ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಭೂಕಂಪ: 1,000 ದಾಟಿದ ಸಾವಿನ ಸಂಖ್ಯೆ

Last Updated 22 ಜೂನ್ 2022, 14:10 IST
ಅಕ್ಷರ ಗಾತ್ರ

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 1,000 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉರುಳಿರುವ ಮನೆ ಮತ್ತು ಕಟ್ಟಡಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ತಾಲಿಬಾನ್ ಹಿಡಿತದಿಂದಾಗಿ ಜೀವನ ಕಟ್ಟಿಕೊಳ್ಳಲು ಜನರು ಪರಿತಪಿಸುತ್ತಿರುವ ಪೂರ್ವ ಅಫ್ಗಾನಿಸ್ತಾನದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ.

ಭೂಕಂಪದಿಂದ ಹೆಚ್ಚು ಹಾನಿಯಾಗಿರುವ ಪಕ್ತಿಕಾ ಪ್ರದೇಶದಲ್ಲಿ ಸರ್ಕಾರದ ಸಿಬ್ಬಂದಿ ಜೊತೆ ಜನರು ತಮ್ಮವರ ರಕ್ಷಣೆಗಾಗಿ ಅವಶೇಷಗಳನ್ನು ತೆರವು ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಸ್ಥ ಮಹಮ್ಮದ್ ಅಮೀನ್ ಹುಸೈಫ್ ಹೇಳಿದ್ದಾರೆ. ಈ ಪ್ರದೇಶವೊಂದರಲ್ಲೇ 1,000 ಜನ ಸಾವಿಗೀಡಾಗಿರಬಹುದು ಎಂದೂ ಅವರು ಹೇಳಿದ್ದಾರೆ.

‘ಮನೆಗಳೆಲ್ಲ ಉರುಳಿದ್ದು, ಭಾರೀ ಮಳೆ ನಡುವೆ ಅವಶೇಷಗಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೊ ಮತ್ತು ಚಿತ್ರಗಳಲ್ಲಿ ಭೂಕಂಪನದ ಭೀಕರ ದೃಶ್ಯ ಕಾಣಬಹುದಾಗಿದೆ.

ಪಕ್ಕದ ಮಾರುಕಟ್ಟೆಗಳನ್ನು ಮುಚ್ಚಿರುವ ಜನರು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ.

‘ಸರ್ಕಾರ ಸಾಮರ್ಥ್ಯ ಮೀರಿ ಸಂತ್ರಸ್ತರ ನೆರವಿಗೆ ಪ್ರಯತ್ನ ನಡೆಸುತ್ತಿದೆ. ಅಂತರರಾಷ್ಟ್ರೀಯ ಸಮುದಾಯಗಳು ಸಹ ನಮ್ಮ ನೆರವಿಗೆ ಬರುತ್ತವೆ ಎಂದು ನಂಬಿರುವುದಾಗಿ’ತಾಲಿಬಾನ್ ಸರ್ಕಾರದ ಹಿರಿಯ ಅಧಿಕಾರಿ ಅನಾಸ್ ಹಕ್ಕಾನಿ ಟ್ವೀಟ್ ಮಾಡಿದ್ದಾರೆ.

ಭೂಕಂಪನದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 6.1 ದಾಖಲಾಗಿದೆ. ಕಂಪನ‌ದ ಕೇಂದ್ರಬಿಂದು 10 ಕಿ.ಮೀ. ಆಳದಲ್ಲಿತ್ತು. ಆಸ್ತಿ ಮತ್ತು ಜೀವಹಾನಿ ಹೆಚ್ಚಲು ಇದು ಕೂಡ ಕಾರಣ ಎಂದು ತಜ್ಞರು ಅಂದಾಜಿಸಿದ್ದಾರೆ.

ಖೋಸ್ಟ್ ಪ್ರಾಂತ್ಯದ ಒಂದೇ ಜಿಲ್ಲೆಯಲ್ಲಿ ಭೂಕಂಪನದಿಂದ ಕನಿಷ್ಠ 25 ಜನರು ಸಾವನ್ನಪ್ಪಿದ್ದು, 95ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಬೂಲ್‌ನಲ್ಲಿ, ಪ್ರಧಾನಿ ಮೊಹಮ್ಮದ್ ಹಸನ್ ಅಖುಂದ್‌ ಅಧ್ಯಕ್ಷೀಯ ಅರಮನೆಯಲ್ಲಿ ಪರಿಹಾರ ಕಾರ್ಯಾಚರಣೆ ಸಂಬಂಧತುರ್ತು ಸಭೆ ನಡೆಯಿತು.

ಪಕ್ತಿಕಾ ಮತ್ತು ಖೋಸ್ಟ್‌ ಪ್ರಾಂತ್ಯಗಳಲ್ಲಿ ತಾಲಿಬಾನ್‌ ಅಧಿಕಾರಿಗಳು ತ್ವರಿತ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹೆಲಿಕಾಪ್ಟರ್‌ವರೆಗೆ ಕಂಬಳಿಯಲ್ಲಿ ಎತ್ತಿಕೊಂಡು ಹೋಗುತ್ತಿರುವದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿವೆ.

ಅಫ್ಗಾನಿಸ್ತಾನದ ತುರ್ತು ಸೇವೆ ಅಧಿಕಾರಿ ಶರಫುದ್ದೀನ್ ಮುಸ್ಲಿಂ, ‘2002ರ ನಂತರ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪನವಿದು’ ಎಂದು ಹೇಳಿದ್ದಾರೆ.

‘ನಾಲ್ಕು ಜಿಲ್ಲೆಗಳಲ್ಲಿ ತೀವ್ರ ಭೂಕಂಪನ ಸಂಭವಿಸಿದೆ. ಸಂತ್ರಸ್ತರ ನೆರವಿಗೆ ಸಂಸ್ಥೆಗಳು ಪರಿಹಾರ ತಂಡಗಳನ್ನು ಕಳುಹಿಸಬೇಕು’ ಎಂದು ತಾಲಿಬಾನ್ ಆಡಳಿತದ ಉಪ ವಕ್ತಾರ ಬಿಲಾಲ್ ಕರಿಮಿ ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.

2015ರಲ್ಲಿ ಈಶಾನ್ಯ ಅಫ್ಗಾನಿಸ್ತಾನದಲ್ಲಿ ಸಂಭವಿಸಿದ್ದ ಭೂಕಂಪನದಲ್ಲಿ 200ಕ್ಕೂ ಹೆಚ್ಚು ಜನರು ಮೃತರಾಗಿದ್ದರು. 2002ರಲ್ಲಿ ಉತ್ತರ ಅಫ್ಗಾನಿಸ್ತಾನದಲ್ಲಿ ಸಂಭವಿಸಿದ 6.1 ತೀವ್ರತೆಯ ಭೂಕಂಪನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಪಾಕ್‌ನಲ್ಲೂ ಭೂಕಂಪನ: ವ್ಯಕ್ತಿ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಬುಧವಾರ ನಸುಕಿನಲ್ಲಿ ರಿಕ್ಟರ್‌ ಮಾಪಕದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ಖೈಬರ್-ಪಖ್ತುಂಕ್ವಾ ಪ್ರಾಂತ್ಯದಲ್ಲಿಇದರಿಂದ ಮನೆಯ ಮೇಲ್ಚಾವಣಿ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾರೆ.

‘ಭೂಕಂಪನದ ಕೇಂದ್ರಬಿಂದು ಅಫ್ಗಾನಿಸ್ತಾನದ ಖೋಸ್ಟ್‌ನ ನೈರುತ್ಯಕ್ಕೆ 44 ಕಿ.ಮೀ, ದೂರ ಮತ್ತು 50.8 ಕಿ.ಮೀ. ಆಳದಲ್ಲಿತ್ತು. ಮುಂಜಾನೆ 1.54ಕ್ಕೆ (ಸ್ಥಳೀಯ ಕಾಲಮಾನ) ಭೂಕಂಪನ ಸಂಭವಿಸಿದೆ.‌ ಪೇಶಾವರ, ಇಸ್ಲಾಮಾಬಾದ್, ಲಾಹೋರ್ ಮತ್ತು ಪಂಜಾಬ್‌ನ ಇತರ ಭಾಗಗಳಲ್ಲೂ ಕಂಪನದ ಅನುಭವವಾಗಿದೆ’ ಎಂದುಪಾಕಿಸ್ತಾನದ ಹವಾಮಾನ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT