ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Updates: ನ್ಯೂಜಿಲೆಂಡ್‌ನಲ್ಲಿ 19 ಪ್ರಕರಣ, ಗಡಿ ನಿರ್ಬಂಧ ಕಠಿಣ

Last Updated 3 ಜನವರಿ 2021, 7:22 IST
ಅಕ್ಷರ ಗಾತ್ರ

ವೆಲ್ಲಿಂಗ್ಟಂನ್: ಕಳೆದ ಮೂರು ದಿನಗಳಲ್ಲಿ ನ್ಯೂಜಿಲೆಂಡ್ ಗಡಿಯಲ್ಲಿ ಹೊಸದಾಗಿ 19 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಭಾನುವಾರ ಗಡಿ ನಿರ್ಬಂಧಗಳನ್ನು ಕಠಿಣಗೊಳಿಸಿದೆ.

ಸೋಂಕು ಪತ್ತೆಯಾದವರನ್ನೆಲ್ಲ ಕ್ವಾರಂಟೈನ್‌ನಲ್ಲಿಟ್ಟಿದ್ದು, ಸಮುದಾಯದಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವಾಲಯ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ನ್ಯೂಜಿಲೆಂಡ್‌ನಲ್ಲಿ 72 ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1,825ಕ್ಕೆ ತಲುಪಿದೆ. ಈವರೆಗೆ 14,14,422 ಜನರಿಗೆ ಸೋಂಕು ಪರೀಕ್ಷೆ ನಡೆಸಲಾಗಿದೆ.

ಬ್ರಿಟನ್‌ನಲ್ಲಿ ಪತ್ತೆಯಾದ ಕೋವಿಡ್-19 ಹೊಸ ರೂಪಾಂತರಕ್ಕೆ ಹೊಂದಿಕೆಯಾಗುವ 6 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ನ್ಯೂಜಿಲೆಂಡ್ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ದೃಢಪಡಿಸಿದೆ.

ಕೊಲಂಬಿಯಾದಲ್ಲಿ 11,528 ಹೊಸ ಪ್ರಕರಣ

ಕಳೆದ 24 ಗಂಟೆಗಳಲ್ಲಿ ಕೊಲಂಬಿಯಾದಲ್ಲಿ 11,528 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 270 ಜನರು ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆಯು 16,66,408ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಒಟ್ಟಾರೆ ಮೃತಪಟ್ಟವರ ಸಂಖ್ಯೆಯು 43,765 ಆಗಿದ್ದು, ಈವರೆಗೆ 15,30,973 ಮಂದಿ ಗುಣಮುಖರಾಗಿದ್ದಾರೆ.

ಕುಕುಟಾ ನಗರದಲ್ಲಿ ಕೋವಿಡ್-19 ಹೊಸ ರೂಪಾಂತರ ಪ್ರಕರಣ ಪತ್ತೆಯಾಗಿದೆ ಎನ್ನುವ ವರದಿಗಳನ್ನು ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಳ್ಳಿಹಾಕಿದೆ. ಕೊಲಂಬಿಯಾದ ಸರ್ಕಾರವು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಫೆ. 28ರವರೆಗೆ ವಿಸ್ತರಿಸಿದ್ದು, ಜನಸಂದಣಿಯನ್ನು ತಪ್ಪಿಸಲು ಮತ್ತು ವೈರಸ್ ಹರಡುವುದನ್ನು ತಡೆಯುವ ಕ್ರಮಗಳನ್ನು ಪಾಲಿಸುವಂತೆ ಜನರನ್ನು ಒತ್ತಾಯಿಸಿದೆ.

ಜ.31ರವರೆಗೆ ಕಡ್ಡಾಯ ಅಂತರ ಕಾಯ್ದುಕೊಳ್ಳುವ ನಿಯಮಗಳ ವಿಸ್ತರಣೆ

ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರ್ಜೆಂಟೀನಾದ ಸರ್ಕಾರವು ಕಡ್ಡಾಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ಜನವರಿ 31 ರವರೆಗೆ ವಿಸ್ತರಿಸಿದೆ.

ಶನಿವಾರ ಹೊಸದಾಗಿ 5,240 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 56 ಜನರು ಸಾವಿಗೀಡಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 16,34,834 ಕ್ಕೆ ಏರಿಕೆಯಾಗಿದೆ. 43,375 ಜನರು ಇದುವರೆಗೆ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ 1,44,367 ಸಕ್ರಿಯ ಪ್ರಕರಣಗಳಿದ್ದು, 3,438 ಜನರ ಪರಿಸ್ಥಿತಿ ಗಂಭೀರವಾಗಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.

ಬ್ರೆಜಿಲ್‌ನಲ್ಲಿ 2 ಲಕ್ಷದ ಸನಿಹಕ್ಕೆ ಮೃತರ ಸಂಖ್ಯೆ

ಬ್ರೆಜಿಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 15,827 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 314 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 77,16,405ಕ್ಕೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ 1,95,725ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.

ದೇಶದಲ್ಲಿಯೇ ಅತಿಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಸಾವೊ ಪಾಲೊದಲ್ಲಿ ಈವರೆಗೆ 46,808 ಜನರು ಮೃತಪಟ್ಟಿದ್ದು, 14,67,953 ಜನರಿಗೆ ಸೋಂಕು ತಗುಲಿದೆ.

ಚಿಲಿ: 3,338 ಹೊಸ ಪ್ರಕರಣ

ಕಳೆದ 24 ಗಂಟೆಗಳಲ್ಲಿ ಚಿಲಿಯಲ್ಲಿ 3,338 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 6,15,902ಕ್ಕೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಮೂರು ಸಾವಿರಕ್ಕಿಂತ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜುಲೈನಿಂದೀಚೆಗೆ ಹೆಚ್ಚಿನ ಪ್ರಕರಣಗಳಾಗಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಸೋಂಕಿನಿಂದಾಗಿ ಹೊಸದಾಗಿ 64 ಜನರು ಸಾವಿಗೀಡಾಗಿದ್ದು, ಒಟ್ಟಾರೆ 16,724 ಜನರು ಮೃತಪಟ್ಟಿದ್ದಾರೆ. ಈವರೆಗೆ 5,81,961 ಜನರು ಗುಣಮುಖರಾಗಿದ್ದಾರೆ.

ಇಡೀ ವಿಶ್ವದಲ್ಲಿ ಈವರೆಗೆ 8.49 (8,49,82,881) ಕೋಟಿ ಜನರಿಗೆ ಸೋಂಕು ತಗುಲಿದ್ದು, 18,43,556 ಜನರು ಮೃತಪಟ್ಟಿದ್ದಾರೆ. ಈ ಪೈಕಿ 6 ಕೋಟಿ (6,00,97,098) ಜನರು ಗುಣಮುಖರಾಗಿದ್ದಾರೆ. ಸದ್ಯ 2.30 (2,30,42,227) ಕೋಟಿ ಸಕ್ರಿಯ ಪ್ರಕರಣಗಳಿದ್ದರೆ, ಇವರಲ್ಲಿ 1,06,033 ಜನರ ಪರಿಸ್ಥಿತಿ ಗಂಭೀರವಾಗಿದೆ.

ಇನ್ನುಳಿದಂತೆ ಅಮೆರಿಕದಲ್ಲಿ 2 (2,09,04,701) ಕೋಟಿಗಿಂತ ಅಧಿಕ, ಭಾರತದಲ್ಲಿ 1,03,24,631, ರಷ್ಯಾದಲ್ಲಿ 32,12,637, ಫ್ರಾನ್ಸ್‌ನಲ್ಲಿ 26,43,239 ಮತ್ತು ಇಂಗ್ಲೆಂಡ್‌ನಲ್ಲಿ 25,99,789 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವರ್ಲ್ಡೋಮೀಟರ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT