ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ–ಕ್ರಿಮಿಯಾ ಸಂಪರ್ಕ ಸೇತುವೆಯಲ್ಲಿ ಸ್ಫೋಟ: ಮೂವರ ಸಾವು

ಸ್ಫೋಟದ ಹಿಂದೆ ಉಕ್ರೇನ್‌ ಕೈವಾಡ: ಕ್ರಿಮಿಯಾ ಅಧಿಕಾರಿಗಳ ಆರೋಪ
Last Updated 8 ಅಕ್ಟೋಬರ್ 2022, 13:39 IST
ಅಕ್ಷರ ಗಾತ್ರ

ಹಾರ್ಕಿವ್‌: ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್‌ ಬಾಂಬ್‌ ಸ್ಫೋಟಗೊಂಡ ಪರಿಣಾಮ ಸೇತುವೆಯ ಭಾಗವೊಂದು ಕುಸಿದಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ದಕ್ಷಿಣ ಉಕ್ರೇನ್‌ನಲ್ಲಿ ಯುದ್ಧದಲ್ಲಿ ತೊಡಗಿಕೊಂಡಿರುವ ರಷ್ಯಾದ ಯೋಧರಿಗೆ ಸಾಮಗ್ರಿಗಳನ್ನು ತಲುಪಿಸುವ ಪ್ರಮುಖ ಮಾರ್ಗ ಇದಾಗಿತ್ತು.

ಈ ಸ್ಫೋಟದ ಹಿಂದೆ ಉಕ್ರೇನ್‌ ಕೈವಾಡವಿದೆ ಎಂದು ಕ್ರಿಮಿಯಾದ ರಷ್ಯಾ ಬೆಂಬಲಿತ ಪ್ರಾದೇಶಿಕ ಸಂಸತ್‌ನ ಸ್ಪೀಕರ್‌ ಆರೋಪಿಸಿದ್ದಾರೆ. ಈ ಸೇತುವೆಯನ್ನು ಸ್ಫೋಟಿಸುವುದಾಗಿ ಉಕ್ರೇನ್‌ನ ಅಧಿಕಾರಿಗಳು ಈ ಹಿಂದೆ ಹಲವು ಬಾರಿ ಬೆದರಿಕೆಯೊಡ್ಡಿದ್ದರು. ಆದರೆ ಈ ಬಗ್ಗೆ ಉಕ್ರೇನ್‌ ಯಾವುದೇ ಹೇಳಿಕೆ ನೀಡಿಲ್ಲ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು 70ನೇ ವರ್ಷಕ್ಕೆ ಕಾಲಿಟ್ಟ ಮರುದಿನ ಈ ಸ್ಫೋಟ ನಡೆದಿದೆ. ಪುಟಿನ್‌ ಅವರನ್ನು ಅವಮಾನಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಮೂಲಗಳು ಹೇಳಿವೆ.

ಸೇತುವೆಯಲ್ಲಿ ಬಾಂಬ್‌ ಸ್ಫೋಟಗೊಂಡ ಪರಿಣಾಮ ಇಂಧನ ಸಾಗಿಸುತ್ತಿದ್ದ ರೈಲೊಂದರ ಏಳು ಬೋಗಿಗಳಿಗೆ ಬೆಂಕಿ ಹೊತ್ತುಕೊಂಡಿದೆ. ಈ ಸೇತುವೆಯು ರೈಲುಗಳ ಹಾಗೂ ವಾಹನಗಳ ಸಂಚಾರಕ್ಕೆ ಮಾರ್ಗಗಳನ್ನು ಹೊಂದಿದೆ. ವಾಹನಗಳು ಸಂಚರಿಸುವ ಒಂದು ಮಾರ್ಗ ಕುಸಿದಿದೆ ಎಂದು ರಷ್ಯಾದ ರಾಷ್ಟ್ರೀಯ ಭಯೋತ್ಪಾದಕ ನಿಗ್ರಹ ಸಮಿತಿ ಹೇಳಿದೆ.

ಕಪ್ಪುಸಮುದ್ರ ಮತ್ತು ಅಜೋವ್‌ ಸಮುದ್ರವನ್ನು ಸಂಪರ್ಕಿಸುವ ಕೆರ್ಚ್‌ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.

ಸೇತುವೆಯಲ್ಲಿ ಪ್ರಯಾಣಿಕರ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೇತುವೆಯನ್ನು ಶೀಘ್ರ ದುರಸ್ತಿಗೊಳಿಸಲಾಗುವುದು ಎಂದು ಕ್ರಿಮಿಯಾದ ಅಧಿಕಾರಿಗಳು ತಿಳಿಸಿದ್ದಾರೆ. 15 ದಿನಗಳಿಗಾಗುವಷ್ಟು ಇಂಧನ ಸಂಗ್ರಹ ಕ್ರಿಮಿಯಾದಲ್ಲಿದೆ ಎಂದು ರಷ್ಯಾದ ಇಂಧನ ಸಚಿವಾಲಯ ಹೇಳಿದೆ.

ಉಕ್ರೇನ್‌ನ ಅಧಿಕಾರಿಗಳ ಸಂಭ್ರಮ:ಸೇತುವೆ ಮೇಲೆ ಸ್ಫೋಟ ನಡೆದಿರುವುದಕ್ಕೆ ಉಕ್ರೇನ್‌ನ ಹಲವು ಅಧಿಕಾರಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ.

‘ರಷ್ಯಾದ ಅಕ್ರಮ ನಿರ್ಮಾಣ ಕುಸಿಯಲು ಆರಂಭಿಸಿದೆ’ ಎಂದು ಉಕ್ರೇನ್‌ನ ಸರ್ವೆಂಟ್‌ ಆಫ್‌ ದಿ ಪೀಪಲ್‌ ಪಾರ್ಟಿಯ ಮುಖಂಡ ಡೇವಿಡ್ ಅರಾಖಾಮಿಯಾ ಹೇಳಿದ್ದಾರೆ.

ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಕಾರ್ಯದರ್ಶಿ ಒಲೆಕ್ಸಿ ಡ್ಯಾನಿಲೋವ್ ಅವರು ಸೇತುವೆಯ ಮೇಲೆ ರೈಲಿಗೆ ಬೆಂಕಿ ಹತ್ತಿಕೊಂಡಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ನೇಮಕ: ರಷ್ಯಾದ ವಾಯುಪಡೆ ಮುಖ್ಯಸ್ಥರನ್ನು ಉಕ್ರೇನ್‌ನಲ್ಲಿ ಹೋರಾಟದಲ್ಲಿ ನಿರತ ಪಡೆಗಳ ಕಮಾಂಡರ್‌ ಆಗಿ ನೇಮಕ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT