ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಭಾರ ಕಚೇರಿ ಮುಂದೆ ಹಿಂಸಾಚಾರಕ್ಕೆ ಯತ್ನ

ಅಮೆರಿಕ: ಖಾಲಿಸ್ತಾನ ಬೆಂಬಲಿಗರ ಸಂಚನ್ನು ವಿಫಲಗೊಳಿಸಿದ ಪೊಲೀಸರು
Last Updated 26 ಮಾರ್ಚ್ 2023, 18:18 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಖಾಲಿಸ್ತಾನ ಬೆಂಬಲಿಗರ ಗುಂಪೊಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಹಿಂಸಾಚಾರ ನಡೆಸಲು ಯತ್ನಿಸಿದೆ. ಆದರೆ ಕಾನೂನು ಜಾರಿ ಏಜೆನ್ಸಿಗಳು ಮಧ್ಯಪ್ರವೇಶಿಸಿ ಯಾವುದೇ ಹಾನಿಯಾಗದಂತೆ ತಡೆದಿವೆ.

ಇದೇ ವೇಳೆ, ಪ್ರತಿಭಟನಕಾರರು ಅಮೆರಿಕದ ಭಾರತೀಯ ರಾಯಭಾರಿ ತರಣ್‌ಜಿತ್‌ ಸಿಂಗ್‌ ಸಂಧು ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಆದರೆ, ಪ್ರತಿಭಟನಾ ಸಮಯದಲ್ಲಿ ತರಣ್‌ಜಿತ್‌ ಅವರು ಕಚೇರಿಯಲ್ಲಿರಲಿಲ್ಲ.

ಪ್ರತಿಭಟನಕಾರರು ತಮ್ಮ ಭಾಷಣದಲ್ಲಿ, ರಾಯಭಾರ ಕಚೇರಿ ಆಸ್ತಿಯ ನಾಶ ಸೇರಿದಂತೆ ಭಾರತ ಮತ್ತು ಅಮೆರಿಕದಲ್ಲಿ ಹಿಂಸೆಯನ್ನು ಪ್ರಚೋದಿಸಲು ಯತ್ನಿಸಿದರು. ಅಲ್ಲದೇ ಕೆಲವು ಪ್ರತಿಭಟನಕಾರರು ರಾಯಭಾರ ಕಚೇರಿ ರಸ್ತೆಗೆ ಹೊಂದಿಕೊಂಡಿದ್ದ ಕೆಲವು ಕಟ್ಟಡಗಳ ಕಿಟಕಿ ಮತ್ತು ಗಾಜುಗಳನ್ನು ಒಡೆದುಹಾಕಿದರು.

ಒಂದು ಹಂತದಲ್ಲಿ, ಐವರು ಪ್ರತಿಭಟನಕಾರರು ತಮಗಾಗಿ ನಿಯೋಜಿಸಲಾಗಿದ್ದ ಪ್ರತಿಭಟನಾ ಸ್ಥಳದಿಂದ ರಸ್ತೆ ದಾಟಿ, ರಾಯಭಾರ ಕಚೇರಿ ಆಸ್ತಿಯ ನಾಶಕ್ಕೆ ಪ್ರಯತ್ನಿಸಿದರು.

ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ, ಅಮೆರಿಕದ ಗುಪ್ತಚರ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಲ್ಲದೇ, ಘಟನಾಸ್ಥಳದಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಯಿತು.

‘ಯಾವುದೇ ಅಹಿತಕರ ಘಟನೆ ನಡೆಯುವುದಕ್ಕೂ ಮುನ್ನ ನಿಯೋಜಿಸಿದ್ದ ಸ್ಥಳಕ್ಕೆ ವಾಪಸಾಗುವಂತೆ’ ಗುಪ್ತಚರ ದಳದ ಸಿಬ್ಬಂದಿ ಪ್ರತಿಭಟನಕಾರರಿಗೆ ಸೂಚಿಸಿದರು. ಬಳಿಕ, ರಾಯಭಾರ ಕಚೇರಿಯ ಬಳಿ ಮೂರು ಪೊಲೀಸ್‌ ವಾಹನಗಳನ್ನೂ ನಿಯೋಜಿಸಲಾಯಿತು. ಮಧ್ಯಾಹ್ನ 3 ಗಂಟೆ ಬಳಿಕ ಪ್ರತಿಭಟನಕಾರರು ಸ್ಥಳದಿಂದ ತೆರಳಿದರು. ಪ್ರತಿಭಟನಕಾರರೊಬ್ಬರ ಎಸ್‌ಯುವಿಯಲ್ಲಿ ಮರದ ಕೋಲುಗಳು ಇದ್ದದ್ದು ಕಂಡು ಬಂದಿದೆ.

ಸ್ಯಾನ್‌ ಫ್ರಾನ್ಸಿಸ್ಕೊದ ಭಾರತೀಯ ಕಾನ್ಸುಲೇಟ್‌ ಹಾಗೂ ಲಂಡನ್‌ಲ್ಲಿರುವ ಇಂಡಿಯನ್‌ ಹೈಕಮಿಷನ್‌ನಲ್ಲಿ ನಡೆದ ಪ್ರತಿಭಟನೆಗಳ ಬಳಿಕ, ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಾರತವು ಅಮೆರಿಕ ಸರ್ಕಾರವನ್ನು ಕೇಳಿಕೊಂಡಿತ್ತು.

ಪತ್ರಕರ್ತನ ಮೇಲೆ ಹಲ್ಲೆ

ಖಾಲಿಸ್ತಾನ ಬೆಂಬಲಿಗರ ಪ್ರತಿಭಟನೆಯ ಕುರಿತು ವರದಿ ಮಾಡುತ್ತಿದ್ದ ಪಿಟಿಐ ಸುದ್ದಿಸಂಸ್ಥೆಯ ಅಮೆರಿಕ ಪ್ರತಿನಿಧಿ ಲಲಿತ್‌ ಕೆ. ಝಾ ಅವರ ಮೇಲೆ ಪ್ರತಿಭಟನಕಾರರು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಲಲಿತ್‌ ಅವರ ಮುಖದ ಮೇಲೆ ಖಾಲಿಸ್ತಾನಿ ಧ್ವಜವನ್ನು ಹಾಕಿ, ನಿಂದಿಸಿದ್ದಾರೆ.

‘ನೀನು ಏನು ವರದಿ ಮಾಡುತ್ತೀಯ ಎಂಬುದನ್ನು ನನಗೆ ಹೇಳಲೇಬೇಕು’ ಎಂದು ಪ್ರತಿಭಟನಕಾರನೊಬ್ಬ ಪತ್ರಕರ್ತನಿಗೆ ಬೆದರಿಕೆ ಹಾಕಿದ್ದಾನೆ.

ಹಲ್ಲೆಗೊಳಗಾದ ಪತ್ರಕರ್ತ 911ಗೆ ಕರೆ ಮಾಡಿ ರಕ್ಷಣೆಗೆ ಕೋರಿದರು. ಬಳಿಕ ಅವರು ತನ್ನ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯ ಮತ್ತೊಂದು ಬದಿಯಲ್ಲಿ ಪೊಲೀಸ್‌ ವಾಹನಕ್ಕಾಗಿ ಹುಡುಕಾಟ ನಡೆಸಿದರು.

‘ಹಲ್ಲೆ ಕುರಿತು ದೂರು ದಾಖಲು ಮಾಡಲು ಬಯಸುವಿರಾ’ ಎಂದು ಗುಪ್ತಚರ ದಳದ ಸಿಬ್ಬಂದಿ ಲಲಿತ್‌ ಕೆ. ಝಾ ಅವರನ್ನು ಕೇಳಿದಾಗ, ‘ತನಗೆ ಯಾವುದೇ ದೂರು ದಾಖಲಿಸುವ ಉದ್ದೇಶವಿಲ್ಲ’ ಎಂದು ಹೇಳಿದ್ದಾರೆ. ನಂತರ ಸಿಬ್ಬಂದಿಯು ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಪಿಟಿಐ ಪತ್ರಕರ್ತನ ಮೇಲೆ ಹಲ್ಲೆಯ ಘಟನೆಯನ್ನು ಭಾರತೀಯ ರಾಯಭಾರ ಕಚೇರಿ ತೀವ್ರವಾಗಿ ಖಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT