ಬುಧವಾರ, ಡಿಸೆಂಬರ್ 2, 2020
25 °C

ಕಾಬೂಲ್‌ನಲ್ಲಿ‌ ರಾಕೆಟ್‌ ದಾಳಿ: ಎಂಟು ಮಂದಿ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಉಗ್ರರು ಇಲ್ಲಿ ಶನಿವಾರ ಬೆಳಿಗ್ಗೆ ನಡೆಸಿದ ರಾಕೆಟ್‌ ದಾಳಿಯಲ್ಲಿ ಎಂಟು ಮಂದಿ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಉಗ್ರರು ಒಟ್ಟು 23 ರಾಕೆಟ್‌ಗಳನ್ನು ಉಡಾಯಿಸಿದ್ದರು. ಈ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಸಾವಿಗೀಡಾಗಿದ್ದಾರೆ. 31 ಮಂದಿ ಗಾಯಗೊಂಡಿದ್ದಾರೆ’ ಎಂದು ಆಂತರಿಕಾ ಭದ್ರತಾ ಸಚಿವಾಲಯದ ವಕ್ತಾರ ತಾರಿಕ್‌ ಅರಿಯಾನ್‌ ಹೇಳಿದ್ದಾರೆ.

‘ತಾಲಿಬಾನ್‌ ಉಗ್ರರು ಈ ಕೃತ್ಯವನ್ನು ಎಸಗಿದ್ದಾರೆ’ ಎಂದು ಅವರು ದೂರಿದ್ದಾರೆ.   

‘ರಾಯಭಾರ ಕಚೇರಿಗಳು ಹಾಗೂ ಅಂತರರಾಷ್ಟ್ರೀಯ ಕಂಪನಿಗಳಿರುವ ಹಸಿರು ವಲಯವನ್ನೇ ಗುರಿಯಾಗಿಸಿಕೊಂಡು ಉಗ್ರರು ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ರಾಕೆಟ್‌ ದಾಳಿ ನಡೆಸಿದ್ದರು. ಆದರೆ ದುರಾದೃಷ್ಟವಶಾತ್‌ ಆ ರಾಕೆಟ್‌ಗಳು ಜನವಸತಿ ಪ್ರದೇಶಗಳಲ್ಲಿ ಬಿದ್ದಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ. 

ರಾಕೆಟ್‌ ದಾಳಿಯಿಂದಾಗಿ ಬೃಹತ್‌ ಕಟ್ಟಡಗಳ ಗೋಡೆಗಳಿಗೆ ಹಾಗೂ ಕಿಟಕಿಗಳಿಗೆ ಹಾನಿಯಾಗಿರುವ ವಿಡಿಯೊ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತಾಲಿಬಾನ್‌ ಸೇರಿದಂತೆ ಯಾವ ಉಗ್ರ ಸಂಘಟನೆಯೂ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. 

ಕಾಬೂಲ್‌ನಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಹಾಗೂ ಇತರೆಡೆ ಇತ್ತೀಚೆಗೆ ನಡೆದಿದ್ದ ಉಗ್ರರ ದಾಳಿಯಲ್ಲಿ ಸುಮಾರು 50 ಮಂದಿ ಅಸುನೀಗಿದ್ದರು. 

‘ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆದಿರುವ ರಾಕೆಟ್‌ ದಾಳಿಯಲ್ಲಿ ನಮ್ಮ ಪಾತ್ರವಿಲ್ಲ. ನಾವು ಸಾರ್ವಜನಿಕ ಸ್ಥಳಗಳ ಮೇಲೆ ಕಣ್ಣುಮುಚ್ಚಿಕೊಂಡು ದಾಳಿ ನಡೆಸುವವರಲ್ಲ’ ಎಂದು ತಾಲಿಬಾನ್‌ನ ವಕ್ತಾರ ಜಬಿವುಲ್ಲಾ ಮುಜಾಹಿದ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು