ಗುರುವಾರ , ಮೇ 26, 2022
31 °C
ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಸಚಿವ ವಾಂಗ್‌ ಯಿ ವಾಗ್ದಾನ

ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಚೀನಾ ಮತ್ತಷ್ಟು ಕೋವಿಡ್ ನೆರವು

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಕೋವಿಡ್‌–19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಆಗ್ನೇಯ ಏಷ್ಯಾದ ರಾಷ್ಟ್ರಗಳಿಗೆ ಇನ್ನೂ ಹೆಚ್ಚಿನ ನೆರವು ನೀಡುವುದಾಗಿ ಚೀನಾ ಮಂಗಳವಾರ ವಾಗ್ದಾನ ಮಾಡಿದೆ.

ಭೌಗೋಳಿಕ ಮತ್ತು ರಾಜಕೀಯ ಪ್ರತಿಸ್ಪರ್ಧಿ ಅಮೆರಿಕಾ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಚೀನಾ ಕೂಡ ಈ ಮೂಲಕ ಅದಕ್ಕೆ ತೀವ್ರ ಪೈಪೋಟಿ ನೀಡಲು ಮುಂದಾಗಿದೆ.

ಚೀನಾ ಮತ್ತು ಆಸಿಯಾನ್ ನಡುವಿನ ಔಪಚಾರಿಕ ಸಂಬಂಧಗಳ 30 ನೇ ವಾರ್ಷಿಕೋತ್ಸದ ಅಂಗವಾಗಿ ನೈರುತ್ಯ ಚೀನಾದ ಚಾಂಗ್‌ಕಿಂಗ್ ಮೆಗಾಸಿಟಿಯಲ್ಲಿ ಮಂಗಳವಾರ ನಡೆದ ಆಗ್ನೇಯ ಏಷ್ಯಾ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಈ ವಿಷಯ ತಿಳಿಸಿದರು.

‘ಈಗಾಗಲೇ ಕೊರೊನಾ ವಿರುದ್ಧದ ಹೋರಾಟಕ್ಕೆ ಬೇಕಾಗುವ ಅಗತ್ಯ ವೈದ್ಯಕೀಯ ಪರಿಕರಗಳೊಂದಿಗೆ, 10 ಕೋಟಿ ಡೋಸ್‌ ಲಸಿಕೆಗಳನ್ನು ಆಸಿಯಾನ ರಾಷ್ಟ್ರಗಳಿಗೆ ಚೀನಾ ಕಳುಹಿಸಿದೆ‘ ಎಂದು ವಾಂಗ್‌ ಯಿ ಹೇಳಿದರು.

ಹಿಂದಿನ ವರ್ಷದಲ್ಲಿ ಸಂಭವಿಸಿದ ಆರ್ಥಿಕ ಬಿಕ್ಕಟ್ಟುಗಳು, 2003ರಲ್ಲಿ ದಿಢೀರನೆ ಕಾಣಿಸಿಕೊಂಡ ಸಾರ್ಸ್‌ ಮತ್ತು 2004 ರಲ್ಲಿ ಸಂಭವಿಸಿದ ಸುನಾಮಿಯಿಂದ ಉಂಟಾದ ಸಮಸ್ಯೆಗಳನ್ನು ಎಲ್ಲರೂ 'ಸಹೋದರ ಭಾವನೆ, ಕಾಳಜಿ‘ಯಿಂದ ಎದುರಿಸಿದ್ದೇವೆ ಎಂದು ವಾಂಗ್‌ ಯಿ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

‘ಜಂಟಿಯಾಗಿ ಸವಾಲುಗಳನ್ನು ಎದುರಿಸಿ ಗೆಲ್ಲುವ ಪ್ರಕ್ರಿಯೆಯಲ್ಲಿ, ನಾವು ಪರಸ್ಪರ ಸ್ನೇಹ, ನಂಬಿಕೆ ಮತ್ತು ಸಮಾನ ಆಸಕ್ತಿಗಳನ್ನು ಅನುಸರಿಸುತ್ತಿದ್ದೇವೆ‘ ಎಂದು ವಾಂಗ್ ಹೇಳಿದರು.

ಲಸಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಂಶೋಧನೆಯಿಂದ ಹಿಡಿದು ಬಳಕೆವರೆಗೆ ಎಲ್ಲ ಹಂತಗಳಲ್ಲೂ ದೊರೆಯುತ್ತಿರುವ ಸಹಕಾರವನ್ನು ಮತ್ತಷ್ಟು ಬಲಗೊಳಿಸಲು ತಜ್ಞರ ಸಮಿತಿ ರಚಿಸಬೇಕಾಗಿದೆ. ಲಸಿಕೆ ಉತ್ಪಾದನೆ, ಪೂರೈಕೆ ಮಾಡುವ ಕೇಂದ್ರಗಳಿಗೆ ಸಕಾಲದಲ್ಲಿ ಲಸಿಕೆ ತಲುಪುವಂತೆ ಮಾಡುವುದು ಹಾಗೂ ಎಲ್ಲ ಪ್ರದೇಶದಲ್ಲೂ, ಎಲ್ಲರಿಗೂ ಕೈಗೆಟುವ ಬೆಲೆಯಲ್ಲಿ ಲಸಿಕೆ ಲಭ್ಯವಾಗುವಂತಾಗಬೇಕು. ಈ ಕಾರ್ಯಕ್ಕೆ ತಜ್ಞರ ಸಮಿತಿ ಸಹಕರಿಸಬೇಕು‘ ಎಂದು ವಾಂಗ್ ಹೇಳಿದರು.

ಚೀನಾ-ಆಸಿಯಾನ್ ಸಾರ್ವಜನಿಕ ಆರೋಗ್ಯ ಸಹಕಾರ ಉಪಕ್ರಮವನ್ನು ಚೀನಾ ತುರ್ತಾಗಿ ಜಾರಿಗೆ ತರುತ್ತಿದೆ ಎಂದ ವಾಂಗ್‌, ಆಸಿಯಾನ್ ರಾಷ್ಟ್ರಗಳಿಗಾಗಿ ತುರ್ತು ವೈದ್ಯಕೀಯ ಸಾಮಗ್ರಿಗಳ ಮೀಸಲಿಡುವುದನ್ನು ಮುಂದುವರಿಸುವ ಬಗ್ಗೆ ಭರವಸೆ ನೀಡಿದರು. ಈ ಮೂಲಕ ಪ್ರಾದೇಶಿಕ ಸಾರ್ವಜನಿಕ ಆರೋಗ್ಯ ಸಾಮರ್ಥ್ಯವನ್ನು ವೃದ್ಧಿ ಮುಂದುವರಿಸುವುದಾಗಿ ಅವರು ಹೇಳಿದರು.  ಆಸಿಯಾನ್ ರಾಷ್ಟ್ರಗಳು ಈ ಕೊರೊನಾ ಸೋಂಕಿನಿಂದ ಹೊರಬರಲು ಚೀನಾ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು