ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್ ಭೀತಿ: ಆಸರೆಗೆ ಅಫ್ಗನ್ನರ ಮೊರೆ, ನಾಗರಿಕರ ತೆರವು ಕಾರ್ಯ ಇಂದು ಕೊನೆ

Last Updated 30 ಆಗಸ್ಟ್ 2021, 19:38 IST
ಅಕ್ಷರ ಗಾತ್ರ

ಕಾಬೂಲ್‌: ತಾಲಿಬಾನ್‌ ತಮ್ಮ ಮೇಲೆ ಸೇಡು ತೀರಿಸಿಕೊಳ್ಳಬಹುದು ಎಂಬ ಭೀತಿ ಅಫ್ಗಾನಿಸ್ತಾನದ ಹಲವರಲ್ಲಿ ಈಗಲೂ ಮನೆ ಮಾಡಿದೆ. ಅಂಥವರು ಕಾಬೂಲ್‌ ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ್ದಾರೆ. ತಮ್ಮನ್ನು ರಕ್ಷಿಸುವಂತೆ ವಿವಿಧ ದೇಶಗಳಿಗೆ ಮೊರೆ ಇಡುತ್ತಿದ್ದಾರೆ. ಅಫ್ಗಾನಿಸ್ತಾನದಿಂದ ವಿದೇಶಿಯರು ಮತ್ತು ಇತರರ ತೆರವು ಕಾರ್ಯಾಚರಣೆ ಮಂಗಳವಾರ ಕೊನೆಯಾಗಲಿದೆ.

‘ನಾವು ಅಪಾಯದಲ್ಲಿದ್ದೇವೆ’ ಎಂದು ವಿಮಾನ ನಿಲ್ದಾಣದ ಹೊರಗೆ ಇದ್ದ ಮಹಿಳೆಯೊಬ್ಬರು ಹೇಳಿದ್ದಾರೆ. ‘ಅವರು (ಅಮೆರಿಕ) ನಮ್ಮನ್ನು ರಕ್ಷಿಸಬೇಕು. ನಾವು ಅಫ್ಗಾನಿಸ್ತಾನ ತೊರೆಯಲೇಬೇಕು ಅಥವಾ ನಮಗೆ ಅವರು ಸುರಕ್ಷಿತ ತಾಣವನ್ನು ಒದಗಿಸಬೇಕು’ ಎಂದು ಆ ಮಹಿಳೆ ಆಗ್ರಹಿಸಿದ್ದಾರೆ.

ಅತಿ ಹೆಚ್ಚು ಅಪಾಯ ಇರುವ ಜನರ ತೆರವಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇತರ ದೇಶಗಳು ಕೂಡ ಅತಿ ಹೆಚ್ಚು ಅಪಾಯ ಇರುವವರನ್ನು ತೆರವು ಮಾಡಲು ಯತ್ನಿಸುತ್ತಿವೆ.

ಅಮೆರಿಕದ ಸೇನೆಯು ದೇಶ ತೊರೆದ ತಕ್ಷಣ ಮಂಗಳವಾರದಿಂದ ಕಾಬೂಲ್‌ ವಿಮಾನ ನಿಲ್ದಾಣವನ್ನು ತಾಲಿಬಾನ್‌ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕತಾರ್‌ನ ಅಲ್‌ ಜಝೀರಾ ಸುದ್ದಿ ವಾಹಿನಿ ವರದಿ ಮಾಡಿದೆ.

1996ರಿಂದ 2001ರವರೆಗೆ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಳ್ವಿಕೆ ಇತ್ತು. ಈ ಅವಧಿಯಲ್ಲಿ ಇಸ್ಲಾಮಿಕ್‌ ಕಾನೂನು ಹೇರಿಕೆಗೆ ತಾಲಿಬಾನ್‌ ಪ್ರಯತ್ನಿಸಿತ್ತು. ಮೂಲಭೂತ ಸ್ವಾತಂತ್ರ್ಯವನ್ನೇ ದಮನ ಮಾಡಲಾಗಿತ್ತು. ಮಹಿಳೆಯರಿಗೆ ಯಾವುದೇ ಹಕ್ಕುಗಳು ಇರಲಿಲ್ಲ. ಹಾಗಾಗಿ, ತಾಲಿಬಾನ್‌ ಅಧಿಕಾರವನ್ನುಮತ್ತೆ ಕೈವಶ ಮಾಡಿಕೊಂಡಿರುವುದು ಅಫ್ಗಾನಿಸ್ತಾನದ ಜನರಲ್ಲಿ ಭಾರೀ ಭೀತಿ
ಮೂಡಿಸಿದೆ.

ಹೊಸ ಸಚಿವ ಸಂಪುಟ: ಪೂರ್ಣ ಪ್ರಮಾಣದ ಹೊಸ ಸಚಿವ ಸಂಪುಟವನ್ನು ಸದ್ಯವೇ ಘೋಷಿಸಲಾಗುವುದು. ಅದರೊಂದಿಗೆ ಜನರ ಸಂಕಷ್ಟಗಳು ಮರೆಯಾಗಲಿವೆ ಎಂದು ತಾಲಿಬಾನ್‌ ವಕ್ತಾರ ಝಬೀ ಉಲ್ಲಾ ಮುಜಾಹಿದ್‌ ಹೇಳಿದ್ದಾರೆ. ಆದರೆ, ಅಫ್ಗಾನಿಸ್ತಾನದ ಮುಂದೆ ಹಲವು ಸವಾಲುಗಳು ಇವೆ. ದಶಕಗಳ ಯುದ್ಧ ಮತ್ತು ಸತತ ಬರಗಾಲದಿಂದಾಗಿ ಅರ್ಥ ವ್ಯವಸ್ಥೆಯು ಕುಸಿದಿದೆ. ವಿದೇಶಿ ನೆರವಿನ ರೂಪದಲ್ಲಿ ಸಿಗುತ್ತಿದ್ದ ಕೋಟ್ಯಂತರ ಡಾಲರ್‌ ಕೂಡ ಇನ್ನು ಸ್ಥಗಿತಗೊಳ್ಳಲಿದೆ.

‘ನಿರಾಶ್ರಿತರಿಗಾಗಿ ಗಡಿ ತೆರೆದಿಡಿ’
ಜಿನೀವಾ (ರಾಯಿಟರ್ಸ್‌):
ಅಫ್ಗಾನಿಸ್ತಾನವು ಭಾರಿ ಬಿಕ್ಕಟ್ಟಿನತ್ತ ಸಾಗುತ್ತಿದೆ. ಇಲ್ಲಿನ 3.9 ಕೋಟಿ ಜನರು ಬಹುದೊಡ್ಡ ಸಂಕಷ್ಟ ಎದುರಿಸಲಿದ್ದಾರೆ ಎಂದು ವಿಶ್ವ ಸಂಸ್ಥೆಯ ನಿರಾಶ್ರಿತ ಸಂಸ್ಥೆ (ಯುಎನ್‌ಎಚ್‌ಸಿಆರ್‌) ಹೇಳಿದೆ.

ಈ ವರ್ಷದ ಕೊನೆಯ ಒಳಗೆ ಸುಮಾರು 5 ಲಕ್ಷ ಜನರು ದೇಶ ಬಿಟ್ಟು ಪರಾರಿ ಆಗುವ ಸಾಧ್ಯತೆ ಇದೆ. ಈ ಜನರಿಗೆ ಎಲ್ಲರೂ ಬೆಂಬಲ ನೀಡಬೇಕು. ಅಫ್ಗಾನಿಸ್ತಾನದ ಸುತ್ತಲಿನ ದೇಶಗಳು ಮತ್ತು ಇತರ ದೇಶಗಳು ನಿರಾಶ್ರಿತರಿಗಾಗಿ ಗಡಿಗಳನ್ನು ತೆರೆದಿರಿಸಬೇಕು ಎಂದು ಯುಎನ್‌ಎಚ್‌ಸಿಆರ್‌ ಹೈಕಮಿಷನರ್‌ ಫಿಲಿಪ್ಪೊ ಗ್ರಾಂಡಿ ಹೇಳಿದ್ದಾರೆ.

ಇರಾನ್‌ ಮತ್ತು ಪಾಕಿಸ್ತಾನ ದೇಶಗಳು ಅಫ್ಗಾನಿಸ್ತಾನದ 22 ಲಕ್ಷ ನಿರಾಶ್ರಿತರಿಗೆ ಆಶ್ರಯ ಕೊಟ್ಟಿವೆ. ಬೇರೆ ದೇಶಗಳೂ ಈ ದಿಸೆಯಲ್ಲಿ ಯೋಚಿಸಬೇಕು ಎಂದು ಅವರು ಹೇಳಿದ್ದಾರೆ.

ಅಮೆರಿಕ ಸೇಡಿಗೆ ತಾಲಿಬಾನ್‌ ಕಿಡಿಕಿಡಿ
ಐಎಸ್‌–ಕೆ ಉಗ್ರರು ಎಂದು ಶಂಕಿಸಿ ಅಮೆರಿಕ ನಡೆಸಿದ ಡ್ರೋನ್‌ ದಾಳಿಯಲ್ಲಿ ನಾಗರಿಕರು ಬಲಿಯಾಗಿದ್ಧಾರೆ. ಈ ದಾಳಿಯ ಬಗ್ಗೆ ತಮಗೆ ಮಾಹಿತಿಯನ್ನೂ ನೀಡಿಲ್ಲ ಎಂದು ತಾಲಿಬಾನ್‌ ಆಕ್ರೋಶ ವ್ಯಕ್ತಪಡಿಸಿದೆ. ದಾಳಿಯನ್ನು ಖಂಡಿಸಿದೆ.

ವಿದೇಶಿ ನೆಲದಲ್ಲಿ ಅಮೆರಿಕದ ಕಾರ್ಯಾಚರಣೆಯು ಕಾನೂನುಬಾಹಿರ. ಭಾನುವಾರ ನಡೆಸಿದ ಡ್ರೋನ್‌ ದಾಳಿಯಲ್ಲಿ ಏಳು ನಾಗರಿಕರು ಮೃತಪಟ್ಟಿದ್ಧಾರೆ ಎಂದು ತಾಲಿಬಾನ್‌ ವಕ್ತಾರ ಝಬೀವುಲ್ಲಾ ಮುಜಾಹಿದ್‌ ಹೇಳಿದ್ದಾರೆ.

‘ಅಫ್ಗಾನಿಸ್ತಾನಕ್ಕೆ ಯಾವುದೇ ಅಪಾಯ ಇದ್ದರೆ ಅದನ್ನು ನಮ್ಮ ಗಮನಕ್ಕೆ ತರಬೇಕು. ಅದರ ಬದಲಿಗೆ ಸ್ವೇಚ್ಛೆಯಿಂದ ನಡೆಸಿದ ದಾಳಿಯಲ್ಲಿ ನಾಗರಿಕರು ಸತ್ತಿದ್ದಾರೆ’ ಎಂದು ಚೀನಾದ ಸಿಜಿಟಿಎನ್‌ ಸುದ್ದಿವಾಹಿನಿಗೆ ಅವರು ಹೇಳಿದ್ದಾರೆ.

ನಂಗರ್‌ಹರ್‌ ಪ್ರಾಂತ್ಯದಲ್ಲಿಯೂ ಅಮೆರಿಕವು ಶನಿವಾರ ಡ್ರೋನ್‌ ದಾಳಿ ನಡೆಸಿ ಇಸ್ಲಾಮಿಕ್‌ ಸ್ಟೇಟ್‌ನ ಇಬ್ಬರು ಉಗ್ರರನ್ನು ಹತ್ಯೆ ಮಾಡಿತ್ತು. ಈ ದಾಳಿಯನ್ನೂ ತಾಲಿಬಾನ್‌ ಖಂಡಿಸಿದೆ. ಅಮೆರಿಕದ ದಾಳಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಮೃತಪಟ್ಟಿದೆ ಎಂದು ತಾಲಿಬಾನ್‌ ಹೇಳಿದೆ.

*
ತೆರವು ಕಾರ್ಯಾಚರಣೆ ಬಳಿಕ, ಅಫ್ಗನ್ನರ ದುರಂತವು ಹೊರಜಗತ್ತಿಗೆ ಅಗೋಚರವಾಗಿಯೇ ಉಳಿಯಬಹುದು. ಆದರೆ ಅಲ್ಲಿನ ಜನಕ್ಕೆ ಇದು ನಿತ್ಯದ ನೋವು.
-ಫಿಲಿ‍ಪ್ಪೊ ಗ್ರಾಂಡಿ, ಯುಎನ್‌ಎಚ್‌ಸಿಆರ್‌ ಹೈಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT