ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಎಸಿಯಲ್ಲಿ ಆಕ್ರಮಣ | ತನ್ನ ಭವಿಷ್ಯಕ್ಕೆ ಕುತ್ತು ತಂದುಕೊಂಡ ಜಿನ್‌ಪಿಂಗ್: ವರದಿ

Last Updated 15 ಸೆಪ್ಟೆಂಬರ್ 2020, 5:12 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಚೀನಾ ಸೇನೆಯು ವಾಸ್ತವಿಕ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ವಿಫವಾಗಿರುವುದರಿಂದ, ಯಾರನ್ನಾದರೂ ಬೆದರಿಸಬಲ್ಲ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಸಾಮರ್ಥ್ಯ ಕಡಿಮೆಯಾದಂತಾಗಿದೆ ಎಂಬ ಅಭಿಪ್ರಾಯ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗಿದೆ.

ವಕೀಲ ಹಾಗೂವಿಶ್ಲೇಷಕ ಗೋರ್ಡನ್‌ ಜಿ ಚಾಂಗ್‌ ಅವರುದಿ ನ್ಯೂಸ್‌ವೀಕ್‌ಗೆ ಬರೆದಿರುವ ತಮ್ಮ ಲೇಖನದಲ್ಲಿ, ‘ಭಾರತ ಮತ್ತು ಚೀನಾ ಗಡಿಯಲ್ಲಿರುವ ಎಲ್‌ಎಸಿಯಲ್ಲಿ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ (ಪಿಎಲ್‌ಎ) ವಿಫಲವಾದ ಉನ್ನತ ಮಟ್ಟದ ಆಕ್ರಮಣಗಳೊಂದಿಗೆ ಚೀನಾ ಅಧ್ಯಕ್ಷರು ತಮ್ಮ ಭವಿಷ್ಯವನ್ನು ಪಣಕ್ಕಿಟ್ಟಿದ್ದಾರೆ’ ಎಂದು ವಿಶ್ಲೇಷಿಸಿದ್ದಾರೆ.

ಜಿನ್‌ಪಿಂಗ್‌ಅವರನ್ನು ಭಾರತದವಿರುದ್ಧ ಕೈಗೊಳ್ಳಲಾದ ಆಕ್ರಮಣಕಾರಿ ನಡೆಯ ‘ವಾಸ್ತುಶಿಲ್ಪಿ’ ಎಂದು ಬಣ್ಣಿಸಿರುವ ಚಾಂಗ್‌, ಇದರಲ್ಲಿ ಚೀನಾ ಸೇನೆ ಅನಿರೀಕ್ಷಿತ ವೈಫಲ್ಯ ಕಂಡಿದೆ ಎಂದಿದ್ದಾರೆ.ಆದಾಗ್ಯೂ, ಈ ವೈಫಲ್ಯಗಳು ಚೀನಾದ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಮಿಲಿಟರಿ ಆಯೋಗದ ಅಧ್ಯಕ್ಷ ಮತ್ತು ಪಿಎಲ್‌ಎ ನಾಯಕರಾಗಿರುವ ಜಿನ್‌ಪಿಂಗ್‌ರನ್ನು ಭಾರತದ ಪ್ರದೇಶಗಳ ವಿರುದ್ಧ ಮತ್ತೊಂದು ಆಕ್ರಮಣವನ್ನು ಪ್ರಾರಂಭಿಸುವ ಪ್ರಯತ್ನಕ್ಕೆಉತ್ತೇಜನ ನೀಡಲಿವೆ ಎಂದೂ ಎಚ್ಚರಿಸಿದ್ದಾರೆ.

ಮೇ ತಿಂಗಳ ಆರಂಭದಲ್ಲಿ, ಚೀನಾದ ಪಡೆಗಳು ಎಲ್‌ಎಸಿಯ ದಕ್ಷಿಣಕ್ಕಿರುವ ಲಡಾಖ್‌ನ ಮೂರು ಪ್ರತ್ಯೇಕ ಪ್ರದೇಶಗಳತ್ತಸಾಗಿದ್ದವು. ಚೀನಾ ಸೇನೆ ಗಡಿಯನ್ನು ಸರಿಯಾಗಿ ಗುರುತಿಸದೆ ಭಾರತದ ಪ್ರದೇಶಗಳನ್ನು ಅತಿಕ್ರಮಿಸಿತ್ತು. ವಿಶೇಷವೆಂದರೆ2012ರಲ್ಲಿ ಜಿನ್‌ಪಿಂಗ್‌ ಅವರು ಪಕ್ಷದ ಅಧ್ಯಕ್ಷರಾದ ಬಳಿಕ ಇಂತಹ ಪ್ರಯತ್ನಗಳು ಹೆಚ್ಚಾಗಿವೆ.

ಜೂನ್‌ ತಿಂಗಳಲ್ಲಿ ಭಾರತ ಮತ್ತು ಚೀನಾ ಸೇನೆಗಳು ಗಾಲ್ವಾನ್‌ ‌ಕಣಿವೆಯಲ್ಲಿ ಸಂಘರ್ಷ ನಡೆಸಿದ್ದವು. ಈ ವೇಳೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಇದೇ ವೇಳೆ ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಯಿತು. ಆದರೆ, ಚೀನಾ ಪಡೆಯ ಸಾವಿನ ಸಂಖ್ಯೆ 60ಕ್ಕೂ ಹೆಚ್ಚು ಎಂದು ಕೆಲವು ಮೂಲಗಳು ತಿಳಿಸಿದ್ದವು. ಹೀಗಾಗಿ, ಕಳೆದ 45 ವರ್ಷಗಳಲ್ಲಿ ಉಭಯ ದೇಶಗಳ ನಡುವೆ ನಡೆದ ದೊಡ್ಡ ಸಂಘರ್ಷ ಇದಾಗಿದೆ.

ಕಳೆದ ತಿಂಗಳು, ಬರೋಬ್ಬರಿ ಅರ್ಧ ಶತಮಾನಗಳ ನಂತರ ಮೊದಲ ಬಾರಿಗೆ ಭಾರತವು ಚೀನಾ ವಿರುದ್ಧ ಕ್ರಮಕ್ಕೆ ಮುಂದಾಯಿತು. ಹೀಗಾಗಿ ಚೀನಾ ಸೇನೆ ಹಿಂದೆ ಸರಿಯಬೇಕಾಯಿತು.

ಈ ಬಗ್ಗೆ ವಿವರಿಸುವ ಚಾಂಗ್‌,ಭಾರತವನ್ನು ಎದುರಿಸಲು ಚೀನಾ ನಡೆಸಿದ ಈ ಪ್ರಯತ್ನಗಳು ಪರಿಣಾಮಕಾರಿಯಲ್ಲವೆಂದು ಸಾಬೀತಾಗಿದೆ. ಸದ್ಯಕ್ಕೆ, ಈ ಮೊದಲು ಚೀನಾದ ಹಿಡಿತದಲ್ಲಿದ್ದ ಲಡಾಖ್‌ನ ದಕ್ಷಿಣ ಭಾಗದಲ್ಲಿರುವ ಮೂರು ಪ್ರದೇಶಗಳು ಈಗ ಭಾರತೀಯ ಸೇನೆಯ ನಿಯಂತ್ರಣದಲ್ಲಿವೆ ಎಂದು ತಿಳಿಸಿದ್ದಾರೆ. ‘ಭಾರತವು ಆಕ್ರಮಣಗಳನ್ನು ಮುಂದುವರಿಸುವ ಅವಕಾಶಗಳನ್ನು ಎದುರಾಳಿಗೆ ನೀಡುತ್ತಿಲ್ಲ.ಎಚ್ಚರಿಕೆ ನೀಡುತ್ತಾ ಎರಡೂ ಪಡೆಗಳು ‘ದಶಕದ ಹಿಂದಿನ ಒಪ್ಪಂದವನ್ನು ಉಲ್ಲಂಘಿಸಲಾಗಿದೆ’ ಎಂದು ಪರಸ್ಪರ ಆರೋಪಿಸುತ್ತಿವೆ. ಆದಾಗ್ಯೂ ಚೀನಾ ಹೇಳಿಕೆ ಸತ್ಯಕ್ಕೆ ಹತ್ತಿರವಾದದ್ದೆಂದು ತೋರುತ್ತದೆ. ಭಾರತೀಯ ಸೇನೆ ಹೊಸ ಧೈರ್ಯ ಪ್ರದರ್ಶಿಸುತ್ತಿದೆ’ ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಯಾಗಿಫೌಂಡೇಷನ್‌ ಫಾರ್‌ ಡಿಫೆನ್ಸ್‌ ಆಫ್‌ ಡೆಮಾಕ್ರಸೀಸ್‌ನ ಲೇಖಕಿ ಕ್ಲಿಯೊ ಪಾಸ್ಕಲ್‌, ‘ಸದ್ಯ ಆಟ ಬದಲಾಗಿದೆ. ಭಾರತೀಯ ಸೈನಿಕರು ಹೆಚ್ಚು ಆಕ್ರಮಣಕಾರಿಯಾಗಿದ್ದಾರೆ ಅಥವಾ ಹೆಚ್ಚು ಆಕ್ರಮಣಕಾರಿಯಾಗಿ ರಕ್ಷಣಾತ್ಮಕವಾಗಿ ಮುನ್ನಡೆಯುತ್ತಿದ್ದಾರೆ ಎಂದು ನೀವು ಹೇಳಬಹುದು. ಆದರೆ ಅವರು ನಿಜಕ್ಕೂ ಧೈರ್ಯಶಾಲಿಗಳು’ ಎಂದು ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಹಾಗೂ ಚೀನಾದ ತಂತ್ರ–ವಿಶ್ಲೇಷಣೆ ಕೇಂದ್ರದ ಮುಖ್ಯಸ್ಥರಾಗಿರುವ ಜಯದೇವ ರಾನಡೆ ಅವರು, ‘ಸದ್ಯ ಹಿನ್ನಡೆ ಅನುಭವಿಸಿರುವ ಜಿನ್‌ಪಿಂಗ್‌ಗೆ ಗೆಲುವು ಬೇಕಾಗಿದೆ. ಇದು ಲಡಾಖ್‌ನಲ್ಲಿ ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗಬಹುದು’ ಎಂದಿದ್ದಾರೆ.ಭಾರತದ ಪಡೆಗಳು ಶೀಘ್ರವಾಗಿ ಜಮಾವಣೆ ಮತ್ತು ಉನ್ನತ ಮಟ್ಟದಲ್ಲಿ ಸಿದ್ಧತೆ ನಡೆಸುತ್ತಿರುವುದರಿಂದ, ತಮಗೆ ಬೇಕಾಗಿರುವ ಯಶಸ್ಸಿನ ಬಗ್ಗೆಜಿನ್‌ಪಿಂಗ್‌ ಅವರಿಗೆ ಭರವಸೆ ಇಲ್ಲ. ವಿಶೇಷವೆಂದರೆ, ಭಾರತವು ತನ್ನದೇ ಆದ ಯಾಂತ್ರೀಕೃತ ವಾಹನಗಳನ್ನು ಲಡಾಖ್‌ಗೆ ಜವಾವಣೆಗೊಳಿಸಿದೆ ಎನ್ನುತ್ತಾರೆ ಅವರು.

ವರ್ಜೀನಿಯಾ ಮೂಲದ ಅಂತರರಾಷ್ಟ್ರೀಯಮೌಲ್ಯಮಾಪನ ಮತ್ತು ಕಾರ್ಯತಂತ್ರಕೇಂದ್ರದ (ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಅಸೆಸ್‌ಮೆಂಟ್‌ ಅಂಡ್‌ ಸ್ಟ್ಯಾಟರ್ಜಿ) ರಿಚರ್ಡ್ ಫಿಶರ್ ಅವರು, ಚೀನಿಯರು ‘ಕಳೆದ 30 ವರ್ಷಗಳಿಂದಲೂ ಜಂಟಿ ಯಾಂತ್ರೀಕೃತ ಯುದ್ಧದ ಸಿದ್ಧತೆ ನಡೆಸುತ್ತಿದ್ದಾರೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

‘ಸದ್ಯ ಎದುರಾಗಿರುವ ಹಿನ್ನಡೆಯಿಂದಾಗಿ ಪಿಎಲ್‌ಎ ನಾಯಕರು ಬೇರೆ ಆಯ್ಕೆಗಳತ್ತ ಗಮನ ಹರಿಸುತ್ತಿದ್ದಾರೆ. ಆದರೆ, ಅದರ ನಾಯಕರಾಗಿರುವ ಜಿನ್‌ಪಿಂಗ್‌ ಮುಂದೆ ಎದುರಾಗಬಹುದಾದ ಆಂತರಿಕ ಕಲಹದಿಂದ ಪಾರಾಗಲು ಮತ್ತಷ್ಟು ಆಕ್ರಮಣಕಾರಿ ಕ್ರಮಕ್ಕೆ ಮುಂದಾಗಲು ಯೋಜಿಸಿದ್ದಾರೆ.ನಾವು 2020ರಲ್ಲಿ ಕಲಿತದ್ದೇನೆಂದರೆ, ಜಿನ್‌ಪಿಂಗ್‌ ಗೆಲುವನ್ನು ಬಯಸುತ್ತಿದ್ದಾರೆ. ಅದಕ್ಕಾಗಿ ಪಿಎಲ್‌ಎಯನ್ನು ಮರುಸಂಘಟನೆ ಮಾಡುವ ಮೂಲಕ ಸಾಮರ್ಥ್ಯ ಹೆಚ್ಚಿಸಿ, ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಿದ್ಧರಾಗಿದ್ದಾರೆ’ಎನ್ನುತ್ತಾರೆ ಫಿಶರ್‌.

ಚಾಂಗ್‌ ಅವರು,ಸೇನೆಗಾಗಿ ಭಾರಿ ಮೊತ್ತದ ಹಣ ವಿನಿಯೋಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿರುವ ಜಿನ್‌ಪಿಂಗ್‌, ಇತರ ದೇಶಗಳನ್ನು ಬೆದರಿಸುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ. ದುರದೃಷ್ಟವಶಾತ್‌, ಅಜೇಯರಾಗಿಯೇ ಕಾಣುತ್ತಿದ್ದ ಚೀನಾ ನಾಯಕನಿಗೆ ಈಗ ಅದನ್ನು ಸಾಬೀತು ಮಾಡುವ ಅನಿವಾರ್ಯ ಎದುರಾಗಿದೆ. ಅದರ ಫಲವಾಗಿ ಅವರು, ಭಾರತವನ್ನು ಒಡೆಯುವ ಮತ್ತೊಂದು ಪ್ರಯತ್ನ ನಡೆಸಲು ದೃಢವಾಗಿ ನಿಶ್ಚಯಿಸಿದ್ದಾರೆ ಎಂಬುದು ಗೋಚರವಾಗುತ್ತಿದೆ ಎಂದು ಹೇಳಿದ್ದಾರೆ.ಇಲ್ಲವಾದರೆ, ಚೀನಾದ ಮಿಲಿಟರಿಯಲ್ಲಿನ ಕೊರತೆಯನ್ನು ಇತರ ದೇಶಗಳೂ ತಿಳಿಯಲಿವೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT