ಮಂಗಳವಾರ, ಸೆಪ್ಟೆಂಬರ್ 29, 2020
21 °C
ಹೆಚ್ಚುತ್ತಿದೆ ನಿರುದ್ಯೋಗ

ಕೊರೊನಾ ಹೊಡೆತ | ಬ್ರಿಟನ್ ಆರ್ಥಿಕ ಸ್ಥಿತಿ ಗಂಭೀರ: ಹಿಂಜರಿತದ ಕರಿನೆರಳು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಂಡನ್: ಬ್ರಿಟನ್ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ವಿಶ್ವದಲ್ಲಿ ಮುಂಚೂಣಿ ಕೈಗಾರಿಕಾ ಆರ್ಥಿಕತೆಗಳ ಪೈಕಿ ಕೊರೊನಾ ವೈರಸ್ ಕಾರಣದಿಂದ ತೀವ್ರ ಸಂಕಷ್ಟ ಅನುಭವಿಸಿದ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಮೊದಲ ಸ್ಥಾನದಲ್ಲಿದೆ. ಸತತ ಎರಡನೇ ತ್ರೈಮಾಸಿಕ ವರದಿಯಲ್ಲಿಯೂ ಬ್ರಿಟನ್‌ನ ಆರ್ಥಿಕತೆ ಕುಸಿತವನ್ನೇ ದಾಖಲಿಸಿದೆ.

ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಬ್ರಿಟನ್‌ನಲ್ಲಿ ಉತ್ಪಾದನೆ ಶೇ 20.4ರಷ್ಟು ಕುಸಿತ ಕಂಡಿದೆ. ಆರ್ಥಿಕ ದಾಖಲೆಗಳ ವ್ಯವಸ್ಥಿತ ನಿರ್ವಹಣೆ ಆರಂಭವಾದ 1955ರಿಂದ ಈವರೆಗಿನ ಅವಧಿಯಲ್ಲಿ ಇದು ಅತ್ಯಂತ ಕೆಟ್ಟ ಪರಿಸ್ಥಿತಿ ಎಂದು ರಾಷ್ಟ್ರೀಯ ಅಂಕಿಅಂಶಗಳ ಸಂಸ್ಥೆ ತಿಳಿಸಿದೆ.

ಸತತ ಎರಡು ತ್ರೈಮಾಸಿಕಗಳಲ್ಲಿ ಕುಸಿತವನ್ನೇ ದಾಖಲಿಸಿರುವ ಬ್ರಿಟನ್, ಇದೀಗ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವುದು ಅಧಿಕೃತವಾಗಿ ಘೋಷಣೆಯಾದಂತೆ ಆಗಿದೆ. ಸತತ ಎರಡು ತ್ರೈಮಾಸಿಕಗಳಲ್ಲಿ ಆರ್ಥಿಕತೆ ಕುಗ್ಗುತ್ತಿರುವ ಬೆಳವಣಿಗೆಯನ್ನು ಹಿಂಜರಿತ ಎಂದು ಕರೆಯಲಾಗುತ್ತದೆ.

ಯೂರೋಪ್‌ನ ಇತರ ಪ್ರಮುಖ ದೇಶಗಳಾದ ಜರ್ಮನಿ, ಫ್ರಾನ್ಸ್‌ ಮತ್ತು ಇಟಲಿಗಳಿಗೆ ಹೋಲಿಸಿದರೆ ಬ್ರಿಟನ್‌ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಏಳು ಮುಂಚೂಣಿ ದೇಶಗಳ ಗುಂಪಿನಲ್ಲಿರುವ ಇತರ ದೇಶಗಳಾದ ಜಪಾನ್ ಮತ್ತು ಕೆನಡಾಗಳು ಇನ್ನೂ ಎರಡನೇ ತ್ರೈಮಾಸಿಕದ ಫಲಿತಾಂಶ ಘೋಷಿಸಬೇಕಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ನಂ.1 ಎನಿಸಿಕೊಂಡಿರುವ ಅಮೆರಿಕದ ಆರ್ಥಿಕತೆಗಿಂತಲೂ ಬ್ರಿಟನ್‌ನ ಪರಿಸ್ಥಿತಿ ಹದಗೆಟ್ಟಿದೆ.

ಲಾಕ್‌ಡೌನ್ ತಡವಾಗಿದ್ದು ಕಾರಣ

'ಯೂರೋಪ್‌ನ ಇತರ ದೇಶಗಳಿಗೆ ಹೋಲಿಸಿದರೆ ಬ್ರಿಟನ್‌ನಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದು ತಡವಾಯ್ತು. ಇದೇ ಕಾರಣಕ್ಕೆ ಬ್ರಿಟನ್‌ ಆರ್ಥಿಕತೆ ಕುಸಿತದತ್ತ ಸಾಗಿತು' ಎನ್ನುವುದು ಬೆರೆನ್‌ಬರ್ಗ್‌ ಬ್ಯಾಂಕ್‌ನ ಹಿರಿಯ ಅರ್ಥಶಾಸ್ತ್ರಜ್ಞ ಕಲ್ಲುಮ್ ಪಿಕೆರಿಂಗ್ ಅವರ ವಿಶ್ಲೇಷಣೆ. 

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಲಾಕ್‌ಡೌನ್ ಘೋಷಿಸಿದ್ದು ಮಾರ್ಚ್‌ 23ಕ್ಕೆ. ಆ ಹೊತ್ತಿಗಾಗಲೆ ಬ್ರಿಟನ್‌ನಲ್ಲಿ ಕೊರೊನಾದ ಮೊದಲ ಪ್ರಬಲ ಅಲೆ ವ್ಯಾಪಿಸಿಕೊಂಡಿತ್ತು. ಇದೇ ಕಾರಣಕ್ಕೆ ಬ್ರಿಟನ್‌ನ ಲಾಕ್‌ಡೌನ್ ಅವಧಿಯೂ ಹೆಚ್ಚಾಗಬೇಕಾಯಿತು. ಜರ್ಮನಿಯಲ್ಲಿ ಮೇ 6ಕ್ಕೆ ಲಾಕ್‌ಡೌನ್ ಹಿಂಪಡೆಯಲಾಯಿತು. ಆದರೆ ಇಂಗ್ಲೆಂಡ್‌ನಲ್ಲಿ ಲಾಕ್‌ಡೌನ್ ಹಿಂಪಡೆದಿದ್ದು ಜೂನ್ 15ಕ್ಕೆ.

ಕೊರೊನಾ ವೈರಸ್‌ ಸೋಂಕಿನಿಂದ ಯೂರೋಪ್‌ನಲ್ಲಿ ಅತಿಹೆಚ್ಚು ಸಾವುಗಳು (46,611) ದಾಖಲಾದ ದೇಶವೂ ಬ್ರಿಟನ್ ಆಗಿದೆ. ವರದಿಯಾದ ಸಾವುಗಳಿಗಿಂತಲೂ ಹೆಚ್ಚು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ತಕ್ಕಮಟ್ಟಿಗೆ ಸುಧಾರಿಸುತ್ತಿದೆ

ಬ್ರಿಟನ್‌ನ ಸಾಂಖ್ಯಿಕ ಇಲಾಖೆಯು ಪ್ರತಿ ತಿಂಗಳ ಪ್ರಗತಿ ಅಂಕಿಅಂಶಗಳನ್ನು ಪ್ರಕಟಿಸುತ್ತದೆ. ಬ್ರಿಟನ್ ಆರ್ಥಿಕತೆ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿರುವ ಭರವಸೆಯನ್ನು ಇದು ನೀಡಿದೆ. ಜೂನ್ ತಿಂಗಳಲ್ಲಿ ಬ್ರಿಟನ್‌ನ ಆರ್ಥಿಕತೆ ಶೇ 8.7ರಷ್ಟು ಪ್ರಗತಿ ಸಾಧಿಸಿತ್ತು.

'ಜೂನ್ ತಿಂಗಳಲ್ಲಿ ಕೈಗಾರಿಕೆಗಳು ಉತ್ಪಾದನೆ ಹೆಚ್ಚಿಸಿದವು. ಅಂಗಡಿಗಳು ಬಾಗಿಲು ತೆರೆದವು. ಕಟ್ಟಡ ನಿರ್ಮಾಣ ಚಟುವಟಿಕೆಯೂ ಆರಂಭವಾಯಿತು. ಆರ್ಥಿಕತೆ ಚೇತರಿಸಿಕೊಳ್ಳಲು ಈ ಎಲ್ಲ ಅಂಶಗಳು ಕಾರಣವಾದವು' ಎಂದು ಲೆಕ್ಕಶಾಸ್ತ್ರಜ್ಞ ಜೊನಾಥನ್ ಅಥೌ ಹೇಳಿದರು. ಕಚೇರಿಗಳು, ಪಬ್‌ ಮತ್ತು ರೆಸ್ಟೊರೆಂಟ್‌ಗಳು ಮತ್ತೆ ಕಾರ್ಯರಂಭ ಮಾಡಲು ಅನುಮತಿ ನೀಡಿದ ನಂತರ ಆರ್ಥಿಕ ಪರಿಸ್ಥಿತಿಯ ಚೇತರಿಕೆಯ ವೇಗ ಸುಧಾರಿಸುತ್ತದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.

'ಬ್ರಿಟನ್‌ನ ಆರ್ಥಿಕತೆಯು ಸೇವೆಗಳನ್ನೇ (ಸರ್ವೀಸ್) ಆಧರಿಸಿದೆ. ನಿರ್ಮಾಣ ಅಥವಾ ಉತ್ಪಾದನಾ ಚಟುವಟಿಕೆಗಳಿಗೆ ಹೋಲಿಸಿದೆ ಸೇವಾ ಕ್ಷೇತ್ರದಲ್ಲಿ ಮನುಷ್ಯರು ಪರಸ್ಪರ ಒಡನಾಡಬೇಕಾದ ಅನಿವಾರ್ಯತೆ ಹೆಚ್ಚು. ಹೀಗಾಗಿ ಸದ್ಯಕ್ಕೆ ಬ್ರಿಟನ್‌ ಪರಿಸ್ಥಿತಿ ಸುಧಾರಿಸದು' ಎಂದು ಹಿರಿಯ ಅರ್ಥಶಾಸ್ತ್ರಜ್ಞ ಸ್ಯಾಮ್ಯುಯಲ್ ಟಂಬ್ಸ್‌ ವಿಶ್ಲೇಷಿಸಿದ್ದಾರೆ.

ನಿರುದ್ಯೋಗದ ಭೀತಿ

ಮುಂದಿನ ದಿನಗಳಲ್ಲಿ ಎಷ್ಟು ಬೇಗ ಆರ್ಥಿಕ ಸ್ಥಿತಿಗತಿ ಚೇತರಿಸಿಕೊಂಡರೂ ನಿರುದ್ಯೋಗ ಪ್ರಮಾಣ ಹೆಚ್ಚಾಗುವುದನ್ನು ತಡೆಯಲು ಆಗುವುದಿಲ್ಲ. 1980ರಲ್ಲಿ ವರದಿಯಾಗಿದ್ದ 30 ಲಕ್ಷ ನಿರುದ್ಯೋಗಿಗಳ ಸಂಖ್ಯೆ ಈವರೆಗಿನ ದಾಖಲೆಯಾಗಿತ್ತು. ಈ ಬಾರಿ ಅದು ದುಪ್ಪಟ್ಟಾಗುವ ಸಾಧ್ಯತೆ ಇದೆ.

'ಕೆಟ್ಟ ಕಾಲ ಮುಂದೆ ಇದೆ ಎಂದು ನಾನು ಈ ಹಿಂದೆಯೇ ಎಚ್ಚರಿಸಿದ್ದೆ. ಅಂಥ ಕಾಲ ಈಗ ಬಂದೇ ಬಿಟ್ಟಿದೆ' ಎಂದು ಬ್ರಿಟನ್‌ನ ಖಜಾನೆ ಮುಖ್ಯಸ್ಥ ರಿಶಿ ಸುನಕ್ ಹೇಳಿದರು. 'ಕಳೆದ 6 ತಿಂಗಳಲ್ಲಿ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎನ್ನುವುದು ಕಹಿಸತ್ಯ' ಎಂದು ಅವರು ವಿಶ್ಲೇಷಿಸಿದರು.

ಬ್ರಿಟನ್ ಸರ್ಕಾರವು ನಷ್ಟ ಅನುಭವಿಸುತ್ತಿರುವ ಉದ್ಯಮಗಳಿಗೆ ಕಾರ್ಮಿಕರನ್ನು ಉಳಿಸಿಕೊಳ್ಳಲು ಆರ್ಥಿಕ ನೆರವು ನೀಡುತ್ತಿದೆ. ಇದೇ ಕಾರಣಕ್ಕೆ ನಿರುದ್ಯೋಗದ ಸಮಸ್ಯೆ ಬೃಹದಾಕಾರವಾಗಿ ಬೆಳೆದಿಲ್ಲ. ಉದ್ಯೋಗಗಳನ್ನು ಉಳಿಸಲೆಂದೇ 'ಕೊರೊನಾ ವೈರಸ್ ಉದ್ಯೋಗ ರಕ್ಷಣೆ ಯೋಜನೆ' ಆರಂಭಿಸಿರುವ ಸರ್ಕಾರವು 96 ಲಕ್ಷ ಕಾರ್ಮಿಕರಿಗೆ ಪರೋಕ್ಷವಾಗಿ ಸಂಬಳ ಪಾವತಿಸಿದೆ. 12 ಲಕ್ಷ ಉದ್ಯೋಗದಾತರು ಈ ಸೌಲಭ್ಯ ಪಡೆದುಕೊಂಡಿದ್ದಾರೆ.

ಈ ಯೋಜನೆಯನ್ನು ಅಕ್ಟೋಬರ್‌ನಲ್ಲಿ ನಿಲ್ಲಿಸಬೇಕು ಎಂದು ಸರ್ಕಾರ ಅಂದುಕೊಂಡಿದೆ. ಸಂಬಳ ಪಾವತಿ ಯೋಜನೆ ಮುಂದುವರಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ. 'ಕಾರ್ಮಿಕರ ಕೆಲಸ ಉಳಿದರೆ ಮಾತ್ರ ನಮ್ಮ ಆರ್ಥಿಕತೆ ಮರಳಿ ಹಳಿಗೆ ಬರಲು ಸಾಧ್ಯ' ಎಂದು ಕಾರ್ಮಿಕ ಸಂಘಟನೆಗಳ ಪ್ರಧಾನ ಕಾರ್ಯದರ್ಶಿ ಫ್ರಾನ್ಸಸ್‌ ಒ ಗ್ರೇಡಿ ಆಗ್ರಹಿಸಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದಿರುವ ಬ್ರಿಟನ್‌ ಇತರ ದೇಶಗಳೊಂದಿಗೆ ವಾಣಿಜ್ಯ ನಿರ್ವಹಣೆ ವಿಚಾರದಲ್ಲಿಯೂ ಸಮಸ್ಯೆ ಎದುರಿಸುತ್ತಿದೆ. ಸ್ಥಿತ್ಯಂತರದ ಕಾಲದಲ್ಲಿರುವುದರಿಂದ ಐರೋಪ್ಯ ಒಕ್ಕೂಟದ ತೆರಿಗೆ ವಿನಾಯ್ತಿ ಒಪ್ಪಂದಗಳು ಬ್ರಿಟನ್‌ಗೆ ಈ ವರ್ಷಾಂತ್ಯದವರೆಗೂ ಅನ್ವಯವಾಗುತ್ತವೆ. ಆದರೆ ಮುಂದಿನ ದಿನಗಳಲ್ಲಿ ಇತರ ಐರೋಪ್ಯ ದೇಶಗಳೊಂದಿಗೆ ವಾಣಿಜ್ಯ ಸಂಬಂಧ ಹೇಗಿರಲಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಉತ್ಪನ್ನ ಮತ್ತು ಸೇವೆಗಳ ಆಮದು-ರಫ್ತಿನ ವೇಳೆ ಬ್ರಿಟನ್‌ಗೆ ಇತರ ದೇಶಗಳು ಮತ್ತು ಇತರ ದೇಶಗಳಿಗೆ ಬ್ರಿಟನ್ ತೆರಿಗೆ ವಿಧಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು