ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿ; ಖಚಿತ ಮಾಹಿತಿ ಇದೆ: ಇಂಗ್ಲೆಂಡ್ ಸಚಿವ

Last Updated 26 ಆಗಸ್ಟ್ 2021, 9:06 IST
ಅಕ್ಷರ ಗಾತ್ರ

ಲಂಡನ್: ಅಫ್ಗಾನಿಸ್ತಾನದಿಂದ ಪಲಾಯನ ಮಾಡಲು ಕಾಬೂಲ್‌ ವಿಮಾನ ನಿಲ್ದಾಣದತ್ತ ಬರುತ್ತಿರುವವರನ್ನು ಗುರಿಯಾಗಿರಿಸಿ ಉಗ್ರರು ದಾಳಿ ನಡೆಸಲು ಯೋಜಿಸುತ್ತಿರುವುದಾಗಿ ಬ್ರಿಟನ್‌ ರಕ್ಷಣಾ ಸಚಿವ ಜೇಮ್ಸ್ ಹೆಪ್ಪಿ ಆತಂಕ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್‌ ವಿದೇಶಾಂಗ ಇಲಾಖೆಯು, ʼಅಫ್ಗಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿಯು ಅತಂತ್ರವಾಗಿದೆ. ಭಯೋತ್ಪಾದಕರ ದಾಳಿ ಬೆದರಿಕೆ ಇರುವುದರಿಂದಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳದಿರಿ. ಒಂದು ವೇಳೆ ನೀವು ವಿಮಾನ ನಿಲ್ದಾಣದ ಪ್ರದೇಶದಲ್ಲಿದ್ದರೆ, ಸುರಕ್ಷಿತ ಪ್ರದೇಶಗಳತ್ತ ತೆರಳಿ. ಮುಂದಿನ ಸೂಚನೆಗಳು ಬರುವವರೆಗೆ ಅಲ್ಲಿಯೇ ಇರಿʼ ಎಂದು ಬುಧವಾರ ತಡರಾತ್ರಿ ಸೂಚನೆ ನೀಡಿತ್ತು.

ಈಸಂಬಂಧ ಬಿಬಿಸಿ ರೆಡಿಯೊಗೆ ಮಾತನಾಡಿರುವ ಸಚಿವ,ʼಅತ್ಯಂತ ವಿಶ್ವಾಸಾರ್ಹʼ ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಐಎಸ್‌ ಸಂಘಟನೆ ಉಗ್ರರು ಆತ್ಮಾಹುತಿ ಬಾಂಬ್‌ ದಾಳಿ ನಡೆಸಲಿದ್ದಾರೆಎಂಬುದು ಖಚಿತವಾಗಲಿದೆʼ ಎಂದಿದ್ದಾರೆ.

ʼಸಂಭವನೀಯ ದಾಳಿಯ ಬಗ್ಗೆ ನಂಬಲರ್ಹವಾದ ವರದಿ ಇದೀಗ ಲಭ್ಯವಾಗಿದೆ. ಅದಕ್ಕಾಗಿಯೇ ವಿದೇಶಾಂಗ ಇಲಾಖೆಯು ಜನರು ವಿಮಾನ ನಿಲ್ದಾಣದತ್ತ ಬರಬಾರದು ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕಳೆದ ರಾತ್ರಿ ಸಲಹೆನೀಡಿತ್ತುʼ ಎಂದು ತಿಳಿಸಿದ್ದಾರೆ.

ʼಆದಷ್ಟು ಬೇಗ ಪ್ರವೇಶ ಪಡೆಯುವ ಆತುರ ಸಾಲುಗಟ್ಟಿರುವ ಬಹಳಷ್ಟು ಜನರಲ್ಲಿದೆ, ಆದರೆ, ಅಪಾಯದ ಮುನ್ಸೂಚನೆ ವರದಿಯು ವಿಶ್ವಾಸಾರ್ಹ ಮೂಲದ್ದಾಗಿದೆ. ಅದು ಸತ್ಯಕ್ಕೆ ಹತ್ತಿರದ್ದಾಗಿದೆʼ ಎಂದು ಹೇಳಿದ್ದಾರೆ.

ದಾಳಿ ಭೀತಿ ಇದ್ದರೂ ಕಾಬೂಲ್ ವಿಮಾನ ನಿಲ್ದಾಣದ ಬಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ‌ ಜಮಾಯಿಸುತ್ತಿದ್ದಾರೆ.

ʼಬೆದರಿಕೆ ತೀವ್ರವಾಗಿದೆ ಎಂದು ಮಾತ್ರವೇ ನಾವು ಹೇಳಬಲ್ಲೆವು. ಅಲ್ಲಿರುವವರನ್ನು ರಕ್ಷಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ.ಮುಂದೆ ನಮಗೆ ಬರುವ ವರದಿಗಳನ್ನು ಆಧರಿಸಿ ಸಲಹೆಗಳೂ ಬದಲಾಗಬಹುದು. ಆದರೆ, ಅದಕ್ಕೆ ಯಾವುದೇ ಖಾತರಿ ಇಲ್ಲʼ ಎಂದು ಹೆಪ್ಪಿ ಎಚ್ಚರಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಿರುವ ತನ್ನ ಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಆಗಸ್ಟ್‌ 31ರ ಗಡುವನ್ನು ಪಾಲಿಸಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಅಫ್ಗಾನಿಸ್ತಾನದ ಬೆಳವಣಿಗೆಗಳ ಕುರಿತು ಚರ್ಚಿಸಲು ಜಿ-7 ರಾಷ್ಟ್ರಗಳ ನಾಯಕರು ಬುಧವಾರ ಸಭೆ ನಡೆಸಿದ್ದರು. ಈ ವೇಳೆ ಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಗಡುವನ್ನು ವಿಸ್ತರಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ನಿಗದಿತ ಗಡುವಿಗೆ ಬದ್ಧವಾಗಿರುವುದಾಗಿ ಬೈಡನ್‌ ಹೇಳಿದ್ದಾರೆ.

ಇವನ್ನೂ ಓದಿ
*

*
*
*
*
*
*
​*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT