ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: ಯುವಕ, ಯುವತಿಯರ ಪ್ರತಿರೋಧ

Last Updated 21 ಆಗಸ್ಟ್ 2021, 0:56 IST
ಅಕ್ಷರ ಗಾತ್ರ

ಕಾಬೂಲ್ : ಅಫ್ಗಾನಿಸ್ತಾನವು ತಾಲಿಬಾನ್‌ನ ಕೈವಶವಾದ ನಂತರ ಲಕ್ಷಾಂತರ ಅಫ್ಗನ್ನರು ದೇಶ ತೊರೆಯುತ್ತಿದ್ದಾರೆ. ಇದರ ಮಧ್ಯೆಯೇ ತಾಲಿಬಾನ್ ಸ್ವಾತಂತ್ರ್ಯವನ್ನು ಘೋಷಿಸಿದೆ. ಆದರೆ, ತಾಲಿಬಾನ್‌ಗೆ ದೇಶದ ಹಲವೆಡೆ ಪ್ರತಿರೋಧವೂ ವ್ಯಕ್ತವಾಗುತ್ತಿದೆ. ಬ್ರಿಟಿಷರಿಂದ ಅಫ್ಗಾನಿಸ್ತಾನ ಸ್ವಾತಂತ್ರ್ಯ ಪಡೆದು ಇದೇ ಗುರುವಾರಕ್ಕೆ 102 ವರ್ಷ ಕಳೆದಿದೆ. 102ನೇಸ್ವಾತಂತ್ರ್ಯೋತ್ಸವಕ್ಕೆ ತಾಲಿಬಾನಿಗಳು ತಮ್ಮ ಧ್ವಜವನ್ನು ಹಾರಿಸಿದ್ದಾರೆ. ಆದರೆ ಅಫ್ಗನ್‌ ಪ್ರಜೆಗಳು ತಾಲಿಬಾನ್ ಧ್ವಜವನ್ನು ಕೆಳಗಿಳಿಸಿ, ಅಫ್ಗಾನಿಸ್ತಾನದ ಅಧಿಕೃತ ಧ್ವಜವನ್ನು ಹಾರಿಸಿದ್ದಾರೆ.

ತಾಲಿಬಾನ್ ಸಂಭ್ರಮಾಚರಣೆಯ ವಿರುದ್ಧ ದೇಶದ ಹಲವು ನಗರಗಳಲ್ಲಿ ನಾಗರಿಕರು ಪ್ರತಿಭಟನೆ, ಮೆರವಣಿಗೆ ನಡೆಸಿದ್ದಾರೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ತಾಲಿಬಾನ್ ಶಸ್ತ್ರ ಪ್ರಯೋಗಿಸಿದೆ. ಆ ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ. ಬುಧವಾರದಿಂದ ಆರಂಭವಾದ ಈ ಪ್ರತಿಭಟನೆ ಈಗ ಮೂರನೇ ದಿನಕ್ಕೆ ಕಾಲಿರಿಸಿದೆ.

ಈ ಪ್ರತಿಭಟನೆಯಲ್ಲಿ ಭಾಗಿಯಾದವರಲ್ಲಿ ವಿದ್ಯಾರ್ಥಿಗಳು ಮತ್ತು ಯುವತಿಯರ ಸಂಖ್ಯೆ ದೊಡ್ಡದಿದೆ. 2001ರಲ್ಲಿ ತಾಲಿಬಾನ್ ಪತನದ ನಂತರದ ತಲೆಮಾರಿನ ಯುವಕ- ಯುವತಿಯರು ಈಗ ತಾಲಿಬಾನ್‌ನ ಆಕ್ರಮಣವನ್ನು ಒಪ್ಪುತ್ತಿಲ್ಲ. ಬದಲಿಗೆ ಪ್ರತಿರೋಧ ಒಡ್ಡುತ್ತಿದ್ದಾರೆ.

‘ತಾಲಿಬಾನ್‌ನ ಪತನದ ನಂತರ ಜನಿಸಿದವರು ಸ್ವತಂತ್ರ ಅಫ್ಗಾನಿಸ್ತಾನದ ಒಳ್ಳೆಯ ದಿನಗಳನ್ನು ನೋಡಿದ್ದಾರೆ. ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ಏನು ಎಂಬುದನ್ನು ಈ ತಲೆಮಾರು ಅನುಭವಿಸಿ ನೋಡಿದೆ. ಹೀಗಾಗಿ ಈ ತಲೆಮಾರು ತಾಲಿಬಾನ್‌ನ ಅತಿಕ್ರಮಣವನ್ನು ಸುಲಭವಾಗಿ ಒಪ್ಪುತ್ತಿಲ್ಲ. ಈ ಹೊಸ ತಲೆಮಾರಿನ ಯುವಜನರೇ ದೇಶದ ಹಲವೆಡೆ ತಾಲಿಬಾನ್ ವಿರುದ್ಧ ಪ್ರತಿರೋಧ ಹುಟ್ಟು ಹಾಕುತ್ತಿದ್ದಾರೆ. ತಾಲಿಬಾನ್ ಈ ಪ್ರತಿರೋಧವನ್ನು ಹತ್ತಿಕ್ಕಲು ಪ್ರಯತ್ನಿಸಿದಷ್ಟೂ, ಪ್ರತಿರೋಧ ಹೆಚ್ಚಾಗುತ್ತಿದೆ’ ಎಂದು ಕಾಬೂಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಯಂಸೇವಾ ಸಂಸ್ಥೆಯೊಂದರ ಸಿಬ್ಬಂದಿ ವಿವರಿಸಿದ್ದಾರೆ.

‘ತಾಲಿಬಾನ್‌ ಆಡಳಿತದಲ್ಲಿ ನಲುಗಿದ್ದ ಅಫ್ಗಾನಿಸ್ತಾನದ ಮರುನಿರ್ಮಾಣಕ್ಕೆ ಇಡೀ ವಿಶ್ವವೇ 20 ವರ್ಷ ಶ್ರಮಿಸಿದೆ. ಆ 20 ವರ್ಷದ ಶ್ರಮವು ವ್ಯರ್ಥವಾಗಲು ಅಂತರರಾಷ್ಟ್ರೀಯ ಸಮುದಾಯ ಅವಕಾಶ ಮಾಡಿಕೊಡಬಾರದು. ಆ ಶ್ರಮ ವ್ಯರ್ಥವಾಗಲು ನಾವಂತೂ ಬಿಡುವುದಿಲ್ಲ’ ಎಂದು ಕುನಾರ್ ನಗರದ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

ತಾಲಿಬಾನ್ ವಿರುದ್ಧ ಮೊದಲ ಪ್ರತಿಭಟನೆ ವರದಿಯಾದದ್ದು ಅಸಾದಾಬಾದ್‌ನಲ್ಲಿ. ಬುಧವಾರವೇ ಅಲ್ಲಿ ವಿದ್ಯಾರ್ಥಿಗಳು, ಯುವತಿಯರು ಮತ್ತು ಮಹಿಳೆಯರು ತಾಲಿಬಾನ್ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಅದನ್ನು ಹತ್ತಿಕ್ಕಲು ತಾಲಿಬಾನ್‌ಗಳು ಶಸ್ತ್ರ ಪ್ರಯೋಗಿಸಿದರು. ಆ ದಾಳಿಯಲ್ಲಿ ಹಲವು ಜನರು ಮೃತಪಟ್ಟಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಗುರುವಾರ ಮತ್ತು ಶುಕ್ರವಾರ ಈ ಪ್ರತಿಭಟನೆಯು ದೇಶದ ಇತರ ನಗರಗಳಿಗೂ ವ್ಯಾಪಿಸಿದೆ. ಗುರುವಾರ ಅಸಾದಾಬಾದ್‌, ಕಾಬೂಲ್‌, ಖೋಸ್ಟ್‌ ನಗರಗಳಲ್ಲಿ ಪ್ರತಿಭಟನೆ ನಡೆಸಿದೆ. ತಾಲಿಬಾನ್‌ ಜನ್ಮಸ್ಥಳವಾದ ಕಂದಹಾರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT