ಭಾನುವಾರ, ಏಪ್ರಿಲ್ 11, 2021
27 °C

ಗ್ರೀನ್‌ಕಾರ್ಡ್‌ ವಿತರಣೆ ಮೇಲಿನ ನಿಷೇಧ ತೆರವುಗೊಳಿಸಿದ ಬೈಡನ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಸ್ಯಾನ್‌ ಡಿಯಾಗೊ (ಎಪಿ): ಗ್ರೀನ್‌ ಕಾರ್ಡ್‌ ವಿತರಣೆ ಹಾಗೂ ವಲಸೆ ನೀತಿಗೆ ಸಂಬಂಧಿಸಿದಂತೆ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿದ್ದಾಗ ಹೊರಡಿಸಿದ್ದ ಆದೇಶವನ್ನು ಅಧ್ಯಕ್ಷ ಜೋ ಬೈಡನ್‌ ರದ್ದು ಮಾಡಿದ್ದಾರೆ.

ಬೈಡನ್‌ ಆಡಳಿತದ ಈ ಕ್ರಮದಿಂದ, ಎಚ್‌–1ಬಿ ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಗೆ ಅನುಕೂಲವಾಗಲಿದೆ. ಅದರಲ್ಲೂ, ಐಟಿ ಕ್ಷೇತ್ರದ ಅಮೆರಿಕದ ಕಂಪನಿಗಳಲ್ಲಿ ಭಾರತೀಯರು ಭಾರಿ ಸಂಖ್ಯೆಯಲ್ಲಿದ್ದಾರೆ.

ಟ್ರಂಪ್‌ ಆಡಳಿತ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದ ನಂತರ ಮಾತನಾಡಿದ ಅಧ್ಯಕ್ಷ ಬೈಡನ್‌, ‘ಮಾಜಿ ಅಧ್ಯಕ್ಷ ಡೊನಾಲ್ಡ್‌ ಅವರ ನೀತಿ, ಅಮೆರಿಕದ ಅಭಿವೃದ್ಧಿಗೆ ತಡೆಯೊಡ್ಡುತ್ತಿತ್ತು‘ ಎಂದು ಹೇಳಿದ್ದಾರೆ.

‘ಇಲ್ಲಿ ನೆಲೆಸಿರುವ ವಿವಿಧ ದೇಶಗಳ ಜನರಿಗೆ, ಅವರ ಕುಟುಂಬದ ಸದಸ್ಯರಿಗೆ ತೊಂದರೆಯಾಗುವುದು. ಜಗತ್ತಿನ ವಿವಿಧ ದೇಶಗಳಿಂದ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳುವ ಅಮೆರಿಕದ ಉದ್ಯಮಗಳಿಗೆ ಹಾನಿಯಾಗುವುದು’ ಎಂದು ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

ಕೋವಿಡ್‌–19 ಪಿಡುಗಿನಿಂದಾಗಿ ಅಮೆರಿಕದಲ್ಲಿ ಉದ್ಯೋಗ ನಷ್ಟವಾಗುವುದನ್ನು ತಡೆಯುವ ಸಂಬಂಧ ವಲಸೆ ಹಾಗೂ ಗ್ರೀನ್‌ ಕಾರ್ಡ್‌ ವಿತರಿಸುವುದನ್ನು ನಿಷೇಧಿಸುತ್ತಿರುವುದಾಗಿ ಟ್ರಂಪ್‌ ಹೇಳಿದ್ದರು. ಮೊದಲು 2020ರ ಅಂತ್ಯದ ವರೆಗೆ ಜಾರಿಯಲ್ಲಿದ್ದ ಈ ಆದೇಶವನ್ನು ನಂತರ 2021ರ ಮಾರ್ಚ್‌ ಅಂತ್ಯದವರೆಗೆ ವಿಸ್ತರಿಸಲಾಗಿತ್ತು.

ವಿವಿಧ ದೇಶಗಳ ಜನರು ವಲಸೆ ಬರುವುದರಿಂದ ಅಮೆರಿಕದ ಜನರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದು ಭಾವಿಸಿದ್ದ ಟ್ರಂಪ್‌, ವಲಸೆಯನ್ನು ನಿಷೇಧಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು