ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಮತ್ತು ಅಮೆರಿಕ ನಡುವೆ ಮುಕ್ತ ಸಂವಹನದ ಅಗತ್ಯವನ್ನು ಒತ್ತಿ ಹೇಳಿದ ಜೋ ಬೈಡನ್

Last Updated 17 ಫೆಬ್ರುವರಿ 2023, 4:17 IST
ಅಕ್ಷರ ಗಾತ್ರ

ವಾಷಿಂಗ್ಟನ್: ಚೀನಾದ ಶಂಕಿತ ಬೇಹುಗಾರಿಕಾ ಬಲೂನ್‌ಗಳನ್ನು ಹೊಡೆದುರುಳಿಸಿದ ಬಳಿಕ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಮುಕ್ತ ಸಂವಹನದ ಅಗತ್ಯವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಒತ್ತಿ ಹೇಳಿದ್ದಾರೆ.

‘ನನ್ನ ಆಡಳಿತಾವಧಿಯ ಆರಂಭದಿಂದಲೂ ಚೀನಾದೊಂದಿಗೆ ನಾವು ಸ್ಪರ್ಧೆ ನಿರೀಕ್ಷಿಸುತ್ತಿದ್ದೇವೆಯೇ ಹೊರತು ಸಂಘರ್ಷವನ್ನಲ್ಲ. ಹೊಸ ಶೀತಲ ಸಮರವನ್ನು ನಾವು ಎದುರು ನೋಡುತ್ತಿಲ್ಲ. ಆದರೆ, ನಾವು ಕ್ಷಮೆಯಾಚಿಸುವುದಿಲ್ಲ. ಸ್ಪರ್ಧೆ ಮುಂದುವರಿಸುತ್ತೇವೆ. ಜವಾಬ್ದಾರಿಯುತವಾಗಿ ಸ್ಪರ್ಧೆಯನ್ನು ನಿರ್ವಹಿಸುತ್ತೇವೆ. ಹಾಗಾದಾಗ, ಸಂಘರ್ಷಕ್ಕೆ ದಾರಿಯಾಗುವುದಿಲ್ಲ’ ಎಂದು ಬೈಡನ್ ಹೇಳಿದ್ದಾರೆ.

‘ಬಲೂನ್ ವಿವಾದವು ಚೀನಾ ಮತ್ತು ಅಮೆರಿಕದ ರಾಜತಾಂತ್ರಿಕರು ಹಾಗೂ ಮಿಲಿಟರಿ ನಡುವೆ ಮುಕ್ತ ಸಂವಹನವನ್ನು ಒತ್ತಿ ಹೇಳಿದೆ’ ಎಂದು ಅಮೆರಿಕದ ವಾಯುಪ್ರದೇಶದಲ್ಲಿ ಚೀನಾದ ಬಲೂನ್ ಪತ್ತೆಯಾದ ಬಳಿಕ ಮೊದಲ ಹೇಳಿಕೆಯಲ್ಲಿ ಬೈಡನ್ ತಿಳಿಸಿದ್ದಾರೆ.

ಬಲೂನ್ ಭಾರಿ ಗಾತ್ರದಲ್ಲಿದ್ದರಿಂದ ಜನವಸತಿ ಪ್ರದೇಶದಲ್ಲಿ ಬಿದ್ದರೆ ಜನರಿಗೆ ಹಾನಿಯಾಗುವ ಸಾಧ್ಯತೆ ಇದ್ದುದರಿಂದ ಮಿಲಿಟರಿ ಸಲಹೆ ಮೇರೆಗೆ ಸುರಕ್ಷಿತ ಪ್ರದೇಶದಲ್ಲಿ ಹೊಡೆದುರುಳಿಸಲು ಸೂಚಿಸಿದೆ ಎಂದು ಬೈಡನ್ ಹೇಳಿದರು.

‘ಬಲೂನನ್ನು ನಿಕಟವಾಗಿ ಟ್ರ್ಯಾಕ್ ಮಾಡಿದ್ದೆವು. ಅದರ ಸಾಮರ್ಥ್ಯಗಳನ್ನು ನಾವು ವಿಶ್ಲೇಷಿಸಿದ್ದೆವು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಿದ್ದೆವು. ಬಲೂನಿನ ಚಲನೆಯ ಜಾಡು ಹಿಡಿದು ಅದು ಜನವಸತಿ ಪ್ರದೇಶ ಬಿಟ್ಟು ನೀರಿನ ಮೇಲೆ ಬರುವವರೆಗೆ ಕಾದು ಹೊಡೆದುರುಳಿಸಿದೆವು. ಆ ಮೂಲಕ ಚೀನಾಗೆ ಸ್ಪಷ್ಟ ಸಂದೇಶ ಕಳುಹಿಸಿದೆವು’ ಎಂದು ಅವರು ಹೇಳಿದರು.

‘ಅಮೆರಿಕದ ಸಾರ್ವಭೌಮತ್ವದ ಉಲ್ಲಂಘನೆಯು ಸ್ವೀಕಾರಾರ್ಹವಲ್ಲ’ ಎಂದು ಬೈಡನ್ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT