ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಗ್ರರ ತಾಣ ಪಾಕಿಸ್ತಾನ ಭೂಪಟದಲ್ಲಿ ಇಲ್ಲವಾಗುವವರೆಗೂ ಬಲವಂತದ ಕಣ್ಮರೆ ನಿಲ್ಲದು’

ಬಲವಂತವಾಗಿ ಕಣ್ಮರೆಯಾದ ಸಂತ್ರಸ್ತರ ಅಂತರರಾಷ್ಟ್ರೀಯ ದಿನದ
Last Updated 31 ಆಗಸ್ಟ್ 2020, 6:19 IST
ಅಕ್ಷರ ಗಾತ್ರ

ಟೊರೊಂಟೊ (ಕೆನಡಾ):ಬಲವಂತವಾಗಿ ಕಣ್ಮರೆಯಾದ ಸಂತ್ರಸ್ತರ ಅಂತರರಾಷ್ಟ್ರೀಯ ದಿನದ ಅಂಗವಾಗಿ ಬಲೂಚ್‌, ಸಿಂಧಿ ಹಾಗೂ ಪಾಶ್ತೂನ್‌ ಸಂಘಟನೆಗಳ ಸದಸ್ಯರು ಪಾಕಿಸ್ತಾನದವಿರುದ್ಧ ಟೊರೊಂಟೊದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ, ಉಗ್ರರ ತಾಣವಾಗಿರುವಪಾಕಿಸ್ತಾನ ಭೂಪಟದಿಂದ ಕಣ್ಮರೆಯಾಗುವವರೆಗೂ ಈ ಸಮಸ್ಯೆ ತಪ್ಪಿದ್ದಲ್ಲ ಎಂದು ಆಕ್ರೋಶ ವ್ಯಕ್ತವಾಯಿತು.

ಬಲೂಚ್‌ ನ್ಯಾಷನಲ್‌ ಮೂವ್‌ಮೆಂಟ್‌, ಕೆನಡಾ ಪಾಶ್ತೂನ್‌ ಕೌನ್ಸಿಲ್‌, ಪಾಶ್ತೂನ್‌ ತಹಫುಜ್‌ ಮೂವ್‌ಮೆಂಟ್‌ ಮತ್ತು ವಿಶ್ವ ಸಿಂಧಿ ಕಾಂಗ್ರೆಸ್ ಸದಸ್ಯರು ಇಲ್ಲಿನ ಡೌನ್‌ಟೌನ್‌ ಬಳಿ ಜಮಾಯಿಸಿ ‘ಪಾಕಿಸ್ತಾನ ಸೇನೆ ಉಗ್ರರು, ಐಎಸ್‌ಐ ಉಗ್ರರು’ ಎಂಬಘೋಷಣೆಗಳನ್ನು ಕೂಗಿದರು. ಜೊತೆಗೆ,ಪಾಕಿಸ್ತಾನದಲ್ಲಿ ಬಲವಂತವಾಗಿ ಮತಾಂತರ ಮಾಡಿಸುವುದು, ಜನರು ಕಣ್ಮರೆಯಾಗುವುದು ಮತ್ತು ಹತ್ಯೆ ಪ್ರಕರಣಗಳನ್ನು ಕೊನೆಗೊಳಿಸುವಂತೆ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದರು.

ಬಲೂಚ್‌, ಮೊಹಜಿರ್ಸ್‌ (ಮುಸ್ಲಿಂ ವಲಸಿಗರು), ಪಾಶ್ತೂನ್ಸ್‌ (ಆಫ್ಗನ್‌ ಮೂಲದವರು)‌ ಮತ್ತು ಸಿಂಧಿ ಸಮುದಾಯದವರ ಮಾನವ ಹಕ್ಕುಗಳನ್ನು ಪುನಃ ಸ್ಥಾಪಿಸುವಂತೆ ಪಾಕಿಸ್ತಾನದ ಮೇಲೆ ಒತ್ತಡ ತರಬೇಕು ಎಂದು ಕೆನಡಾ ಸರ್ಕಾರವನ್ನು ಒತ್ತಾಯಿಸಲಾಯಿತು. ಪ್ರತಿಭಟನೆ ಸಂದರ್ಭ, ‘ಬಲೂಚ್‌ ನರಮೇಧವನ್ನು ನಿಲ್ಲಿಸಿ’, ‘ಬಲೂಚಿಸ್ತಾನದಲ್ಲಿ ಬಲವಂತದ ಕಣ್ಮರೆ ಪ್ರಕರಣಗಳನ್ನು ಕೊನೆಗಾಣಿಸಿ’ ಎಂಬ ಫಲಕಗಳು ಎಲ್ಲೆಡೆ ಕಂಡುಬಂದವು.

ಈ ಹಿಂದೆ ‘ಹಾಂಗ್‌ಕಾಂಗ್‌ಅನ್ನು ಸ್ವತಂತ್ರಗೊಳಿಸಿ’ ಎಂದು ಪ್ರತಿಭಟನೆ ನಡೆಸಿದ್ದವರೂ ಜಮಾಯಿಸಿ, ಪಾಕ್‌ ವಿರುದ್ಧದ ಆಕ್ರೋಶಕ್ಕೆಬೆಂಬಲ ನೀಡಿದರು ಮತ್ತು ಚೀನಾ ವಿರುದ್ಧವೂ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾನಿರತ ವ್ಯಕ್ತಿಯೊಬ್ಬ, ‘ಬಲವಂತದಿಂದ ಕಣ್ಮರೆಯಾದ ಸಂತ್ರಸ್ತರ ಅಂತರರಾಷ್ಟ್ರೀಯ ದಿನದ ಅಂಗವಾಗಿ ನಾವಿಲ್ಲಿ ಒಟ್ಟುಗೂಡಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ನಮ್ಮ ಜೀವನವನ್ನೇ ನಾಶ ಮಾಡಿದೆ. ಸದ್ಯದ ತಲೆಮಾರಿನ ಮೇಲೆ ಇದು ಪರಿಣಾಮ ಉಂಟುಮಾಡುತ್ತಿದೆ ಮತ್ತು ಮುಂದಿನ ತಲೆಮಾರಿಗೂ ಪರಿಣಾಮ ಮುಂದುವರಿಯುತ್ತದೆ. ಉಗ್ರರ ತಾಣವಾಗಿರುವ ಪಾಕಿಸ್ತಾನ ಭೂಪಟದಲ್ಲಿ ಇಲ್ಲವಾಗುವವರೆಗೆ ಈ ಸಮಸ್ಯೆ ಮುಂದುವರಿಯುತ್ತದೆ. ಪಾಕಿಸ್ತಾನ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅಂತರರಾಷ್ಟ್ರೀಯ ಸಮುದಾಯ ಗಮನಿಸಬೇಕು. ಬಲವಂತದ ಕಣ್ಮರೆ ಪ್ರಕರಣಗಳನ್ನು ಕೊನೆಗಾಣಿಸಬೇಕು ಎಂದು ನಾವು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸುತ್ತೇವೆ’ ಎಂದಿದ್ದಾರೆ.

ಮತ್ತೊಬ್ಬ ಹೋರಾಟಗಾರ, ‘ಬಲೂಚಿಸ್ತಾನ ಹಾಗೂ ಪಾಕಿಸ್ತಾನದ ಬೇರೆಬೇರೆ ಭಾಗದಲ್ಲಿ ನಡೆಯುತ್ತಿರುವ ಯುದ್ಧಾಪರಾಧಗಳಲ್ಲಿ ಚೀನಾ ಕೂಡ ಸಮಾನವಾಗಿ ಭಾಗಿಯಾಗಿದೆ’ ಎಂದು ಕಿಡಿಕಾರಿದ್ದಾರೆ.

ಜಗತ್ತಿನ ಹಲವು ಭಾಗಗಳಲ್ಲಿ ಇಂದು ಪಾಕಿಸ್ತಾನ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ ಸೇನೆ ಹಾಗೂ ಗುಪ್ತಚರ ದಳದವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರನ್ನು ಬಲವಂತವಾಗಿ ಅಪಹರಿಸುತ್ತಿದ್ದಾರೆ ಎಂದು ಅರೋಪಿಸಿ ನ್ಯೂಯಾರ್ಕ್‌ನಲ್ಲಿರುವ ಪಾಕ್‌ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ.

ಇಂಗ್ಲೆಂಡ್‌ನ ಸಂಸತ್‌ ಭವನ ಹಾಗೂ‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ನಿವಾಸದೆದುರೂ ಪ್ರತಿಭಟನೆ ನಡೆಸಲಾಗಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT