ಗುರುವಾರ , ಜನವರಿ 27, 2022
27 °C
ಇಬ್ಬರು ಮಕ್ಕಳು ಸಾವು

ಇಂಡೋನೇಷ್ಯಾ | ಸುಮಾತ್ರ ದ್ವೀಪದಲ್ಲಿ ಪ್ರವಾಹ; 24,000 ಜನರ ಸ್ಥಳಾಂತರ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲ್ಹೋಕ್‌ಸುಕೊನ್ (ಇಂಡೋನೇಷ್ಯಾ): ಸುಮಾತ್ರ ದ್ವೀಪದಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. 24 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಅರಣ್ಯನಾಶವೇ ಈ ವಿಪತ್ತಿಗೆ ಕಾರಣ ಎಂದು ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದ್ವೀಪದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದು, ನದಿ ನೀರಿನ ಮಟ್ಟ ಹೆಚ್ಚಾಗಲು ಕಾರಣವಾಗಿದೆ. ಇದರಿಂದಾಗಿ ತೀರ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದ್ದು, ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ ಎಂದು ರಾಷ್ಟ್ರೀಯ ವಿಪತ್ತು ದಳ ತಿಳಿಸಿದೆ.

'ವರ್ಷದಲ್ಲಿ ಕನಿಷ್ಠ ಐದರಿಂದ ಎಂಟು ಬಾರಿ ಪ್ರವಾಹ ಎದುರಾಗುತ್ತಿರುತ್ತದೆ. ಆದರೆ, ಈ ಬಾರಿ ಗಂಭೀರವಾಗಿದೆ' ಎಂದು 'ಆಚೆ' ಪ್ರಾಂತ್ಯದ ಪಿರಾಕ್ ತಿಮುರ್‌ನ ಮುಜಾಕ್ಕಿರ್ ಎನ್ನುವವರು ಹೇಳಿದ್ದಾರೆ.

ಇದೇ ಪ್ರಾಂತ್ಯದ ಲ್ಹೋಕ್‌ಸುಕೊನ್‌ನವರಾದ ಸೈರಿಫುದ್ದೀನ್, 'ಪ್ರವಾಹ ಹೆಚ್ಚಾಗುತ್ತಲೇ ಇದೆ. ನನ್ನ ಮನೆ ಬಳಿ ಎದೆ ಮಟ್ಟಕ್ಕೆ ನೀರು ನಿಂತಿದೆ' ಎಂದಿದ್ದಾರೆ.

ಸದ್ಯ ಸ್ಥಳಾಂತರಿಸಲಾಗಿರುವವರು ಮತ್ತು ಮೃತಪಟ್ಟಿರುವವರೆಲ್ಲ ಇದೇ ಪ್ರಾಂತ್ಯದವರು. ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗುತ್ತಿರುವುದರಿಂದ ಹಲವು ಕಟ್ಟಡಗಳಿಗೆ ಮತ್ತು ಬೆಳೆಗಳಿಗೆ ಹಾನಿಯಾಗಿದೆ. ದ್ವೀಪದ ಜಾಂಬಿ ಪ್ರಾಂತ್ಯದಲ್ಲಿಯೂ ಪ್ರವಾಹ ಉಂಟಾಗಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ.

ಪರಿಸರ ಸಂಬಂಧಿ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ವಾಲ್ಹಿ, ಬೆಲೆಬಾಳುವ ತಾಳೆ ಮರಗಳನ್ನು ಬೆಳೆಯುವುದಕ್ಕಾಗಿ ಸುಮಾತ್ರದಲ್ಲಿ ಅರಣ್ಯನಾಶ ಮಾಡುತ್ತಿರುವುದು ಪ್ರವಾಹಕ್ಕೆ ಕಾರಣ ಎಂದು ಕಿಡಿಕಾರಿದೆ. 

ಪ್ರವಾಹದ ವಿರುದ್ಧ ಮರಗಳು ಸ್ವಾಭಾವಿಕ ರಕ್ಷಕದಂತೆ ಕಾರ್ಯನಿರ್ವಹಿಸುತ್ತವೆ. ನೀರಿನ ಹರಿವಿನ ವೇಗವನ್ನು ತಗ್ಗಿಸುತ್ತವೆ ಎಂದೂ ಹೇಳಿದೆ.

ನೆರೆಯ ಮಲೇಷಿಯಾದಲ್ಲಿಯೂ ಕಳೆದ ಒಂದು ತಿಂಗಳಿನಿಂದ ಪ್ರವಾಹ ಪರಿಸ್ಥಿತಿ ಇದ್ದು, ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು