ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಐರೋಪ್ಯ ರಾಷ್ಟ್ರ ನಾಯಕರಿಂದ ಉಕ್ರೇನ್‌ ಭೇಟಿ

ರಷ್ಯಾದ ಅಕ್ರಮ ದಾಳಿ ಇಲ್ಲಿಗೇ ನಿಲ್ಲಬೇಕೆಂದು ಒತ್ತಾಯ
Last Updated 16 ಜೂನ್ 2022, 13:46 IST
ಅಕ್ಷರ ಗಾತ್ರ

ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರಿದಿರುವ ನಡುವೆಯೇ, ಉಕ್ರೇನ್‌ಗೆ ಬೆಂಬಲ ನೀಡುವ ಭಾಗವಾಗಿ ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ರೊಮೇನಿಯಾದ ನಾಯಕರು ಗುರುವಾರ ಇಲ್ಲಿನ ಇರ್ಪಿನ್ ನಗರಕ್ಕೆ ಭೇಟಿ ನೀಡಿದರು. ಈ ವೇಳೆ ಉಕ್ರೇನ್‌ನಲ್ಲಿನ ರಷ್ಯಾದ ಅಕ್ರಮ ದಾಳಿಯು ಇಲ್ಲಿಗೇ ನಿಲ್ಲಬೇಕು ಎಂದು ಒತ್ತಾಯಿಸಿದರು.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ಉಕ್ರೇನ್‌ಗೆ ಈವರೆಗೆ ನಾಲ್ಕು ದೇಶಗಳ ನಾಯಕರು ಒಮ್ಮೆಲ್ಲೇ ಭೇಟಿ ನೀಡಿರುವುದು ಇದೇ ಮೊದಲು.

ಈ ವೇಳೆ ಶೆಲ್ ಮತ್ತು ಬಾಂಬ್ ದಾಳಿಗಳಿಂದ ಹಾನಿಗೀಡಾದ ಕಟ್ಟಡಗಳು, ನುಜ್ಜುಗುಜ್ಜಾಗಿರುವ ಕಾರುಗಳು, ಸಾವು-ನೋವುಗಳು ಸೇರಿದಂತೆ ಹಲವು ಮನಕಲುಕುವ ಘಟನೆಗಳಿಗೆ ಈ ನಾಲ್ವರು ನಾಯಕರು ಸಾಕ್ಷಿಯಾದರು.ರಷ್ಯಾ ಪಡೆಗಳಿಂದ ಯುದ್ಧ ಅಪರಾಧಗಳು ನಡೆದಿರುವ ಸುಳಿವುಗಳು ಕಾಣುತ್ತಿವೆ. ಉಕ್ರೇನ್ ಜನತೆಗಾಗಿ ಯುರೋಪ್ ಒಕ್ಕೂಟವು ಒಟ್ಟಾಗಿ ನಿಲ್ಲಲಿದೆ. ಭವಿಷ್ಯದಲ್ಲೂ ನಮ್ಮ ಸಹಕಾರ ಉಕ್ರೇನ್‌ಗೆ ಇರಲಿದೆ ಎಂಬುದನ್ನು ಸಾರುವುದೇ ತಮ್ಮ ಭೇಟಿಯ ಉದ್ದೇಶ ಎಂದು ಫ್ರಾನ್ಸ್ ಅಧ್ಯಕ್ಷಇಮ್ಯಾನ್ಯುವೆಲ್ ಮ್ಯಾಕ್ರಾನ್ ತಿಳಿಸಿದರು.

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್, ಜರ್ಮನಿಯ ಚಾನ್ಸಲರ್ ಒಲಾಫ್ ಸ್ಕಾಲ್ಝ್ ಮತ್ತು ಇಟಲಿಯ ಪ್ರಧಾನಿ ಮಾರಿಯೊ ಡ್ರಾಘಿ ಅವರು ಉಕ್ರೇನ್‌ ವ್ಯವಸ್ಥೆ ಮಾಡಿದ ವಿಶೇಷ ರೈಲಿನ ಮೂಲಕ ಕೀವ್ ನಗರಕ್ಕೆ ಬಂದರು. ರೊಮೇನಿಯಾ ಅಧ್ಯಕ್ಷರು ಪ್ರತ್ಯೇಕ ರೈಲಿನಲ್ಲಿ ಕೀವ್‌ಗೆ ಬಂದರು.

ಉಕ್ರೇನ್‌ನಲ್ಲಿ ಅಮೆರಿಕದ ಇಬ್ಬರು ಪ್ರಜೆಗಳು ನಾಪತ್ತೆ!

ಬರ್ಮಿಂಗ್‌ಹ್ಯಾಂ(ಎಪಿ): ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ ಸೈನ್ಯಕ್ಕೆ ಸಲಹೆ ಮತ್ತು ಸೂಚನೆಗಳನ್ನು ನೀಡುವ ಕೆಲಸದಲ್ಲಿ ಸಕ್ರಿಯರಾಗಿದ್ದ ಅಮೆರಿಕದ ಅಲಬಾಮಾ ರಾಜ್ಯದ ಇಬ್ಬರು ಪರಿಣಿತರು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಆ್ಯಂಡಿ ಟೈ ಎನ್‌ಗೊಕ್ ಹುಯ್‌ನ್ (27) ಮತ್ತು ಅಲೆಕ್ಸಾಂಡರ್ ಡ್ರ್ಯೂಕ್ (39) ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸಬೇಕು ಎಂದು ಅವರ ಸಂಬಂಧಿಕರು ಸೆನೆಟ್ ಮತ್ತು ಇತರ ಕಚೇರಿಗಳಿಗೆ ಕೋರಿಕೆ ಸಲ್ಲಿಸಿದ್ದಾರೆ ಎಂದು ಅಮೆರಿಕದ ಸರ್ಕಾರ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಅಮೆರಿಕದ ಪ್ರತಿನಿಧಿ ರೆಪ್ ರಾಬರ್ಟ್ ಅಡೆರ್‌ಹಾಲ್ಟ್, ‘ಹುಯ್‌ನ್ ಅವರು ಸ್ವಇಚ್ಛೆ ಮೇರೆಗೆ ಉಕ್ರೇನ್ ಜೊತೆಗೂಡಿ ರಷ್ಯಾ ವಿರುದ್ಧ ಹೋರಾಡಲು ಹೋಗಿದ್ದರು. ಅವರು ಹಾರ್ಕಿವ್ ಪ್ರಾಂತ್ಯದಲ್ಲಿ ರಷ್ಯಾ ವಿರುದ್ಧ ಹೋರಾಟ ನಡೆಸಿದ್ದರು. ಆದರೆ, ಅವರ ಕುರಿತು ಜೂನ್ 8ರಿಂದ ಯಾವುದೇ ಸುಳಿವು ಲಭ್ಯವಾಗಿಲ್ಲ.ಹುಯ್‌ನ್ ಮತ್ತು ಡ್ರ್ಯೂಕ್ ಅವರು ಜೊತೆಗಿದ್ದರು. ಅವರ ಪತ್ತೆಗಾಗಿ ಅಮೆರಿಕದ ಇಲಾಖೆ ಮತ್ತು ಎಫ್‌ಬಿಐ ಕಾರ್ಯಪ್ರವೃತ್ತವಾಗಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT