ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ರಾಜನಾಗಿ 3ನೇ ಚಾರ್ಲ್ಸ್‌ ಪದಗ್ರಹಣ

Last Updated 10 ಸೆಪ್ಟೆಂಬರ್ 2022, 17:10 IST
ಅಕ್ಷರ ಗಾತ್ರ

ಲಂಡನ್‌: ಇಲ್ಲಿನ ಸೇಂಟ್‌ ಜೇಮ್ಸ್‌ ಅರಮನೆಯಲ್ಲಿ ಜರುಗಿದ ಸಮಾರಂಭದಲ್ಲಿ ನೂತನ ರಾಜರಾಗಿ 3ನೇ ಚಾರ್ಲ್ಸ್‌ ಶನಿವಾರ ಪದಗ್ರಹಣ ಮಾಡಿದರು. ಇದಕ್ಕೂ ಮುನ್ನ ನಡೆದ ಕೌನ್ಸಿಲ್‌ ಸಭೆಯಲ್ಲಿ ಅವರನ್ನು ಬ್ರಿಟನ್‌ನ ನೂತನ ರಾಜರನ್ನಾಗಿ ಘೋಷಿಸಲಾಯಿತು.

‘ದೇವರೆ ದೊರೆಯನ್ನು ಕಾಪಾಡು’ ಎಂದು ಕೌನ್ಸಿಲ್‌ನ ‘ಕ್ಲರ್ಕ್‌’ ಹೇಳಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರೆಲ್ಲರೂ ಇದನ್ನು ಪುನರುಚ್ಚರಿಸಿದರು. ಬಳಿಕ 73 ವರ್ಷದ ಚಾರ್ಲ್ಸ್‌ ಸಂಪ್ರದಾಯದಂತೆ ಅಧಿಕಾರ ಸ್ವೀಕರಿಸಿದರು. ಚಾರ್ಲ್ಸ್‌ ಅವರ ಪತ್ನಿ ರಾಣಿ ಕ್ಯಾಮಿಲಾ, ಪುತ್ರ ಪ್ರಿನ್ಸ್ ವಿಲಿಯಂ ಅವರೂ ಈ ಸಮಾರಂಭಕ್ಕೆ ಸಾಕ್ಷಿಯಾದರು.

ಅರಮನೆಯಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಟಿ.ವಿಯಲ್ಲಿ ನೇರ ಪ್ರಸಾರ ಮಾಡಲಾಯಿತು.

ಚಾರ್ಲ್ಸ್‌ ಅವರನ್ನು ನೂತನ ರಾಜರನ್ನಾಗಿ ಘೋಷಿಸಿದ ಬಳಿಕ ಅರಮನೆ ಮೇಲಿದ್ದ ಧ್ವಜವನ್ನು ಪೂರ್ಣ ಪ್ರಮಾಣದಲ್ಲಿ ಹಾರಿಸಲಾಯಿತು.ರಾಣಿ ಎರಡನೇ ಎಲಿಜಬೆತ್‌ ನಿಧನದ ಹಿನ್ನೆಲೆಯಲ್ಲಿ ಈ ಮೊದಲು ಧ್ವಜವನ್ನು ಅರ್ಧಕ್ಕೆ ಇಳಿಸಲಾಗಿತ್ತು.

ಸಶಸ್ತ್ರ ಪಡೆಯ ಗಾರ್ಟರ್‌ ಕಿಂಗ್‌, ಡೇವಿಡ್‌ ವಿನೆಸ್‌ ವೈಟ್‌ ಅವರು ಅರಮನೆಯ ಫ್ರೈಯರಿ ಕೋರ್ಟ್‌ನ ಬಾಲ್ಕನಿಯಲ್ಲಿ ನಿಂತು ನೂತನ ದೊರೆಯ ಘೋಷಣೆ ಕುರಿತಾದ ಪತ್ರವನ್ನು ವಾಚಿಸಿದರು. ಇದೇ ವೇಳೆ ರಾಯಲ್‌ ಹಾರ್ಸ್‌ ಫಿರಂಗಿ ದಳದವರು 41 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ನೂತನ ದೊರೆಗೆ ಗೌರವ ಸೂಚಿಸಿದರು.

ಪ್ರಮಾಣ ವಚನದ ಬಳಿಕ ‘ಫ್ರೈವಿ ಕೌನ್ಸಿಲ್‌’ (ಸಲಹಾ ಸಮಿತಿ) ಸಭೆಯಲ್ಲಿ ಭಾಗವಹಿಸಿದ್ದ 3ನೇ ಚಾರ್ಲ್ಸ್‌, ತಾಯಿಯ ಹಾದಿಯಲ್ಲೇ ಮುನ್ನಡೆಯುವುದಾಗಿ ಹೇಳಿದರು. ನೂತನ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದಾಗಿ ಹಾಗೂ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುವುದಾಗಿ ಪ್ರಕಟಿಸಿದರು. ಇದೇ ವೇಳೆ ಅವರು ತಾಯಿ, ರಾಣಿ 2ನೇ ಎಲಿಜಬೆತ್‌ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು.

‘ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿಯನ್ನು ಸ್ಥಾಪಿಸುತ್ತೇನೆ. ದೇಶದ ನಾಗರಿಕರಿಗೆ ನಿಷ್ಠನಾಗಿರುತ್ತೇನೆ. ಅವರ ಪ್ರೀತಿ ಗಳಿಸುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT