ಗುರುವಾರ , ಸೆಪ್ಟೆಂಬರ್ 16, 2021
24 °C

ಸತ್ತ ವದಂತಿಯ ಬಳಿಕ ಕಾಣಿಸಿದ ಅಲ್‌ಕೈದಾ ಮುಖ್ಯಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈರೂತ್‌ (ಎಪಿ): ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲಿನ ದಾಳಿಯ (9/11) 20ನೇ ವರ್ಷದ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ವಿಡಿಯೊವೊಂದರಲ್ಲಿ ಅಲ್‌ ಕೈದಾ ನಾಯಕ ಅಯ್ಮನ್‌ ಅಲ್‌ ಜವಾಹಿರಿ ಕಾಣಿಸಿಕೊಂಡಿದ್ದಾನೆ. ಕೆಲ ತಿಂಗಳ ಹಿಂದೆ ಈತ ಸತ್ತು ಹೋಗಿ ದ್ದಾನೆ ಎಂಬ ವದಂತಿ ಇತ್ತು. 

ಈ ವಿಡಿಯೊ ಶನಿವಾರ ಬಿಡುಗಡೆ ಯಾಗಿದೆ ಎಂದು ಮೂಲಭೂತವಾದಿ ಸಂಘಟನೆಗಳ ವೆಬ್‌ಸೈಟ್‌ಗಳ ಮೇಲೆ ನಿಗಾ ಇರಿಸುವ ‘ಸೈಟ್‌’ ಎಂಬ ಗುಪ್ತಚರ ಸಂಸ್ಥೆಯು ತಿಳಿಸಿದೆ.

‘ಜೆರುಸಲೆಂ ಎಂದಿಗೂ ಯಹೂದಿ ಗಳ ಪಾಲಾಗದು’ ಎಂದು ವಿಡಿಯೊದಲ್ಲಿ ಜವಾಹಿರಿ ಹೇಳಿದ್ದಾನೆ. ಹಾಗೆಯೇ, ಅಲ್‌ ಕೈದಾ ನಡೆಸಿದ ಎರಡು ದಾಳಿಗಳನ್ನು ಆತ ಶ್ಲಾಘಿಸಿದ್ದಾನೆ. ರಷ್ಯಾ ಪಡೆಗಳ ಮೇಲೆ ಸಿರಿಯಾದಲ್ಲಿ ಈ ಜನವರಿಯಲ್ಲಿ ನಡೆಸಿದ ದಾಳಿ ಅದರಲ್ಲೊಂದು. 

ಅಫ್ಗಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದಿರುವುದನ್ನು ಜವಾಹಿರಿ ಉಲ್ಲೇಖಿಸಿಲ್ಲ. ಆದರೆ, ಅಫ್ಗಾನಿಸ್ತಾನ ಯುದ್ಧದ 20ನೇ ವರ್ಷವನ್ನು ಪ್ರಸ್ತಾ ಪಿಸಿದ್ದಾನೆ. ಈ ವರ್ಷದ ಜನವರಿ 1ರ ಉಲ್ಲೇಖವೂ ಇದೆ.

ಅಮೆರಿಕದ ಸೇನೆ ಹಿಂಪಡೆತ ಒಪ್ಪಂದವು 2020ರ ಫೆಬ್ರುವರಿಯಲ್ಲಿಯೇ ಆಗಿತ್ತು. ಜವಾಹಿರಿ ಸತ್ತಿದ್ದಾನೆ ಎಂಬ ವದಂತಿ 2020ರ  ಕೊನೆಯ ಹೊತ್ತಿಗೆ ಕೇಳಿ ಬಂದಿತ್ತು.  2020ರ ಕೊನೆಯಲ್ಲಿಯೇ ಈ ವಿಡಿಯೊ ಚಿತ್ರೀಕರಣ ಆಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ‘ಸೈಟ್‌’ ಹೇಳಿದೆ. 

‘2021ರ ಜನವರಿಯಲ್ಲಿ ಅಥವಾ ಅದರ ನಂತರ ಈ ವಿಡಿಯೊವನ್ನು ಚಿತ್ರೀಕರಿಸಿರಬಹುದು’ ಎಂದು ಸೈಟ್‌ ನಿರ್ದೇಶಕಿ ರೀಟಾ ಕಟ್ಜ್‌ ಹೇಳಿದ್ದಾರೆ. 

ಅಲ್‌ ಕೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ ಲಾದೆನ್‌ನನ್ನು ಅಮೆರಿಕದ ಪಡೆಯು 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಹತ್ಯೆ ಮಾಡಿದ ಬಳಿಕ, ಜವಾಹಿರಿಯು ಅಲ್‌ಕೈದಾ ನಾಯಕತ್ವ ವಹಿಸಿಕೊಂಡಿದ್ದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು