ಆಯುಷ್ಯದಲ್ಲೂ ಮಹಿಳೆ ಮುಂದುಹೆಣ್ಮಕ್ಕಳೇ ಸ್ಟ್ರಾಂಗ್‌

ಸೋಮವಾರ, ಮಾರ್ಚ್ 25, 2019
28 °C

ಆಯುಷ್ಯದಲ್ಲೂ ಮಹಿಳೆ ಮುಂದುಹೆಣ್ಮಕ್ಕಳೇ ಸ್ಟ್ರಾಂಗ್‌

Published:
Updated:
Prajavani

ಮಹಿಳೆ ಪುರುಷರಿಗಿಂತ ದೀರ್ಘಾಯುಷಿ. ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳಿಲ್ಲದೆ ಅಥವಾ ಮಹಿಳೆ ಎಂಬ ಕಾರಣಕ್ಕೆ ನಿರ್ಲಕ್ಷಕ್ಕೆ ಒಳಗಾಗಿ ಚಿಕಿತ್ಸೆ ದೊರೆಯದೆ ಅಕಾಲಿಕವಾಗಿ ರೋಗಿಯಾಗಿ ಮೃತಪಡುವವರನ್ನು ಹೊರತುಪಡಿಸಿದರೆ ಮಹಿಳೆ ಪುರುಷರಿಗಿಂತ ದೀರ್ಘ ಆಯಸ್ಸು ಪಡೆಯುವಲ್ಲಿ ಸೌಭಾಗ್ಯವಂತಳು. ತನ್ನ  ಸಮವಯಸ್ಕ ಪುರುಷರಿಗಿಂತ ಆಕೆ ಒಂದೈದಾರು ವರುಷ ಹೆಚ್ಚು ಬದುಕುತ್ತಾಳೆ. ಇದು ಭ್ರೂಣಾವಸ್ಥೆಯಿಂದ ಮುದಿ ವಯಸ್ಸಿನವರೆಗೂ ಕಂಡು ಬಂದಿರುವ ಸತ್ಯ.

ಇದಕ್ಕೆ ಸ್ಪಷ್ಟ ಕಾರಣಗಳನ್ನು ಇದುವರೆಗೂ ಹುಡುಕಲಾಗದಿದ್ದರೂ ಪ್ರಕೃತಿ ತುಸು ಪಕ್ಷಪಾತ ಮಾಡಿದೆ. ಹೆಣ್ಣು ಜೀವ ಜೈವಿಕವಾಗಿ ಹೆಚ್ಚು ಸದೃಢಳು ಎಂಬುದು ತಿಳಿಯುತ್ತದೆ. ಇದನ್ನು ಗರ್ಭಾಂಕುರತೆಯ ಕಾಲದಿಂದಲೂ ಗಮನಿಸಬಹುದು. ವಾಸ್ತವದಲ್ಲಿ ಗರ್ಭಾಂಕುರವಾಗುವ ಹೆಣ್ಣು ಭ್ರೂಣಗಳಿಗಿಂತ ಗಂಡು ಭ್ರೂಣಗಳ ಸಂಖ್ಯೆ ಹೆಚ್ಚು. ಆದರೆ ಇಪ್ಪತ್ತರ ಹರೆಯದ ಹೊತ್ತಿಗೆ ಗಂಡುಮಕ್ಕಳಿಗಿಂತ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು ಇರುತ್ತದೆ. ತಾಯಿಯ ಗರ್ಭದೊಳಗೆ ಮೃತಪಡುವ ಭ್ರೂಣಗಳ ಸಂಖ್ಯೆ ತೆಗೆದುಕೊಂಡರೆ ಗಂಡು ಭ್ರೂಣಗಳೇ ಹೆಚ್ಚು. (ಹೆಣ್ಣು ಭ್ರೂಣ ಹತ್ಯೆಯನ್ನು ಹೊರತುಪಡಿಸಿದರೆ ಸಹಜವಾಗಿ ಒಮ್ಮೊಮ್ಮೆ ಗರ್ಭ ಇಳಿದು ಹೋಗುತ್ತದೆ. ನಾಲ್ಕೈದು ತಿಂಗಳಲ್ಲಾಗುವ ಗರ್ಭಸ್ರಾವ ಗಮನಿಸಿದರೆ ಹೆಣ್ಣು ಭ್ರೂಣಕ್ಕಿಂತ ಗಂಡು ಭ್ರೂಣಗಳ ಸಂಖ್ಯೆಯೇ ಹೆಚ್ಚು ಎಂಬುದು ಸಾಬೀತಾಗಿದೆ).

ಜೈವಿಕ ಕ್ರಿಯೆಯಲ್ಲಿ ಸ್ತ್ರೀ ಹೆಚ್ಚು ಬಲಿಷ್ಠವಾಗುವುದು ಹೇಗೆಂಬುದು ಇಂದಿಗೂ ನಿಗೂಢ. ಇದಕ್ಕೆ ಪ್ರಕೃತಿ ಕೆಲವು ಅಂಶಗಳನ್ನು ಅವಳಲ್ಲಿ ಅನುವಂಶೀಯವಾಗಿ ಬರುವಂತೆ ಅನುಗ್ರಹಿಸಿರಬಹುದು. ಅವಳು ಹೊತ್ತಿರುವ ಹಾರ್ಮೋನು ಅಥವಾ ರಸದೂತಗಳಿರಬಹುದು ಅಥವಾ ತನ್ನಲ್ಲಿರುವ ಎರಡು ಎಕ್ಸ್ (XX) ಕ್ರೋಮೊಸೋಮ್‌ಗಳ ಕೃಪೆ ಇರಬಹುದು. ಏಕೆಂದರೆ ಗಂಡಸರಿಗಿರುವುದು ಒಂದೇ ಎಕ್ಸ್ ಕ್ರೋಮೊಸೋಮ್‌. ಹೆಣ್ಣಿನಲ್ಲಿರುವ ಈ ಮತ್ತೊಂದು ಎಕ್ಸ್ ಕ್ರೋಮಸೋಮ್ ಹೆಣ್ಣು ಜೀವವನ್ನು ರಕ್ಷಿಸಲು ಗೋಡೆಯಾಗಿ ನಿಂತಿರಬಹುದು.

ಕಾಯಿಲೆ ಹೆಚ್ಚು ಬಾಧಿಸುವುದು ಗಂಡಿಗೇ!
ನವಜಾತ ಗಂಡು ಶಿಶುವಿನಿಂದ ಹಿಡಿದು ಇಳಿವಯಸ್ಸಿನ ವಯೋವೃದ್ಧ ಪುರುಷನವರೆಗೂ ಕೆಮ್ಮು ನೆಗಡಿ, ಜ್ವರದಂತಹ ಸಾಮಾನ್ಯ ಕಾಯಿಲೆಗಳು ಬೇಗ ಬರುತ್ತವೆ.

ಮಕ್ಕಳು ಸಣ್ಣವರಿರುವಾಗಿನಿಂದ ಅವರ ಕಾಯಿಲೆಗಳನ್ನು ನೀವು ಗಮನಿಸಿಕೊಂಡು ಬಂದಿದ್ದರೆ ನಿಮಗೆ ಒಂದು ವಿಷಯ ಮನದಟ್ಟಾಗಿರುತ್ತದೆ. ನಿಮ್ಮ ಮನೆಯ ಹೆಣ್ಣು ಮಗುವಿಗಿಂತ ಗಂಡು ಮಗುವಿಗೆ ಬೇಗ ಕೆಮ್ಮು, ನೆಗಡಿ, ಶೀತ, ಜ್ವರ, ಭೇದಿ ಮುಂತಾದವು ಬರುವುದನ್ನು, ಕಾಯಿಲೆ ಬಂದಾಗಲೂ ಹೆಣ್ಣು ಮಗುವಿಗಿಂತ ಗಂಡು ಮಗು ಹೆಚ್ಚು ಸಂಕಟದಿಂದ ಒದ್ದಾಡುವುದನ್ನು ನೋಡಿರಬಹುದು. ಆದ್ದರಿಂದಲೇ ಹಿಂದೆ ಎಷ್ಟೋ ಮನೆಗಳಲ್ಲಿ ಗಂಡು ಮಕ್ಕಳು ಕಾಯಿಲೆ ತಡೆಯುವುದಿಲ್ಲವೆಂದು ಹೆಚ್ಚು ಮುಚ್ಚಟೆಯಿಂದ ಬೆಳೆಸುತ್ತಿದ್ದರು. ಹೆಣ್ಣು ಮಕ್ಕಳ ಕಾಯಿಲೆಗಳನ್ನು ನಿರ್ಲಕ್ಷಿಸುತ್ತಿದ್ದರು.

ಇದೊಂದೇ ಕಾರಣವೇ ಹೆಣ್ಣು ದೀರ್ಘಾಯುವಾಗಿ ಬಾಳಲು! ಇನ್ನೂ ಹಲವು ಕಾರಣಗಳಿವೆ.

ಗಂಡು ಮಗು ಒಂದು ಅಥವಾ ಎರಡು ವರ್ಷ ದಾಟುತ್ತಿದ್ದಂತೆ ಸಮಾಜ ನೀನು ಗಂಡು, ನೀನು ಗಂಡು ಎಂದು ಉತ್ತೇಜಿಸುತ್ತದೆ. ಈ ಉತ್ತೇಜನದಲ್ಲಿ ನೀನು ಸಾಹಸಮಯಿ, ನೀನು ಬಲಾಢ್ಯ, ನೀನು ಹೆದರುವಂತಿಲ್ಲ ಎಂಬಂತಹ ಮಾತುಗಳಿರುತ್ತವೆ. ಹುಡುಗ ತುಸು ಹೆಚ್ಚು ಅತ್ತರೂ ‘ಅಯ್ಯೋ, ನೀನು ಹುಡುಗ ಆಗಿ ಅಳುತ್ತಿರುವೆಯಲ್ಲ’ ಎಂಬ ಛೇಡಿಕೆಯಿರುತ್ತದೆ. ಇದರಿಂದ ಹುಡುಗರು ಒಂದಷ್ಟು ಅಹಂ ಬೆಳೆಸಿಕೊಂಡು ಅಪಾಯಕಾರಿ ನಡವಳಿಕೆಗಳನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳುತ್ತಾರೆ. ಗಂಡಸಿನಲ್ಲಿ ಹುಚ್ಚು ಸಾಹಸ ಪ್ರವೃತ್ತಿ ವಂಶವಾಹಿನಿಗಳಲ್ಲೇ ಅಡಕವಾಗಿರುತ್ತೇನೋ? ಅದರ ಜೊತೆಗೆ ಇಂತಹ ಉತ್ತೇಜನಗಳು ಸೇರಿ ಗಂಡು ಮಕ್ಕಳು ಸಾಹಸ ತೋರಲು ಹೋಗಿ ಅಪಘಾತಕ್ಕೀಡಾಗುವುದು ಅವರ ಸಮವಯಸ್ಕ ಹೆಣ್ಣು ಮಕ್ಕಳಿಗಿಂತ ಹೆಚ್ಚು.

ಉದಾಹರಣೆಗೆ ಯರ‍್ರಾಬಿರ‍್ರಿ ದ್ವಿಚಕ್ರ ವಾಹನ ಚಲಾಯಿಸುವುದು, ಕಾರು ಚಲಾಯಿಸುವುದು ಅಥವಾ ಈಜಾಟವಿರಬಹುದು, ಬೆಟ್ಟ, ಮರ ಹತ್ತುವುದು ಆಗಿರಬಹುದು. ಒಟ್ಟಿನಲ್ಲಿ ಅಜಾಗರೂಕತೆಯಲ್ಲಿ ಪ್ರಾಣ ಕಳೆದುಕೊಳ್ಳುವುದು ಗಂಡ ಮಕ್ಕಳೇ. ಹೆಣ್ಣುಮಕ್ಕಳು ಅಪಾಯಕಾರೀ ಪ್ರವೃತ್ತಿಗಳನ್ನು ತೋರಿಸುವುದೇ ಇಲ್ಲ. ಅಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆ. ಅದರಲ್ಲಿ ಪಾಲ್ಗೊಂಡರೂ ಜಾಗ್ರತೆ ವಹಿಸುತ್ತಾರೆ. ಸಾಧ್ಯವಾದಷ್ಟು ಅಪಾಯ ತಮ್ಮ ಹತ್ತಿರ ಸುಳಿಯದಂತೆ ನಿಗಾ ವಹಿಸುತ್ತಾರೆ. ರಸ್ತೆ ಅಪಘಾತಗಳಲ್ಲಿ ಸಾಯುವ ಗಂಡು ಮಕ್ಕಳ ಸಂಖ್ಯೆ ಗಮನಿಸಿ. ಇನ್ನು ನದಿಗಳಲ್ಲಿ, ಸಮುದ್ರಗಳಲ್ಲಿ, ತೊರೆಗಳಲ್ಲಿ, ಜಲಪಾತಗಳಲ್ಲಿ ಪ್ರವಾಸಿ ಹುಡುಗರು ಸತ್ತರೆಂಬುದನ್ನು ಮಾಧ್ಯಮಗಳು ನಿಮಗೆ ತೋರಿಸುವುದು ಹೆಚ್ಚಾಗಿ ಹುಡುಗರನ್ನೇ.

ಸ್ತ್ರೀಯರಿಗಿಂತ ಪುರುಷರೇ ವಾಹನ ಚಲಾಯಿಸುವುದು ಹೆಚ್ಚೆಂಬುದು ಸತ್ಯವಿದ್ದರೂ ನಾನು ಈ ಸ್ವೀಡ್ ಅನ್ನು ಅಥವಾ ವೇಗವನ್ನು ನಿಭಾಯಿಸಬಲ್ಲೆ ಎಂದೂ, ಈ ಸಿಗ್ನಲ್ ಅನ್ನು ಕ್ಷಣಾರ್ಧದಲ್ಲಿ ದಾಟುವೆನೆಂದೂ, ಹದಿನೈದು ಇಪ್ಪತ್ತು ನಿಮಿಷಕ್ಕೆ ಊರು/ ಗುರಿ ಸೇರುವೆನೆಂದೂ ಇನ್ನಿಲ್ಲದ ಆತ್ಮವಿಶ್ವಾಸದಿಂದ ಮುನ್ನುಗ್ಗುವುದು ಗಂಡು ಮಕ್ಕಳೇ. ಆದ್ದರಿಂದ ಅಪಘಾತಗಳಲ್ಲಿ ಸಾಯುವವರು ಗಂಡು ಮಕ್ಕಳೇ ಹೆಚ್ಚು.

ಅಪಾಯಕಾರಿ ವೃತ್ತಿ
ಉದ್ಯೋಗ ವಿಷಯಗಳಿಗೆ ಬಂದರೆ ಅಲ್ಲೂ ಪುರುಷರೇ ಅಪಾಯಕಾರೀ ವೃತ್ತಿಗಳನ್ನು ಕೈಗೊಳ್ಳುವುದು. ವೃತ್ತಿ ಆಧಾರಿತ ಕಾಯಿಲೆಗಳಿಗೆ ಹೆಚ್ಚಿನ ಪ್ರಮಾಣಗಳಲ್ಲಿ ಬಲಿಯಾಗುವುದು. ಉದಾಹರಣೆ ಕಟ್ಟಡ ಕಟ್ಟುವ ಕಾರ್ಮಿಕರು, ಬಣ್ಣ ಬಳಿಯುವವರು, ಬಡಗಿ ಕೆಲಸ, ಪೊಲೀಸ್ ಪೇದೆಗಳು, ಹೊರೆ ಹೊರುವವರು ಇಂತಹ ಹಲವಾರು ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಡಿಯುವುದು ಗಂಡಸೇ. ಆದ್ದರಿಂದ ವೃತ್ತಿಯಿಂದ ಬರುವ ಕಾಯಿಲೆಗಳು ಇವರಿಗೆ ಅಧಿಕ.

ಚಟಗಳಿಗೆ ಸುಲಭವಾಗಿ ಬಲಿಯಾಗುವುದು ಗಂಡಸರ ಮತ್ತೊಂದು ಗುಣ. ಹೌದು, ಸಣ್ಣ ವಯಸ್ಸಿನಲ್ಲಿಯೇ ಧೂಮಪಾನ, ಮದ್ಯಪಾನದಂತಹ ದುರ್ವ್ಯಸನಗಳು ಪುರುಷನ ಆಯಸ್ಸನ್ನು ಕುಗ್ಗಿಸುತ್ತವೆ. ಮಹಿಳೆ ದುಶ್ಚಟಗಳಿಗೆ ಒಳಗಾಗುವುದು ಕಡಿಮೆ. 

ತಿನ್ನುವ ವಿಷಯಕ್ಕೆ ಬಂದರೂ ಇಲ್ಲಿಯೂ ಪುರುಷ ಬಾಯಿಗೆ ಬೀಗಮುದ್ರೆ ಧರಿಸುವುದಿಲ್ಲ. ಕಾಫೀ, ಟೀ, ಬಿಸ್ಕತ್, ಬೋಂಡ, ಪಾನಿಪೂರಿ ಎಂದು, ಅಲ್ಲಿ ಇಲ್ಲಿ ಸಮಾರಂಭಗಳೆಂದು ಅಥವಾ ಆ ಹೊಟೇಲಿನ ದೋಸೆ, ಈ ಹೊಟೇಲಿನ ಚಿಕನ್‌ ಬಿರಿಯಾನಿ ಎಂತಹ ರುಚಿಯೆಂದು ಹುಡುಕಿಕೊಂಡು ತಿಂದು ಬರುವುದರಲ್ಲೂ ಗಂಡಸರೇ ನಿಸ್ಸೀಮರು. ಹಣ ಶೇಖರಣೆಗೆ ಮಹತ್ವ ನೀಡುವ ಹೆಣ್ಣು ಹೊರಗಿನ ತಿಂಡಿ ತೀರ್ಥಗಳಿಗೆ ಮಣಿಯುವುದು ಕಡಿಮೆ. ಮನೆಯಲ್ಲಿ ಮಾಡಿ ಶುಚಿ ರುಚಿಯಾಗಿ ತಿನ್ನೋಣವೆಂದು ಹಲ್ಲಿನಡಿಯಲ್ಲಿ ನಾಲಿಗೆಯನ್ನು ತಡೆದಿರುತ್ತಾಳೆ.

ಹೊಡೆದಾಟ, ಮಾರಣಾಂತಿಕ ಹಲ್ಲೆ, ಜಗಳದ ಕೈಕೈ ಮಿಲಾಯಿಸುವಿಕೆ, ದ್ವೇಷದ ದಳ್ಳುರಿಗಳು ಇದಕ್ಕೆ ಹೆಚ್ಚು ಬಲಿಯಾಗುವವರು ಮತ್ತೆ ಪುರುಷ ವರ್ಗವೇ. (ಸುದ್ದಿಗಳನ್ನು ಗಮನಿಸಿ).

ಈ ಕಾರಣಗಳು ಪುರುಷನ ಆಯಸ್ಸು ಕುಂಠಿತಗೊಳಿಸಬಹುದಾದ ಸಾಧ್ಯತೆಗಳು ಅಷ್ಟೇ. ಸ್ತ್ರೀಯ ದೀರ್ಘಾಯಸ್ಸಿನ ಗುಟ್ಟು ಆಕೆಯಷ್ಟೇ ನಿಗೂಢ.

ಗಂಡಿಗೂ ಕಣ್ಣೀರು ಬರುತ್ತದೆ
ಮಾನಸಿಕ ತೊಳಲಾಟಗಳಿಗೆ ಬಂದರೆ ಅಲ್ಲೂ ಪುರುಷನೆ ಅಧಿಕ ಪ್ರಮಾಣದಲ್ಲಿ ಸಹಿಸಬೇಕಾಗಿ ಬಂದಿರುವುದು ಹೇಗೇ ಎನ್ನುವಿರಾ? ಬಾಲ್ಯದಿಂದಲೂ ಪ್ರತಿಯೊಬ್ಬ ಹುಡುಗನೂ ಒಂದು ಮಾತು ಕೇಳುತ್ತಲೇ ಬೆಳೆದಿರುತ್ತಾನೆ. ‘ನೀನು ಗಂಡಸು, ಹೆಂಗಸರಂತೆ ಆಳುವಂತಿಲ್ಲ, ಬಳೆ ತೊಟ್ಟು ಕೂತಿದ್ದೀಯಾ, ಹೀಗೆ ಮುಂತಾದ್ದು. ಸಮಸ್ಯೆಗಳನ್ನು ಏಕಾಂಗಿಯಾಗಿ ಸಹಿಸಲು ಪರಿಹರಿಸಲು ಹೆಣಗಾಡುತ್ತಾನೆ. ಕಷ್ಟ ಕಾರ್ಪಣ್ಯಗಳನ್ನು ಹೆಣ್ಣೊಬ್ಬಳು ಹೇಳಿಕೊಂಡು ಹಗುರವಾದಂತೆ ಆತನೆಂದೂ ಆಪ್ತರಲ್ಲೂ ತನ್ನ ಅಳಲನ್ನು ತೋಡಿಕೊಳ್ಳುವುದಿಲ್ಲ. ಕಣ್ಣೀರಿನ ಹನಿಗಳು ಜಾರದಂತೆ ಆತ ಮನದ ಮೂಲೆಯಲ್ಲಿ ಶೇಖರಿಸಿಟ್ಟಕೊಳ್ಳಬೇಕಾಗುತ್ತದೆ. ಮಾನಸಿಕ ಒತ್ತಡ ತಾಳಲಾರದೆ ಎಷ್ಟೋ ಪುರುಷರು ಮದ್ಯ ವ್ಯಸನಗಳಿಗೆ ದಾಸರಾಗುವುದು. ಸಂಭಾವಿತರು ಹೃದ್ರೋಗಕ್ಕೆ ಒಳಗಾಗುವುದು. ಸಮಾಜವೂ ಅಷ್ಟೆ.. ಹೆಣ್ಣೊಬ್ಬಳಿಗೆ ಕರುಣೆ ತೋರಿ ಆಶ್ರಯ ನೀಡಿದಂತೆ ಪುರುಷನಿಗೆ ನೀಡುವುದು ಕಡಿಮೆ. ಒಂಟಿ ಪುರುಷರಿಗಿಂತ ಗೃಹಸ್ಥ ದೀರ್ಘಕಾಲ ಬಾಳುತ್ತಾನೆ. ಇಲ್ಲಿ ಕಾರಣ ಸುಸ್ಪಷ್ಟ. ಹೆಂಡತಿ ಮಕ್ಕಳ ಕಾಳಜಿಯಿಂದ, ಮನೆಯ ಯಜಮಾನನೆಂದು ದೊರೆಯುವ ರಕ್ಷಣೆಯಿಂದ (ಗಂಡನನ್ನು ಒಳಗೆ ಕೂರಿಸಿ ಜಗಳವಾಡುವ, ರಕ್ಷಿಸುವ ಪತ್ನಿಯರನ್ನು ನೀವು ನೋಡಿರಬಹುದು. ಈ ವಾಕ್ಯ ಕೇವಲ ತಮಾಷೆಗಾಗಿ ಬರೆದಿದ್ದು). ವೈವಾಹಿಕ ಜೀವನ ಹೆಣ್ಣು ಮಕ್ಕಳ ದೀರ್ಘಾಯಸ್ಸಿಗೆ ಕೊಡುಗೆಯನ್ನೇನು ನೀಡಿಲ್ಲ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !