ಭಾನುವಾರ, ಜುಲೈ 3, 2022
27 °C
ತುತ್ತಿನ ಚೀಲ ತುಂಬುವುದಕ್ಕಾಗಿ ಬಡಪಾಯಿ ಮಹಿಳೆಯರು ತೆರುತ್ತಿರುವ ಬೆಲೆ ಗರ್ಭಕೋಶ!

ಸಿಹಿ ಹೊಲದ ಕಹಿ ಕಥನಗಳು

ರೇಣುಕಾ ನಿಡಗುಂದಿ Updated:

ಅಕ್ಷರ ಗಾತ್ರ : | |

Prajavani

ಅಸಂಘಟಿತ ದುಡಿಯುವ ವರ್ಗಗಳನ್ನು ಶೋಷಿಸುವ ಪ್ರವೃತ್ತಿ ಇಂದು–ನಿನ್ನೆಯದಲ್ಲ. ಈ ಸ್ಪರ್ಧಾತ್ಮಕ ಯುಗದಲ್ಲಿ ಅದರ ಮುಖ ಮತ್ತೂ ವಿಕಾರವಾಗಿದೆ, ಅಮಾನವೀಯವಾಗಿಯೂ ಪ್ರಕಟಗೊಳ್ಳುತ್ತಿದೆ. ದುಡಿಮೆಯ ಧಾವಂತಕ್ಕೆ ಸಿಲುಕಿದವರೆಲ್ಲರೂ ಇಲ್ಲಿ ‘ಹರಕೆಯ ಕುರಿ’ಗಳು. ತುತ್ತಿನ ಚೀಲ ತುಂಬಿಸಲು ಮನೆಯಿಂದಾಚೆ ಕಾಲಿಡುವ ಬಡ ಮಹಿಳೆಯರಿಗಂತೂ ಯಾವ ಬೆಲೆ ತೆತ್ತಾದರೂ ಸರಿ ಈ ದುಡಿಮೆಯ ಮಾರುಕಟ್ಟೆಯಲ್ಲಿ ಉಳಿಯಲೇಬೇಕಾದ ಅನಿವಾರ್ಯ. ಅಂತಲ್ಲಿ, ನಿಸರ್ಗ ಸಹಜ ಮುಟ್ಟು, ಬಸಿರು, ಬಾಣಂತನ ಎಲ್ಲಕ್ಕೂ ವ್ಯಾವಹಾರಿಕತೆಯ ಸೋಂಕು. ಸಂವೇದನೆಗಳು ಇಲ್ಲಿ ಗೌಣ. 

ಅಂತಹದ್ದೊಂದು ಅಮಾನವೀಯ ವಿದ್ಯಮಾನಕ್ಕೆ ಈಗ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಅಲ್ಲಿನ ಭೀಡ್ ಜಿಲ್ಲೆಯ ವಂಜರವಾಡಿ ಎಂಬ ಹಳ್ಳಿಯ ಸುಮಾರು ಅರ್ಧದಷ್ಟು ಮಹಿಳೆಯರು ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸುದ್ದಿಯೊಂದು ಏಪ್ರಿಲ್ ತಿಂಗಳಲ್ಲಿ ವೈಶಾಖದ ರಣಬಿಸಿಲಿನಂತೆ ಜನಸಾಮಾನ್ಯರನ್ನು ಕಾಡಿತು. ಆದರೆ, ಚುನಾವಣೆಯ ತುರುಸಿನಲ್ಲಿ ಅಷ್ಟೇ ಬೇಗ ತಣ್ಣಗೂ ಆಯಿತು.

ಕಬ್ಬು ಕೊಯ್ಲಿನ ಋತುವನ್ನೇ ನೆಚ್ಚಿಕೊಂಡಿರುವ ಬಡ ಕಾರ್ಮಿಕ ಕುಟುಂಬಗಳು ಮಹಾರಾಷ್ಟ್ರದ ಕಬ್ಬು ಬೆಳೆಯುವ ಊರುಗಳಿಗೆ ಬರುತ್ತವೆ. ಇವರಲ್ಲಿ, ಅದೇ ರಾಜ್ಯದ ಬರಪೀಡಿತ ಪ್ರದೇಶಗಳ ಜನರೂ, ಅನ್ಯ ರಾಜ್ಯಗಳ ಕಾರ್ಮಿಕರೂ ಸೇರಿರುತ್ತಾರೆ. ಮುಟ್ಟಾದಾಗ ಮಹಿಳೆಯರು ರಜೆ ತೆಗೆದುಕೊಂಡರೆ ಕೆಲಸ ಕುಂಠಿತವಾಗುತ್ತದೆ ಎಂಬ ಕಾರಣಕ್ಕೆ ಗುತ್ತಿಗೆದಾರರು ಮಹಿಳೆಯರನ್ನು ಹೆಚ್ಚಾಗಿ ಕೂಲಿಗೆ ನಿಯೋಜಿಸಿಕೊಳ್ಳುವುದಿಲ್ಲ. ದುಡಿಮೆಗೆ ಶಕ್ಯರಿರುವ ಮಹಿಳೆಯರಿಗೆ ಕೆಲಸ ಕೊಡದೆ ಆ ಹಕ್ಕನ್ನು ಕಿತ್ತುಕೊಳ್ಳುವುದು ದೌರ್ಜನ್ಯವಷ್ಟೇ ಅಲ್ಲ, ಮಾನವ ಹಕ್ಕುಗಳ ಉಲ್ಲಂಘನೆ ಕೂಡ. ಆದರೆ, ಹೊಟ್ಟೆಪಾಡಿಗಾಗಿ ದುಡಿಯಲೇಬೇಕಾಗಿರುವ ಈ ಬಡಪಾಯಿಗಳು ಅದಕ್ಕಾಗಿ ತೆರುತ್ತಿರುವ ಬೆಲೆ ಗರ್ಭಕೋಶ! ಗರ್ಭಕೋಶವನ್ನು ತೆಗೆಸಿಕೊಂಡರೆ ಮಾತ್ರ ಅವರಿಗೆ ಕೂಲಿ. ಇಲ್ಲದಿದ್ದರೆ ಇಲ್ಲ! ಈ ಕ್ರೌರ್ಯದ ಅತಿರೇಕಕ್ಕೆ ಅಂಕುಶವೇ ಇಲ್ಲ. 

ಉಪಾಯಗಾಣದ ಹಲವು ಮಹಿಳಾ ಕೂಲಿಕಾರರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗರ್ಭಕೋಶವನ್ನು ತೆಗೆಸಿಕೊಂಡಿದ್ದಾರೆ. ಕೆಲವು ಹಳ್ಳಿಗಳು ಗರ್ಭಗಳೇ ಇಲ್ಲದ ಖಾಲಿ ಒಡಲುಗಳಾಗುತ್ತಿವೆ. ಮಹಿಳೆಯರ ಮೇಲಿನ ಈ ದೌರ್ಜನ್ಯದ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ, ಮಹಿಳಾ ಸಂಘಟನೆಗಳು ಮಾತ್ರ ದನಿ ಎತ್ತಿವೆ. ಈ ಬಾರಿಯ ಚುನಾವಣಾ ಪ್ರಣಾಳಿಕೆಗಳಲ್ಲಿ, ಭಾಷಣಗಳಲ್ಲಿ ಮಹಿಳೆಯರ ಇಂತಹ ಯಾವೊಂದು ಸಮಸ್ಯೆಯೂ ಸ್ಥಾನ ಪಡೆದುಕೊಳ್ಳದೇ ಹೋದದ್ದು ನಮ್ಮ ದುರ್ದೈವ.

ಬರಪೀಡಿತ ಪಶ್ಚಿಮ ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಕಬ್ಬು ಕೊಯ್ಯುವ ಕೆಲಸ. ಪುರುಷನಿಗೆ ಸಮನಾಗಿ ದುಡಿಯುವ ಮಹಿಳೆಗೆ, ತನಗೂ ಗಂಡಸಿಗೆ ಸಿಗುವಷ್ಟೇ ಕೂಲಿ ಸಿಗಬೇಕು, ಅದು ತನ್ನ ಹಕ್ಕು, ತನ್ನ ಶ್ರಮಕ್ಕೆ ಸಿಗಬೇಕಾದ ಗೌರವ ಎಂಬ ತಿಳಿವಳಿಕೆಯ ಕೊರತೆ. ಆ ಕೊರತೆಯೇ, ಕೂಲಿ ಆಳುಗಳನ್ನು ಪೂರೈಸುವ ಗುತ್ತಿಗೆದಾರರ ಬಂಡವಾಳ. ಗರ್ಭಕೋಶವನ್ನು ತೆಗೆಸಿಕೊಳ್ಳಲು ತಗಲುವ ವೆಚ್ಚವನ್ನೂ ಗುತ್ತಿಗೆದಾರನೇ ಭರಿಸುತ್ತಾನೆ. ನಂತರ, ಕಂತುಗಳಲ್ಲಿ ಅದನ್ನು ತೀರಿಸಬೇಕಾಗುತ್ತದೆ. ಕೂಲಿ ಕಾರ್ಮಿಕ ಕುಟುಂಬವು ಆ ಸಾಲವನ್ನು ತೀರಿಸದೆ ಬೇರೆಡೆ ಹೋಗಲಾರದಂತೆ ನೋಡಿಕೊಳ್ಳುತ್ತಾನೆ. ಕಬ್ಬಿನ ಫಸಲು ಕೊಯ್ಲಾಗುವವರೆಗೆ ಕೂಲಿಕಾರರು ಗುತ್ತಿಗೆದಾರನ ಉಕ್ಕಿನ ಪಂಜರದಲ್ಲಿ ಬಂದಿಯಾಗುವ ಗುಲಾಮರು.

ಮೇಲ್ನೋಟಕ್ಕೆ ಇದು ಗುತ್ತಿಗೆದಾರ ಮತ್ತು ಕಾರ್ಮಿಕ ರಿಗೆ ಸೀಮಿತವಾದ ವಿಚಾರದಂತೆ ಕಾಣುತ್ತದೆ. ಆದರೆ ಆಳದಲ್ಲಿ ಗುತ್ತಿಗೆದಾರ, ಶಸ್ತ್ರಚಿಕಿತ್ಸೆ ನಡೆಸುವ ವೈದ್ಯ ಮತ್ತು ಭೂಮಾಲೀಕರ ದೊಡ್ಡ ಜಾಲವೇ ಇದರ ಹಿಂದಿದೆ. ಗರ್ಭಕೋಶ ತೆಗೆಸಿಕೊಂಡ ಈ ಅವ್ವಂದಿರು ಆರೋಗ್ಯವನ್ನು, ನೆಮ್ಮದಿಯನ್ನು ಕಳೆದುಕೊಂಡು ಕತ್ತೆ ಗಳಂತೆ ದುಡಿಯುತ್ತಾರೆ. ಒಲೆಯ ಬೆಂಕಿ ಆರದಂತೆ, ಕಳ್ಳುಬಳ್ಳಿಗಳು ಉಪವಾಸ ಬೀಳದಂತೆ ತಮ್ಮ ದೇಹ  ದಂಡಿಸಿ, ನೋವ ನುಂಗಿ ಕುಟುಂಬವನ್ನು ಪೊರೆಯುತ್ತಾರೆ. ಕೊಯ್ಲಾಗುವವರೆಗೂ ಕಬ್ಬಿನ ಹೊಲಗಳ ಆಸುಪಾಸಿನಲ್ಲಿ ಅಥವಾ ಸಕ್ಕರೆ ಗಿರಣಿಗಳ ಬಳಿ ವಾಸಿಸಬೇಕು. ಸ್ನಾನಗೃಹ, ಶೌಚಾಲಯ ಸೌಕರ್ಯವೂ ಇಲ್ಲ. ಮುಟ್ಟಿನ ದಿನಗಳಲ್ಲಿ ಅವರ ಪಾಡು ಕೇಳುವವರಾರು?

ಈ ಸಮಸ್ಯೆಯ ಕುರಿತು ಅಧ್ಯಯನ ಮಾಡಿದ ಒಂದು ಸಂಸ್ಥೆಯ ಪ್ರಕಾರ, ಮಹಿಳೆ ಮುಟ್ಟಾದರೆ ತಮ್ಮ ಕೆಲಸ ಕುಂಠಿತವಾಗುತ್ತದೆ ಎಂದು ಲೆಕ್ಕ ಹಾಕಬಲ್ಲ ಧನದಾಹಿಗಳಿಗೆ, ಮಹಿಳೆಯ ಶ್ರಮಶಕ್ತಿ ಪುರುಷನ ಶ್ರಮಶಕ್ತಿಯಷ್ಟೇ ಮೌಲ್ಯಯುತ ಎಂದು ಅನಿಸುವುದಿಲ್ಲ. ಲಿಂಗ ತಾರತಮ್ಯ, ವೇತನದಲ್ಲಿ ಅಸಮಾನತೆ, ಲೈಂಗಿಕ ದೌರ್ಜನ್ಯದಂಥ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶ್ರಮಿಕ ಮಹಿಳೆಯರು ದುಡಿಯುವಂತೆ ಮಾಡುತ್ತದೆ ಜಡ್ಡುಗಟ್ಟಿದ ಪುರುಷಪ್ರಧಾನ  ವ್ಯವಸ್ಥೆಯ ದಬ್ಬಾಳಿಕೆ.

‘ಭೂಮಾಲೀಕರು, ಎಲ್ಲಾ ಪುರುಷರಂತೆ ಬಿತ್ತದೇ ಬೆಳೆ ಕೊಯ್ಯಬೇಕೆಂದು ಬಯಸುತ್ತಾರೆ’ ಎಂದಿದ್ದ ಕಾರ್ಲ್‌ ಮಾರ್ಕ್ಸ್‌. ಇಲ್ಲಿ ಭೂಮಾಲೀಕನಿಗೆ ಕೆಲಸವಾಗಬೇಕಷ್ಟೇ. ಆ ಕೆಲಸವನ್ನು ಕನಿಷ್ಠ ಸಮಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಾಡಿಸಿಕೊಡುವವನು ಈ ಗುತ್ತಿಗೆದಾರ. ಕೃಷಿ ಕ್ಷೇತ್ರದಲ್ಲಿ ಗುತ್ತಿಗೆದಾರನ ಪಾತ್ರ ಎಷ್ಟು ಅಮಾನವೀಯ ಆಗಿದೆಯೋ ಅಷ್ಟೇ ಅಮಾನವೀಯತೆ ಕೆಲವು ಕಂಪನಿಗಳು ಹಾಗೂ ಗಿರಣಿಗಳಲ್ಲಿದೆ. ಶ್ರಮಿಕರನ್ನು ಒದಗಿಸಿ ಅವರ ಮೂಲಕ ಗರಿಷ್ಠ ಉತ್ಪಾದನೆಯನ್ನು ತೆಗೆಯುವ ಉದ್ಯಮದಲ್ಲಿ ಮಾಲೀಕನ ಎಲ್ಲ ತಂತ್ರಗಾರಿಕೆಯ ಬೆಂಬಲಿಗನಾಗಿರುವ ಗುತ್ತಿಗೆದಾರನ ಷಡ್ಯಂತ್ರಗಳನ್ನು ಗಮನಿಸಿದರೆ, ಒಳಗಿನ ಕೊಳಕು ಬೆಚ್ಚಿಬೀಳಿಸುತ್ತದೆ.

ಒಬ್ಬ ಕೂಲಿಕಾರ ಹೇಳುವಂತೆ, ಒಂದು ಟನ್ ಕಬ್ಬು ಕೊಯ್ದರೆ ಸಿಗುವ ಹಣ ₹ 250. ದಿನಕ್ಕೆ 3-4 ಟನ್‌ ಕಬ್ಬನ್ನು ಕೊಯ್ಯಬಹುದು. ಈ ನಾಲ್ಕೈದು ತಿಂಗಳ ಕಬ್ಬು ಕೊಯ್ಲಿನ ಅವಧಿಯಲ್ಲಿ ಸುಮಾರು 300 ಟನ್ನುಗಳಷ್ಟು ಕಬ್ಬನ್ನು ಕೊಯ್ಯುತ್ತಾರೆ. ಇದೊಂದೇ ಅವರ ವಾರ್ಷಿಕ ಆದಾಯ. ಆನಂತರ ಅವರಿಗೆ ಯಾವ ಕೂಲಿಯೂ ಸಿಗುವುದಿಲ್ಲವಂತೆ. ಆದಕಾರಣ ಅನಾರೋಗ್ಯದಲ್ಲಿಯೂ ಒಂದು ದಿನವೂ ವಿಶ್ರಾಂತಿ ಪಡೆಯದೆ ದುಡಿಯಬೇಕಾದ ಅನಿವಾರ್ಯ ಅವರಿಗಿದೆ. ಮಹಿಳೆ ಕೆಲಸಕ್ಕೆ ಹೋಗದಿದ್ದರೆ ಅವಳ ಕೂಲಿಯಷ್ಟೇ ಅಲ್ಲ, ಅವಳ ಗಂಡನ ಕೂಲಿಯನ್ನೂ ಮುರಿದುಕೊಳ್ಳುತ್ತಾನಂತೆ ಗುತ್ತಿಗೆದಾರ! ಇದ್ಯಾವ ನೀತಿ?

ಇಂತಹ ಸ್ಥಿತಿಯಲ್ಲಿ, ತಮ್ಮ ದುಡಿಮೆಗೆ ಕುತ್ತಾಗಿರುವ ಈ ಗರ್ಭಕೋಶವಾದರೂ ಯಾಕಿರಬೇಕು ಎಂದು ಕೊಳ್ಳುವ ಅಮಾಯಕರು ಅವುಗಳನ್ನು ತೆಗೆಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಮಕ್ಕಳಾದ ತಾಯಂದಿರೂ ಇದ್ದಾರೆ, ಮದುವೆಯಾಗದ ಯುವತಿಯರೂ ಸೇರಿದ್ದಾರೆ. ಆದರೆ ಅದರಿಂದ ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳ ಬಗ್ಗೆ ಅವರಿಗೆ ತಿಳಿಸಿ ಹೇಳುವವರಾರು? ಯಾವುದೇ ಕಾರಣಕ್ಕೆ ಮಹಿಳೆಯೊಬ್ಬಳ ಗರ್ಭಕೋಶ ತೆಗೆದಾಗ ಆಕೆಗೆ ಹೆಚ್ಚು ವಿಶ್ರಾಂತಿ ಅಗತ್ಯ. ಆದರೆ, ಈ ಕೂಲಿಕಾರ ಮಹಿಳೆಯರ ವಿಷಯದಲ್ಲಿ ಇಂತಹ ಯಾವ ಮಾನವೀಯ ಮೌಲ್ಯವೂ ಅನ್ವಯವಾಗದಿರುವುದು ದುರಂತ.

ಕರ್ನಾಟಕದಲ್ಲೂ ಕೆಲವು ಆಸ್ಪತ್ರೆಗಳು ಸರ್ಕಾರದ ಆರೋಗ್ಯ ಯೋಜನೆಗಳ ಲಾಭ ಪಡೆಯಲು, ಬಡ ಮಹಿಳೆಯರ ಗರ್ಭಕೋಶಗಳಿಗೆ ಅನಗತ್ಯವಾಗಿ ಕತ್ತರಿ ಹಾಕಿರುವ ನಿದರ್ಶನಗಳಿವೆ ಎಂಬ ಕೂಗು ಕೇಳಿಬಂದಿದೆ. ‘ರಾಜ್ಯದ ವಿವಿಧೆಡೆ ವೈದ್ಯರು ಸಾಕಷ್ಟು ಪ್ರಕರಣಗಳಲ್ಲಿ, ಅವಶ್ಯಕತೆ ಇಲ್ಲದಿದ್ದರೂ ಗರ್ಭಕೋಶ ತೆಗೆಯಲು ಮುಂದಾಗಿದ್ದಾರೆ, ಇದರ ತಡೆಗೆ ಕಠಿಣ ಕಾನೂನು ರೂಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಹೈಕೋರ್ಟ್ ಇತ್ತೀಚೆಗಷ್ಟೇ ವಜಾಗೊಳಿಸಿದೆ. ಆದರೆ, ವೈದ್ಯರು ವೃತ್ತಿದ್ರೋಹ ಎಸಗಿದ್ದರೆ, ಸಕ್ಷಮ ಪ್ರಾಧಿಕಾರವಾದ ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ಪರಿಹಾರ ಪಡೆಯಬಹುದು ಎಂದು ಕೋರ್ಟ್‌ ಹೇಳಿರುವುದು ಇಲ್ಲಿ ಗಮನಾರ್ಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು