ಬರೂ ಒಂದೇ ಶಾಲೆಯಲ್ಲಿ ನಾಲ್ಕನೇ ಇಯತ್ತೆಯವರೆಗೆ ಓದಿದ್ದೆವು. ನಾನು ಎಂ.ಎಸ್.ಡಬ್ಲ್ಯು. ಮುಗಿಸಿ ಮೊತ್ತ ಮೊದಲಿಗೆ ಆಸ್ಪತ್ರೆಗೆ ಆಪ್ತ ಸಮಾಲೋಚಕಿಯಾಗಿ ಸೇರಿದಾಗ ಬಂದ ಮೊದಲ ಕ್ಲೈಂಟ್ ಕೂಡ ಅವಳೇ ಆಗಿದ್ದಳು.

ಪ್ರತಿ ಮೂರು ತಿಂಗಳಿಗೊಮ್ಮೆ ಆಕೆ ನಮ್ಮಲ್ಲಿ ತಪಾಸಣೆಗೆ ನಿಯಮಿತವಾಗಿ ಬರುತ್ತಿದ್ದಳು. ಅಷ್ಟೇ ಅಲ್ಲ, ಅವಳ ತರಹದ ಅನೇಕ ಸ್ನೇಹಿತೆಯರನ್ನೂ ಕರೆತಂದು ಕೌನ್ಸೆಲಿಂಗ್ ಮಾಡಿಸುತ್ತಿದ್ದಳು. ಅವಳ `ಆ ಕೆಲಸ'ದ ಬಗ್ಗೆ ನಾನು ಕೇಳುವುದು ನನ್ನ ಕಾರ್ಯವ್ಯಾಪ್ತಿಗೆ ಬರುವುದಿಲ್ಲವಾದರೂ, ಅವಳ ಮೇಲಿನ ಮಮಕಾರದಿಂದ `ಯಾಕೆ ಇಳಿದೆ' ಎಂದು ಒಮ್ಮೆ ಕೇಳಿದ್ದೆ. ಅದಕ್ಕವಳು `ಗಂಡ ಓಡಿಹೋದ ಮೇಲೆ ಎಲ್ಲಿ ಇಳಿದರೂ ಗುಂಡಿಗಳೇ ಸಿಗತೊಡಗಿದ್ದರಿಂದ ಪುಗಸಟ್ಟೆ ಕೆಸರು ಮೈಗೆ ಹತ್ತಿಸಿಕೊಳ್ಳುವುದಕ್ಕಿಂತ, ಮೂವರು ಮಕ್ಕಳ ಸಲುವಾಗಿ ಕಾಯಂ ಆಗಿ ಗುಂಡಿಯಲ್ಲೇ ಇದ್ದು ಬಿಡೋದು ವಾಸಿ ಎನ್ನಿಸಿ ಇಳಿದುಬಿಟ್ಟೆ' ಎಂದಿದ್ದಳು. `ಬೇಸರವಿಲ್ಲವಾ?' ಎಂದಿದ್ದೆ. `ಹೊಟ್ಟೆ ಏನನ್ನೂ ಕೇಳೋದಿಲ್ಲ' ಮಾರ್ಮಿಕವಾಗಿ ನುಡಿದಿದ್ದಳು.

`ಹೋಗಲಿಬಿಡು, ಆದರೆ ಹುಷಾರು. ಕಾಯಿಲೆ ಯಾವ ಗಳಿಗೆಗೂ ಅಂಟಿಕೊಳ್ಳಬಹುದು. ಗಿರಾಕಿಗಳಿಗೆ ಕೊಡು' ಎನ್ನುತ್ತಾ ರಬ್ಬರಿನ ರೂಪವೊಂದನ್ನು ಕೈಗಿರಿಸಿದ್ದೆ. `ದುಡ್ಡು ತಗೊಂಡ ಮೇಲೆ ನಂಗೆ ಹೇಳೋದು ಕಷ್ಟ. ಹೇಳಿದರೂ ಅವರುಗಳು ಕೇಳೋದಿಲ್ಲ' ಅನುಭವಸ್ಥೆಯಂತೆ ನುಡಿದಿದ್ದಳು. ಆದರೂ `ತಿಳಿ ಹೇಳು, ನಾಳೆ ನಿಂಗೆ ತೊಂದರೆಯಾಗಬಾರದು ನೋಡು' ಕನಿಕರ ಉಕ್ಕಿ ಬಂದಿತ್ತು. `ಅದು ತಿಳಿ ಹೇಳೋ ಸಮಯ ಅಲ್ಲವೇ ಮಹರಾಯ್ತಿ. ಅದೂ ಅಲ್ಲದೆ ತುಂಬಾ ಕಾಂಪಿಟೇಷನ್ ಇದೆ. ನಾನು ಉಪದೇಶ ಮಾಡ್ತಾ ಕೂತ್ರೆ ನನ್ನ ಹತ್ರ ಒಬ್ರೂ ಬರಲ್ಲ. ಆಮೇಲೆ ನೀ ಕೊಡೋ ರಬ್ಬರ್ ತುಂಡನ್ನ ನಾನು ಮನೆ ಮನೆಗೆ ಮಾರ್ಬೇಕಾಗುತ್ತೆ ಅಷ್ಟೆ' ಎನ್ನುತ್ತಾ ಜೋರಾಗಿ ನಕ್ಕಿದ್ದಳು. `ನಿನ್ನ ತಲೆ' ಎನ್ನುತ್ತಾ ನಾನೂ ನಕ್ಕು ಬಿಟ್ಟಿದ್ದೆ.

ಆದರೆ ಪ್ರತಿ ಬಾರಿ ಆಕೆ ಪರೀಕ್ಷೆಗೆ ಬಂದಾಗಲೂ ನನ್ನ ಜೀವ ಪಟಪಟನೆ ಹೊಡೆದುಕೊಳ್ಳುತ್ತಲೇ ಇರುತ್ತಿತ್ತು. ನೆಗೆಟಿವ್ ರಿಪೋರ್ಟ್ ಬರಲಿ ದೇವರೇ ಎಂದು ಬೇಡುತ್ತಿದ್ದೆ. ಆ ಪ್ರಾರ್ಥನೆ ಅವಳಿಗಷ್ಟೇ ಸೀಮಿತವಾಗಿರದೇ ಹೋದರೂ ಅವಳ ಮೇಲೆ ಸ್ವಲ್ಪ ಹೆಚ್ಚಿರುತ್ತಿತ್ತು ಎಂಬುದು ಮಾತ್ರ ಸತ್ಯ. ಆದರೆ ನಾನಂದುಕೊಂಡ ಆ ಕ್ಷಣ ಕೇವಲ ಮೂರು ವರ್ಷದಲ್ಲಿ ಬಂದು ನನ್ನೆದುರು ನಿಂತೇ ಬಿಟ್ಟಿತ್ತು. ಲ್ಯಾಬಿನಿಂದ ಬಂದ ಬ್ಲಡ್ ರಿಪೋರ್ಟ್ ನೋಡಿ ಕುಸಿದಿದ್ದೆ. ಅವಳದ್ದೇ ಐ.ಡಿ. ನಂಬರ್ ಹೌದೋ ಅಲ್ಲವೋ ಎಂದು ಮೂರು ಮೂರು ಬಾರಿ ಪರೀಕ್ಷಿಸಿದ್ದೆ. ಎಲ್ಲವೂ ಸರಿಯಾಗಿತ್ತು. ಎಂತಹ ಕೆಲಸ ಮಾಡಿಕೊಂಡಳು, ಎಷ್ಟು ಹೇಳಿದರೂ ಕೇಳದೇ... ಕೋಪ ಉಕ್ಕಿ ಬಂದಿತ್ತು. ಆ ನಂತರ ನನಗೊಂದು ರೀತಿಯ ಹೊಸ ಸಂಕಟ ಶುರುವಾಗಿತ್ತು. ಹೇಗೆ ಹೇಳುವುದು? ಹೇಳುವುದು ನನಗೇನೂ ಹೊಸತಲ್ಲ. ಆದರೆ ತಾನು ಪಾಸಿಟಿವ್ ಎಂದು ಗೊತ್ತಾದ ಕ್ಷಣ ಪ್ರತಿಯೊಬ್ಬರೂ ಅನುಭವಿಸುವ ನೋವಿನ ಕ್ಷಣಗಳಿಗೆ ಪ್ರತಿ ಬಾರಿಯೂ ಜೀವಂತ ಸಾಕ್ಷಿ ನಾನು. ಅತ್ತು ರೋದಿಸುವ, ಮೌನದಲ್ಲೇ ಕಣ್ಣೀರು ಸುರಿಸುವ, ತೀರಾ ಏಕಾಂಗಿತನದಲ್ಲಿ ಒದ್ದಾಡುವ, ಬದುಕು ಬಿಟ್ಟೆದ್ದು ನಡೆದುಬಿಡುವ ಎಲ್ಲ ಉದಾಹರಣೆಗಳು ನನ್ನ ಮುಂದಿದ್ದರೂ, ಈಕೆ ಹೇಗೆ ಅದನ್ನು ಸ್ವೀಕರಿಸಿಯಾಳು ಎಂದು ಚಿಂತಿಸಿ ಹೈರಾಣಾಗಿದ್ದೆ. ಅವಳ ಪುಟ್ಟ ಮಕ್ಕಳು ಪದೇ ಪದೇ ನನ್ನೆದುರಿಗೆ ಬಂದು ನಿಲ್ಲತೊಡಗಿದವು. ನನ್ನ ಸಹನೆಯನ್ನು ಪರೀಕ್ಷಿಸುವವಳಂತೆ ಒಂದು ವಾರವಾದರೂ ಪತ್ತೆ ಇರದ ಆಕೆಯ ಬಗ್ಗೆ ನನಗೆ ತೀರಾ ಕೋಪ ಬಂದಿತ್ತು. ಅವಳ ಫೋನ್ ಕೂಡ ತಾನು ವ್ಯಾಪ್ತಿ ಪ್ರದೇಶದಿಂದ ಹೊರಗಿರುವೆನೆಂದು ಪದೇ ಪದೇ ತಿಳಿಸುತ್ತಲೇ ಇತ್ತು.

ಹತ್ತು ದಿನ ಕಳೆದಿರಬೇಕು. ಆಕೆ ಬಂದು ಎದುರು ಕೂತಳು. `ಎಲ್ಲಿಗೆ ಹೋಗಿದ್ದೆ' ಕೋಪ ತಡೆದುಕೊಂಡರೂ ಪ್ರಯೋಜನಕ್ಕೆ ಬರಲಿಲ್ಲ. `ಕೆಲಸದ ಮೇಲೆ' ಎಂದಳು ನಿರ್ಲಿಪ್ತವಾಗಿ. `ಹಾಳಾಗಿ ಹೋಗು' ಶಪಿಸಿದೆ. ನನ್ನ ದನಿ ಕಂಪಿಸಿದ್ದು ಆಕೆಯ ಅರಿವಿಗೂ ಬಂದಿರಬೇಕು. `ಇಲ್ಲ, ಕೊನೆಯ ಮಗನಿಗೆ ಅದೆಂತದೋ ಹೃದಯದ ತೊಂದರೆ ಅಂತೆ. ಅದಕ್ಕೆ ಬೆಂಗಳೂರಿಗೆ ಹೋಗಿದ್ದೆ' ಎಂದಳು. ಕುಸಿಯುವ ಸರದಿ ನನ್ನದಾಗಿತ್ತು. ಇಂತಹ ಸಮಯದಲ್ಲಿ ಹೇಗೆ ಹೇಳಲಿ, ಹೇಳದೇ ಇದ್ದರೆ ನಾಳೆ ಯಾರಾದರೂ ಮೇಲಿನ ಅಧಿಕಾರಿಗಳು ಬಂದರೆ ನನ್ನ ಕೆಲಸಕ್ಕೇ ಕುತ್ತು ಬರಬಹುದು. ಮೊದಲೇ ತಡವಾಗಿದೆ, ಆದದ್ದಾಗಲಿ ಹೇಳಿ ಬಿಡುವುದೇ ವಾಸಿ ಎಂದುಕೊಂಡು `ನೋಡು ನೀನೀಗ ಸ್ವಲ್ಪ ಹೃದಯ ಗಟ್ಟಿ ಮಾಡಿಕೋ' ಎನ್ನುತ್ತಾ ಹಳೆಯ ಸವಕಲು ಪದಗಳ ವೇದಿಕೆಯೊಂದನ್ನು ಅವಳೆದುರಿಗೆ ಅನಾವರಣಗೊಳಿಸುತ್ತ ಮುಖ ನೋಡಿದೆ. ಅವಳು `ಮುಂದೆ' ಎನ್ನುವಂತೆ, ನಾನು ಹಿಂದೆಂದೂ ಕಾಣದ ತಟಸ್ಥ ಭಾವದಲ್ಲಿ ಕೂತಿದ್ದಳು.

`ಈ ಕಾಯಿಲೆಯಿಂದ ಏನೂ ತೊಂದರೆ ಇಲ್ಲ. ಮಾಮೂಲಿಯಂತೆಯೇ ಬದುಕಬಹುದು. ಊಟ ತಿಂಡಿ ಚೆನ್ನಾಗಿ ಮಾಡಬೇಕು. ಸಿಡಿ4 ಕೌಂಟ್ ಕಡಿಮೆಯಾದರೆ ಮಾತ್ರ ಮಾತ್ರೆ ತಗೋಬೇಕಾಗುತ್ತೆ. ಎಲ್ಲ ನಮ್ಮ ಕೈಯ್ಯಲ್ಲಿದೆ'. ಹೀಗೆ ಉರುಹೊಡೆದಿದ್ದನ್ನು ಹೇಳುತ್ತಾ ಹೋದೆ. ಮಾತೆಲ್ಲ ಮುಗಿದಾದ ಮೇಲೆ `ನನಗದೆಲ್ಲ ಗೊತ್ತು' ಎಂದಳು. `ಹೇಗೆ' ಅನುಮಾನಿಸಿದೆ. `ಬಂದಾಗಲೆಲ್ಲ ಕೇಳಿ ಕೇಳಿ' ತೀರಾ ಬೇಸರವಾದವಳಂತೆ ನುಡಿದಳು. ಮುಂದೇನು ಮಾಡಬೇಕು ಅದನ್ನ ಹೇಳು ಸಾಕು ಎನ್ನುವಂತಿತ್ತು ಅವಳ ಆ ವರ್ತನೆ. ಅವಳ ಆ ಧೈರ್ಯ ನನಗೊಂದು ರೀತಿಯಲ್ಲಿ ನಿರಾಳವೆನ್ನಿಸಿ, ನನ್ನ ಅಧಿಕಾರ ವ್ಯಾಪ್ತಿಯನ್ನು ಬದಿಗಿರಿಸಿ ಸ್ವಲ್ಪ ಸಲಿಗೆಯಿಂದ `ಇನ್ನಾದರೂ ಬಿಟ್ಟು ಬಿಡು' ಎಂದೆ. `ಬಿಟ್ಟು?' ಹರಿತವಾಗಿ ಪ್ರಶ್ನಿಸಿದಳು. `ಬೇರೆ ಏನನ್ನಾದರೂ...' ಅಳುಕಿನಿಂದಲೇ ಹೇಳಿದೆ. `ಅದೀಗ ಸಾಧ್ಯವಿಲ್ಲ' ನೇರ ಉತ್ತರಿಸಿದಳು. `ನಿನ್ನ ಆರೋಗ್ಯ' ಕಳವಳಗೊಂಡವಳಂತೆ ಪ್ರಶ್ನಿಸಿದೆ. ಮನಸ್ಸಿನಲ್ಲಿ ಈಕೆ ಮತ್ತೆ ಇನ್ನೆಷ್ಟು ಜನಕ್ಕೆ ವೈರಸ್ ದಾಟಿಸಲಿದ್ದಾಳೋ ಎಂಬ ಭಯವಿತ್ತು. `ನೀನೇ ಹೇಳಿದೆಯಲ್ಲ ಏನೂ ಆಗಲ್ಲ ಅಂತ' ನಸುನಕ್ಕಳು. `ಆದರೂ...' ಎನ್ನುತ್ತಾ ರಿಪೋರ್ಟಿನ ಹಾಳೆಯನ್ನು ಆಕೆಯ ಕೈಗಿತ್ತೆ. ಸ್ವಲ್ಪ ಹೊತ್ತು ಮೌನವಾಗಿ ಅದನ್ನು ನೋಡಿ `ಯಾರಿಗೂ ಹೇಳಲ್ಲ ತಾನೆ' ಎನ್ನುತ್ತಾ ಕೈಯ್ಯನ್ನು ಬಲವಾಗಿ ಹಿಡಿದುಕೊಂಡಳು. ನಿಟ್ಟುಸಿರನ್ನು ಜೊತೆಗಿಟ್ಟುಕೊಂಡು ಹೊರ ಬಂದ ಅವಳ ಮಾತು ಒಂದು ಕ್ಷಣ ನನ್ನನ್ನು ಕಲಕಿತು. `ಅನುಮಾನವೇ' ಅವಳ ಕೈಯ್ಯನ್ನು ಮೆಲ್ಲನೆ ಸವರಿದೆ. `ಇಲ್ಲ' ಎನ್ನುವಂತೆ ತಲೆಯಾಡಿಸಿ `ತಪ್ಪು ತಿಳ್ಕೋಬೇಡ. ಈ ಮೂರು ಕಾಸಿನ ಹಾಳೆಯನ್ನ ನಾನು ಹೊರಗೆ ತಗೊಂಡು ಹೋದ್ರೆ ನನ್ನ ಮಕ್ಕಳನ್ನ ಸಾಕೋದು ಕಷ್ಟ ಆಗತ್ತೆ' ಎನ್ನುತ್ತಾ ಸಣ್ಣದಾಗಿ ಹರಿದು ಅಲ್ಲೇ ಇದ್ದ ಕಸದ ಬುಟ್ಟಿಯಲ್ಲಿ ಬಿಸಾಡಿದಳು. ಅವಳಿಂದ ಆ ವರ್ತನೆಯನ್ನು ನಿರೀಕ್ಷಿಸದ ನಾನು ಮಾತು ಕಳೆದುಕೊಂಡೆ. `ಯಾಕೆ ಹಾಗೆ ನೋಡುತ್ತಿದ್ದೀ? ಎಲ್ಲಿ ನಿನ್ನ ರಬ್ಬರ್ ಆಯುಧಗಳು? ಇವತ್ತು ಕೊಡಲ್ವಾ?' ಎಂದು ನಗುತ್ತಾ ಕಾಂಡೋಮ್ ಪ್ಯಾಕೆಟ್ಗಳಿಗಾಗಿ ಕೈ ಚಾಚಿದಳು. ನನಗೆ ಬಾಲ್ಯದ ಅವಳ ಮಂದಹಾಸ ಮತ್ತೆ ನೆನಪಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.