ಭಾನುವಾರ, ಜನವರಿ 16, 2022
28 °C
ನಿಯಮ ಉಲ್ಲಂಘನೆ

ಚೀನಾ: ಅಲಿಬಾಬಾ ಗ್ರೂಪ್‌ ಸೇರಿ ತಂತ್ರಜ್ಞಾನ ದೈತ್ಯ ಕಂಪನಿಗಳಿಗೆ ಭಾರಿ ದಂಡ

ಎಪಿ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಉದ್ಯಮ ಸ್ವಾಧೀನ ಪ್ರಕ್ರಿಯೆ ವರದಿ ಮಾಡಿಕೊಳ್ಳಲು ವಿಫಲರಾದ ತಂತ್ರಜ್ಞಾನ ದಿಗ್ಗಜ ಕಂಪನಿಗಳಾದ ಅಲಿಬಾಬಾ ಗ್ರೂಪ್‌ ಮತ್ತು ಟೆನ್ಸೆಂಟ್‌ ಹೋಲ್ಡಿಂಗ್ಸ್‌ಗೆ ಚೀನಾ ಸರ್ಕಾರವು ಶನಿವಾರ ಭಾರಿ ದಂಡ ವಿಧಿಸಿದೆ. ಏಕಸ್ವಾಮ್ಯ ವಿರುದ್ಧ ಕಠಿಣ ಕಾರ್ಯಾಚರಣೆಯನ್ನು ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷ ಮುಂದುವರಿಸಿದೆ.

ಈ ಕಂಪನಿಗಳು ಎಂಟು ವರ್ಷಗಳ ಹಿಂದೆ 43 ಇತರೆ ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದವು. ಆದರೆ ‘ಕೇದ್ರೀಕೃತ ನಿರ್ವಹಣೆ’ (ಆಪರೇಟಿಂಗ್‌ ಕಾನ್ಸಂಟ್ರೇಷನ್‌) ನಿಯಮದಡಿ ಈ ಸ್ವಾಧೀನ ಪ್ರಕ್ರಿಯೆಯ ವರದಿ ನೀಡಿರಲಿಲ್ಲ. ಪ್ರತಿ ಉಲ್ಲಂಘನೆಗೆ 5 ಲಕ್ಷ ಯುವಾನ್‌ ($80,000) ದಂಡ ವಿಧಿಸಲಾಗಿದೆ ಎಂದು ಅದು ಹೇಳಿದೆ.

ಚೀನಾದಲ್ಲಿ ಆಡಳಿತದಲ್ಲಿರುವ ಕಮ್ಯುನಿಸ್ಟ್‌ ಪಕ್ಷವು, ಕಳೆದ ವರ್ಷದ ಕೊನೆಯಿಂದ ಏಕಸ್ವಾಮ್ಯ ತಡೆ, ದತ್ತಾಂಶ ಸುರಕ್ಷತೆ ಮತ್ತು ಇತರ ನಿಯಮ ಉಲ್ಲಂಘನೆಗಳ ವಿರುದ್ಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದೆ. ಉದ್ಯಮಗಳು ಆರ್ಥಿಕ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುತ್ತಿರುವ ಕಾರಣ ಕಳವಳಗೊಂಡಿರುವ ಸರ್ಕಾರ, ಗ್ರಾಹಕರ ಶೋಷಣೆ ಅಥವಾ ಹೊಸ ಸ್ಪರ್ಧಿಗಳ ಪ್ರವೇಶಕ್ಕೆ ತಡೆಯೊಡ್ಡಬಾರದು ಎಂದು ಕಟ್ಟಪ್ಪಣೆ ವಿಧಿಸಿದೆ.

ಜೆಡಿ.ಕಾಮ್‌ ಮತ್ತು ಸುನಿಂಗ್‌ ಲಿಮಿಟೆಡ್‌ ಮತ್ತು ಸರ್ಚ್ ಎಂಜಿನ್‌ ಆಪರೇಟರ್‌ ಬೈಡು ವಿರುದ್ಧವೂ ದಂಡ ವಿಧಿಸಲಾಗಿದೆ. ಇವುಗಳ ವಿರುದ್ಧವೂ ನಿಯಮ ಉಲ್ಲಂಘನೆ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ವಿಶ್ವದ ದೈತ್ಯ ಇ–ಕಾಮರ್ಸ್‌ ಕಂಪನಿಯಾಗಿರುವ ಅಲಿಬಾಬಾ ಮೇಲೆ, ಸ್ಪರ್ಧೆಯ ದಮನ ಕಾರಣ ನೀಡಿ ಕಳೆದ ಏಪ್ರಿಲ್‌ನಲ್ಲಿ $2.8 ಶತಕೋಟಿ ದಂಡ ವಿಧಿಸಲಾಗಿತ್ತು. ಆಹಾರ ಪೂರೈಕೆ ಕಂಪನಿ ಮೀಟುವನ್‌ ವಿರುದ್ಧ ಅಕ್ಟೋಬರ್‌ 8 ರಂದು $534 ದಶಲಕ್ಷ ದಂಡ ವಿಧಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು