ಹೊಳೆ ಬರಿದು, ನದಿಯ ಒಡಲಲ್ಲಿ ಕಸದ ರಾಶಿ ಎಚ್ಚರಗೊಳ್ಳದಿದ್ದರೆ ಭುವಿಗೆ ಕಾದಿದೆ ಅಪಾಯ

ಭಾನುವಾರ, ಮೇ 19, 2019
34 °C
ಕಾನನದಲ್ಲೂ ಪ್ಲಾಸ್ಟಿಕ್‌ ಹಾವಳಿ

ಹೊಳೆ ಬರಿದು, ನದಿಯ ಒಡಲಲ್ಲಿ ಕಸದ ರಾಶಿ ಎಚ್ಚರಗೊಳ್ಳದಿದ್ದರೆ ಭುವಿಗೆ ಕಾದಿದೆ ಅಪಾಯ

Published:
Updated:
Prajavani

ಯಳಂದೂರು: ಆಕಾಶಕ್ಕೂ ಧರೆಗೂ ಇನ್ನಿಲ್ಲದ ನಂಟು. ಅಪ್ಪ ಅಮ್ಮ ರೀತಿಯಲ್ಲಿ ಸಕಲ ಜೀವರಾಶಿಗಳನ್ನು ಪೋಷಿಸುತ್ತಿವೆ. ಆದರೆ, ಅಭಿವೃದ್ಧಿ ಮತ್ತು ತಂತ್ರಜ್ಞಾನದ ಸುಳಿಗೆ ಸಿಲುಕಿದ ಭೂಮಿ ಇಂದು ದಿನನಿತ್ಯ ಸಂಕಟ ಎದುರಿಸುವಂತೆ ಆಗಿದೆ. 

ತಾಲ್ಲೂಕಿನ ಸುವರ್ಣಾವತಿ ನದಿಯ ಒಡಲಿಂದ ದಿನಪೂರ್ತಿ ತ್ಯಾಜ್ಯದ ರಾಶಿ ಹೊಗೆ ಬರುತ್ತಿದೆ. ಇಲ್ಲಿನ ಭೂತಳದಲ್ಲಿ ನೆಲೆಸಿರುವ ಪ್ರಾಣಿ–ಪಕ್ಷಿಗಳು ವಿಷಪದಾರ್ಥವನ್ನು ಮೆಲ್ಲುತ್ತಿವೆ. ಕೆಲವೆಡೆ ಇಳೆಯ ಒಡಲಿಂದ ಬಗೆಯುವ ಕಲ್ಲು –ಮಣ್ಣು ಬೆಟ್ಟವಾಗಿದೆ. ಕೆರೆ–ಕಟ್ಟೆಗಳಲ್ಲಿ ನೀರಿನ ಮೂಲ ಮಾಯವಾಗುತ್ತಿದೆ. ಮತ್ತೊಂದು ‘ವಿಶ್ವ ಭೂಮಿ ದಿನ’ ಎದುರುಗೊಳ್ಳುತ್ತಿರುವ ಸಂದರ್ಭದಲ್ಲಿ ನಮ್ಮ ಇಳೆ ಇಂತಹ ನೂರೆಂಟು ಸಮಸ್ಯೆಗ‌ಳಿಂದ ಬಳಲುತ್ತಿದೆ.  

‘ಹೊಳೆಯಲ್ಲಿ ಸದಾ ಕಾಲ ನೀರು ಇರುತ್ತಿತ್ತು. ಇದು ನವಿಲು, ಕಸ್ತೂರಿ ಮೃಗಗಳ ಮೆಚ್ಚಿನ ತಾಣವಾಗಿತ್ತು. ನದಿಯ ಸುತ್ತಮುತ್ತ ಹಸಿರಿನಿಂದ ಕಂಗೊಳಿಸುತ್ತಿತ್ತು. ಕೃಷಿ ಮತ್ತು ಜೀವನೋಪಾಯ ಬೇಸಾಯಕ್ಕೆ ಸಾವಿರಾರು ಜನರು ಇದನ್ನೇ ನಂಬಿದ್ದರು. ಬಾವಿಗಳಲ್ಲಿ ಅಂತರ್ಜಲ ಸದಾ ಜಿನುಗುತ್ತಿತ್ತು. ಈಗ ಕೀಟನಾಶಕ ಹಾಗೂ ಕೊಳಚೆ ಸೇರಿ ವಿಷಮಯವಾಗಿದೆ’ ಎನ್ನುತ್ತಾರೆ ಪ್ರಕೃತಿಪ್ರಿಯರು. 

‘ಹೊನ್ನುಹೊಳೆಗೆ ಪಟ್ಟಣದ ತ್ಯಾಜ್ಯ ಸುರಿದು ಬೆಂಕಿ ಹಚ್ಚಲಾಗಿದೆ. ಇಲ್ಲಿ ಸದಾ ವಾಸನೆ ಮಿಶ್ರಿತ ಹೊಗೆ ಹೊರಸೂಸುತ್ತಿರುತ್ತದೆ. ‌ಬಿಳಿಗಿರಿಬನದ ಸಮೀಪದ ರಸ್ತೆಯಲ್ಲಿ ಗಣಿಗಾರಿಕೆಯಿಂದ ನೆಲದಾಳದಿಂದ ತೆಗೆದ ಶಿಲೆ, ಅಮೂಲ್ಯ ಮಣ್ಣು, ಜೀವಜಲ ಉಪಯೋಗಕ್ಕೆ ಬರುತ್ತಿಲ್ಲ’ ಎನ್ನುತ್ತಾರೆ ಅಶೋಕ ಪರಿಸರ ಸಂರಕ್ಷಣಾ ಸಂಸ್ಥೆಯ ತಜ್ಞ ಡಾ.ಸಿ.ಮಾದೇಗೌಡ.

‘ಬಿಳಿಗಿರಿಬನದಲ್ಲಿ ವಿವಿಧ ಬಗೆಯ ಕಾಡಿನಲ್ಲಿ 100ಕ್ಕೂ ಹೆಚ್ಚು ನೀರಿನ ಮೂಲಗಳು, 25 ಬಗೆಯ ಸಸ್ತನಿಗಳು, 245 ಬಗೆಯ ಪಕ್ಷಿಗಳು, 22 ಬಗೆಯ ಸರೀಸೃಪಗಳು, 11 ಸಂತತಿಗೆ ಸೇರಿದ ದ್ವಿಚರಿಗಳು, 145 ಪ್ರಭೇದದ ಚಿಟ್ಟೆಗಳನ್ನು ಗುರುತಿಸಲಾಗಿದೆ. ಆದರೆ ಇತ್ತೀಚೆಗೆ ಇಲ್ಲಿನ ನೆಲದಲ್ಲಿ ಪ್ಲಾಸ್ಟಿಕ್, ಬಾಟಲಿ ಮತ್ತು ಅನುಪಯುಕ್ತ ವಸ್ತುಗಳು ಚೆಲ್ಲುವುದನ್ನು ಕಾಣುತ್ತಿದ್ದೇವೆ. ಇದು ವನ್ಯಜೀವಿ ಹಾಗೂ ಸಸ್ಯ ವೈವಿಧ್ಯ ಅಳಿಯಲು ಕಾರಣವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಅವರು ಒತ್ತಾಯಿಸಿದರು. 

‘ಅನೇಕ ಬಗೆಯ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೂ ಭೂದೇವಿ ಆಶ್ರಯ ನೀಡಿದ್ದಾಳೆ. ಇತ್ತೀಚಿಗೆ ಅಲ್ಲಲ್ಲಿ ಕಾಣ ಬರುವ ಕಾಡಿನಬೆಂಕಿ ಹತ್ತು ಹಲವು ಜೀವಿಗಳ ಬದುಕನ್ನೇ ಪಲ್ಲಟಗೊಳಿಸಬಹುದು. ಅವಸಾನದ ಅಂಚಿನ ಹುಲಿ, ಚಿರತೆ ಹಾಗೂ ಇನ್ನಿತರ ಪ್ರಾಣಿಗಳ ನೆಲೆಯನ್ನು ಅಳಿಸಬಹುದು. ಹಾಗಾಗಿ, ಭೂತಾಪ ತಗ್ಗಿಸಲು ಎಲ್ಲರೂ ಚಿಂತಿಸಬೇಕು’ ಎಂದು ಬಿಆರ್‌ಟಿಯ ಆರ್‌ಎಫ್‌ಒ ಮಹದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶ್ವ ಭೂಮಿ ದಿನದ ಹಿನ್ನೆಲೆ 

ವಿಶ್ವದಾದ್ಯಂತ ಭೂ ಗ್ರಹ ವಿಷಮಯ ಆಗುತ್ತಿರುವುದನ್ನು ಕಂಡ ನಿಸರ್ಗಪ್ರಿಯರು 1969ರಿಂದ ಭೂ ಮಂಡಲ ಉಳಿಸಿ ಆಂದೋಲನ ನಡೆಸುತ್ತಾ  ಬಂದಿದ್ದಾರೆ. ವಾತಾವರಣದಲ್ಲಿ ಎಗ್ಗಿಲ್ಲದೆ ತುಂಬುತ್ತಿರುವ ಇಂಗಾಲ ಭೂಮಿಯ ಬಿಸಿಗೆ ಕಾರಣವಾಗಿದೆ. ಇದನ್ನು ಮನಗಂಡ ಸರ್ಕಾರಗಳು ಕಾನೂನುಗಳನ್ನು ರೂಪಿಸಿ ಸಂರಕ್ಷಣೆಗೆ ಮುಂದಾಗಿವೆ.

‘ಅಳಿಯುತ್ತಿರುವ ಪ್ರಭೇದ ಉಳಿಸಿ’ ಎಂಬುದು 2019ರ ವಿಶ್ವ ಭೂ ದಿನದ ಆಶಯ. ಹವಾಮಾನ ಬದಲಾವಣೆ, ನಶಿಸುತ್ತಿರುವ ಕಾನನ, ಮಾಲಿನ್ಯದಲ್ಲಿ ಹೆಚ್ಚಳ ಹಾಗೂ ಕಾನೂನು ಉಲ್ಲಂಘನೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕ್ರಮವಹಿಸುವುದಾಗಿದೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !