ಶನಿವಾರ, ನವೆಂಬರ್ 28, 2020
18 °C

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಫಲಿತಾಂಶ ವಿಳಂಬ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪೂರ್ವದಲ್ಲೇ ದಾಖಲೆಯ ಮತದಾನವಾಗಿರುವ ಕಾರಣ ಫಲಿತಾಂಶವು ತಡವಾಗುವ ಸಾಧ್ಯತೆ ಇದೆ ಎಂದು ಸಿಎನ್‌ಎನ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಇಲ್ಲಿಯವರೆಗೂ 58.7 ಮಿಲಿಯನ್‌ಗೂ (5.87 ಕೋಟಿ) ಅಧಿಕ ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಪ್ರಮಾಣ ಹೆಚ್ಚು.

‘ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಒಂಬತ್ತು ದಿನಗಳು (ನವೆಂಬರ್‌ 3) ಬಾಕಿ ಇವೆ. 'ಎಡಿಷನ್‌ ರೀಸರ್ಚ್‌ ಮತ್ತು ಕ್ಯಾಟಲಿಸ್ಟ್‌' ಸಂಸ್ಥೆಗಳು ಎಲ್ಲಾ 50 ರಾಜ್ಯಗಳು ಹಾಗೂ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಸಮೀಕ್ಷೆ ಕೈಗೊಂಡಿವೆ. ಈಗಾಗಲೇ 5.87 ಕೋಟಿಗೂ ಅಧಿಕ ಮಂದಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾಗಿ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇ–ಮೇಲ್‌ ಮೂಲಕವೇ ದಾಖಲೆಯ ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ. ಅವುಗಳ ಎಣಿಕೆಗೆ ಸಾಕಷ್ಟು ಸಮಯ ತಗುಲುವ ಕಾರಣ ಫಲಿತಾಂಶವೂ ತಡವಾಗಲಿದೆ’ ಎಂದು ಸಿಎನ್‌ಎನ್‌ ತಿಳಿಸಿದೆ.

‘2016ರ ಚುನಾವಣಾ ಪೂರ್ವದಲ್ಲಿ 5.83 ಕೋಟಿ ಮಂದಿ ಮತ ಚಲಾಯಿಸಿದ್ದರು. ಈ ಬಾರಿ ಕೊರೊನಾ ಬಿಕ್ಕಟ್ಟು ಉದ್ಭವಿಸಿದ್ದರೂ ಜನರ ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ. ಎಲ್ಲಾ ರಾಜ್ಯಗಳಲ್ಲೂ ಮತದಾನದ ಪ್ರಮಾಣ ಏರಿಕೆಯಾಗಿದೆ. ಇ–ಮೇಲ್‌ ಮೂಲಕ ಮತ ಚಲಾಯಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ’ ಎಂದು ಹೇಳಿದೆ.

‘ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಹಾಗೂ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌ ಅವರ ಪೈಕಿ ಅಧ್ಯಕ್ಷೀಯ ಗಾದಿಗೆ ಏರುವವರು ಯಾರು ಎಂಬುದು ನವೆಂಬರ್‌ 3ರ ರಾತ್ರಿಯೇ ನಿರ್ಧಾರವಾಗುವುದು ಕಷ್ಟ. ಇ–ಮೇಲ್‌ ಮತ ಪತ್ರಗಳ ಎಣಿಕೆ ಕಾರ್ಯ ತಡವಾಗುವ ಕಾರಣ ಫಲಿತಾಂಶವು ನವೆಂಬರ್‌ 4ರ ಬೆಳಿಗ್ಗೆ ಅಥವಾ ಮಧ್ಯಾಹ್ನ ಪ್ರಕಟವಾಗಬಹುದು. ಇಲ್ಲವೇ ಮತ್ತಷ್ಟು ವಿಳಂಬವೂ ಆಗಬಹುದು’ ಎಂದೂ ಸಿಎನ್‌ಎನ್‌ ವರದಿಯಲ್ಲಿ ತಿಳಿಸಲಾಗಿದೆ.

‘ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮಿನೆಸೋಟಾ ರಾಜ್ಯದಲ್ಲಿ ಮತದಾನದ ಶೇಕಡವಾರು ಪ್ರಮಾಣ ಏರಿಕೆಯಾಗಿದೆ. ಯುವ ಮತದಾರರು (18 ರಿಂದ 29 ವರ್ಷ) ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ 14 ರಾಜ್ಯಗಳಲ್ಲಿ 30 ವರ್ಷದೊಳಗಿನ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವಲ್ಲಿ ಹೆಚ್ಚು ಆಸಕ್ತಿ ತೋರಿದ್ದಾರೆ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘2016ರ ಚುನಾವಣೆಯಲ್ಲಿ ಫ್ಲಾರಿಡಾದಲ್ಲಿ ಟ್ರಂಪ್‌, ಶೇಕಡ 1ಕ್ಕಿಂತ ಹೆಚ್ಚು ಮತಗಳಿಂದ ಗೆದ್ದಿದ್ದರು. ಆದರೆ ಈ ಬಾರಿ ಈ ರಾಜ್ಯದಲ್ಲಿ ಅವರ ಗೆಲುವು ಇನ್ನಷ್ಟು ಕಠಿಣವಾಗಲಿದೆ. ಫ್ಲಾರಿಡಾದಲ್ಲಿ ಈಗಾಗಲೇ ಶೇಕಡ 35ರಷ್ಟು ಮತದಾನವಾಗಿದೆ. ಈ ಪೈಕಿ ಶೇಕಡ 71ರಷ್ಟು ಮಂದಿ ಬೈಡನ್‌ಗೆ ಮತ ಹಾಕಿರುವುದಾಗಿ ಹೇಳಿದ್ದಾರೆ. ಶೇ 27ರಷ್ಟು ಮಂದಿ ಮಾತ್ರ ಟ್ರಂಪ್‌ ಅವರನ್ನು ಬೆಂಬಲಿಸಿದ್ದಾರೆ. ಉತ್ತರ ಕ್ಯಾರೊಲಿನಾ ಹಾಗೂ ಪೆನ್ಸಿಲ್ವೇನಿಯಾ ರಾಜ್ಯಗಳಲ್ಲೂ ಬೈಡನ್‌ ಅವರು ಟ್ರಂಪ್‌ ಅವರನ್ನು ಹಿಂದಿಕ್ಕುವ ಹಾದಿಯಲ್ಲಿ ಸಾಗುತ್ತಿದ್ದಾರೆ’ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು