ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವನ್ನು ಹತ್ಯೆ ಮಾಡುತ್ತಿರುವ ಆಸ್ಟ್ರೇಲಿಯಾ ಸೈನಿಕನ ನಕಲಿ ಚಿತ್ರ ಹಂಚಿಕೊಂಡ ಚೀನಾ

ಆಸ್ಟ್ರೇಲಿಯಾ ಪ್ರಧಾನಿ ತೀವ್ರ ಆಕ್ರೋಶ
Last Updated 30 ನವೆಂಬರ್ 2020, 8:16 IST
ಅಕ್ಷರ ಗಾತ್ರ

ಸಿಡ್ನಿ (ಆಸ್ಟ್ರೇಲಿಯಾ): ಚೀನಾದ ಅಧಿಕಾರಿಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಆಸ್ಟ್ರೇಲಿಯಾ ಸೈನಿಕನ ಚಿತ್ರವು ನಕಲಿ ಎಂದು ಹೇಳಿರುವ ಆಸ್ಟ್ರೇಲಿಯಾ, 'ಇದು ಅಸಹ್ಯಕರ' ಎಂದಿದೆ. ಅಲ್ಲದೆ, ಚಿತ್ರವನ್ನು ಟ್ವಿಟರ್‌ನಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದೆ.

ಅಫ್ಗಾನಿಸ್ತಾನದ ಮಗುವಿನ ಕುತ್ತಿಗೆಗೆ ಆಸ್ಟ್ರೇಲಿಯಾದ ಸೈನಿಕರೊಬ್ಬರು ಚಾಕು ಹಿಡಿದಿರುವ ಚಿತ್ರವನ್ನು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಲಿಜಿಯಾನ್ ಜಾವೋ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

'ಆಸ್ಟ್ರೇಲಿಯಾದ ಸೈನಿಕರು ನಡೆಸಿರುವ ಅಫ್ಗಾನ್‌ ನಾಗರಿಕರು ಮತ್ತು ಕೈದಿಗಳ ಹತ್ಯೆಯಿಂದ ಆಘಾತವಾಗಿದೆ. ಅಂತಹ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಕೃತ್ಯಗಳಿಗೆ ಆಸ್ಟ್ರೇಲಿಯಾವನ್ನು ಹೊಣೆಗಾರರನ್ನಾಗಿ ಮಾಡಲು ನಾವು ಕರೆ ನೀಡುತ್ತೇವೆ,' ಎಂದು ಲಿಜಿಯಾನ್‌ ಚಿತ್ರದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದರು.

ಇದೇ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್‌ ಮೋರಿಸ್ಸನ್‌, 'ತನ್ನ ಈ ನಡೆಗಾಗಿ ಚೀನಾ ಆಸ್ಟ್ರೇಲಿಯಾದ ಕ್ಷಮೆ ಕೋರಬೇಕು,' ಎಂದು ಆಗ್ರಹಿಸಿದ್ದಾರೆ.

'ಲಿಜಿಯಾನ್ ಅವರು ತಮ್ಮ ಖಾತೆಯಿಂದ ಮಾಡಿರುವ ಪೋಸ್ಟ್‌ ಅನ್ನು ತೆಗೆದುಹಾಕಬೇಕು,' ಎಂದು ಆಸ್ಟ್ರೇಲಿಯಾ ಸರ್ಕಾರ ಟ್ವಿಟರ್‌ಗೆ ಸೂಚಿಸಿದೆ ಎಂದು ಮೋರಿಸನ್‌ ಹೇಳಿದರು.

ಕೊರೊನಾ ವೈರಸ್‌ ಮೂಲದ ಬಗ್ಗೆ ಆಸ್ಟ್ರೇಲಿಯಾ ಅಂತರರಾಷ್ಟ್ರೀಯ ತನಿಖೆಗೆ ಕರೆ ನೀಡಿದಾಗಿನಿಂದ ಚೀನಾದೊಂದಿಗಿನ ಆಸ್ಟ್ರೇಲಿಯಾದ ಸಂಬಂಧ ಹದಗೆಟ್ಟಿದೆ. ಇದೇ ಸನ್ನಿವೇಶದಲ್ಲಿ ನಡೆದಿರುವ ಈ ಘಟನೆ ಇಬ್ಬರ ನಡುವಿನ ಸಂಬಂಧಕ್ಕೆ ಮತ್ತಷ್ಟು ಪೆಟ್ಟು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT