ಶುಕ್ರವಾರ, ಅಕ್ಟೋಬರ್ 18, 2019
27 °C
ಇಂದು ವಿಶ್ವ ಮಾನಸಿಕ ಆರೋಗ್ಯ ದಿನ

ಕರ್ನಾಟಕ ಕೇಂದ್ರೀಯ ವಿವಿ ವಿದ್ಯಾರ್ಥಿಗಳ ಬೀದಿ ನಾಟಕ

Published:
Updated:

ಕಲಬುರ್ಗಿ ಜಿಲ್ಲೆಯ ಬೋಸಗಾ ಎಂಬ ಪುಟ್ಟ ಗ್ರಾಮ. ಇಳಿ ಸಂಜೆ; ಊರಿನ ಪ್ರಮುಖ ಜಾಗದಲ್ಲಿ ಸುತ್ತ ಜನ ನಿಂತಿದ್ದಾರೆ. ನಡುವೆ ಮೂರ್ನಾಲ್ಕು ಮಂದಿ ಜೋರಾಗಿ ಕಿರಿಚಾಡುತ್ತಿದ್ದಾರೆ. ‘ನಾನು ಯಾರೂಂತ ನಿಮಗೆ ಗೊತ್ತಿಲ್ಲ...ಒಬ್ಬರಿಗೂ ಸುಮ್ಮನೆ ಬಿಡೊಲ್ಲ...ಎಲ್ಲರನ್ನೂ ಮುಗಿಸ್ತೀನಿ’ ಎಂದು ಉದ್ದ ಕೂದಲನ್ನು ಕೆದರಿಕೊಂಡು ಮಹಿಳೆ ಅರಚಾಡುತ್ತಿದ್ದಳು. ಆಕೆಯ ಮೇಲೆ ಬೂದಿ ಎರಚುತ್ತಿದ್ದ ಮಂತ್ರವಾದಿಯಂತೆ ಕಾಣುವ ವ್ಯಕ್ತಿ ಮನಸೋ ಇಚ್ಛೆ ಮಂತ್ರಗಳನ್ನು ಹೇಳುತ್ತಿದ್ದ. ಕೈಯಲ್ಲಿ ದಪ್ಪನೆಯ ದೊಣ್ಣೆ ಹಿಡಿದು, ಆ ತುದಿಯಿಂದ ಈ ತುದಿಯವರೆಗೆ ಅಬ್ಬರದಿಂದ ಹೆಜ್ಜೆ ಹಾಕುತ್ತಿದ್ದ. ‘ನಿನ್ನ ವಶಕ್ಕೆ ಪಡೆಯದೇ ಇಲ್ಲಿಂದ ಕದಲೊಲ್ಲ..ಎನ್ನುತ್ತ ದ್ರೂ...ದ್ರಾಂ...’ಎನ್ನುತ್ತ ಕೆಂಗಣ್ಣು ಬೀರುತ್ತಿದ್ದ.

ಅಲ್ಲಿದ್ದ ಗ್ರಾಮಸ್ಥರಿಗೆ ಆ ಮಹಿಳೆಯ ಸುತಾರಾಂ ಪರಿಚಯವೇ ಇರಲಿಲ್ಲ. ಆ ಮಂತ್ರವಾದಿ ತಮ್ಮ ಗ್ರಾಮದೊಳಗೆ ಹೇಗೆ ಬಂದ ಅಂತನೂ ಗೊತ್ತಿಲ್ಲ. ಎಲ್ಲ ಅಯೋಮಯ. ಹೆಚ್ಚೂ ಕಡಿಮೆ ಒಂದು ಗಂಟೆಯಿಂದ ಜನ ಈ ಪ್ರಹಸನ ನೋಡುತ್ತಾ ಒಬ್ಬರನ್ನೊಬ್ಬರು ‘ಯಾರಪ್ಪ ಇವರೆಲ್ಲ. ಏನಿದು ಕಥೆ’ ಎಂದು ಪಿಸು ಪಿಸು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಕೊನೆಗೆ, ಆ ಮಂತ್ರವಾದಿಯನ್ನು ಹಿಡಿದು ಕೇಳಿ ಬಿಡೋಣ ಎಂದುಕೊಂಡ ಗ್ರಾಮಸ್ಥರು, ಒಂದು ಹೆಜ್ಜೆ ಇಡುತ್ತಿದ್ದಂತೆ, ಬಿಗುವಿನಿಂದ ಕೂಡಿದ್ದ ವಾತಾವರಣ ಕೊಂಚ ತಿಳಿಯಾಯಿತು. ಮಂತ್ರವಾದಿ, ಮಹಿಳೆ ಇಬ್ಬರೂ ಶಾಂತರಾದರು. ಜನ ಮತ್ತೆ ಗೊಂದಲಕ್ಕೆ ಬಿದ್ದರು...!

ಹೌದು, ಇದು ನಿಜವಾದ ಘಟನೆಯಲ್ಲ. ಮಾಟ, ಮಂತ್ರದಂತಹ ಮೂಢನಂಬಿಕೆಯನ್ನು ಹೋಗಲಾಡಿಸಲು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದವರು ನಡೆಸಿದ ‘ಬೀದಿ ನಾಟಕ’. ಮಹಿಳೆ, ಭಯಾನಕ ಮಂತ್ರವಾದಿ ಇವರೆಲ್ಲ ಪಾತ್ರಧಾರಿಗಳು. ವಿವಿಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಈ ನಾಟಕದ ಸೂತ್ರಧಾರಿಗಳು ಮತ್ತು ಪಾತ್ರಧಾರಿಗಳು.

‘ದೆವ್ವ, ಭೂತ ಎಲ್ಲ ಮೂಢನಂಬಿಕೆ. ಇದರ ಬಗ್ಗೆ ಜಾಗೃತಿ ಮೂಡಿಸಲೆಂದೇ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದ್ದಾರೆ’ ಎಂದು ಪ್ರಾಧ್ಯಾಪಕರು ಗ್ರಾಮಸ್ಥರಿಗೆ ತಿಳಿ ಹೇಳಿದರು. ಮಾತ್ರವಲ್ಲ, ಅವರೊಂದಿಗೆ ಸಂವಾದವನ್ನೂ ನಡೆಸಿದರು. ಈ ಬೀದಿನಾಟಕ ಒಂದು ದಿನದ್ದಲ್ಲ. ಸೆಪ್ಟೆಂಬರ್ 20ರಿಂದ ಶುರು ಮಾಡಿ, ಸೆ.25ರವರೆಗೂ ಆರು ದಿನಗಳ ಕಾಲ ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ವಿಭಾಗದ ಪ್ರಾಧ್ಯಾಪಕರ ಜೊತೆ ಆರು ಗ್ರಾಮಗಳಿಗೆ ತೆರಳಿ ಬೀದಿ ನಾಟಕ ಪ್ರದರ್ಶಿಸಿದ್ದಾರೆ. ಗೀತೆಗಳನ್ನು ಹಾಡಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಆರು ಪಾತ್ರಗಳ ಮೂಲಕ, ಆರು ಬಗೆಯ ಮಾನಸಿಕ ಕಾಯಿಲೆಗಳ ಬಗ್ಗೆ ವಿವರಿಸಿದ್ದಾರೆ. ನಾಟಕರೂಪದಲ್ಲಿ ಮಾಹಿತಿಯನ್ನು ಮನದಟ್ಟು ಮಾಡಿಕೊಡುವ ಜತೆಗೆ, ಚಿಕಿತ್ಸೆಯ ಮಾರ್ಗವನ್ನೂ ತೋರಿಸಿದ್ದಾರೆ. ಈ ಸಪ್ತಾಹದಲ್ಲಿ ಖಿನ್ನತೆ, ಚಿತ್ತವಿಕಲತೆ (ಸ್ಕ್ರಿಝೊಫೊನಿಯಾ), ಮಾದಕವ್ಯಸನಿ, ಗೀಳು, ಮಾಟಮಂತ್ರ ಮತ್ತು ಮೂರ್ಛೆರೋಗದ ಬಗ್ಗೆ ವಿವರಿಸಿದ ಅವರು ಇವೆಲ್ಲವುಗಳಿಂದ ಪಾರಾಗದಿದ್ದರೆ, ಅಪಾಯ ತಪ್ಪಿದ್ದಲ್ಲ ಎಂಬ ಅರಿವು ಮೂಡಿಸಿದ್ದಾರೆ.

ನಗರದಲ್ಲಿ ಯಾರಾದರೂ ಮಾನಸಿಕ ರೋಗದಿಂದ ಬಳಲುತ್ತಿದ್ದರೆ ಅವರಿಗೆ ತಕ್ಷಣವೇ ಚಿಕಿತ್ಸೆ ಸಿಗುತ್ತದೆ. ಆದರೆ, ಗ್ರಾಮದಲ್ಲಿ ಅಂಥ ಕಾಯಿಲೆ ಬಂದರೆ, ಪೂರ್ವ ಜನ್ಮದ ಪಾಪ ಎಂಬಂತೆ ಬಿಂಬಿಸಲಾಗುತ್ತದೆ. ಚಿಕಿತ್ಸೆ ಕೊಡಿಸುವುದಿರಲಿ, ಯಾರೊಂದಿಗೆ ಬೆರೆಯಲು ಆಸ್ಪದ ನೀಡದೇ ಕಾಯಿಲೆಪೀಡಿತರನ್ನು ಒಂಟಿಯಾಗಿಸುತ್ತಾರೆ. ಪದೇ ಪದೇ ನಿಂದಿಸಿ, ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಾರೆ. ಹೀಗೆ ಮಾಡದಂತೆ ತಿಳಿಸಲೆಂದೇ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಈ ಅಭಿಯಾನವನ್ನು ಹಳ್ಳಿಗಳಲ್ಲಿ ಕೈಗೊಂಡಿದ್ದಾರೆ.

ವಿಭಿನ್ನ ಅನುಭವದ ಘಟನೆ

ಒಂದು ಗ್ರಾಮದಲ್ಲಿ ವಿದ್ಯಾರ್ಥಿಗಳ ನಾಟಕ, ಗಾಯನವನ್ನು ನೋಡಿದ ಗ್ರಾಮಸ್ಥರು ಬೀದಿ ಬೀದಿ ಅಲೆಯುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಕರೆ ತಂದು ಚಿಕಿತ್ಸೆ ಕೊಡಿಸುವಂತೆ ಕೋರಿದರಂತೆ. ಅಷ್ಟೇ ಅಲ್ಲ, ಆಸ್ಪತ್ರೆ ವಿಳಾಸ ಹೇಳಿ, ಅಲ್ಲಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತೇವೆ ಎಂದು ದುಂಬಾಲು ಬಿದ್ದರಂತೆ. ‘ಈ ಬೀದಿನಾಟಕದ ಅಭಿಯಾನದಲ್ಲಿ ಮಾನಸಿಕ ಕಾಯಿಲೆಗೆ ಸಂಬಂಧಿಸಿದಂತೆ ಹತ್ತು ಹಲವು ಪ್ರಕರಣಗಳು ಬೆಳಕಿಗೆ ಬಂದವು. ಅಲ್ಲದೇ ತಮ್ಮ ಕುಟುಂಬ ಸದಸ್ಯರಲ್ಲೇ ಇಂತಿಂಥ ಕಾಯಿಲೆ ಕಾಡುತ್ತಿದೆ ಎಂದು ಮುಕ್ತವಾಗಿ ಹೇಳಿಕೊಂಡು ಅದಕ್ಕೆ ಪರಿಹಾರೋಪಾಯ ಕೇಳಿಕೊಂಡಂತಹ ಪ್ರಸಂಗಗಳೂ ನಡೆಯಿತು’ ಎನ್ನುತ್ತಾರೆ ವಿವಿಯ ಅಧ್ಯಾಪಕರು.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಈ ಅಭಿಯಾನಕ್ಕೆ ವಿಭಾಗದ ಮುಖ್ಯಸ್ಥ ಪ್ರೊ. ಚನ್ನವೀರ ಆರ್.ಎಂ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಲಕ್ಷ್ಮಣ ಜಿ. ನೆರವಾಗಿದ್ದಾರೆ. ವಿದ್ಯಾರ್ಥಿ ಕಲಾವಿದರಾದ ಅಮಿತಾ, ಶ್ರೀಲಕ್ಷ್ಮಿ, ಸಾಂದ್ರಾ, ಆಶಿಕ್, ಅಜಯ್ ಮತ್ತು ಚೈತ್ರಾ ಅಭಿನಯದ ಮೂಲಕ ಗ್ರಾಮಸ್ಥರ ಮನಗೆದ್ದರು. ಪರಿಣಾಮಕಾರಿ ಮಾನಸಿಕ ಕಾಯಿಲೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

ಇದನ್ನೂ ಓದಿ: ಮಾನಸಿಕ ಆರೋಗ್ಯ ಅರಿಯುವ ಬಗೆ

ನಾಟಕದಲ್ಲಿ ಪಾಲ್ಗೊಂಡ ಬಹುತೇಕ ಪಾತ್ರಧಾರಿಗಳು ಅನ್ಯರಾಜ್ಯದವರು. ಆದರೂ ನಾಟಕ ಪ್ರದರ್ಶನದ ವೇಳೆ ಸಂವಹನ ಸಮಸ್ಯೆ ಕಾಡಲಿಲ್ಲ. ‘ಗ್ರಾಮವನ್ನು ಆಯ್ಕೆ ಮಾಡಿಕೊಂಡ ನಾವು ಅಲ್ಲಿ ನಾಟಕ ಪ್ರದರ್ಶಿಸಲು ಅವಕಾಶ ಮಾಡಿಕೊಡುವಂತೆ ಆಯಾ ಗ್ರಾಮಪಂಚಾಯಿತಿಯವರನ್ನು ಕೋರಿದೆವು. ಅನುಮತಿ ದೊರೆತ ಬಳಿಕ ನಿಗದಿತ ದಿನದಂದು ಟ್ರ್ಯಾಕ್ಟರ್‌ನಲ್ಲಿ ಬಂದು ನಾವು ಗ್ರಾಮ ಪೂರ್ತಿ ಸುತ್ತು ಹಾಕಿ, ತಮಟೆ ಬಾರಿಸಿ ಪ್ರಮುಖ ಸ್ಥಳದಲ್ಲಿ ಗ್ರಾಮಸ್ಥರನ್ನು ಸೇರಿಸಿದೆವು. ನಂತರ ಬೀದಿ ನಾಟಕ ಪ್ರದರ್ಶಿಸಿದೆವು. ಎಲ್ಲ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು’ ಎಂದು ಸಂತಸ ವ್ಯಕ್ತಪಡಿಸಿದರು ವಿದ್ಯಾರ್ಥಿಗಳು.

ಬೆಳಕಿಗೆ ಬಂದ ಪ್ರಕರಣಗಳು

‘ಜಾಗೃತಿ ಅಭಿಯಾನ ಕೈಗೊಂಡ ನರೋಣಾ, ಕಡಗಂಚಿ, ನಿಂಬರ್ಗಾ, ಭೂಸನೂರ ಮತ್ತು ಭೋಸಗಾ ಗ್ರಾಮಗಳಲ್ಲಿ ಹತ್ತು ಹಲವು ಅಂಶಗಳು ಬೆಳಕಿಗೆ ಬಂದವು. ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ಮೂಲ ಸೌಕರ್ಯವಿಲ್ಲದ ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರು ಬಗೆಬಗೆ ರೀತಿಯ ಮಾನಸಿಕ ಕಾಯಿಲೆಯಿಂದ ಬಳಲುತ್ತಾರೆ. ಆದರೆ, ಅದರ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಮಾನಸಿಕ ಸಮಸ್ಯೆ ಸಕಾಲಕ್ಕೆ ಪರಿಹಾರವಾಗದಿದ್ದಲ್ಲಿ, ಗಂಭೀರ ಪರಿಣಾಮಕ್ಕೆ ಆಸ್ಪದ ನೀಡುತ್ತದೆ' ಎಂದು ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂಗಪ್ಪ ವಗ್ಗರ್ ಹೇಳುತ್ತಾರೆ.

ಮಾನಸಿಕ ಸ್ವಾಸ್ಥ ಜಾಗೃತಿ ಅಭಿಯಾನದ ಕುರಿತ ಮಾಹಿತಿಗಾಗಿ ಸಂಗಪ್ಪ ವಗ್ಗರ್ ದೂರವಾಣಿ ಸಂಖ್ಯೆ: 8512820146

Post Comments (+)