ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ: ಸಹ-ವಿದ್ಯಾರ್ಥಿ ಹತ್ಯೆ ಮಾಡಿದ್ದ 20 ವಿದ್ಯಾರ್ಥಿಗಳಿಗೆ ಗಲ್ಲು

ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಟೀಕಿಸಿದ್ದಕ್ಕೆ ಹತ್ಯೆ
Last Updated 9 ಡಿಸೆಂಬರ್ 2021, 7:26 IST
ಅಕ್ಷರ ಗಾತ್ರ

ಢಾಕಾ: ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಟೀಕಿಸಿ ಪೋಸ್ಟ್‌ ಮಾಡಿದ್ದ ವಿದ್ಯಾರ್ಥಿಯೊಬ್ಬನನ್ನು ಕಾಲೇಜು ಆವರಣದಲ್ಲೇ ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ 20 ವಿದ್ಯಾರ್ಥಿಗಳಿಗೆ ಢಾಕಾ ಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿದೆ.

ಈ ಮೂಲಕ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿರುವುದಾಗಿ ಕೋರ್ಟ್‌ ಹೇಳಿದೆ.

ಆರೋಪಿಗಳೆಲ್ಲರೂ ದೋಷಿಗಳೆಂದು ಸಾಬೀತಾಗಿದ್ದು, 5 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಮೂರ್ತಿ ಅಬು ಜಾಫರ್‌ ಮೊಹಮ್ಮದ್‌ ಕಮ್ರುಜ್ಜಾಮನ್‌ ಘೋಷಿಸಿದ್ದಾರೆ. ಒಟ್ಟು 25 ತಪ್ಪಿತಸ್ಥರ ಪೈಕಿ ಮೂವರು ಕೃತ್ಯ ನಡೆದಂದಿನಿಂದ ತಲೆಮರೆಸಿಕೊಂಡಿದ್ದು, ಉಳಿದ ಎಲ್ಲರೂ ಜೈಲಿನಲ್ಲಿದ್ದಾರೆ.

2019ರ ಅಕ್ಟೋಬರ್‌ 6ರಂದು,ಬಾಂಗ್ಲಾದೇಶದ ಇಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿ ಅಬ್ರಾರ್‌ ಫಹಾದ್‌ ಎಂಬುವವರನ್ನು ಕಾಲೇಜಿನ ಆವರಣದಲ್ಲಿ ಉದ್ರಿಕ್ತ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಶಿಕ್ಷೆಗೊಳಗಾಗಿರುವ ವಿದ್ಯಾರ್ಥಿಗಳು ಕ್ರಿಕೆಟ್‌ ಬ್ಯಾಟ್‌ ಮತ್ತಿತರ ವಸ್ತುಗಳಿಂದ ಸುಮಾರು 6 ಗಂಟೆಗಳ ಕಾಲ ಫಹಾದ್‌ ಮೇಲೆ ಹಲ್ಲೆ ನಡೆಸಿದ್ದರು.

ಆಡಳಿತರೂಢ ಅವಾಮಿ ಲೀಗ್‌ ಪಕ್ಷದ ವಿದ್ಯಾರ್ಥಿ ಸಂಘಟನೆ ಬಾಂಗ್ಲಾದೇಶ್‌ ಛಾತ್ರ ಲೀಗ್‌ (ಬಿಸಿಎಲ್‌)ನ ಕಾರ್ಯಕರ್ತರು ಹಲ್ಲೆಯಲ್ಲಿ ಭಾಗಿಯಾಗಿದ್ದರು. 21 ವರ್ಷದ ವಿದ್ಯಾರ್ಥಿಯ ಹತ್ಯೆಗೆ ಸಂಬಂಧಿಸಿ ಬಾಂಗ್ಲಾದೇಶದೆಲ್ಲೆಡೆ ಪ್ರತಿಭಟನೆ ನಡೆದಿತ್ತು. ಕೃತ್ಯದ ಸಿಸಿಟಿವಿ ಫೂಟೇಜ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಘಟನೆ ನಡೆದ ಬಳಿಕ ಬಿಸಿಎಲ್‌ ವಿದ್ಯಾರ್ಥಿ ಸಂಘಟನೆಯಿಂದ ಎಲ್ಲ ಆರೋಪಿಗಳನ್ನು ಅಮಾನತುಗೊಳಿಸಲಾಗಿದೆ. ಪ್ರಧಾನಿ ಶೇಖ್ ಹಸೀನಾ ಅವರೇ ಆರೋಪಿಗಳನ್ನು ಸಂಘಟನೆಯಿಂದ ಹೊರಹಾಕುವಂತೆ ಸೂಚಿಸಿದ್ದರು. ಕಾಲೇಜಿನಿಂದಲೂ ಅವರನ್ನು ಹೊರ ಹಾಕಲಾಗಿದೆ.

ಭಾರತ ಮತ್ತು ಬಾಂಗ್ಲಾ ನಡುವಣ ನದಿ ನೀರು ಹಂಚಿಕೆ ವಿಚಾರವಾಗಿ ಆಡಳಿತರೂಢ ಅವಾಮಿ ಲೀಗ್‌ ಸರ್ಕಾರವನ್ನು ಫಹಾದ್‌ ಫೇಸ್‌ಬುಕ್‌ನಲ್ಲಿ ಟೀಕಿಸಿದ್ದಕ್ಕೆ ವಿರೋಧಿ ಗುಂಪು ಸಿಟ್ಟಾಗಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT