ಅಕ್ಷತಾ ಡಿವಿಡೆಂಡ್ ಆದಾಯ ₹126 ಕೋಟಿ

ನವದೆಹಲಿ: ಬ್ರಿಟನ್ನಿನ ಪ್ರಧಾನಿಯಾಗಿ ಅಧಿಕಾರ ವಹಿಸಿ ಕೊಂಡಿರುವ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಇನ್ಫೊಸಿಸ್ ಲಿಮಿಟೆಡ್‌ನಿಂದ ಪ್ರಸಕ್ತ ವರ್ಷದಲ್ಲಿ ಡಿವಿಡೆಂಡ್ ರೂಪದಲ್ಲಿ ₹ 126.61 ಕೋಟಿ ಆದಾಯ ಗಳಿಸಿದ್ದಾರೆ.
ಅಕ್ಷತಾ ಅವರು ದೇಶದ ಎರಡನೆಯ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಇನ್ಫೊಸಿಸ್‌ನ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಎನ್.ಆರ್. ನಾರಾಯಣಮೂರ್ತಿ ಅವರ ಮಗಳು. ಅಕ್ಷತಾ ಅವರು ಇನ್ಫೊಸಿಸ್ ಕಂಪನಿಯಲ್ಲಿ ಶೇಕಡ 0.93ರಷ್ಟು ಷೇರುಗಳನ್ನು ಹೊಂದಿದ್ದಾರೆ. ಅಂದರೆ ಅವರು ಒಟ್ಟು 3,89,57,096 ಷೇರುಗಳನ್ನು ಹೊಂದಿದ್ದಾರೆ.
ಮಂಗಳವಾರದ ವಹಿವಾಟಿನಲ್ಲಿ ಇನ್ಫೊಸಿಸ್ ಷೇರು ಮೌಲ್ಯವು ಮುಂಬೈ ಷೇರುಪೇಟೆಯಲ್ಲಿ ₹ 1,527.40ಕ್ಕೆ ತಲುಪಿದೆ. ಇದರ ಅನ್ವಯ ಅಕ್ಷತಾ ಅವರು ಹೊಂದಿರುವ ಷೇರುಗಳ ಒಟ್ಟು ಮೌಲ್ಯವು ₹ 5,956 ಕೋಟಿ ಆಗುತ್ತದೆ. ಇನ್ಫೊಸಿಸ್ ಕಂಪನಿಯು ಈ ವರ್ಷದ ಮೇ ತಿಂಗಳಲ್ಲಿ ಪ್ರತಿ ಷೇರಿಗೆ ₹ 16ರಷ್ಟು ಡಿವಿಡೆಂಡ್ ಪಾವತಿಸಿದೆ. ಹಾಲಿ ಹಣಕಾಸು ವರ್ಷಕ್ಕೆ ಮಧ್ಯಂತರ ಡಿವಿಡೆಂಡ್ ರೂಪದಲ್ಲಿ ಪ್ರತಿ ಷೇರಿಗೆ ₹ 16.5ರಷ್ಟನ್ನು ಕಂಪನಿ ನೀಡಲಿದೆ. ಅಂದರೆ, ಪ್ರತಿ ಷೇರಿಗೆ ಒಟ್ಟು ₹ 32.5ರಂತೆ ಅಕ್ಷತಾ ಅವರಿಗೆ ಒಟ್ಟು ₹ 126.61 ಕೋಟಿ ಸಿಗಲಿದೆ.
ದೇಶದಲ್ಲಿ ಅತ್ಯುತ್ತಮ ಪ್ರಮಾಣದಲ್ಲಿ ಡಿವಿಡೆಂಡ್ ನೀಡುವ ಕಂಪನಿಗಳಲ್ಲಿ ಇನ್ಫೊಸಿಸ್ ಕೂಡ ಒಂದು. ಕಂಪನಿಯು 2021ರಲ್ಲಿ ಪ್ರತಿ ಷೇರಿಗೆ ಒಟ್ಟು ₹ 30ರಷ್ಟು ಡಿವಿಡೆಂಡ್ ನೀಡಿತ್ತು. ಅಂದರೆ 2021ರಲ್ಲಿ ಅಕ್ಷತಾ ಅವರಿಗೆ ₹ 119.5 ಕೋಟಿ ಸಿಕ್ಕಿರಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.